ICC WTC Final 2021: ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ; ಈ ಆಟಗಾರರು ವಿಜೃಂಭಿಸಬಹುದು.. ತಪ್ಪದೇ ನೋಡಿ

|

Updated on: Jun 17, 2021 | 2:47 PM

World Test Championship Final 2021: ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮತ್ತು ಕೇನ್​ ವಿಲಿಯಮ್ಸ್​ ನಾಯಕತ್ವದ ನ್ಯೂಜಿಲ್ಯಾಂಡ್​ ತಂಡ ಸೆಣಸಲಿವೆ. ಎರಡೂ ತಂಡಗಳಲ್ಲಿ ಪ್ರತಿಭೆಗಳ ಗಣಿಯಿದೆ. ಹೈ ಪ್ರೊಫೈಲ್​ ಆಟಗಾರರಿದ್ದಾರೆ. ಸ್ಪೆಷಲಿಸ್ಟ್​ ಬ್ಯಾಟ್ಸ್​​ಮನ್​ಗಳಿದ್ದಾರೆ; ಸ್ಪೆಷಲಿಸ್ಟ್​ ಬೌಲರ್​ಗಳಿದ್ದಾರೆ. ಆಲ್​ರೌಂಡರ್​ಗಳೂ ಇದ್ದಾರೆ ಎರಡೂ ತಂಡದಲ್ಲಿ. ಹಾಗಾಗಿ ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ ಗ್ಯಾರೆಂಟಿ ಅಂತಾ ಹೇಳಬಹುದು.

ICC WTC Final 2021: ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ; ಈ ಆಟಗಾರರು ವಿಜೃಂಭಿಸಬಹುದು.. ತಪ್ಪದೇ ನೋಡಿ
ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ; ಭಾರತ-ನ್ಯೂಜಿಲ್ಯಾಂಡ್​ ತಂಡದ ಈ ಆಟಗಾರರು ವಿಜೃಂಭಿಸಬಹುದು.. ತಪ್ಪದೇ ನೋಡಿ
Follow us on

ಸೌಥಾಂಪ್ಟನ್ (Ageas Bowl, Southampton)​: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯ ನಾಳೆಯಿಂದ (June 18) ಆರಂಭವಾಗಲಿದೆ. ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮತ್ತು ಕೇನ್​ ವಿಲಿಯಮ್ಸ್​ ನಾಯಕತ್ವದ ನ್ಯೂಜಿಲ್ಯಾಂಡ್​ ತಂಡ ಸೆಣಸಲಿವೆ. ಎರಡೂ ತಂಡಗಳು ಇತ್ತೀಚೆಗೆ ಜಯಭೇರಿ ಪ್ರದರ್ಶನಗಳೇ ನೀಡಿವೆ. ಎರಡೂ ತಂಡಗಳಲ್ಲಿ ಪ್ರತಿಭೆಗಳ ಗಣಿಯಿದೆ. ಹೈ ಪ್ರೊಫೈಲ್​ ಆಟಗಾರರಿದ್ದಾರೆ. ಸ್ಪೆಷಲಿಸ್ಟ್​ ಬ್ಯಾಟ್ಸ್​​ಮನ್​ಗಳಿದ್ದಾರೆ; ಸ್ಪೆಷಲಿಸ್ಟ್​ ಬೌಲರ್​ಗಳಿದ್ದಾರೆ. ಇನ್ನು ತಮ್ಮ ಶಕ್ತಿ ಸಾಮರ್ಥ್ಯ ಧಾರೆಯೆರೆಯಲು ಆಲ್​ರೌಂಡರ್​ಗಳೂ ಇದ್ದಾರೆ ಎರಡೂ ತಂಡದಲ್ಲಿ. ಹಾಗಾಗಿ ನಾಳೆಯಿಂದ ಸಾಂಪ್ರದಾಯಿಕ ಕ್ರಿಕೆಟ್​ ರಸದೌತಣ ಗ್ಯಾರೆಂಟಿ ಅಂತಾ ಹೇಳಬಹುದು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ರಿಷಬ್ ಪಂತ್, ಜಸ್ಪ್ರೀತ್ ಬೂಮ್ರಾ ಅವರಂತಹ ಘಟಾನುಘಟಿಗಳು ಇದ್ದರೆ ನ್ಯೂಜಿಲ್ಯಾಂಡ್​ ತಂಡದಲ್ಲಿ ಕೇನ್​ ವಿಲಿಯಮ್ಸ್​ (Kane Williamson), ನೀಲ್​ ವ್ಯಾಗ್ನರ್ (Neil Wagner), ಟಿಮ್​ ಸೌಥೀ (Tim Southee), ಟಾಮ್ ತಥಾಂ (Tom Latham) ಅವರಂತಹ ಅಪ್ರತಿಮ ಆಟಗಾರರಿದ್ದಾರೆ. ಒಬ್ಬೊಬ್ಬರ ಆಟವನ್ನು ಗಮನಿಸುವುದಾದರೆ…

