‘ಒಲಿಂಪಿಕ್ಸ್‌ನಲ್ಲೂ ಈ ಸಾಧನೆ ಮಾಡಬೇಕು’: ಭಾರತೀಯರ ಹೃದಯ ಗೆದ್ದ ಪಾಕ್ ಸ್ಪರ್ಧಿ ಅರ್ಷದ್ ನದೀಮ್

Arshad Nadeem: ಪಾಕಿಸ್ತಾನ ಪರ ಮೊಟ್ಟಮೊದಲ ಬೆಳ್ಳಿ ಪದಕ ಗೆದ್ದ ಅಥ್ಲೀಟ್‌ ಎಂಬ ದಾಖಲೆ ಬರೆದಿರುವ ನದೀಮ್ ಪದಕ ಪಡೆದ ನಂತರ ಮಾತನಾಡಿ, ‘ನೀರಜ್‌ ಚಿನ್ನದ ಪದಕ ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಶ್ವದಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಇದೀಗ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಮತ್ತು ಎರಡನೇ ಸ್ಥಾನ ಪಡೆಯಬೇಕು ಎಂದಿದ್ದಾರೆ.

‘ಒಲಿಂಪಿಕ್ಸ್‌ನಲ್ಲೂ ಈ ಸಾಧನೆ ಮಾಡಬೇಕು’: ಭಾರತೀಯರ ಹೃದಯ ಗೆದ್ದ ಪಾಕ್ ಸ್ಪರ್ಧಿ ಅರ್ಷದ್ ನದೀಮ್
ನೀರಜ್ ಚೋಪ್ರಾ, ಅರ್ಷದ್ ನದೀಮ್
Follow us
ಪೃಥ್ವಿಶಂಕರ
|

Updated on:Aug 28, 2023 | 9:32 AM

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships) ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ((Neeraj Chopra) ಚಿನ್ನ ಗೆದ್ದರೆ, ಅವರಿಗೆ ಸ್ಪರ್ಧೆ ನೀಡಿದ ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ನೀರಜ್ 88.17 ಮೀಟರ್ ದೂರ ಜಾವೆಲಿನ್ ಎಸೆದು ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಹಾಗೆಯೇ ಪಾಕಿಸ್ತಾನದ ನದೀಮ್ 87.82 ಮೀ ಎಸೆದು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವುದರೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಬೆಳ್ಳಿ ಪದಕ ಗೆಲ್ಲುವ ಮೂಲಕ ಅರ್ಷದ್ ನದೀಮ್ ಇಡೀ ಪಾಕಿಸ್ತಾನ ಸಂಭ್ರಮಾಚರಣೆಯಲ್ಲಿ ಮಿಂದೇಳುವಂತೆ ಮಾಡಿದರು. ಆದರೆ ವಿಜಯದ ನಂತರ ಅರ್ಷದ್ ನದೀಮ್ ನೀಡಿದ ಹೇಳಿಕೆ, ಪಾಕ್ ಪ್ರಜೆಗಳೊಂದಿಗೆ ಭಾರತೀಯರ ಹೃದಯ ಗೆಲ್ಲುವುಲ್ಲಿಯೂ ಯಶಸ್ವಿಯಾಯಿತು.

ವಾಸ್ತವವಾಗಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನ ಪರ ಮೊಟ್ಟಮೊದಲ ಬೆಳ್ಳಿ ಪದಕ ಗೆದ್ದ ಅಥ್ಲೀಟ್‌ ಎಂಬ ದಾಖಲೆ ಬರೆದಿರುವ ನದೀಮ್ ಪದಕ ಪಡೆದ ನಂತರ ಮಾತನಾಡಿ, ‘ನೀರಜ್‌ ಚಿನ್ನದ ಪದಕ ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಶ್ವದಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಇದೀಗ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಮತ್ತು ಎರಡನೇ ಸ್ಥಾನ ಪಡೆಯಬೇಕು. ನೀರಜ್ ಮತ್ತು ನಾನು ಒಲಿಂಪಿಕ್ಸ್‌ನಲ್ಲೂ ಟಾಪ್ 2ರಲ್ಲಿ ಸ್ಥಾನ ಪಡೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳುವ ಮೂಲಕ ನದೀಮ್ ವಿಶ್ವದ ಹೃದಯ ಗೆದ್ದರು.

Neeraj Chopra: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ; ಅಭಿನಂದನೆ ಸಲ್ಲಿಸಿದ ಭಾರತೀಯ ಸೇನೆ

ನೀರಜ್, ನದೀಮ್ ಮುಖಾಮುಖಿ

ಇನ್ನು ಫೈನಲ್ ಮುಗಿದ ಬಳಿಕ ಮುಖಾಮುಖಿಯಾದ ನೀರಜ್ ಹಾಗೂ ನದೀಮ್ ಇಬ್ಬರೂ ಪರಸ್ಪರ ಅಭಿನಂದಿಸಿದರು. ಈ ಹಿಂದೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚಿನ್ನ ಗೆದ್ದಿದ್ದರೆ, ಅದೇ ನದೀಮ್ 5ನೇ ಸ್ಥಾನ ಪಡೆದುಕೊಂಡಿದ್ದರು. ಇದಾದ ಬಳಿಕ ಕಳೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿಗೆ ಮುತ್ತಿಟ್ಟಿದ್ದರೆ, ನದೀಮ್ 5ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ನೀರಜ್ ಮತ್ತು ನದೀಮ್ ಇಬ್ಬರೂ ಮತ್ತೊಮ್ಮೆ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ.

ಅರ್ಹತೆಯಲ್ಲಿಯೂ ಟಾಪ್ 2

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದರೊಂದಿಗೆ ಈ ಇಬ್ಬರೂ 2024 ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್​ಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದಾರೆ. ಇನ್ನು ಅರ್ಹತಾ ಸುತ್ತಿನಲ್ಲೂ ಈ ಇಬ್ಬರೂ ಅಗ್ರ 2ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅರ್ಹತಾ ಸುತ್ತಿನಲ್ಲಿ ನೀರಜ್ 88.77 ಮೀ ದೂರ ಎಸೆದಿದ್ದರೆ, ನದೀಮ್ 86.79 ಮೀ. ದೂರ ಜಾವೆಲಿನ್ ಎಸೆದಿದ್ದರು. ಆದರೆ ಫೈನಲ್‌ನಲ್ಲಿ, ನದೀಮ್ ತಮ್ಮ ಅರ್ಹತಾ ಸುತ್ತಿಗಿಂತ ಉತ್ತಮ ಪ್ರದರ್ಶನ ನೀಡಿದರೆ, ನೀರಜ್ ಮಾತ್ರ ಕೊಂಚ ಹಿನ್ನಡೆ ಅನುಭಸಿದರು. ಫೈನಲ್‌ನಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದರೂ, ನೀರಜ್ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:30 am, Mon, 28 August 23