ವಿಂಡೀಸ್ ದಾಂಡಿಗರ ಆರ್ಭಟ… 6 ರನ್​ಗಳಿಂದ ವಿಶ್ವ ದಾಖಲೆ ಮಿಸ್

Updated on: Feb 24, 2026 | 7:31 AM

Highest team scores in T20 World Cups: 2007ರ ಟಿ20 ವಿಶ್ವಕಪ್​ನಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ ತಂಡವು 20 ಓವರ್​ಗಳಲ್ಲಿ 260 ರನ್ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ವೆಸ್ಟ್ ಇಂಡೀಸ್ ತಂಡವು ಈ ದಾಖಲೆಯ ಸನಿಹಕ್ಕೆ ಬಂದರೂ ಕೊನೆಯ ಓವರ್​ನಲ್ಲಿ 2 ಡಾಟ್ ಬಾಲ್ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸುವ ಅವಕಾಶವನ್ನು ಕೈಚೆಲ್ಲಿಕೊಂಡರು.

ಟಿ20 ವಿಶ್ವಕಪ್​ನ 44ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್​ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ಅದು ಕೂಡ ಬರೋಬ್ಬರಿ 254 ರನ್​ ಚಚ್ಚುವ ಮೂಲಕ. ಮುಂಬೈನ ವಾಂಖೆಡೆ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಾಝ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ ಕೇವಲ 34 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 85 ರನ್ ಬಾರಿಸಿದರು.

ಇನ್ನು ರೋವ್​ಮನ್ ಪೊವೆಲ್ 35 ಎಸೆತಗಳಲ್ಲಿ 59 ರನ್ ಸಿಡಿಸಿದರು. ಈ ಎರಡು ಸ್ಫೋಟಕ ಅರ್ಧಶತಕಗಳ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 254 ರನ್​ ಕಲೆಹಾಕಿತು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ ಗಳಿಸಿದ 2ನೇ ತಂಡ ಎನಿಸಿಕೊಂಡಿತು.

ಇದಾಗ್ಯೂ ವಿಂಡೀಸ್ ಪಡೆ ಕೇವಲ 6 ರನ್​ಗಳಿಂದ ಭರ್ಜರಿ ದಾಖಲೆಯನ್ನು ತನ್ನದಾಗಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿಕೊಂಡರು. ಏಕೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್ 260 ರನ್​ಗಳು.

2007ರ ಟಿ20 ವಿಶ್ವಕಪ್​ನಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ ತಂಡವು 20 ಓವರ್​ಗಳಲ್ಲಿ 260 ರನ್ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ವೆಸ್ಟ್ ಇಂಡೀಸ್ ತಂಡವು ಈ ದಾಖಲೆಯ ಸನಿಹಕ್ಕೆ ಬಂದರೂ ಕೊನೆಯ ಓವರ್​ನಲ್ಲಿ 2 ಡಾಟ್ ಬಾಲ್ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸುವ ಅವಕಾಶವನ್ನು ಕೈಚೆಲ್ಲಿಕೊಂಡರು.

ಇನ್ನು ವೆಸ್ಟ್ ಇಂಡೀಸ್ ನೀಡಿದ 255 ರನ್​ಗಳ ಗುರಿ ಬೆನ್ನತ್ತಿದ ಝಿಂಬಾಬ್ವೆ ತಂಡವು 17.4 ಓವರ್​ಗಳಲ್ಲಿ 147 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ವಿಂಡೀಸ್ ಪಡೆ 107 ರನ್​ಗಳ ಭರ್ಜರಿ ಜಯ ಸಾಧಿಸಿದೆ.