ಭವ್ಯ ಸ್ವಾಗತ ನೋಡಿ ಕಣ್ಣೀರಿಟ್ಟ ವಿನೇಶ್ ಫೋಗಟ್

ಭವ್ಯ ಸ್ವಾಗತ ನೋಡಿ ಕಣ್ಣೀರಿಟ್ಟ ವಿನೇಶ್ ಫೋಗಟ್

ಝಾಹಿರ್ ಯೂಸುಫ್
|

Updated on: Aug 17, 2024 | 12:33 PM

Vinesh Phogat: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಕೈ ತಪ್ಪುತ್ತಿದ್ದಂತೆ ವಿನೇಶ್ ಫೋಗಟ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಬೆಳ್ಳಿ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುವ ಆಸೆಯಲ್ಲಿದ್ದರು. ಆದರೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿದ್ದು, ಇದರೊಂದಿಗೆ ವಿನೇಶ್ ಫೋಗಟ್ ಅವರ ಪದಕ ಕನಸು ಕೂಡ ಕಮರಿದೆ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ತಾಯ್ನಾಡಿಗೆ ಆಗಮಿಸಿದ್ದಾರೆ. ಶನಿವಾರ, ಆಗಸ್ಟ್ 17 ರಂದು ದೆಹಲಿಗೆ ಆಗಮಿಸಿದ ಅವರಿಗೆ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು. ಆ ಬಳಿಕ ನಡೆದ ಮೆರವಣಿ ವೇಳೆ ವಿನೇಶ್ ಫೋಗಟ್ ಕಣ್ಣೀರು ಹಾಕಿದರು.

ಇದೇ ವೇಳೆ ಮಾತನಾಡಿದ ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಇಡೀ ದೇಶಕ್ಕೆ ನಾನು ಧನ್ಯವಾದಗಳು. ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದು ಭಾವುಕರಾದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಆಗಸ್ಟ್ 9 ರಂದು ನಡೆದ ಮಹಿಳೆಯರ 50 ಕೆಜಿ ತೂಕದ ವಿಭಾಗದ ಫೈನಲ್‌ನಿಂದ ಅನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹಲವಾರು ದಿನಗಳ ಕಾಯುವಿಕೆಯ ನಂತರ ಅಂತಿಮವಾಗಿ ಈ ಮನವಿಯನ್ನು ಸಿಎಎಸ್ ವಜಾಗೊಳಿಸಿದೆ. ಇದರೊಂದಿಗೆ ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್ ಫೋಗಟ್ ಅವರ ಕನಸು ಕೂಡ ಕಮರಿದೆ.

ಇದಕ್ಕೂ ಮುನ್ನ ಪ್ಯಾರಿಸ್ ಒಲಿಂಪಿಕ್ಸ್​ನ 50 ಕೆಜಿ ತೂಕದ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿನೇಶ್ ಫೋಗಟ್ ಅವರು ಫೈನಲ್​ಗೆ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯಕ್ಕೂ ನಡೆದ ತೂಕ ಪರಿಶೀಲನೆ ವೇಳೆ ಅವರು ಅನುಮತಿಸಲಾದ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವುದು ಕಂಡುಬಂದಿದೆ.

ಒಲಂಪಿಕ್ಸ್‌ನಲ್ಲಿ ಕುಸ್ತಿಯನ್ನು ನಿಯಂತ್ರಿಸುವ ಸಂಸ್ಥೆಯಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯೂಡಬ್ಲ್ಯು) ನಿಯಮಗಳ ಪ್ರಕಾರ, ಯಾವುದೇ ಕುಸ್ತಿಪಟು ಹೆಚ್ಚಿನ ತೂಕವನ್ನು ಹೊಂದಿದ್ದರೆ ಅವರನ್ನು ಇಡೀ ಪಂದ್ಯಾವಳಿಯಿಂದ ಅನರ್ಹಗೊಳಿಸಲಾಗುತ್ತದೆ. ಅದರಂತೆ ವಿನೇಶ್ ಫೋಗಟ್ ಅವರನ್ನು ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಲಾಗಿತ್ತು.