ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಮೂರನೇ ದಿನದಂದು ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಬಹುತೇಕ ಎಲ್ಲಾ ಅದೃಷ್ಟಗಳು ಭಾರತದ ಪರವಾಗಿದ್ದವು. ದೇಶಾದ್ಯಂತ ಇರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಸಂತೋಷದಿಂದಿದ್ದರು. ಆದರೆ ಆ ಒಂದು ಸಂದರ್ಭದ ಮಾತ್ರ ಈ ಆಟಗಾರನಿಗೆ ತುಂಬಾ ನೋವು ನೀಡಿತು.
ಆ ಆಟಗಾರ ಬೇರ್ಯಾರು ಅಲ್ಲ, ವಾಷಿಂಗ್ಟನ್ ಸುಂದರ್. ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಸುಂದರ್ ಅಜೇಯ 96 ರನ್‌ಗಳನ್ನು ಗಳಿಸಿ ಕೇವಲ 4 ರನ್ಗಳಿಂದ ಶತಕ ವಂಚಿತರಾದರು. ವಾಷಿಂಗ್ಟನ್ ಮಾತ್ರ ಇದರಿಂದ ನಾನು ನಿರಾಶೆಗೊಂಡಿಲ್ಲ ಎಂದು ಹೇಳಿದರು. ಆದರೆ ಅವರ ತಂದೆ ಎಂ.ಸುಂದರ್ ಮಾತ್ರ ತಮ್ಮ ಹತಾಶೆಯ ಮತ್ತು ಆ ಇಬ್ಬರು ಆಟಗಾರರ ಮೇಲಿರುವ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದರು.
ವಾಷಿಂಗ್ಟನ್, ಪಂದ್ಯದ ಎರಡನೇ ದಿನದಂದು, ರಿಷಭ್ ಪಂತ್ ಅವರೊಂದಿಗೆ ಉತ್ತಮ ಜೊತೆಯಾಟ ಆಡಿ ಟೀಂ ಇಂಡಿಯಾವನ್ನು ಕಠಿಣ ಪರಿಸ್ಥಿತಿಯಿಂದ ಹೊರತರಲು ಸಹಕರಿಸಿದರು. ಮೂರನೇ ದಿನ, ವಾಷಿಂಗ್ಟನ್ ಮತ್ತು ಅಕ್ಷರ್ ಪಟೇಲ್ ಆರಂಭದಲ್ಲಿ ಉತ್ತಮ ಜೊತೆಯಾಟ ಆಡಿ ಭಾರತವನ್ನು 350 ರನ್‌ಗಳ ಗುರಿ ದಾಟಿಸಿದರು. ಈ ಹೊತ್ತಿಗೆ, ವಾಷಿಂಗ್ಟನ್ 90 ರನ್‌ಗಳ ಗಡಿ ತಲುಪಿದ್ದರು. ಜೊತೆಗೆ ಅವರ ಮೊದಲ ಟೆಸ್ಟ್ ಶತಕಕ್ಕೆ ಹತ್ತಿರವಾಗುತ್ತಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಅಕ್ಷರ್ ಪಟೇಲ್ ರನ್ಔಟ್ ಆದರು. ನಂತರ ಮುಂದಿನ 4 ಎಸೆತಗಳಲ್ಲಿ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಕೂಡ ವಿಕೆಟ್ ಕಳೆದುಕೊಂಡರು.
ಭಾರತ ಈ ರೀತಿ ಸೋತಿದ್ದರೆ?
96 ರನ್ ಗಳಿಸಿ ವಾಷಿಂಗ್ಟನ್ ತಮ್ಮ ಮೊದಲ ಶತಕದಿಂದ ವಂಚಿತರಾದಾಗ ಅವರ ತಂದೆ ಎಂ ಸುಂದರ್ ಹೆಚ್ಚು ಕೋಪಗೊಂಡರು. ಒಂದು ವೇಳೆ ಟೀಂ ಇಂಡಿಯಾ ಈ ರೀತಿ ಸೋತಿದ್ದರೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು. ನಾನು ಭಾರತದ ಬಾಲಂಗೋಚಿಗಳ ಬಗ್ಗೆ ಹೆಚ್ಚು ನಿರಾಶೆಗೊಂಡಿದ್ದೇನೆ. ಅವರಿಗೆ ಸ್ವಲ್ಪ ಹೊತ್ತು ಮೈದಾನದಲ್ಲಿ ನಿಲ್ಲಲಾಗಲಿಲ್ಲ. ಭಾರತಕ್ಕೆ ಒಂದು ವೇಳೆ ಗೆಲ್ಲಲು 10 ರನ್ಗಳು ಬೇಕಾಗಿದ್ದಾಗ ಅವರು ಈ ತಪ್ಪು ಮಾಡಿದ್ದರೆ, ಟೀಂ ಇಂಡಿಯಾ ಏನು ಮಾಡುತ್ತಿತ್ತು? ಎಂದು ಕೋಪಗೊಂಡರು.
