ಮುಂಬೈ: 5G ಸೇವೆಗಳನ್ನು ಪಡೆಯಬೇಕು ಎನ್ನುವ ಭಾರತೀಯರ ಸುದೀರ್ಘ ಕನಸು ಈಡೇರುವ ಕ್ಷಣಗಳು ಹತ್ತಿರವಾಗುತ್ತಿವೆ. ಈ ಸಂಬಂಧ ಭಾರ್ತಿ ಏರ್ಟೆಲ್ (Bharti Airtel) ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ತನ್ನ ಮೊದಲ 5G ಗುತ್ತಿಗೆಯನ್ನು ಎರಿಕ್ಸನ್ (Ericsson) ಕಂಪನಿಗೆ ನೀಡಿದ್ದು, ಇದೇ ತಿಂಗಳಲ್ಲಿ (ಆಗಸ್ಟ್ 2022) ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದೆ. ಏರ್ಟೆಲ್ನೊಂದಿಗೆ 25 ವರ್ಷಗಳಿಗೂ ಹೆಚ್ಚು ಕಾಲದ ವ್ಯಾಪಾರ ಸಂಬಂಧ ಹೊಂದಿರುವ ಎರಿಕ್ಸನ್ ಭಾರತದಾದ್ಯಂತ ಕನೆಕ್ಟಿವಿಟಿ ಸೇವೆ ಒದಗಿಸುತ್ತಿದೆ. ಜುಲೈ 26ರಂದು ಅಂತ್ಯಗೊಂಡ 5ಜಿ ತರಂಗಾಂತರ ಹರಾಜಿನ ನಂತರ ಎರಿಕ್ಸನ್ಗೆ ಹೊಸ ಗುತ್ತಿಗೆಯನ್ನು ಏರ್ಟೆಲ್ ನೀಡಿದೆ.
ಎರಿಕ್ಸನ್ ರೇಡಿಯೊ ಸಿಸ್ಟಮ್ ಮತ್ತು ಎರಿಕ್ಸನ್ ಮೈಕ್ರೊವೈವ್ ಮೊಬೈಲ್ ಟ್ರಾನ್ಸ್ಪೋರ್ಟ್ ಸಲ್ಯೂಷನ್ನಿಂದ ಪಡೆದುಕೊಂಡ 5ಜಿ ರೇಡಿಯೊ ಅಕ್ಸೆಸ್ ನೆಟ್ವರ್ಕ್ (5G Radio Access Network – RAN) ಉತ್ಪನ್ನಗಳನ್ನು ಏರ್ಟೆಲ್ ಅಳವಡಿಸಲಿದೆ. ಭಾರ್ತಿ ಏರ್ಟೆಲ್ನ 12 ಟೆಲಿಕಾಂ ವೃತ್ತಗಳಲ್ಲಿ ಎರಿಕ್ಸನ್ 5ಜಿ ಸಂಪರ್ಕ ಒದಗಿಸಲಿದೆ. ಅತಿವೇಗದ ಇಂಟರ್ನೆಟ್ ಕನೆಕ್ಟಿವಿಟಿ, ದೊಡ್ಡಮಟ್ಟದ ಡೇಟಾ ನಿರ್ವಹಣಾ ಸಾಮರ್ಥ್ಯ ಮತ್ತು ವೇಗದ ದತ್ತಾಂಶ ವರ್ಗಾವಣೆ ಸೌಲಭ್ಯವನ್ನು ಈ ಸೇವೆಗಳು ಒದಗಿಸುತ್ತವೆ ಎಂದು ಭಾರ್ತಿ ಏರ್ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: BIG NEWS: 5G ಸ್ಪೆಕ್ಟ್ರಮ್ ಹರಾಜು: ರಿಲಯನ್ಸ್ ಜಿಯೋ ಟಾಪ್ ಬಿಡ್ಡರ್
ಇತ್ತೀಚೆಗೆ ನಡೆದ 5ಜಿ ಹರಾಜಿನಲ್ಲಿ ಭಾರ್ತಿ ಏರ್ಟೆಲ್ 19,800 ಮೆಗಾಹರ್ಟ್ಸ್ (MHz) ತರಂಗಾಂತರಗಳನ್ನು ಖರೀದಿಸಿತ್ತು. ಅಖಿಲ ಭಾರತ ಮಟ್ಟದಲ್ಲಿ 3.5 ಮತ್ತು 26 ಜಿಗಾಹರ್ಟ್ಸ್ (GHz) ಬ್ಯಾಂಡ್ಗಳನ್ನು ಪಡೆದುಕೊಂಡಿತ್ತು. 20 ವರ್ಷಗಳ ಅವಧಿಗೆ ಪಡೆದುಕೊಂಡಿರುವ ಈ ಗುತ್ತಿಗೆಗಾಗಿ ಎರ್ಟೆಲ್ ₹ 43,084 ಕೋಟಿ ವ್ಯಯಿಸಿದೆ.
