AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನ ಪಂದ್ಯದಲ್ಲಿ ಗೆಲ್ಲುವ ಟೀಮು ಪ್ಲೇ ಆಫ್ ಹಂತಕ್ಕೆ ಹತ್ತಿರವಾಗುತ್ತದೆ

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿ ಕೊನೆಯ ಹಂತಕ್ಕೆ ಜಾರುತ್ತಿರುವಂತೆಯೇ ಪ್ಲೇ ಆಫ್ ಸ್ಥಾನಗಳಿಗಾಗಿ ತೀವ್ರ ಹಣಾಹಣಿ ಶುರುವಾಗಿದೆ. ಹಾಗೆ ನೋಡಿದರೆ, ಮೂರು ತಂಡಗಳು-ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇ ಆಪ್ ಹಂತವನ್ನು ಹೆಚ್ಚು ಕಡಿಮೆ ತಲುಪಿಯಾಗಿದೆ. ಸದರಿ ಆವೃತ್ತಿಯ 46 ನೇ ಪಂದ್ಯ ಕೊಲ್ಕತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಜಯಗಳಿಸುವ ಟೀಮು ಪಾಯಿಂಟ್ಸ್ […]

ಇಂದಿನ ಪಂದ್ಯದಲ್ಲಿ ಗೆಲ್ಲುವ ಟೀಮು ಪ್ಲೇ ಆಫ್ ಹಂತಕ್ಕೆ ಹತ್ತಿರವಾಗುತ್ತದೆ
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 26, 2020 | 4:13 PM

Share

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿ ಕೊನೆಯ ಹಂತಕ್ಕೆ ಜಾರುತ್ತಿರುವಂತೆಯೇ ಪ್ಲೇ ಆಫ್ ಸ್ಥಾನಗಳಿಗಾಗಿ ತೀವ್ರ ಹಣಾಹಣಿ ಶುರುವಾಗಿದೆ. ಹಾಗೆ ನೋಡಿದರೆ, ಮೂರು ತಂಡಗಳು-ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇ ಆಪ್ ಹಂತವನ್ನು ಹೆಚ್ಚು ಕಡಿಮೆ ತಲುಪಿಯಾಗಿದೆ. ಸದರಿ ಆವೃತ್ತಿಯ 46 ನೇ ಪಂದ್ಯ ಕೊಲ್ಕತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಜಯಗಳಿಸುವ ಟೀಮು ಪಾಯಿಂಟ್ಸ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನಕ್ಕೇರುತ್ತಾದರೂ, ಪ್ಲೇ ಆಫ್​ನಲ್ಲಾಡುವ ಅರ್ಹತೆ ಗಳಿಸಿದಂತಾಗುವುದಿಲ್ಲ. ಸದ್ಯಕ್ಕೆ 12 ಅಂಕಗಳೊಂದಿಗೆ ಕೆಕೆಆರ್ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ 10 ಅಂಕ ಗಳಿಸಿದ್ದು 5ನೇ ಸ್ಥಾನದಲ್ಲಿದೆ.

ಕೊಲ್ಕತಾಗಿಂತ ಒಂದು ಸ್ಥಾನ ಕೆಳಗಿದ್ದರೂ ಕಳೆದ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಕಂಡಿರುವ ಪಂಜಾಬ್ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಕ್ರಿಸ್ ಗೇಲ್ ಆಡುವ ಇಲೆವೆನ್​ನಲ್ಲಿ ಬಂದಾಗಿನಿಂದ ರಾಹುಲ್ ಪಡೆಯ ದಿಶೆಯೇ ಬದಲಾಗಿದೆ. ಅವರೊಂದಿಗೆ ಮತ್ತಿಬ್ಬರು ವಿದೇಶಿ ಬ್ಯಾಟ್ಸ್​ಮನ್​ಗಳಾದ ನಿಕೊಲಾಸ್ ಪೂರನ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಸಹ ಬ್ಯಾಟ್​ನಿಂದ ಕಾಂಟ್ರಿಬ್ಯೂಟ್ ಮಾಡುತ್ತಿದ್ದಾರೆ. ಮ್ಯಾಕ್ಸ್​ವೆಲ್ ಅವರ ಕೊಡುಗೆಯನ್ನು ಪೂರನ್ ನೀಡಿರುವ ಕೊಡುಗೆಯೊಂದಿಗೆ ಹೋಲಿಸಲಾಗದು; ಆದರೆ, ನಾಯಕನ ವಿಶ್ವಾಸ ಉಳಿಸಿಕೊಂಡಿರುವ ಆಸ್ಸೀ ಇತ್ತೀಚಿನ ಪಂದ್ಯಗಳಿಂದ ಕಾಂಟ್ರಿಬ್ಯೂಟ್ ಮಾಡಲಾರಂಭಿಸಿದ್ದಾರೆ.