ಧೈರ್ಯ ತೋರಿಸಲು ಬಾಲಂಗೋಚಿಗಳಿಗೆ ಸಾಧ್ಯವಾಗಲಿಲ್ಲ
ಇಶಾಂತ್ ಮತ್ತು ಸಿರಾಜ್ ಕ್ರೀಸ್‌ನಲ್ಲಿ ಉಳಿಯುವ ಧೈರ್ಯವನ್ನು ತೋರಿಸಲಿಲ್ಲ. ಅಲ್ಲದೆ ಸುಲಭವಾಗಿ ವಿಕೆಟ್ ಕಳೆದುಕೊಂಡರು ಎಂದು ಎಂ.ಸುಂದರ್ ಅಸಮಾಧಾನಗೊಂಡರು. ಇದು ತಂತ್ರಜ್ಞಾನ ಅಥವಾ ಕೌಶಲ್ಯದ ವಿಷಯವಲ್ಲ. ಇದು ಧೈರ್ಯದ ವಿಷಯವಾಗಿದೆ. ಇಂಗ್ಲೆಂಡ್ ಬೌಲರ್ಗಳು ತುಂಬಾ ದಣಿದಿದ್ದರು. ಸ್ಟೋಕ್ಸ್ 123, 126 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಹಾಗಾಗಿ ಅವರ ಬೌಲಿಂಗ್ನಲ್ಲಿ ಯಾವುದೇ ಮಾರಣಾಂತಿಕ ವೇಗ ಇರಲಿಲ್ಲ. ಆದರಿಂದ ಸಿರಾಜ್ ಮತ್ತು ಇಶಾಂತ್ ತನ್ನ ಮಗನಿಗೆ ಸಾಥ್ ನೀಡಬೇಕಿತ್ತು ಎಂದರು.
ಮೊದಲ ಟೆಸ್ಟ್ನಲ್ಲೂ ಹೀಗೆ ಆಯಿತು
ವಾಷಿಂಗ್ಟನ್‌ಗೆ ಈ ಸರಣಿಯಲ್ಲಿ ಈ ರೀತಿ ಆಗಿರುವುದು ಇದು ಎರಡನೇ ಸಲ. ಮೊದಲ ಟೆಸ್ಟ್‌ನಲ್ಲಿ ಎಲ್ಲಾ ಆಟಗಾರರು ಬೇಗನೇ ಔಟಾಗಿದ್ದರಿಂದ ಅವರು ಶತಕದ ಹತ್ತಿರ ಬಂದು ಶತಕ ವಂಚಿತರಾದರು. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 85 ರನ್ ಗಳಿಸಿದರು. ಹಾಗೆಯೇ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಬ್ರಿಸ್ಬೇನ್‌ನಲ್ಲಿ ನಡೆದ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಅತ್ಯುತ್ತಮ ಅರ್ಧಶತಕವನ್ನು ಸಹ ಗಳಿಸಿದ್ದರು. ಅಂದು ಸಹ ತಮ್ಮ ಮಗನಿಗೆ ಮೋಸವಾಗಿದ್ದನ್ನು ಕಂಡು ವಾಷಿಂಗ್ಟನ್ ಸುಂದರ್ ತಂದೆ ಬೇಸರಗೊಂಡಿದ್ದರು.
ಇದನ್ನೂ ಓದಿ:ವಾಷಿಂಗ್ಟನ್ ಸುಂದರ್ ಅವರ ವಿಶಿಷ್ಠ ಹೆಸರಿನ ಹಿಂದಿರುವ ಕುತೂಹಲಕಾರಿ ಕಥೆ ಏನು ಗೊತ್ತಾ?