WPL 2024: ಗೆದ್ದ ಗುಜರಾತ್; ಪ್ಲೇ ಆಫ್ನಿಂದ ಹೊರಬಿದ್ದ ಯುಪಿ ವಾರಿಯರ್ಸ್
WPL 2024: ಮಹಿಳೆಯರ ಪ್ರೀಮಿಯರ್ ಲೀಗ್ನ 18 ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 8 ರನ್ಗಳಿಂದ ಸೋಲಿಸುವಲ್ಲಿ ಗುಜರಾತ್ ಜೈಂಟ್ಸ್ ತಂಡ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಯುಪಿ ವಾರಿಯರ್ಸ್‌ನ ಪ್ಲೇ ಆಫ್ ತಲುಪುವ ಕನಸು ಕೂಡ ಭಗ್ನಗೊಂಡಿದೆ. ಇತ್ತ ಗುಜರಾತ್ ಜೈಂಟ್ಸ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಪ್ಲೇಆಫ್ ರೇಸ್‌ನಲ್ಲಿ ಇನ್ನೂ ಉಳಿದಿದೆ.
ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2024) 18 ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 8 ರನ್ಗಳಿಂದ ಸೋಲಿಸುವಲ್ಲಿ ಗುಜರಾತ್ ಜೈಂಟ್ಸ್ ತಂಡ (Gujarat Giants vs UP Warriorz) ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಯುಪಿ ವಾರಿಯರ್ಸ್‌ನ ಪ್ಲೇ ಆಫ್ ತಲುಪುವ ಕನಸು ಕೂಡ ಭಗ್ನಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ನಾಯಕಿ ಬೆತ್ ಮೂನಿ (Beth Mooney) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಪರ ನಾಯಕಿ ಬೆತ್ ಮೂನಿ ಅಜೇಯ 74 ರನ್ ಸಿಡಿಸಿ ತಂಡ 152 ರನ್ ಕಲೆಹಾಕುವಂತೆ ಮಾಡಿದರು. ಇದಕ್ಕೆ ಉತ್ತರವಾಗಿ ಯುಪಿ ವಾರಿಯರ್ಸ್ ಕೇವಲ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ಯುಪಿ ವಾರಿಯರ್ಸ್‌ನ ಪ್ಲೇಆಫ್‌ನ ಕನಸು ಕೂಡ ಭಗ್ನಗೊಂಡಿದ್ದರೆ, ಗುಜರಾತ್ ಜೈಂಟ್ಸ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಪ್ಲೇಆಫ್ ರೇಸ್‌ನಲ್ಲಿ ಇನ್ನೂ ಉಳಿದಿದೆ.
ಗುಜರಾತ್‌ನ ಅತ್ಯುತ್ತಮ ಬ್ಯಾಟಿಂಗ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಡ್ ಪವರ್ ಪ್ಲೇನಲ್ಲಿ ನಾಯಕಿ ಬೆತ್ ಮೂನಿ ಅವರೊಂದಿಗೆ 53 ರನ್‌ಗಳ ಅತ್ಯುತ್ತಮ ಜೊತೆಯಾಟ ನೀಡಿದರು. ಆದರೆ ತಂಡದ ಮೊತ್ತ 60 ರನ್ಗಳಿದ್ದಾಗ, ಲಾರಾ ವೊಲ್ವಾರ್ಡ್ 30 ಎಸೆತಗಳಲ್ಲಿ 43 ರನ್ ಗಳಿಸಿ ಸೋಫಿ ಎಕ್ಲೆಸ್ಟೋನ್ ಅವರ ಬೌಲಿಂಗ್‌ನಲ್ಲಿ ಔಟಾದರು. ನಂತರ ಬಂದ ದಯಾಳನ್ ಹೇಮಲತಾ ಕೂಡ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು. ಇದಾದ ಬಳಿಕ ಗುಜರಾತ್ ತಂಡದ ಬ್ಯಾಟರ್ಸ್ಗಳು ಒಬ್ಬೊಬ್ಬರಾಗಿ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು.
ಆದರೆ, ನಾಯಕಿ ಬೆತ್ ಮೂನಿ ಕೊನೆಯ ಓವರ್ ವರೆಗೆ ಬ್ಯಾಟಿಂಗ್ ನಡೆಸಿ 52 ಎಸೆತಗಳಲ್ಲಿ 74 ರನ್‌ಗಳ ಪ್ರಬಲ ಇನಿಂಗ್ಸ್ ಆಡಿದರು. ಇದರ ಆಧಾರದ ಮೇಲೆ ಗುಜರಾತ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಬೆತ್ ಮೂನಿ ಮತ್ತು ಲಾರಾ ವೊಲ್ವಾರ್ಡ್ ಹೊರತುಪಡಿಸಿ, ಗುಜರಾತ್‌ನ ಯಾವುದೇ ಬ್ಯಾಟರ್ 20 ರ ಸಂಖ್ಯೆಯನ್ನು ದಾಟಲು ಸಾಧ್ಯವಾಗಲಿಲ್ಲ. ಯುಪಿ ವಾರಿಯರ್ಸ್ ಪರ ಬೌಲಿಂಗ್‌ನಲ್ಲಿ ಸೋಫಿ ಎಕ್ಲೆಸ್ಟೋನ್ ಗರಿಷ್ಠ ಮೂರು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 2 ವಿಕೆಟ್, ರಾಜೇಶ್ವರಿ ಗಾಯಕ್ವಾಡ್ ಮತ್ತು ಚಾಮರಿ ಅಥಾಪತ್ತು ತಲಾ 1 ವಿಕೆಟ್ ಪಡೆದರು.
