ಋತುರಾಜ್ ಗಾಯಕ್ವಾಡ್ರನ್ನು ಮನಸಾರೆ ಹೊಗಳಿದ ಎಮ್ಎಸ್ ಧೋನಿ
ರವಿವಾರದ ಡಬಲ್ ಹೆಡ್ಡರ್ನಲ್ಲಿ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸುಲಭವಾಗಿ 8 ವಿಕೆಟ್ಗಳ ಜಯ ಸಾಧಿಸಿ ಸೋಲಿನ ಸರಪಳಿಯಿಂದ ಕಳಚಿಕೊಂಡಿರುವ ಚೆನೈ ಸೂಪರ್ ಕಿಂಗ್ಸ್ ಈಗಾಗಲೇ 13ನೇ ಅವೃತ್ತಿಯಿಂದ ಹೊರಬಿದ್ದಿದ್ದರೂ, ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿರುವ ಕೊಹ್ಲಿ ತಂಡವನ್ನು ಸೋಲಿಸಿರುವುದು ಕೊಂಚ ಮಟ್ಟಿನ ಸಮಾಧಾನ ಒದಗಿಸಿರಬಹುದು. ಈ ಮ್ಯಾಚ್ನಲ್ಲಿ ಮಹೇಂದ್ರಸಿಂಗ್ ಧೋನಿಯ ಟೀಮು ಬೆಂಗಳೂರನ್ನು ಆಟದ ಎಲ್ಲ ವಿಭಾಗಗಳಲ್ಲೂ ಹಿಮ್ಮೆಟ್ಟಿಸಿತು. ಟೂರ್ನಿಯ ಮೊದಲಾರ್ಧದಲ್ಲಿ ಸಿಕ್ಕ ಒಂದರೆಡು ಅವಕಾಶಗಳನ್ನು ಹಾಳು ಮಾಡಿಕೊಂಡಿದ್ದ ಚೆನೈ ಆರಂಭ ಆಟಗಾರ […]
ರವಿವಾರದ ಡಬಲ್ ಹೆಡ್ಡರ್ನಲ್ಲಿ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸುಲಭವಾಗಿ 8 ವಿಕೆಟ್ಗಳ ಜಯ ಸಾಧಿಸಿ ಸೋಲಿನ ಸರಪಳಿಯಿಂದ ಕಳಚಿಕೊಂಡಿರುವ ಚೆನೈ ಸೂಪರ್ ಕಿಂಗ್ಸ್ ಈಗಾಗಲೇ 13ನೇ ಅವೃತ್ತಿಯಿಂದ ಹೊರಬಿದ್ದಿದ್ದರೂ, ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿರುವ ಕೊಹ್ಲಿ ತಂಡವನ್ನು ಸೋಲಿಸಿರುವುದು ಕೊಂಚ ಮಟ್ಟಿನ ಸಮಾಧಾನ ಒದಗಿಸಿರಬಹುದು.
ಈ ಮ್ಯಾಚ್ನಲ್ಲಿ ಮಹೇಂದ್ರಸಿಂಗ್ ಧೋನಿಯ ಟೀಮು ಬೆಂಗಳೂರನ್ನು ಆಟದ ಎಲ್ಲ ವಿಭಾಗಗಳಲ್ಲೂ ಹಿಮ್ಮೆಟ್ಟಿಸಿತು. ಟೂರ್ನಿಯ ಮೊದಲಾರ್ಧದಲ್ಲಿ ಸಿಕ್ಕ ಒಂದರೆಡು ಅವಕಾಶಗಳನ್ನು ಹಾಳು ಮಾಡಿಕೊಂಡಿದ್ದ ಚೆನೈ ಆರಂಭ ಆಟಗಾರ 23 ವರ್ಷ ವಯಸ್ಸಿನ ಋತುರಾಜ್ ಗಾಯಕ್ವಾಡ್ ರವಿವಾರದ ಪಂದ್ಯದಲ್ಲಿ ಅತ್ಯಂತ ಮೆಚೂರ್ಡ್ ಇನ್ನಿಂಗ್ಸ್ ಆಡಿ ಟೀಮಿನ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಬ್ಯಾಟಿಂಗ್ನಲ್ಲಿ ಋತುರಾಜ್ ತೋರಿದ ಪ್ರಬುದ್ಧತೆ ನಾಯಕ ಮಹೇಂದ್ರಸಿಂಗ್ ಧೋನಿಯನ್ನು ಬಹಳ ಇಂಪ್ರೆಸ್ ಮಾಡಿದೆ.
