Asian Games: 50 ಮೀ. ಟ್ರ್ಯಾಪ್​ ಶೂಟಿಂಗ್​ ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾರತ ವನಿತಾ ತಂಡ

|

Updated on: Oct 01, 2023 | 12:00 PM

Asian Games: ಭಾರತದ ರಾಜೇಶ್ವರಿ ಕುಮಾರಿ , ಮನೀಶಾ ಕೀರ್, ಪ್ರೀತಿ ರಾಜಕ್ ಒಟ್ಟು 337 ಅಂಕ ಗಳಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದು ಪ್ರಸಕ್ತ ಏಷ್ಯಾಡ್‌ನಲ್ಲಿ ಭಾರತಕ್ಕೆ 40ನೇ ಪದಕವಾಗಿದೆ. ಈ ಬಾರಿ ಭಾರತದ ಶೂಟರ್‌ಗಳು ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳನ್ನು ಹೆಚ್ಚಿಸುತ್ತಿದ್ದಾರೆ.

Asian Games: 50 ಮೀ. ಟ್ರ್ಯಾಪ್​ ಶೂಟಿಂಗ್​ ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾರತ ವನಿತಾ ತಂಡ
ರಾಜೇಶ್ವರಿ ಕುಮಾರಿ, ಮನೀಶಾ ಕೀರ್ ಮತ್ತು ಪ್ರೀತಿ ರಾಜಕ್
Follow us on

ಈ ಹಿಂದೆ ನಡೆದ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ (Asian Games) 70 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಈ ಕ್ರೀಡಾಕೂಟದಲ್ಲಿ ಅಧಿಕ ಪದಕ ಗೆದ್ದ ದಾಖಲೆ ಬರೆದಿತ್ತು. ಈ ಬಾರಿ ಚೀನಾದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ 100 ಪದಕ ಗೆಲ್ಲುವುದು ಭಾರತದ ಗುರಿಯಾಗಿದೆ. ಆ ಗುರಿಯತ್ತ ಭಾರತದ ಕ್ರೀಡಾಪಟುಗಳು ಒಂದೊಂದೇ ಹೆಜ್ಜೆಯನ್ನಿಡುತ್ತಿದ್ದಾರೆ. ಈ ವರ್ಷದ ಏಷ್ಯನ್ ಗೇಮ್ಸ್​ನಲ್ಲಿ ಭಾರತೀಯ ಶೂಟರ್‌ಗಳು ಅತ್ಯಂತ ಗಮನಾರ್ಹ ಪ್ರದರ್ಶನ ನೀಡುತ್ತಿದ್ದು, ಕ್ರೀಡಾಕೂಟದ 8ನೇ ದಿನವೂ ತಮ್ಮ ಪದಕಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಇಂದು ಬೆಳಗ್ಗೆ ನಡೆದ 50 ಮೀಟರ್ ಟ್ರ್ಯಾಪ್ ಟೀಮ್ ಸ್ಪರ್ಧೆಯಲ್ಲಿ (Women’s Trap Team Event) ಭಾರತದ ವನಿತಾ ಪಡೆ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬೆಳ್ಳಿಗೆ ಮುತ್ತಿಟ್ಟ ವನಿತಾ ಪಡೆ

ಭಾರತದ ರಾಜೇಶ್ವರಿ ಕುಮಾರಿ , ಮನೀಶಾ ಕೀರ್, ಪ್ರೀತಿ ರಾಜಕ್ ಒಟ್ಟು 337 ಅಂಕ ಗಳಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದು ಪ್ರಸಕ್ತ ಏಷ್ಯಾಡ್‌ನಲ್ಲಿ ಭಾರತಕ್ಕೆ 40ನೇ ಪದಕವಾಗಿದೆ. ಈ ಬಾರಿ ಭಾರತದ ಶೂಟರ್‌ಗಳು ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳನ್ನು ಹೆಚ್ಚಿಸುತ್ತಿದ್ದಾರೆ. ವಾಸ್ತವವಾಗಿ ಮಹಿಳೆಯರ 50 ಮೀಟರ್ ಟ್ರ್ಯಾಪ್​ನಲ್ಲೂ ಭಾರತಕ್ಕೆ ಚಿನ್ನದ ನಿರೀಕ್ಷೆ ಇತ್ತು. ಆದರೆ ಕೊನೆಯಲ್ಲಿ ಚೀನಾದ ಶೂಟರ್‌ಗಳನ್ನು ಸೋಲಿಸಲು ಭಾರತದ ಈ ವನಿತಾ ಪಡೆಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಚೀನಾ 356 ಅಂಕ ಗಳಿಸುವ ಮೂಲಕ ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದುಕೊಂಡರೆ, ಕಜಕಿಸ್ತಾನ 335 ಅಂಕ ಗಳಿಸುವ ಮೂಲಕ ಕಂಚು ಪಡೆಯಿತು.

ವೈಯಕ್ತಿಕ ವಿಭಾಗದಲ್ಲಿ ಪದಕ ನಿರೀಕ್ಷೆ

ಈ ಬಾರಿ ಏಷ್ಯನ್ ಗೇಮ್ಸ್​ನ ಮಹಿಳೆಯರ 50 ಮೀಟರ್ ಟ್ರ್ಯಾಪ್ ಸ್ಪರ್ಧೆಯ ವೈಯಕ್ತಿಕ ವಿಭಾಗದ ಫೈನಲ್​ನಲ್ಲಿ ಮನೀಶಾ ಕಣಕ್ಕಿಳಿಯಲಿದ್ದಾರೆ. 114 ಅಂಕ ಗಳಿಸುವ ಮೂಲಕ ಫೈನಲ್‌ಗೆ ಮನೀಶಾ ಅರ್ಹತೆ ಪಡೆದಿದ್ದು, ಇಂದು ಈ ಫೈನಲ್ ಸುತ್ತು ನಡೆಯಲಿದೆ. ಹೀಗಾಗಿ ಮನೀಶಾ ಈ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ ನೋಡೋಣ. ಈ ಬಾರಿಯ ಏಷ್ಯಾಡ್‌ನಲ್ಲಿ ಭಾರತ ಶೂಟಿಂಗ್ ವಿಭಾಗದಲ್ಲಿ 10 ಚಿನ್ನ, 16 ಬೆಳ್ಳಿ ಮತ್ತು 14 ಕಂಚು ಗೆದ್ದಿರುವುದು ಗಮನಿಸಬೇಕಾದ ಸಂಗತಿ.

ಪುರುಷ ತಂಡಕ್ಕೆ ಚಿನ್ನ

ಇದಕ್ಕೂ ಮುನ್ನ ಇದೇ ವಿಭಾಗದಲ್ಲಿ ಭಾರತದ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೋರವರ್ ಸಿಂಗ್ ಸಂಧು ಅವರ ತಂಡ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಅಂತಿಮ ಸುತ್ತಿನಲ್ಲಿ ಕಿನಾನ್ ಚೆನೈ ಪರಿಪೂರ್ಣ 25ಕ್ಕೆ 25 ಅಂಕ ಗಳಿಸಿದರೆ, ಅಂತಿಮವಾಗಿ ಈ ಮೂವರು 361 ಅಂಕ ಕಲೆಹಾಕಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ವಿಭಾಗದಲ್ಲಿ ಭಾರತ ಚಿನ್ನ ಗೆದ್ದರೆ, ಕುವೈತ್ ಮತ್ತು ಚೀನಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದವು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