AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India data breach: ಏರ್​ಇಂಡಿಯಾದ 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ ಆಗಿದ್ದು ಹೇಗೆ?

ಭಾರತ ಸರ್ಕಾರ ಸ್ವಾಮ್ಯದ ಏರ್​ ಇಂಡಿಯಾದ 45 ಲಕ್ಷ ಪ್ರಯಾಣಿಕರಿಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಆಗಿದೆ. ಈ ಸೋರಿಕೆ ಆಗಿದ್ದು ಹೇಗೆ, ಎಷ್ಟು ದೊಡ್ಡ ಪ್ರಮಾಣದ್ದು ಎಂಬ ಮಾಹಿತಿ ಇಲ್ಲಿದೆ.

Air India data breach: ಏರ್​ಇಂಡಿಯಾದ 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ ಆಗಿದ್ದು ಹೇಗೆ?
ಸಾಂದರ್ಭಿಕ ಚಿತ್ರ
Srinivas Mata
|

Updated on: May 22, 2021 | 7:44 PM

Share

ಭಾರತ ಸರ್ಕಾರ ಸ್ವಾಮ್ಯದ ಏರ್​ ಇಂಡಿಯಾವು ಪ್ರಯಾಣಿಕರ ಮಾಹಿತಿ ಸೋರಿಕೆ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಫೆಬ್ರವರಿಯಲ್ಲಿ SITA ಪ್ರಯಾಣಿಕರ ಸೇವಾ ಸಿಸ್ಟಮ್​ನಿಂದ ಇದು ಆಗಿದೆ ಎನ್ನಲಾಗಿದೆ. ಏರ್​ಲೈನ್​ನಿಂದ ನೀಡಿರುವ ವಿವರದಂತೆ, 45 ಲಕ್ಷ ಪ್ರಯಾಣಿಕರ ಮಾಹಿತಿಯು ಸೋರಿಕೆ ಆಗಿದೆ. ಸದ್ಯಕ್ಕಂತೂ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಪ್ರಯಾಣಿಕರ ಮಾಹಿತಿ ಸೋರಿಕೆ ಆಗಿದೆ ಅಂತೇನೋ ಗೊತ್ತಾಯಿತು. ಆದರೆ ಹೇಗೆ? ನಿಜಕ್ಕೂ ಸಮಸ್ಯೆ ಆಗಿದ್ದು ಎಲ್ಲಿ? ತಾಂತ್ರಿಕವಾಗಿ ಹಾಗೂ ಸರಳವಾದ ವಿವರಣೆಯನ್ನು ಈ ಬಗ್ಗೆ ನೀಡಬಹುದಾ ಎಂದು ಗಮನಿಸಿದರೆ, ಇಷ್ಟಿಷ್ಟೇ ತಿಳಿಯುತ್ತಾ ಹೋಗುತ್ತದೆ.

ಏನಿದು SITA ಮತ್ತು ಏರ್​ ಇಂಡಿಯಾ ಹೇಗೆ ಇದರಲ್ಲಿ ಭಾಗಿ ಆಗಿದೆ? SITA ಅನ್ನೋದು ಸ್ವಿಟ್ಜರ್ಲೆಂಡ್ ಮೂಲದ ಟೆಕ್ನಾಲಜಿ ಕಂಪೆನಿ. ವಾಯು ಸಾರಿಗೆ ಸಂವಹನ (ಏರ್​ ಟ್ರಾನ್ಸ್​ಪೋರ್ಟ್ ಕಮ್ಯುನಿಕೇಷನ್) ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (ಮಾಹಿತಿ ತಂತ್ರಜ್ಞಾನ) ವಿಶೇಷ ಪರಿಣತಿ ಹೊಂದಿದೆ. ಈ ಕಂಪೆನಿಯು 11 ಏರ್​ಲೈನ್ಸ್​ಗಳ ಸದಸ್ಯತ್ವದೊಂದಿಗೆ ಆರಂಭವಾಗಿದ್ದು, ಇವತ್ತಿಗೆ 200ಕ್ಕೂ ಹೆಚ್ಚು ದೇಶಗಳಲ್ಲಿ 2500ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. SITAಯಿಂದ ಪ್ರಯಾಣಿಕರ ಪ್ರೊಸೆಸಿಂಗ್ ಸಿಸ್ಟಮ್, ನೋಂದಣಿ ಸಿಸ್ಟಮ್ ಮುಂತಾದ ಸೇವೆಯನ್ನು ಒದಗಿಸಲಾಗುತ್ತದೆ.