‘‘ನಿನ್ನೆಯ ಮ್ಯಾಚ್ನಲ್ಲಿ ಋತುರಾಜ್ ಬಹಳ ಚೆನ್ನಾಗಿ ಆಡಿದ. ದೊಡ್ಡ ಹೊಡೆತಗಳಿಗೆ ಪ್ರಯತ್ನಿಸದೆ ತಾನು ವಿಶ್ವಾಸದಿಂದ ಆಡಬಹುದಾದ ಹೊಡೆತಗಳನ್ನು ಬಾರಿಸುತ್ತ, ರನ್ ಗಳಿಸಿದ. ನಮ್ಮ ಅಭಿಯಾನದ ಎರಡನೆ ಅಥವಾ ಮೂರನೇ ಮ್ಯಾಚ್ನಲ್ಲಿ ಅವನು ಹೀಗೆ ಆಡಿದ್ದರೆ ನಮಗೆ ಅವನ ಸಾಮರ್ಥ್ಯದ ಪರಿಚಯವಾಗುತಿತ್ತು. ಆದರೆ ಈ ವರ್ಷ ಅವನಿಗೂ ಸಮಸ್ಯೆಗಳು ಎದುರಾಗಿದ್ದು ನಮಗೆ ಗೊತ್ತಿದೆ. ಚೆನೈಯಲ್ಲಿದ್ದಾಗ ಅವನು ಚೆಂಡನ್ನು ಚೆನ್ನಾಗಿ ಬಾರಿಸುತ್ತಿದ್ದ, ಆದರೆ ನಂತರ ಕೊವಿಡ್ ಸೋಂಕಿಗೊಳಗಾದ. ದುಬೈನಲ್ಲಿ ಅವನು ಹೆಚ್ಚುವರಿ ಅವಧಿಗೆ ಕ್ವಾರಂಟೈನ್ಗೊಳಬೇಕಾಗಿದ್ದರಿಂದ ಅಮೂಲ್ಯ ಸಮಯ ಹಾಳಾಯಿತು. ಇದಕ್ಕಿಂತ (ಆರ್ಸಿಬಿ ವಿರುದ್ಧ ಆಡಿದ) ಮೊದಲಿನ ಪಂದ್ಯದಲ್ಲಿ ಅವನು ಶ್ರೇಷ್ಠ ಬೌಲರ್ಗಳನ್ನು ಎದುರಿಸಬೇಕಾಗಿತ್ತು, ಒಂದು ಅತ್ಯುತ್ತಮ ಎಸೆತ ಅವನ ಬ್ಯಾಟನ್ನು ಸವರಿ ವಿಕೆಟ್ಕೀಪರ್ನೆಡೆ ಚಿಮ್ಮಿತು. ಕ್ರಿಕೆಟ್ನಲ್ಲಿ ಇದು ಸಾಮಾನ್ಯ, ಆದರೆ ಬ್ಯಾಟ್ಸ್ಮನ್ ತನ್ನ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಾರದು, ಮೈದಾನಕ್ಕಿಳಿದಾಗ ಅವನು ಮಾನಸಿಕ ತುಮುಲವನ್ನು ಮೆಟ್ಟಿ ನಿಲ್ಲಬೇಕು. ನಿನ್ನೆ ಋತು ತಾನೆದುರಿಸದ ಮೊದಲ ಎಸೆತವನ್ನೇ ಚೆನ್ನಾಗಿ ಮಿಡ್ಲ್ ಮಾಡಿ ಒಂದು ರನ್ ತೆಗೆದುಕೊಂಡಾಗ ಅವನಿಂದ ಉತ್ತಮ ಪ್ರದರ್ಶನ ಬರುವ ನಿರೀಕ್ಷೆ ಹುಟ್ಟಿಕೊಂಡಿತು. ಕ್ರಮೇಣವಾಗಿ ಆಟಕ್ಕೆ ಕುದುರಿಕೊಂಡ ಅವನು ನಿರರ್ಗಳವಾಗಿ ರನ್ ಗಳಿಸತೊಡಗಿದ,’’ ಎಂದು ಧೋನಿ ಹೇಳಿದರು.
ಟೀಮು ಸತತವಾಗಿ ಸೋತು, ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದ್ದರೂ, ಕ್ರೀಡೆಯನ್ನು ಎಂಜಾಯ್ ಮಾಡಬೇಕೆಂದು ಧೋನಿ ಹೇಳುತ್ತಾರೆ.
‘‘ವೈಫಲ್ಯಗಳು ಎದುರಾದಾಗ ನಿರಾಶೆಗೊಳಗಾಗುವುದು ಸಹಜ ಮತ್ತು ಹತಾಷೆ ಆಟಗಾರರನ್ನು ಖಿನ್ನತೆಗೆ ದೂಡುತ್ತದೆ. ಆದರೆ ಅಂಥ ಸಂದರ್ಭಗಳಲ್ಲಿ ಮನಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಹತಾಷೆಗೊಳಗಾದರೆ ಆಡುವ ಇಲೆವೆನ್ನಿಂದ ಡ್ರಾಪ್ ಆಗಬೇಕಾಗುತ್ತದೆ, ಆಗ ರಿಜರ್ವ್ ಬೆಂಚ್ ಮೇಲೆ ಕೂತುಕೊಂಡು ಕಳೆಯುವ ಸಮಯ ಅತ್ಯಂತ ಯಾತನಾಮಾಯ. ಪಾಯಿಂಟ್ಸ್ ಟೇಬಲ್ನಲ್ಲಿ ನೀವು ಯಾವ ಸ್ಥಾನದಲ್ಲಿದ್ದರೂ ಆಟವನ್ನು ಎಂಜಾಯ್ ಮಾಡಬೇಕು, ಇಲ್ಲದಿದ್ದರೆ ನೀವಿರುವ ಪರಿಸ್ಥಿತಿ ಅಸಹನೀಯ ಮತ್ತು ಕ್ರೂರವೆನಿಸತೊಡಗುತ್ತದೆ. ಈ ಹಿನ್ನೆಲೆಯಲ್ಲಿ ಯುವ ಆಟಗಾರರ ಪ್ರದರ್ಶನಗಳು ನನಗೆ ಸಂತೋಷ ನೀಡಿವೆ,’’ ಅಂತ ಧೋನಿ ಹೇಳಿದರು.