ಕ್ಯಾಪ್ಟನ್​ ವಿರಾಟ್ ಕೊಹ್ಲಿ (Virat Kohli):
ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನದ ದಾಖಲೆಗಳ ಮೂಟೆಯನ್ನೇ ಹೊತ್ತಿದ್ದಾರೆ. ಬಲಗೈ ಬ್ಯಾಟ್ಸ್​​ಮನ್ ಕೊಹ್ಲಿ ಭಾರತದಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ್ದು, ಒಳ್ಳೆಯ ಬ್ಯಾಟಿಂಗ್​ ಲಹರಿಯಲ್ಲಿದ್ದಾರೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯದಲ್ಲಿ ತಂಡದ ಸಾರಥ್ಯ ಹೊರುವ ಗೌರವವೂ ಅವರ ಪಾಲಿನದ್ದಾಗಿದೆ. ಹಾಗಾಗಿ ಮೊದಲ ಎಸೆತದಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಆಡಿದ್ದೇ ಆದರೆ ಅವರ ಅಭಿಮಾನಿಗಳಿಗೆ ಹಬ್ಬದೂಟ ಖಚಿತ ಅನ್ನಬಹುದು. ಈ ಹಿಂದೆ ವಿರಾಟ್ ಕೊಹ್ಲಿ ಇಂಗ್ಲೆಂಡ್​ ಪ್ರವಾಸದಲ್ಲಿ ಆಡಿರುವ 10 ಟೆಸ್ಟ್​ ಮ್ಯಾಚ್​ಗಳಲ್ಲಿ 727 ರನ್​ ಬಾರಿಸಿದ್ದಾರೆ.

ರಿಷಬ್ ಪಂತ್ (Rishabh Pant):
ಸ್ಫೋಟಕ ಬ್ಯಾಟ್ಸ್​ಮನ್​ ಕಮ್ ವಿಕೆಟ್​ ಕೀಪರ್​ ರಿಷಬ್ ಪಂತ್ ಇತ್ತೀಚೆಗೆ ವಿಶ್ವ ಕ್ರಿಕೆಟ್​​ನಲ್ಲಿ ಮೇಲ್ಮಟ್ಟದ ಪ್ರದರ್ಶನ ನೀಡುತ್ತಿರುವ ಪ್ರಮುಖ ಆಟಗಾರ. ಎಂತಹುದೇ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಬ್ಯಾಟ್ ಮಾತನಾಡುತ್ತದೆ. ರಿಷಬ್ ಪಂತ್ ಅವರ ಅಸಾಂಪ್ರದಾಯಿಕ ಬ್ಯಾಟಿಂಗ್​ ಪ್ರದರ್ಶನ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಬಲ್ಲದು. ​ಬಲಿಷ್ಠ ನ್ಯೂಜಿಲ್ಯಾಂಡ್​ ಬೌಲರ್​​ಗಳ ವಿರುದ್ಧವೂ ರಿಷಬ್ ವಿಜೃಂಭಿಸಬಲ್ಲರು ಎಂಬುದು ಆಶಾದಾಯಕ.