WPL 2024: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಸೋತ ಯುಪಿ ವಾರಿಯರ್ಸ್
ನಿರಾಸೆ ಮೂಡಿಸಿದ ಯುಪಿ ಬ್ಯಾಟಿಂಗ್
ವಾಸ್ತವವಾಗಿ ಪ್ಲೇಆಫ್‌ಗೆ ಹೋಗಲು ಯುಪಿ ವಾರಿಯರ್ಸ್ಗೆ ಈ ಪಂದ್ಯದ ಗೆಲುವು ಬಹಳ ಅವಶ್ಯಕವಾಗಿತ್ತು. ಆದರೆ ಕಳಪೆ ಬ್ಯಾಟಿಂಗ್‌ನಿಂದ ಅವರು ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ನಿರ್ಣಾಯಕ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ನ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಯಿತು. 153 ರನ್ ಬೆನ್ನತ್ತಿದ್ದ ಯುಪಿ ತಂಡ ಕೇವಲ 4 ರನ್ ಗೆ 3 ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಯಕಿ ಅಲಿಸ್ಸಾ ಹೀಲಿ 3 ಎಸೆತಗಳಲ್ಲಿ ನಾಲ್ಕು ರನ್ ಗಳಿಸಿ ಶಬ್ನಮ್ ಮೊಹಮ್ಮದ್ ಶಕೀಲ್‌ಗೆ ಬಲಿಯಾದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಪತ್ತು ಖಾತೆ ತೆರೆಯಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು. ಇನಿಂಗ್ಸ್‌ನ ಮೊದಲ ಓವರ್‌ನ ಅಂತ್ಯಕ್ಕೆ ಯುಪಿ ಸ್ಕೋರ್ 4 ರನ್‌ಗಳಿಗೆ 2 ವಿಕೆಟ್ ಆಗಿತ್ತು.
ಇದಾದ ಬಳಿಕ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಕಿರಣ್ ನವಗಿರೆ ಕೂಡ ಶೂನ್ಯಕ್ಕೆ ಕ್ಯಾಥರಿನ್ ಬ್ರೈಸ್ಗೆ ವಿಕೆಟ್ ನೀಡಿ ಪೆವಿಲಿಯನ್ಗೆ ಮರಳಿದರು. ನಂತರ ಮೂರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗ್ರೇಸ್ ಹ್ಯಾರಿಸ್ ಕೂಡ 1 ರನ್ ಗಳಿಸಿ ಔಟಾದರು. ಹೀಗಾಗಿ ಕೇವಲ 16 ರನ್ಗಳಿಗೆ ಯುಪಿ ತಂಡ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಇದಾದ ನಂತರ ಶಬ್ನಮ್ ಮೊಹಮ್ಮದ್ ಶಕೀಲ್ 35 ರನ್ ಗಳಿಸಿ ಹೋರಾಟ ನೀಡಿದರು. ಇವರ ಜೊತೆಗೆ ದೀಪ್ತಿ ಶರ್ಮಾ ಅರ್ಧಶತಕ ಬಾರಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಪ್ಲೇ ಆಫ್ ರೇಸ್‌ನಿಂದ ಔಟ್
ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿರುವ ಗುಜರಾತ್ ಜೈಂಟ್ಸ್ ಇನ್ನೂ ಪ್ಲೇ ಆಫ್ ರೇಸ್‌ನಲ್ಲಿದೆ. ವಾಸ್ತವವಾಗಿ, ಈ ಪಂದ್ಯದ ನಂತರವೂ ಗುಜರಾತ್ ಜೈಂಟ್ಸ್‌ಗೆ ಒಂದು ಪಂದ್ಯ ಉಳಿದಿದೆ. ಆದರೆ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೇವಲ ಒಂದು ಪಂದ್ಯ ಮಾತ್ರ ಉಳಿದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಸೋತರೆ ಮತ್ತು ಮಾರ್ಚ್ 13 ರಂದು ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ದೊಡ್ಡ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರೆ, ಅದು ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು. ಆದರೆ ಗುಜರಾತ್ ಕೊನೆಯ ಪಂದ್ಯದಲ್ಲಿ ದೆಹಲಿಯನ್ನು ಎದುರಿಸಲಿದೆ. ದೊಡ್ಡ ಅಂತರದಿಂದ ಸೋಲಿಸಬೇಕಾಗುತ್ತದೆ, ಏಕೆಂದರೆ ಪ್ರಸ್ತುತ ಗುಜರಾತ್‌ನ ನೆಟ್ ರನ್ರೇಟ್ ಮೈನಸ್‌ನಲ್ಲಿದೆ. ಹೀಗಾಗಿ ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತರೂ ಮತ್ತು ಗುಜರಾತ್ ಜೈಂಟ್ಸ್ ತನ್ನ ಕೊನೆಯ ಪಂದ್ಯವನ್ನು ಗೆದ್ದರೂ, ಅದರ ಆಧಾರದ ಮೇಲೆ ಉತ್ತಮ ನಿವ್ವಳ ರನ್ ರೇಟ್ ಹೊಂದಿರುವ ತಂಡವು ಪ್ಲೇ ಆಫ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 pm, Mon, 11 March 24