ಭಾವಿ ಹೆಂಡತಿ ಮೈದಾನದಲ್ಲಿದ್ದರೆ ಯುಜಿಗೆ ಅದೇ ಸ್ಫೂರ್ತಿಯ ಚಿಲುಮೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿಯಲ್ಲಿ ಆಡಿರುವ ಇತ್ತೀಚಿನ ಪಂದ್ಯಗಳಲ್ಲಿ ಸುಂದರವಾದ ಯುವತಿಯೊಬ್ಬರು ಸ್ಟ್ಯಾಂಡ್ನಲ್ಲಿ ಕೂತು ಟೀಮಿನ ಆಟಗಾರರು ಬೌಂಡರಿ ಇಲ್ಲವೇ ಸಿಕ್ಸರ್ ಬಾರಿಸಿದಾಗ, ಅಥವಾ ವಿಕೆಟ್ ಪಡೆದಾಗ ಚಪ್ಪಾಳೆ ತಟ್ಟಿ ಅಭಿನಂದಿಸುವ ದೃಶ್ಯ ಮನೆಗಳಲ್ಲಿ ಕುಳಿತು ಟಿವಿ ವೀಕ್ಷಿಸುತ್ತಿರುವವರಿಗೆ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಆರ್ಸಿಬಿಯ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಲ್ ವಿಕೆಟ್ ಪಡೆದ ಕೂಡಲೇ ಈ ಯುವತಿ ಕುಣಿಯಲಾರಂಭಿಸುತ್ತಾರೆ. ಅಂದ ಹಾಗೆ ಆಕೆ ಯಾರು ಅಂತ ನಿಮಗೆ ಗೊತ್ತಾಗಿದೆಯೇ? ಆಕೆಯ ಹೆಸರು, ಧನಶ್ರೀ ವರ್ಮ, ವೃತ್ತಿಯಲ್ಲಿ ಡೆಂಟಿಸ್ಟ್ […]
ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿಯಲ್ಲಿ ಆಡಿರುವ ಇತ್ತೀಚಿನ ಪಂದ್ಯಗಳಲ್ಲಿ ಸುಂದರವಾದ ಯುವತಿಯೊಬ್ಬರು ಸ್ಟ್ಯಾಂಡ್ನಲ್ಲಿ ಕೂತು ಟೀಮಿನ ಆಟಗಾರರು ಬೌಂಡರಿ ಇಲ್ಲವೇ ಸಿಕ್ಸರ್ ಬಾರಿಸಿದಾಗ, ಅಥವಾ ವಿಕೆಟ್ ಪಡೆದಾಗ ಚಪ್ಪಾಳೆ ತಟ್ಟಿ ಅಭಿನಂದಿಸುವ ದೃಶ್ಯ ಮನೆಗಳಲ್ಲಿ ಕುಳಿತು ಟಿವಿ ವೀಕ್ಷಿಸುತ್ತಿರುವವರಿಗೆ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಆರ್ಸಿಬಿಯ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಲ್ ವಿಕೆಟ್ ಪಡೆದ ಕೂಡಲೇ ಈ ಯುವತಿ ಕುಣಿಯಲಾರಂಭಿಸುತ್ತಾರೆ.
ಅಂದ ಹಾಗೆ ಆಕೆ ಯಾರು ಅಂತ ನಿಮಗೆ ಗೊತ್ತಾಗಿದೆಯೇ? ಆಕೆಯ ಹೆಸರು, ಧನಶ್ರೀ ವರ್ಮ, ವೃತ್ತಿಯಲ್ಲಿ ಡೆಂಟಿಸ್ಟ್ ಮತ್ತು ಕೊರಿಯೊಗ್ರಾಫರ್. ಯುಜಿಯನ್ನು ನೋಡಿ ಆಕೆ ಕುಣಿಯೋದು ಯಾಕೆಂದರೆ ಅವರನ್ನ ಇಷ್ಟರಲ್ಲೇ ಮದುವೆಯಾಗಲಿದ್ದಾರೆ!
ಹೌದು, ಈ ಧನಶ್ರೀ ಯುಜಿಯ ಭಾವಿ ಪತ್ನಿ. ಅವರಿಬ್ಬರ ನಿಶ್ಚಿತಾರ್ಥ ಆಗಿದೆ ಮತ್ತು ಪ್ರಾಯಶಃ ಭಾರತದ ಆಸ್ಟ್ರೇಲಿಯ ಪ್ರವಾಸ ಮುಗಿದ ನಂತರ ಅವರು ಮದುವೆಯಾಗುವ ನಿರೀಕ್ಷೆಯಿದೆ.