ಯುವ ಸ್ಫೋಟಕ ಬ್ಯಾಟ್ಸ್​ಮನ್​ ಆಗಿ ರಿಷಬ್ ಪಂತ್ ತಮ್ಮ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ಆದಿಲ್​ ರಶೀದ್​ ಅವರ ಎಸೆತವನ್ನು ಲಾಂಗ್ಆನ್​ ದಿಕ್ಕಿನಲ್ಲಿ ನೇರವಾಗಿ ಸಿಕ್ಸರ್​​ಗೆ ಎತ್ತಿ ಟೆಸ್ಟ್​ ರಂಗಕ್ಕೆ ತಮ್ಮ ಎಂಟ್ರಿ ಘೋಷಿಸಿದ್ದರು. ಇಂಗ್ಲಂಡ್​​ ಪ್ರವಾಸದಲ್ಲಿ 3 ಟೆಸ್ಟ್​ ಪಂದ್ಯಗಳಲ್ಲಿ 162 ರನ್​ ಬಾರಿಸುವ ಮೂಲಕ ತಮ್ಮ ಸ್ಥಾನವನ್ನು ಸುಭ್ರದಗೊಳಿಸಿದರು. ಓವಲ್​ ಮೈದಾನದಲ್ಲಿ ತಮ್ಮ ಅತ್ಯಧಿಕ 114 ರನ್​ ಗಳಿಸಿದ್ದರು.

ಜಸ್ಪ್ರೀತ್ ಬೂಮ್ರಾ (Jasprit Bumrah):
ಜಸ್ಪ್ರೀತ್ ಬೂಮ್ರಾ ಬೌಲಿಂಗ್​ ಮಾಡುತ್ತಿದ್ದಾರೆ ಅಂದ್ರೆ ಭಾರತ ತಂಡಕ್ಕೆ ಹೆಚ್ಚಿನ ಬಲ ಬರುತ್ತದೆ. ಮತ್ತೊಂದು ತುದಿಯಲ್ಲಿ ಮೊಹಮದ್​ ಶಮಿ ಅವರಂತಹ ಸಹ ಬೌಲರ್​​ಗಳ ಸಾಥ್​ ಇದ್ದರೆ ಬೂಮ್ರಾ ಮ್ಯಾಜಿಕ್​ ಯಾವುದೇ ಎದುರಾಳಿ ಬ್ಯಾಟ್ಸ್​​ಮನ್​ಗಳನ್ನು ಪತರುಗುಟ್ಟುವಂತೆ ಮಾಡಬಲ್ಲದು. ಅವರ ವಿಚಿತ್ರ ಬೌಲಿಂಗ್​ ಶೈಲಿ ನೆಲದಿಂದ ಚೆಂಡು ಪುಟಿದೇಳುವ ಮ್ಯಾಜಿಕ್ ಅವರ ಬೌಲಿಂಗ್​ ಮಾತ್ರ ನೋಡಲು ಸಾಧ್ಯ. ಅದು ಎದುರಾಳಿ ಬ್ಯಾಟ್ಸ್​​ಮನ್​ ಎದೆಯಲ್ಲಿ ಭತ್ತ ಕುಟ್ಟುವ ಅನುಭವ ತರುವುದಂತೂ ನಿಶ್ಚಿತ. ಜಸ್ಪ್ರೀತ್ ಬೂಮ್ರಾ ಸಹ ಇಂಗ್ಲಂಡ್​​ ವಿರುದ್ಧದ ಪ್ರವಾಸದಲ್ಲಿ 3 ಟೆಸ್ಟ್​ ಪಂದ್ಯಗಳಲ್ಲಿ 14 ವಿಕೆಟ್​ ಕಬಳಿಸಿದ್ದರು. ಅದರಲ್ಲೂ ನಾಟಿಂಗ್​ಹ್ಯಾಮ್​ನಲ್ಲಿ ಐದು ವಿಕೆಟ್​ ಕಿತ್ತಿದ್ದು ಅವರ ಸಾಮರ್ಥ್ಯಕ್ಕೆ ಸಾಣೆ ಹಿಡಿದಂತಿತ್ತು.

