Neeraj Chopra: ಚಿನ್ನದ ಹುಡುಗ ‘ಸುಬೇದಾರ್ ನೀರಜ್ ಚೋಪ್ರಾ’ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ganapathi bhat

Updated on: Aug 07, 2021 | 9:09 PM

Tokyo Olympics: ಟೋಕಿಯೋ ಒಲಿಂಪಿಕ್ಸ್​ನ ಜಾವಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರಕ್ಕೆ ಜಾವಲಿನ್ ಎಸೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

Neeraj Chopra: ಚಿನ್ನದ ಹುಡುಗ ‘ಸುಬೇದಾರ್ ನೀರಜ್ ಚೋಪ್ರಾ’ ಬಗ್ಗೆ ನಿಮಗೆಷ್ಟು ಗೊತ್ತು?
ಇದೇ ವೇಳೆ ಮಾತನಾಡಿದ ನೀರಜ್ ಚೋಪ್ರಾ, ನನ್ನ ಮುಂದಿನ ಗುರಿ 90 ಮೀಟರ್ ಜಾವೆಲಿನ್ ಎಸೆಯುವುದು. ನಾನು 90 ಮೀಟರ್‌ಗಳಷ್ಟು ಹತ್ತಿರದಲ್ಲಿದ್ದೇನೆ. ಅದಕ್ಕಾಗಿ ಕೋಚ್ ಜೊತೆ ಕಠಿಣ ಅಭ್ಯಾಸ ನಡೆಸಲಿದ್ದೇನೆ. 90 ಮೀಟರ್ ಎಸೆಯುವುದು ನನ್ನ ಕನಸು. ಅದನ್ನು ನನಸಾಗಿಸಲು ಪ್ರಯತ್ನಿಸುತ್ತೇನೆ ಎಂದರು.
Follow us on

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟು, ಭಾರತೀಯರ ಅಭಿಮಾನ, ಪ್ರೀತಿ, ಗೌರವ ಗಳಿಸಿದ ವ್ಯಕ್ತಿ ನೀರಜ್ ಚೋಪ್ರಾ. ಮೊನ್ನೆಮೊನ್ನೆಯವರೆಗೂ ಬಹುತೇಕರಿಗೆ ತಿಳಿದಿರದ ಹೆಸರು ಇದು. ಆದರೆ, ಇಂದು (ಆಗಸ್ಟ್ 7) ಜನರು ತನ್ನ ಜೀವನವನ್ನೇ ಒಂದು ಕ್ಷಣ ತಿರುಗಿ ನೋಡುವಂತೆ ಮಾಡಿದ್ದಾರೆ ನೀರಜ್. ಟೋಕಿಯೋ ಒಲಿಂಪಿಕ್ಸ್​ನ ಜಾವಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರಕ್ಕೆ ಜಾವಲಿನ್ ಎಸೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ನೀರಜ್‌ಗಿಂತ ಮೊದಲು ಯಾರೂ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮತ್ತು ಒಲಿಂಪಿಕ್ಸ್‌ನ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರಲಿಲ್ಲ. ಹಾಗಾಗಿ, ಇದು ಭಾರತಕ್ಕೆ ಐತಿಹಾಸಿಕ ದಾಖಲೆಯಾಗಿದೆ.

ಇಷ್ಟೊಂದು ದೊಡ್ಡ ಸಾಧನೆ ಮಾಡಿ, ಭಾರತೀಯರ ಪ್ರಶಂಸೆಗೆ ಪಾತ್ರರಾದ ಚಿನ್ನದ ಹುಡುಗ ನೀರಜ್ ಚೋಪ್ರಾ ಯಾರು? ಅವರ ಇತರ ಸಾಧನೆಗಳೇನು? ದೇಶಕ್ಕೆ, ಕ್ರೀಡೆಗೆ ಅವರ ಕೊಡುಗೆಗಳೇನು? ಇತ್ಯಾದಿಗಳ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ. ಬಂಗಾರ ತಂದವನ ಹಿನ್ನೆಲೆ ಏನು? ತಿಳಿದುಕೊಳ್ಳಿ.

ಭಾರತೀಯ ಸೇನೆಯ ಸುಬೇದಾರ್ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಹರ್ಯಾಣ ರಾಜ್ಯದ, ಪಾಣಿಪತ್ ಜಿಲ್ಲೆಯ, ಖಾಂಡ್ರಾ ಗ್ರಾಮದವರು. ಅವರು 1997ರ ಡಿಸೆಂಬರ್ 24 ರಂದು ಜನಿಸಿದರು. ತಮ್ಮ ಕಲಿಕೆಯನ್ನು ಚಂಡೀಗಡದಲ್ಲಿ ಪೂರೈಸಿದರು. ಬಳಿಕ, 2016 ರಲ್ಲಿ ಜೂನಿಯರ್ ಕಮಿಷನ್​ಡ್ ಅಧಿಕಾರಿಯಾಗಿ, ಸುಬೇದಾರ್ ರ್ಯಾಂಕ್​ನೊಂದಿಗೆ ಭಾರತೀಯ ಸೇನೆ ಸೇರಿಕೊಂಡರು. ಅಷ್ಟೇ ಅಲ್ಲದೆ, ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ನೀರಜ್ ಚೋಪ್ರಾ ಪಿಎಮ್ ಕೇರ್ಸ್ ನಿಧಿಗೆ 2 ಲಕ್ಷ ರೂಪಾಯಿಗಳ ಕೊಡುಗೆಯನ್ನೂ ನೀಡಿದ್ದರು.

