WPL 2024: ಗೆದ್ದರೂ ಸೋತರೂ RCB ಪ್ಲೇಆಫ್ಸ್ಗೆ… ಆದರೆ
TV9 Web | Updated By: ಝಾಹಿರ್ ಯೂಸುಫ್
Updated on:
Mar 12, 2024 | 9:36 AM
WPL 2024: ವುಮೆನ್ಸ್ ಪ್ರೀಮಿಯರ್ ಲೀಗ್ 2024 ರ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಗ್ರಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಯುಪಿ ವಾರಿಯರ್ಸ್ ಇದ್ದರೆ, ಐದನೇ ಸ್ಥಾನದಲ್ಲಿ ಗುಜರಾತ್ ಜೈಂಟ್ಸ್ ತಂಡವಿದೆ.
1 / 7
ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಸೀಸನ್-2 ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಪ್ಲೇಆಫ್ಸ್ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಒಂದು ತಂಡಕ್ಕೆ ಮುಂದಿನ ಹಂತಕ್ಕೇರಲು ಅವಕಾಶವಿದೆ.
2 / 7
ಆದರೆ ಇಲ್ಲಿ 3ನೇ ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಪೈಪೋಟಿಯಿದೆ. ಈ ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವುದು ಆರ್ಸಿಬಿ ತಂಡ ಎಂಬುದು ವಿಶೇಷ. ಏಕೆಂದರೆ ಈಗಾಗಲೇ 7 ಪಂದ್ಯಗಳಲ್ಲಿ 3 ಜಯ ಸಾಧಿಸಿರುವ ಆರ್ಸಿಬಿ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.
3 / 7
ಇನ್ನು ಯುಪಿ ವಾರಿಯರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡವು ಪ್ಲೇಆಫ್ಸ್ಗೆ ಪ್ರವೇಶಿಸಬೇಕಿದ್ದರೆ ಆರ್ಸಿಬಿ ತಂಡದ ಫಲಿತಾಂಶವನ್ನು ಎದುರು ನೋಡಬೇಕಿದೆ. ಹಾಗೆಯೇ ಐದನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡಕ್ಕೆ ಇನ್ನೂ ಒಂದು ಪಂದ್ಯವಿದ್ದು, ಈ ಪಂದ್ಯದ ಫಲಿತಾಂಶದ ಮೇಲೆ ಗುಜರಾತ್ ತಂಡ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ.
4 / 7
ಆದರೆ ಇತ್ತ ಆರ್ಸಿಬಿ ತಂಡವು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ ಪ್ಲೇಆಫ್ ಖಚಿತಪಡಿಸಿಕೊಳ್ಳಲಿದೆ. ಇನ್ನು ಸೋತರೂ ಕೂಡ ಅದೃಷ್ಟದಾಟದ ಮೇಲೆ ಅವಕಾಶವಿರಲಿದೆ. ಏಕೆಂದರೆ ಗುಜರಾತ್ ಜೈಂಟ್ಸ್ ತಂಡದ ನೆಟ್ ರನ್ ರೇಟ್-0.873 ಇದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಮಾತ್ರ ಆರ್ಸಿಬಿ (+0.027) ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸಬಹುದು.
5 / 7
ಒಂದು ವೇಳೆ ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೂ ನೆಟ್ ರನ್ ರೇಟ್ ಕಾರಣ 3ನೇ ಸ್ಥಾನದಲ್ಲೇ ಉಳಿಯಲಿದೆ. ಆದರೆ 60 ರನ್ಗಿಂತ ಹೆಚ್ಚಿನ ಅಂತರದಿಂದ ಸೋಲನುಭವಿಸಿದರೆ ಮಾತ್ರ ಆರ್ಸಿಬಿ ಪಾಲಿಗೆ ಕಂಟಕ ಎದುರಾಗಲಿದೆ. ಏಕೆಂದರೆ ಹೀನಾಯವಾಗಿ ಸೋತರೆ ಯುಪಿ ವಾರಿಯರ್ಸ್ ನೆಟ್ ರನ್ ರೇಟ್ ಮೂಲಕ 3ನೇ ಸ್ಥಾನಕ್ಕೇರಲಿದೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಸೋಲು-ಗೆಲುವಿನ ಲೆಕ್ಕಾಚಾರದ ನಡುವೆ ಹೀನಾಯ ಸೋಲಿನಿಂದ ಪಾರಾಗಲು ಪ್ಲ್ಯಾನ್ ರೂಪಿಸಲಿದೆ.
6 / 7
ಅತ್ತ ಆರ್ಸಿಬಿ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಸೋತರೆ, ಗುಜರಾತ್ ಜೈಂಟ್ಸ್ ಭಾರೀ ಅಂತರದ ಗೆಲುವು ದಾಖಲಿಸಬೇಕಾಗುತ್ತದೆ. ಅಂದರೆ ನಿರ್ದಿಷ್ಟ ಓವರ್ಗಳಲ್ಲಿ ಚೇಸ್ ಮಾಡಬೇಕು ಅಥವಾ ಇಂತಿಷ್ಟು ರನ್ಗಳ ಅಂತರದಿಂದ ಗೆಲ್ಲುವ ಮೂಲಕ ಆರ್ಸಿಬಿ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ.
7 / 7
ಹೀಗಾಗಿಯೇ ಸೋತರೂ ಗೆದ್ದರೂ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತ. ಇದಕ್ಕಾಗಿ ಆರ್ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಗೆಲ್ಲಬೇಕು ಅಥವಾ ಹೀನಾಯವಾಗಿ ಸೋಲಬಾರದು. ಈ ಮೂಲಕ ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು. ಅತ್ತ ಗುಜರಾತ್ ಜೈಂಟ್ಸ್ ಪ್ಲೇಆಫ್ಸ್ ಪ್ರವೇಶಿಸಲು ಆರ್ಸಿಬಿ ತಂಡದ ಹೀನಾಯ ಸೋಲನ್ನು ಎದುರು ನೋಡುತ್ತಿದೆ. ಅಂದರೆ 60 ರನ್ಗಿಂತ ಹೆಚ್ಚಿನ ಅಂತರದಿಂದ ಆರ್ಸಿಬಿ ಸೋತರೆ, ಗುಜರಾತ್ ಜೈಂಟ್ಸ್ ತಂಡ ಮುಂದಿನ ಪಂದ್ಯದಲ್ಲಿ 60 ರನ್ಗಳ ಅಂತರದಿಂದ ಗೆಲ್ಲುವ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ಆರ್ಸಿಬಿ ತಂಡದ ಇಂದಿನ ಫಲಿತಾಂಶ ಗುಜರಾತ್ ಜೈಂಟ್ಸ್ ತಂಡದ ಪ್ಲೇಆಫ್ ಭವಿಷ್ಯವನ್ನು ನಿರ್ಧರಿಸಲಿದೆ.
Published On - 7:46 am, Tue, 12 March 24