ಇನ್ನು ನ್ಯೂಜಿಲ್ಯಾಂಡ್​ ತಂಡದಲ್ಲಿರುವ ಕೆಲ ಆಟಗಾರರನ್ನು ಗಮನಿಸುವುದಾದರೆ…
ಕೇನ್​ ವಿಲಿಯಮ್ಸ್​ (Kane Williamson): ನ್ಯೂಜಿಲ್ಯಾಂಡ್​ ತಂಡದ ಹಾಲಿ ಕ್ಯಾಪ್ಟನ್​ ವಿಶ್ವದ ಅಗ್ರ ಶ್ರೇಯಾಂಕಿತ ಟೆಸ್ಟ್​ ಬ್ಯಾಟ್ಸ್​​ಮನ್. ಇತ್ತೀಚೆಗೆ ಅವರಿಗೆ ಇಂಜ್ಯುರಿ ತೊಡಕಾಗಿತ್ತಾದರೂ ಅವರ ಬ್ಯಾಟ್​ ಮತ್ತೆ​ ಸದ್ದು ಮಾಡುತ್ತಿದೆ. ವಿಂಡೀಸ್​ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧದ ಇತ್ತೀಚೆಗಿನ 2020-21 ಪ್ರವಾಸಗಳಲ್ಲಿ ಎರಡು ಡಬಲ್​ ಸೆಂಚುರಿಗಳನ್ನು ಬಾರಿಸಿದ (251 ರನ್ ಮತ್ತು 238 ರನ್) ಶ್ರೇಷ್ಠ ದಾಖಲೆ ಅವರ ಹೆಸರಿನಲ್ಲಿದೆ. ಕೇನ್​ ವಿಲಿಯಮ್ಸ್​ ಒಟ್ಟು ಮೂರು ಸೆಂಚುರಿಗಳನ್ನು ನಾಲ್ಕು ಇನ್ನಿಂಗ್ಸ್​​ಗಳಲ್ಲಿ ಬಾರಿಸಿ, ತಮ್ಮ ಪ್ರಭುತ್ವವನ್ನು ಸಾಬೀತುಪಡಿಸಿದ್ದರು. ಎದುರಾಳಿ ಭಾರತ ತಂಡಕ್ಕೆ ನಾಯಕ ವಿಲಿಯಮ್ಸ್​ ನಿಜಕ್ಕೂ ಕಬ್ಬೀನದ ಕಡಲೆಯೇ! ಆದರೂ ಇಂಗ್ಲೆಂಡ್​​ನಲ್ಲಿ ಕೇನ್​ ವಿಲಿಯಮ್ಸ್​ ಸಾಧನೆ ತುಸು ಕಳಪೆಯಾಗಿದೆ. ಲಾರ್ಡ್ಸ್​​​ ಮೈದಾನದಲ್ಲಿ ಶತಕ ಗಳಿಸಿದರಾದರೂ ಒಟ್ಟು 5 ಟೆಸ್ಟ್​ ಮ್ಯಾಚ್​​ಗಳಲ್ಲಿ ಕೇನ್​ ವಿಲಿಯಮ್ಸ್​ ಕೇವಲ 26.10 ರನ್ ಸರಾಸರಿಯಲ್ಲಿ 261 ರನ್​ ಕಲೆಹಾಕಲು ಶಕ್ಯರಾಗಿದ್ದರು.

ರಾಸ್​ ಟೇಲರ್ (Ross Taylor)​:
ನ್ಯೂಜಿಲ್ಯಾಂಡ್​ ತಂಡದಲ್ಲಿರುವ ಅತ್ಯಂತ ಅನುಭವೀ ಆಟಗಾರ. ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​​ ಬೆನ್ನೆಲುಬು. ಸ್ಪಿನ್​ ಮತ್ತು ಸ್ಪೀಡ್​ ಬೌಲಿಂಗ್​ ಎರಡನ್ನೂ ಗೇರ್​ ಬದಲಿಸಿಕೊಂಡು ಸಮರ್ಥವಾಗಿ ಆಡಬಲ್ಲರು. ರವಿಂದ್ರನ್​ ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಬೌಲಿಂಗ್​ ಅನ್ನು ಸಮರ್ಥವಾಗಿ ಎದುರಿಸುವ ಚಾಕಚಕ್ಯತೆ ಅವರಿಗಿದೆ. ಹಾಗಾಗಿ ಮಧ್ಯದಲ್ಲಿ ರೋಚಕ ಹಣಾಹಣಿ ನಿರೀಕ್ಷಿಸಬಹುದು.