ಸ್ಟಾರ್ ಅಲೈಯನ್ಸ್ ಜತೆ ಸೇರ್ಪಡೆ ಆಗಲು ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಮೇಲ್ದರ್ಜೆಗಾಗಿ ಏರ್​ ಇಂಡಿಯಾದಿಂದ SITA ಜತೆಗೆ 2017ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಆನ್​ಲೈನ್ ಬುಕ್ಕಿಂಗ್ ಎಂಜಿನ್, ಡಿಪಾರ್ಚರ್ ಕಂಟ್ರೋಲ್ ವ್ಯವಸ್ಥೆ, ಚೆಕ್- ಇನ್ ಮತ್ತು ಆಟೋಮೆಟೆಡ್ ಬೋರ್ಡಿಂಗ್ ಕಂಟ್ರೋಲ್, ಬ್ಯಾಗೇಜ್ ರಿಕನ್ಸಲಿಯೇಷನ್ ಸಿಸ್ಟಮ್ ಮತ್ತು ಫ್ರೀಕ್ವೆಂಟ್ ಫ್ಲೈಯರ್ ಇವನ್ನೆಲ್ಲ ಏರ್​ ಇಂಡಿಯಾದಲ್ಲೂ SITAದಿಂದ ಅನುಷ್ಠಾನಗೊಳಿಸಲಾಗಿದೆ.

ಏರ್​ಇಂಡಿಯಾ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಏನು? ಮಾರ್ಚ್​ನಲ್ಲಿ ಏರ್​ಇಂಡಿಯಾ ತಿಳಿಸಿರುವ ಪ್ರಕಾರ, ಫೆಬ್ರವರಿ ತಿಂಗಳ ಕೊನೆಯಲ್ಲಿ SITAದ ಮೇಲೆ ಸೈಬರ್ ದಾಳಿ ನಡೆದ ಬಗ್ಗೆ ತಿಳಿಸಿತ್ತು. ವಿಮಾನಯಾನ ಸಂಸ್ಥೆಯ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆ ಆಗಿದ್ದರ ಬಗ್ಗೆ ಸುಳಿವು ಹೊರಬಂದಿತ್ತು. ಅಧಿಸೂಚನೆಯಲ್ಲಿ ತಿಳಿಸಿರುವಂತೆ, ವಿಶ್ವದಾದ್ಯಂತ ಹತ್ತಾರು ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿಯು ಸೋರಿಕೆ ಆಗಿದೆ. ಆಗಸ್ಟ್ 26, 2011ರಿಂದ ಫೆಬ್ರವರಿ 20, 2021ರ ಮಧ್ಯೆ ಪ್ರಯಾಣಿಕರ ಹೆಸರು, ಜನ್ಮ ದಿನಾಂಕ, ಸಂಪರ್ಕ ವಿಳಾಸ, ಪಾಸ್​ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಪದೇಪದೇ ಪ್ರಯಾಣಿಸುವವರ ದತ್ತಾಂಶ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಇವೆಲ್ಲವೂ ಸೋರಿಕೆ ಆಗಿದೆ.

ಮಾಹಿತಿ ಸೋರಿಕೆಗೆ ಏರ್​ ಇಂಡಿಯಾದ ಪ್ರತಿಕ್ರಿಯೆ ಏನು? ಈ ಘಟನೆಯ ನಂತರ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಏರ್​ಇಂಡಿಯಾ ಹೇಳಿದೆ. ಯಾವ ಸರ್ವರ್​ ಮಾಹಿತಿ ಸೋರಿಕೆ ಆಗಿದೆಯೋ ಅದರ ಭದ್ರತೆ, ಹೊರಗಿನಿಂದ ಡೇಟಾ ಭದ್ರತೆಗೆ ಪರಿಣತರನ್ನು ನೇಮಕ, ಕ್ರೆಡಿಟ್​ ಕಾರ್ಡ್ ವಿತರಕರಿಗೆ ಮಾಹಿತಿ ನೀಡುವುದು ಮತ್ತು ಏರ್​ಇಂಡಿಯಾದ ಫ್ರೀಕ್ವೆಂಟ್ಲಿ ಫ್ಲೈಯರ್ ಪ್ರೋಗ್ರಾಮ್ಸ್ ರೀಸೆಟ್ ಕೂಡ ಮಾಡಲಾಗಿದೆ. ಇನ್ನು ಡೇಟಾದ ದುರುಪಯೋಗ ಆಗಿಲ್ಲ ಎಂದು ಏರ್​ಇಂಡಿಯಾದಿಂದ ಪ್ರಯಾಣಿಕರಿಗೆ ಖಾತ್ರಿ ನೀಡಲಾಗಿದೆ. ಭಾರತದ ನಿಯಂತ್ರಕರ ಜತೆಗೆ ಮಾತುಕತೆ ನಡೆಸುತ್ತಿದ್ದು, ಪಾಸ್​ವರ್ಡ್ ಬದಲಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸೂಚನೆ ನೀಡಿರುವುದಾಗಿ ಹೇಳಿದೆ.

ಇದನ್ನೂ ಓದಿ: KIABಗೆ ಬಂದು ಇಳಿತು ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ ನೇತೃತ್ವದ ಮೊದಲ ವಿಮಾನ..

(How Air India airlines 45 lakh passengers data breach took place? Here is an explainer about information leakage)