ಚೋಪ್ರಾ ಗೆದ್ದ ಈ ಮೊದಲ ಪದಕಗಳಿವು
ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ತಂದುಕೊಟ್ಟ ಚೋಪ್ರಾ, 2017ರ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಕೂಡ ಚಿನ್ನದ ಪದಕ ಗೆದ್ದಿದ್ದರು. ಚೋಪ್ರಾ 2018ರ ಕಾಮನ್​ವೆಲ್ತ್ ಗೇಮ್ಸ್​ನಲ್ಲೂ ಚಿನ್ನದ ಪದಕ ಪಡೆದಿದ್ದರು. ಅಥ್ಲೆಟಿಕ್ ಪಂದ್ಯವೊಂದರಲ್ಲಿ ಭಾರತೀಯ ಒಬ್ಬರಿಗೆ ಮೊತ್ತಮೊದಲ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಇಂದು ಲಭ್ಯವಾಗಿದೆ. ಅಭಿನವ್ ಬಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಪಡೆದಿದ್ದಾರೆ.

ಸಂಕಷ್ಟಗಳನ್ನು ಮೀರಿ ಪುಟಿದೆದ್ದ ಕ್ರೀಡಾಪಟು
2019 ರಲ್ಲಿ ನೀರಜ್ ತಮ್ಮ ವೇಗವನ್ನು ಕಳೆದುಕೊಂಡಿದ್ದರು. ಭುಜದ ಬಿಗಿತ, ಮೊಣ ಕೈ ನೋವು ಮತ್ತು ಬೆನ್ನು ನೋವಿನಿಂದ ಯುವ ಜಾವೆಲಿನ್ ಎಸೆತಗಾರ ಬಳಲುತ್ತಿದ್ದರು. ಈ ವೇಳೆ ಪರೀಕ್ಷಿಸಿದಾಗ, ಶಸ್ತ್ರ ಚಿಕಿತ್ಸೆ ಅತ್ಯಗತ್ಯ ಎಂದು ವೈದ್ಯರು ತಿಳಿಸಿದ್ದರು. ಅಷ್ಟೇ ಅಲ್ಲದೆ ಈ ಸಮಸ್ಯೆಯನ್ನು ಮುಂದುವರೆಸಿ ಮುಂದೆ ಜಾವೆಲಿನ್ ಎಸೆಯಲಾಗುವುದಿಲ್ಲ. ನಿಮಗೆ ಭುಜದ ಬಿಗಿತ ಸಮಸ್ಯೆಯು ಕಳೆದ ಒಂದು ವರ್ಷದಿಂದ ಇದೆ. ಆದರೆ ನಿಮ್ಮ ಫಿಸಿಯೋ ಮಾಡಿದ ನಿರ್ಲಕ್ಷ್ಯದಿಂದ ಇದೀಗ ಸಮಸ್ಯೆ ಬಿಗಡಾಯಿಸಿದೆ ಎಂದು ವೈದ್ಯರು ಎಚ್ಚರಿಸಿದರು. ಇನ್ನೇನು ಒಲಿಂಪಿಕ್ಸ್ ಆರಂಭವಾಗಲು ವರ್ಷ ಮಾತ್ರ ಉಳಿದಿತ್ತು.

ಮೈದಾನದಲ್ಲೇ ಹೆಚ್ಚು ಸಮಯ ಕಳೆಯಬೇಕಿದ್ದ ನೀರಜ್ ಚೋಪ್ರಾ ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. ತಿಂಗಳುಗಳ ಕಾಲ ಬೆಡ್ ಮೇಲೆ ಕಳೆದ ನೀರಜ್ ಇನ್ನೇನು ಮತ್ತೆ ಮೈದಾನಕ್ಕಿಳಿಯಬೇಕು ಅನ್ನುವಷ್ಟರಲ್ಲಿ ಕೊರೋನಾ ಲಾಕ್​ಡೌನ್ ಶುರುವಾಗಿತ್ತು. ಹೀಗಾಗಿ ನೀರಜ್ ಕೆರಿಯರ್ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಜಾವೆಲಿನ್​ಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ನೀರಜ್ ಚೋಪ್ರಾ ಸೋಲೋಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಲಾಕ್​ಡೌನ್ ಮುಗಿಯುತ್ತಿದ್ದಂತೆ ಮೈದಾನಕ್ಕಿಳಿದು ಬೆವರಿಸಿಳಿದರು. ಸತತ ಅಭ್ಯಾಸ, ಕಠಿಣ ಪರಿಶ್ರಮದೊಂದಿಗೆ ತಮ್ಮ ಹಿಂದಿನ ವೇಗವನ್ನು ಮರಳಿ ಪಡೆದರು. ಅಷ್ಟೇ ಅಲ್ಲದೆ ಪದಕ ಗೆಲ್ಲುವ ದೃಢ ನಿಶ್ಚಯದೊಂದಿಗೆ ಟೋಕಿಯೋ ಒಲಿಂಪಿಕ್ಸ್ ಗ್ರಾಮಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: Tokyo olympics: ಸ್ವರ್ಗದಿಂದ ಇದನ್ನು ನೋಡುತ್ತಿರುತ್ತಾರೆ! ಚೊಚ್ಚಲ ಚಿನ್ನದ ಪದಕವನ್ನು ಮಿಲ್ಖಾ ಸಿಂಗ್​ಗೆ ಅರ್ಪಿಸಿದ ನೀರಜ್ ಚೋಪ್ರಾ

Neeraj Chopra Gold: ಬಂಗಾರದ ಮನುಷ್ಯ ನೀರಜ್​ ಚೋಪ್ರಾಗೆ ಮಹೀಂದ್ರಾ XUV 700 ಕಾರ್ ಗಿಫ್ಟ್!

(Who is Neeraj Chopra know about Neeraj Chopra Profile and other details here in Kannada)

Published On - 6:52 pm, Sat, 7 August 21