ಅನುಭವೀ ರಾಸ್​ ಟೇಲರ್ ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಸರಾಸರಿ 40 ರನ್​ ಬಾರಿಸಿದ್ದರು. ಇಂಗ್ಲೆಂಡ್ ನಲ್ಲಿ ಇದುವರೆಗೂ 9 ಟೆಸ್ಟ್ ಪಂದ್ಯಗಳನ್ನು ಆಡಿರುವ ​ರಾಸ್, 650 ರನ್​ ಬಾರಿಸಿದ್ದಾರೆ. 2008ರಲ್ಲಿ ಮ್ಯಾಚೆಂಸ್ಟರ್​​ನಲ್ಲಿ ಅಜೇಯರಾಗಿ 154 ರನ್ ಗಳಿಸಿದ್ದರು.

ಬೌಲ್ಟ್​ (Boult):
ಇತ್ತೀಚೆಗಿನ ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಬೌಲ್ಟ್​ ಮೊದಲ ಟೆಸ್ಟ್​ ಆಡಿರಲಿಲ್ಲ. ಆದರೆ ಎರಡನೆಯ ಟೆಸ್ಟ್​​ ಪಂದ್ಯದಲ್ಲಿ ಬಾಲ್​ ಹಿಡಿದು, ಮೈದಾನಕ್ಕಿಳಿಲಿದ ಬೌಲ್ಟ್​ ತಮ್ಮ ತಾಕತ್ತು ಏನು ಎಂಬುದನ್ನು ತಂಡಕ್ಕೆ ಪರಿಚಯಿಸಿದರು. ಅವರ ಬೌಲಿಂಗ್​ ನೆರವಿನಿಂದ ತಂಡ ಸರಣಿ ಗೆಲ್ಲುವಂತಾಯಿತು. ಸಾಂಪ್ರದಾಯಿಕ ಎಡಗೈ ಬೌಲರ್ ಬೌಲ್ಟ್ ಎಸೆಯುವ ಇನ್​ಸ್ವಿಂಗರ್​​ಗಳು ಎಡಗೈ ಬ್ಯಾಟ್ಸ್​​ಮನ್​ಗಳನ್ನು ಕಟ್ಟಿಹಾಕಬಲ್ಲದು. ಭಾರತ ತಂಡದ ಬ್ಯಾಟ್ಸ್​​ಮನ್​ಗಳು ಈ ಬೌಲರ್​ನನ್ನು ಹೆಚ್ಚು ಗೌರವದೊಂದಿಗೆ ನೋಡಿಕೊಂಡು ಆಡಬೇಕಾದೀತು.

ಇಂಗ್ಲೆಂಡ್ ಟೆಸ್ಟ್​ ಅಂಕಣಗಳು ಬೌಲ್ಟ್​ ಹೆಚ್ಚು ಯಶಸ್ಸು ತಂದುಕೊಡುವಂತಹುದು. 5 ಟೆಸ್ಟ್​ ಮ್ಯಾಚ್​​ನಲ್ಲಿ 27 ವಿಕೆಟ್​ ಕಬಳಿಸಿದ್ದಾರೆ. ಎರಡು ಬಾರಿ ಐದೈದು ವಿಕೆಟ್ ಪಡೆದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್​ ಫೈನಲ್​ ನಾಳೆಯಿಂದ: ಫೇವರೀಟ್​ ಭಾರತ ತಂಡವನ್ನ ಸೋಲಿಸಲು ನ್ಯೂಜಿಲ್ಯಾಂಡ್​​ಗೆ ಈ ಒಂದು ಕಾರಣ ಸಾಕು!

(World Test Championship Final 2021 India Versus New Zealand the Players who can contribute with their might)

Published On - 2:46 pm, Thu, 17 June 21