ನವದೆಹಲಿ, ಆಗಸ್ಟ್ 8: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಅಥವಾ ಬೆಳ್ಳಿಯ ಪದಕದ ನಿರೀಕ್ಷೆಯಲ್ಲಿದ್ದಾಗಲೇ ಅನರ್ಹಗೊಂಡಿರುವ ಭಾರತೀಯ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಬೇಸರದಿಂದಲೇ ಕುಸ್ತಿಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಭಾವುಕ ಸಂದೇಶ ಪ್ರಕಟಿಸಿರುವ ಅವರು, ‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋಲನುಭವಿಸಿದ್ದೇನೆ’ ಎಂದಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಕುಸ್ತಿಪಟು ರೋಚಕವಾಗಿ ಫೈನಲ್‌ಗೆ ಪ್ರವೇಶಿಸಿದ್ದರು. ವಿನೇಶ್ ಫೋಗಟ್ ಖಚಿತವಾಗಿ ಬಂಗಾರ ಗೆಲ್ಲುವ ನಿರೀಕ್ಷೆ ಭಾರತೀಯರಿಗಿತ್ತು. ಆದರೆ, ಪದಕ ಸುತ್ತಿನ ಪಂದ್ಯಕ್ಕೂ ಮುನ್ನ ದೇಹದ ತೂಕದಲ್ಲಿ ಕೇವಲ 100 ಗ್ರಾಂ ಅಧಿಕವಿದ್ದ ಕಾರಣದಿಂದ, 29 ವರ್ಷದ ಕುಸ್ತಿಪಟುವನ್ನು ಫೈನಲ್‌ನಿಂದ ಅನರ್ಹಗೊಳಿಸಲಾಯಿತು. ಇದಾದ ಒಂದು ದಿನದಲ್ಲೇ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ.
‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ಬರೆದುಕೊಂಡಿದ್ದಾರೆ. ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ, ಕ್ಷಮಿಸಿ ಎಂದು ವಿನೇಶ್ ಫೋಗಟ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
माँ कुश्ती मेरे से जीत गई मैं हार गई माफ़ करना आपका सपना मेरी हिम्मत सब टूट चुके इससे ज़्यादा ताक़त नहीं रही अब।
अलविदा कुश्ती 2001-2024 🙏
आप सबकी हमेशा ऋणी रहूँगी माफी 🙏🙏
— Vinesh Phogat (@Phogat_Vinesh) August 7, 2024
ತೂಕ ಇಳಿಸಲು ನಡೆಸಿದ ಸತತ ಪ್ರಯತ್ನಗಳ ಪರಿಣಾಮವಾಗಿ ಅವರು ನಿರ್ಜಲೀಕರಣದಿಂದ ಬಳಲಿದ್ದಲ್ಲದೆ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 am, Thu, 8 August 24