ಧನಶ್ರೀ, ಅಕ್ಟೋಬರ್ 11ರಂದೇ ಯುನೈಡೆಡ್ ಅರಬ್ ಎಮಿರೇಟ್ಸ್ನಲ್ಲಿ ಬಂದಿಳಿದಿದ್ದಾರೆ. ಆದರೆ ಶಿಷ್ಟಾಚಾರದ ಪ್ರಕಾರ ಆಕೆ 5 ದಿನ ಕ್ವಾರಂಟೈನ್ಗೊಳಗಾಗಬೇಕಿತ್ತು. ಆ ಅವಧಿ 17ರಂದು ಮುಗಿಯಿತು. ಅಂದು ಆರ್ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಪಂದ್ಯವಿತ್ತು. ಅಸಲಿಗೆ ಧನಶ್ರೀ ಪಂದ್ಯ ಮುಗಿದ ನಂತರ ಯುಜಿಯನ್ನು ಸೇರಿಕೊಳ್ಳುವ ನಿರ್ಧಾರ ಮಾಡಿದ್ದರು. ಆದರೆ, ಅಷ್ಟು ಹೊತ್ತು ಕಾಯುವ ತಾಳ್ಮೆ ಆಕೆಗಿರಲಿಲ್ಲ. ಆಕೆಯ ಆಗಮನದ ಬಗ್ಗೆ ಯುಜಿಗೆ ಮಾಹಿತಿಯಿತ್ತು ಹಾಗೂ ಪಂದ್ಯ ಮುಗಿದ ನಂತರವೇ ಆಕೆ ಹೊಟೆಲ್ಗೆ ಇಲ್ಲವೇ ಸ್ಟೇಡಿಯಂಗೆ ಬರುತ್ತಾರೆ ಅಂತ ಆರ್ಸಿಬಿ ಪರ ಈ ಸೀಸನ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಯುಜಿ ಅಂದುಕೊಂಡಿದ್ದರು.
ಆದರೆ, ಯುಜಿಗೆ ಸರ್ಪ್ರೈಸ್ ನೀಡುವ ಉದ್ದೇಶದಿಂದ ಆಕೆ ಪಂದ್ಯ ಶುರುವಾಗುವ ಮೊದಲೇ ಹೊಟೆಲ್ಗೆ ತೆರಳಿದಾಗ ಯುಜಿಯ ಮುಖ ಊರಗಲವಾಗಿತ್ತು ಎಂದು ಅವರ ಜೊತೆ ಆಟಗಾರರು ಹೇಳಿದ್ದಾರೆ ಮತ್ತು ಆರ್ಸಿಬಿಯ ಅಧಿಕೃತ ಟ್ವಿಟ್ಟರ್ನಲ್ಲಿ ಧನಶ್ರೀ, ಮೆತ್ತಗೆ ಹೋಗಿ ಯುಜಿ ರೂಮಿನ ಬಾಗಿಲು ಬಡಿಯುವ, ಅವರು ಬಾಗಿಲು ತೆರೆದು ಹಸನ್ಮುಖರಾಗುವ ದೃಶ್ಯವನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡಲಾಗಿದೆ.
ಆಕೆಯ ಆಗಮನದ ನಂತರ ಯುಜಿಯ ಬಾಡಿ ಲ್ಯಾಂಗ್ವೇಜ್ ಸಂಫೂರ್ಣವಾಗಿ ಬದಲಾಗಿದೆ ಅಂತ ಕೊಹ್ಲಿ ಪಡೆಯ ಇತರ ಆಟಗಾರರು ಹೇಳುತ್ತಿದ್ದಾರೆ. ಅವತ್ತು ರಾಯಲ್ಸ್ ವಿರುಧ್ಧ ಆಡಿದ ಪಂದ್ಯದಲ್ಲಿ ಯುಜಿ 34 ರನ್ ನೀಡಿ 2 ವಿಕೆಟ್ ಪಡೆದರು. ಆ ಪಂದ್ಯದಲ್ಲಿ ಅತ್ಯಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ 360 ಡಿಗ್ರಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ರೋಮಾಂಚಕ ಜಯ ದೊರಕಿಸಿದರು.
ನಂತರ ಕೆಕೆಆರ್ ವಿರುದ್ಧ ಅಡಿದ ಪಂದ್ಯದಲ್ಲಿ ಮತ್ತೂ ಶ್ರೇಷ್ಠಮಟ್ಟದ ಬೌಲಿಂಗ್ ಪ್ರದರ್ಶನ ನೀಡಿದ ಯುಜಿ 4ಓವರ್ಗಳಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದರು.
‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ’ ಅಂತ ಹಳೆಯ ಕನ್ನಡ ಹಾಡೊಂದಿದೆ, ಇಲ್ಲಿ ಹೆಂಡತಿಯಾಗುವವಳು ಮೈದಾನದಲ್ಲಿದ್ದಾಳೆ, ಹಾಗಾಗಿ ಯುಜಿಗೆ ಅದು ಎಷ್ಟು ಕೋಟಿ ರೂಪಾಯಿಯೋ?