5ಜಿ ಸೇವೆಗಳನ್ನು ಒದಗಿಸುವ ಕುರಿತು ಪ್ರತಿಕ್ರಿಯಿಸಿದ ಏರ್ಟೆಲ್ ಸಿಇಒ ಗೋಪಾಲ್ ವಿಠ್ಠಲ್, ಹಲವು ವರ್ಷಗಳಿಂದ ನಮ್ಮ ಪಾಲುದಾರ ಕಂಪನಿಯಾಗಿರುವ ಎರಿಕ್ಸನ್ಗೆ 5ಜಿ ಗುತ್ತಿಗೆ ನೀಡಲು ಸಂತೋಷವಾಗುತ್ತದೆ. 5ಜಿ ತಂತ್ರಜ್ಞಾನವು ಕೈಗಾರಿಕೆಗಳು, ಉದ್ಯಮಗಳು ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಹಲವು ರೀತಿಯಲ್ಲಿ ನೆರವಾಗುತ್ತದೆ. 5ಜಿ ಸಂಪರ್ಕದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮತ್ತು ಡಿಜಿಟಲ್ ಆರ್ಥಿಕತೆಯತ್ತ ಭಾರತದ ಪ್ರಯಾಣವನ್ನು ಬೆಂಬಲಿಸಲು ನಾವು ಉದ್ದೇಶಿಸಿದ್ದೇವೆ ಎಂದು ಹೇಳಿದರು.
ರಿಲಯನ್ಸ್ ಜಿಯೊ 5ಜಿ
ಏರ್ಟೆಲ್ನ ಪ್ರಮುಖ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೊ ಸಹ ಇದೇ ತಿಂಗಳಲ್ಲಿ 5ಜಿ ಸೇವೆ ಒದಗಿಸಲು ಮುಂದಾಗಿದೆ. ‘ದೇಶಾದ್ಯಂತ 5ಜಿ ಸೇವೆಗಳನ್ನು ಆರಂಭಿಸುವ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುತ್ತೇವೆ’ ಎಂದು ಜಿಯೊ ಇನ್ಫೊಕಾಮ್ನ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಹೇಳಿದ್ದರು. ‘ಕೈಗೆಟುಕುವ ಬೆಲೆಯಲ್ಲಿ ವಿಶ್ವಮಟ್ಟದ 5ಜಿ ಸೇವೆಗಳನ್ನು ನಾವು ಒದಗಿಸುತ್ತೇವೆ. ಸೇವೆಗಳು, ಪ್ಲಾಟ್ಫಾರ್ಮ್ಗಳು ಮತ್ತು ಸಲ್ಯುಷನ್ಗಳನ್ನು ನಾವು ಒದಗಿಸುತ್ತೇವೆ. ಈ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ ಮತ್ತು ಇ-ಆಡಳಿತ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣರಾಗುತ್ತೇವೆ’ ಎಂದು ಅವರು ತಿಳಿಸಿದ್ದರು.
Published On - 8:41 am, Thu, 4 August 22