ಇವತ್ತಿನ ಪಂದ್ಯಕ್ಕೆ ಕನ್ನಡಿಗ ಮಾಯಾಂಕ್ ಅಗರ್​ವಾಲ್ ವಾಪಸ್ಸಾಗುವ ನಿರೀಕ್ಷೆಯಿದೆ. ಹಾಗೆಯೇ, ಹಿಂದಿನೆರಡು ಪಂದ್ಯಗಳಲ್ಲಿ ಉತ್ತಮವಾಗಿ ಬೌಲ್ ಮಾಡಿರುವ ಕ್ರಿಸ್ ಜೊರ್ಡನ್ ಸ್ಥಾನ ಉಳಿಸಿಕೊಳ್ಳಬಹುದು. ಮೊಹಮ್ಮದ್ ಶಮಿ, ಅರ್ಷ್​ದೀಪ್ ಸಿಂಗ್, ರವಿ ಬಿಷ್ಣೋಯಿ. ಮುರುಗನ್ ಅಶ್ವಿನ್ ಮೊದಲಾದವರನ್ನು ಒಳಗೊಂಡಿರುವ ಪಂಜಾಬಿನ ಬೌಲಿಂಗ್ ದಾಳಿ ಪರಿಣಾಮಕಾರಿಯಾಗಿದೆ.

ಇದುವರೆಗೆ ಆಡಿರುವ 11 ಪಂದ್ಯಗಳಿಂದ 567 ನ್ ಶೇಖರಿಸಿರುವ ರಾಹುಲ್ ವೈಯಕ್ತಿಕ ರನ್ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಗರ್​ವಾಲ್ 398 ರನ್ ಗಳಿಸಿದ್ದು 5 ನೇ ಸ್ಥಾನದಲ್ಲಿದ್ದಾರೆ. ಇವತ್ತಿನ ಪಂದ್ಯದಲ್ಲೂ ಇವರಿಬ್ಬರಿಂದ ಉತ್ತಮ ಆರಂಭದ ನಿರೀಕ್ಷೆ ಟೀಮಿಗಿದೆ. ಕನ್ನಡಿಗರಿಂದ ಸ್ಟಾರ್ಟ್ ಸಿಕ್ಕರೆ, ಸ್ಫೋಟಕ ಬ್ಯಾಟ್ಸ್​ಮನ್​ಗಳಾದ ಗೇಲ್, ಪೂರನ್ ಮತ್ತು ಮ್ಯಾಕ್ಸ್​ವೆಲ್ ಅಕ್ರಮಣ ಲಾಂಚ್ ಮಾಡಲು ಅನುಕೂಲವಾಗುತ್ತದೆ.

