Footballer Death: ಟರ್ಕಿ ಭೂಕಂಪದಲ್ಲಿ ಫುಟ್ಬಾಲ್ ಆಟಗಾರ ಅಹ್ಮತ್ ಎಯುಪ್ ಟುರ್ಕಾಸ್ಲಾನ್ ಸಾವು
Turkey Goalkeeper Turkaslan Death- ಟರ್ಕಿ ದೇಶದ ಫುಟ್ಬಾಲ್ ಆಟಗಾರರೊಬ್ಬರು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ. ಟರ್ಕಿಯ ಫುಟ್ಬಾಲ್ ಗೋಲ್ಕೀಪರ್ ಅಹ್ಮತ್ ಎಯುಪ್ ಟುರ್ಕಸ್ಲಾನ್ ನಿಧನರಾಗಿರುವುದು ದೃಢಪಟ್ಟಿದೆ. ಮತ್ತೊಬ್ಬ ಫುಟ್ಬಾಲ್ ಆಟಗಾರ ಗಾಯಗೊಂಡಿದ್ದಾರೆ.
ಅಂಕಾರ: ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ (Turkey earthquake death toll) ಕ್ಷಣಕ್ಷಣವೂ ಏರುತ್ತಿದೆ. ಧರೆಗೆ ಕುಸಿದ ಕಟ್ಟಡಗಳ ಅವಶೇಷಗಳನ್ನು ಹೊರತೆಗೆದಷ್ಟೂ ನೂರಾರು ಶವಗಳು ಸಿಗುತ್ತಿವೆ. ಎರಡು ದಿನದಲ್ಲಿ ಸಾವಿನ ಸಂಖ್ಯೆ 8 ಸಾವಿರ ಆಗಿದೆ. ಇದೇ ವೇಳೆ, ಟರ್ಕಿ ದೇಶದ ಫುಟ್ಬಾಲ್ ಆಟಗಾರರೊಬ್ಬರು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ. ಟರ್ಕಿಯ ಫುಟ್ಬಾಲ್ ಗೋಲ್ಕೀಪರ್ ಅಹ್ಮತ್ ಎಯುಪ್ ಟುರ್ಕಸ್ಲಾನ್ ನಿಧನರಾಗಿರುವುದು ದೃಢಪಟ್ಟಿದೆ.
ಅಹ್ಮತ್ ಎಯುಪ್ ಟುರ್ಕಸ್ಲಾನ್ ಅವರು ಟರ್ಕಿಯ ಸೆಕೆಂಡ್ ಡಿವಿಶನ್ ಕ್ಲಬ್ ಯೇನಿ ಮಲತ್ಯಾಸ್ಪೋರ್ ಕ್ಲಬ್ನಲ್ಲಿ ಗೋಲ್ ಕೀಪರ್ ಆಗಿ ಆಡುತ್ತಿದ್ದರು. ಕ್ಲಬ್ನ ಅಧಿಕೃತ ಪ್ರಕಟಣೆಯಲ್ಲಿ ಈ ಸಾವಿನ ಸುದ್ದಿ ತಿಳಿಸಲಾಗಿದೆ.
ನಮ್ಮ ಗೋಲ್ಕೀಪರ್ ಅಹಮತ್ ಎಯುಪ್ ತುರ್ಕಸ್ಲಾನ್ ಭೂಕಂಪದಲ್ಲಿ ಜೀವ ಕಳೆದುಕೊಂಡಿದ್ದಾರೆ…. ನಿಮ್ಮ ನೆನಪು ಹಸಿರಾಗಿಯೇ ಇರುತ್ತದೆ ಎಂದು ಈ ಕ್ಲಬ್ ಟ್ವೀಟ್ ಮಾಡಿದೆ.
ಅಹ್ಮತ್ ಎಯುಪ್ ಟುರ್ಕಸ್ಲಾನ್ ಅವರಿಗೆ 28 ವರ್ಷ ವಯಸ್ಸಾಗಿತ್ತು.
ಮತ್ತೊಬ್ಬ ಫುಟ್ಬಾಲರ್ ಸಾವಿನಿಂದ ಬಚಾವ್
ಘಾನಾ ಮೂಲದ ಕ್ರಿಸ್ಟಿಯನ್ ಆಟ್ಸು ಎಂಬ ಫುಟ್ಬಾಲ್ ಆಟಗಾರ ಸಾವಿನಿಂದ ಬಚಾವ್ ಆದ ಘಟನೆ ನಡೆದಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ 31 ವರ್ಷದ ಕ್ರಿಸ್ಟಿಯನ್ ಆಟ್ಸು ಅವರನ್ನು ರಕ್ಷಣಾ ಕಾರ್ಯಕರ್ತರು ಕಾಪಾಡಿದ್ದಾರೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟರ್ಕಿ, ಸಿರಿಯಾ ದೇಶಗಳಲ್ಲಿ ಸೋಮವಾರ ಮತ್ತು ಮಂಗಳವಾರ 4ನಾಲ್ಕು ಭೂಕಂಪಗಳು ಸಂಭವಿಸಿವೆ. ಅದರಲ್ಲಿ ಮೊದಲೆರಡು ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 7.5ಕ್ಕಿಂತ ಹೆಚ್ಚು ತೀವ್ರತೆ ದಾಖಲಾಗಿದೆ. ಟರ್ಕಿಯಲ್ಲಿ ಸಾವಿರಾರು ಕಟ್ಟಡಗಳು ನೆಲಸಮಗೊಂಡಿವೆ. ಕಟ್ಟಡಗಳ ರಾಶಿಯಲ್ಲಿ ಬಹಳ ಮಂದಿ ಸಿಲುಕಿರುವ ಸಾಧ್ಯತೆ ಇದೆ. ಡಬ್ಲ್ಯೂಎಚ್ಒ ಅಂದಾಜು ಪ್ರಕಾರ ಸಾವಿನ ಸಂಖ್ಯೆ ಕನಿಷ್ಠ 20 ಸಾವಿರವಾದರೂ ಆಗಬಹುದು.
ಇನ್ನು, ರಕ್ಷಣಾ ಕಾರ್ಯಾಚರಣೆಗಳಿಗೆ ಚಳಿ, ಗಾಳಿ, ಮಳೆ ಅಡ್ಡಿಯಾಗಿದೆ. ಟರ್ಕಿಯಲ್ಲಿ ಈಗ ಶೂನ್ಯ ಡಿಗ್ರಿಯಷ್ಟು ಚಳಿ ಇದೆ. ಇದರ ಮಧ್ಯೆಯೂ ರಕ್ಷಣಾ ಕಾರ್ಯಕರ್ತರು ತಮ್ಮ ಜೀವ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಾರೆ. ಭಾರತ, ಅಮೆರಿಕ ಮೊದಲಾದ ಅನೇಕ ದೇಶಗಳು ಟರ್ಕಿ, ಸಿರಿಯಾ ದೇಶಗಳಿಗೆ ವಿವಿಧ ರೀತಿಯಲ್ಲಿ ನೆರವು ಒದಗಿಸುತ್ತಿವೆ.
Published On - 8:19 am, Wed, 8 February 23