ಅತ್ತ, ತನ್ನ ಕೊನೆಯ ಪಂದ್ಯದಲ್ಲಿ ಈ ಆವೃತ್ತಿಯ ಟಾಪ್ ಟೀಮ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 59 ರನ್​ಗಳ ಭರ್ಜರಿ ಮತ್ತು ಅಧಿಕಾರಯುತ ಗೆಲುವು ಸಾಧಿಸಿ ಅಯಾನ್ ಮೊರ್ಗನ್ ನೇತೃತ್ವದ ಕೊಲ್ಕತಾ ತನ್ನ ಸಹ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡಿದೆ. ಆ ಪಂದ್ಯದಲ್ಲಿ ಕೆಲವು ಪಾಸಿಟಿವ್​ಗಳು ಟೀಮಿಗೆ ಲಭ್ಯವಾಗಿವೆ. ಮೊದಲನೆಯದ್ದು, ಇದುವರೆಗೆ ಬ್ಯಾಟಿಂಗ್ ಫೇಲಾಗಿದ್ದ ಸುನಿಲ್ ನರೈನ್ ಅವರ ಬ್ಯಾಟ್​ನಿಂದ ರನ್​ಗಳು (32 ಎಸೆತಗಳಲ್ಲಿ 64 ರನ್) ಸಿಡಿದಿದ್ದು. ಮೂರನೇ ಕ್ರಮಾಂಕದಲ್ಲಾಡುವ ನಿತಿಷ್ ರಾಣಾ ಕ್ರೀಸಿಗೆ ಬಂದ ಕೂಡಲೇ ಚೆಂಡನ್ನು ಬೌಂಡರಿಗಟ್ಟುತ್ತಿದ್ದರೂ, ಬಿಗ್ ಇನ್ನಿಂಗ್ಸ್ ಆಡಿರಲಿಲ್ಲ. ಆದರೆ ಡೆಲ್ಲಿ ವಿರುದ್ಧ ಅವರು 54 ಎಸೆತಗಳಲ್ಲಿ 81 ರನ್ ಬಾರಿಸಿದರು.

ಟೀಮಿಗೆ ಲಭ್ಯವಾದ ಮೂರನೇ ಪಾಸಿಟಿವ್ ಎಂದರೆ, ವರುಣ್ ಚಕ್ರವರ್ತಿ ಅವರ ಬೌಲಿಂಗ್. ಅವರ 5/20 ಸಾಧನೆ ಸಶಕ್ತ ಬ್ಯಾಟಿಂಗ್ ಹೊಂದಿರುವ ಡೆಲ್ಲಿಯ ಬೆನ್ನುಲುಬನ್ನು ಮುರಿಯಿತು. ಮಿಸ್ಟ್ರಿ ಸ್ಪಿನ್ನರ್ ಎಂದು ಕರೆಸಿಕೊಳ್ಳುವ ವರುಣ್ ನಿಜಕ್ಕೂ ವಿಸ್ಮಯಕಾರಿ ಬೌಲಿಂಗ್ ಪ್ರದರ್ಶನ ನೀಡಿದರು.

ಗೇಲ್ ಅವರರನ್ನು ಆಡಿಸುವ ಮೂಲಕ ಪಂಜಾಬ್ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಅವರನ್ನು ಟೂರ್ನಿಯ ದ್ವಿತೀಯಾರ್ಧದಲ್ಲಿ ಆಡಿಸಿ ಕೊಲ್ಕತಾ ಲಾಭ ಮಾಡಿಕೊಳ್ಳುತ್ತಿದೆ. ಮರಳುಗಾಡಿನ ನಿಧಾನ ಗತಿಯ ಪಿಚ್​ಗಳಲ್ಲೂ ನ್ಯೂಜಿಲೆಂಡ್​ನ ಬೌಲರ್ ಅದ್ಭುತವಾಗಿ ಬೌಲ್ ಮಾಡುತ್ತಿದ್ದಾರೆ.

ನಂಬರ್ ಮೂರನೇ ಸ್ಥಾನದಲ್ಲಾಡುತ್ತಿರುವ ಶುಬ್​ಮನ್ ಗಿಲ್ ಮತ್ತು ಮಧ್ಯಮ ಕ್ರಮಾಂಕದಲ್ಲಾಡುತ್ತಿರುವ ಮೊರ್ಗನ್ ರನ್ ಗಳಿಸುತ್ತಿದ್ದಾರೆ. ಪ್ಯಾಟ್ ಕಮ್ಮಿನ್ಸ್ ವಿಕೆಟ್ ಪಡೆಯುವುದರ ಜೊತೆಗೆ ಬ್ಯಾಟ್​ನಿಂದಲೂ ಕಾಂಟ್ರಿಬ್ಯೂಟ್ ಮಾಡುತ್ತಿದ್ದಾರೆ.

ಅಂದಹಾಗೆ, ಕೆಕೆಆರ್ ಮತ್ತು ಪಂಜಾಬ್ ಮೊದಲ ಸುತ್ತಿನಲ್ಲಿ ಎದುರಾದಾಗ ಶಾರುಖ್ ಖಾನ್​ನ ತಂಡ 2 ರನ್​ಗಳ ಜಯ ಸಾಧಿಸಿತ್ತು.