ಟೆಕ್ ದೈತ್ಯ ಆಮೆಜಾನ್ ನಿನ್ನೆ (ಸೆಪ್ಟೆಂಬರ್ 28, ಮಂಗಳವಾರ) ನಡೆದ ಕಾರ್ಯಕ್ರಮದಲ್ಲಿ ತನ್ನ ನೂತನ ಗ್ಯಾಡ್ಜೆಟ್ಗಳನ್ನು ಜಗತ್ತಿಗೆ ಪರಿಚಯಿಸಿದೆ. ಅದರಲ್ಲೂ ಮನೆಯಲ್ಲಿ ಬಳಸಬಹುದಾದ ‘ಆಸ್ಟ್ರೋ’ ಎಂಬ ರೋಬೋಟ್, ‘ಎಕೊ ಮತ್ತು ರಿಂಗ್’ ಪ್ರಾಡಕ್ಟ್ಗಳು, ಸೆಕ್ಯುರಿಟಿ ಹಾರ್ಡ್ವೇರ್ಗಳು ಮೊದಲಾದವುಗಳನ್ನು ಘೋಷಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕುವತ್ತ ಆಮೆಜಾನ್ ಮತ್ತೊಮ್ಮೆ ಹೆಜ್ಜೆ ಇಟ್ಟಿದೆ. ಕಂಪೆನಿ ಬಿಡುಗಡೆ ಮಾಡಿರುವ ನೂತನ ಹಾರ್ಡ್ವೇರ್ಗಳ ಪರಿಚಯ ಇಲ್ಲಿದೆ.
‘ಆಸ್ಟ್ರೋ’ ಹೋಮ್ ರೋಬೊಟ್:
ಅಮೆಜಾನ್ ಕಳೆದ ರಾತ್ರಿ ಬಿಡುಗಡೆ ಮಾಡಿದ ಅತ್ಯಂತ ಅಸಾಮಾನ್ಯ ಸಾಧನವೆಂದರೆ ಅದರ ಆಸ್ಟ್ರೋ ಹೋಮ್ ರೋಬೋಟ್. ಅಲೆಕ್ಸಾ-ಚಾಲಿತ ರೋಬೋಟ್ ಕಂಪ್ಯೂಟರ್ ದೃಷ್ಟಿ, ಕೃತಕ ಬುದ್ಧಿಮತ್ತೆ, ಅಲೆಕ್ಸಾ ಮತ್ತು ರಿಂಗ್ ತಂತ್ರಜ್ಞಾನಗಳನ್ನು ಹೊಂದಿರುವ ಒಂದು ಅಪೂರ್ವ ಸಾಧನ. ವೃದ್ಧರು ಅಥವಾ ವಿಶೇಷ ಚೇತನರಿಗೆ ಸಂವಹನವನ್ನು ಆಸ್ಟ್ರೋ ಸುಲಭವಾಗಿಸುತ್ತದೆ.
ಬಳಕೆದಾರರು ಮನೆಯಲ್ಲಿ ಇಲ್ಲದಿರುವಾಗ ಮನೆಯ ಕೊಠಡಿಗಳು, ಜನರು ಮತ್ತು ಸಾಕುಪ್ರಾಣಿಗಳನ್ನು ಪರೀಕ್ಷಿಸಲು ಆಸ್ಟ್ರೋವನ್ನು ಬಳಸಬಹುದು. ರೋಬೋಟ್ ಅನ್ನು ಗೋಡೆಗಳು ಅಥವಾ ಪೀಠೋಪಕರಣಗಳಿಗೆ ತಾಗದಂತೆ ನಿಮ್ಮ ಮನೆಯ ಸುತ್ತಲೂ ಓಡಾಡಿಸಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಕಣ್ಣಿನ ಅಭಿವ್ಯಕ್ತಿ, ಪರದೆಯ ಚಲನೆ ಮತ್ತು ಮಾತನಾಡುವ ಸಾಮರ್ಥ್ಯದಂತಹ ನಡವಳಿಕೆ (ಶೈಲಿ) ಹೊಂದಿದೆ. ಇತರ ಸ್ಮಾರ್ಟ್ ಉತ್ಪನ್ನಗಳಂತೆ, ಆಸ್ಟ್ರೋದಲ್ಲಿನ ಮೈಕ್ರೊಫೋನ್ ಮತ್ತು ಕ್ಯಾಮೆರಾಗಳನ್ನು ಸಹ ಸ್ವಿಚ್ ಆಫ್ ಮಾಡಬಹುದು. ಒಟ್ಟಿನಲ್ಲಿ ಇದು ಮನೆಯನ್ನು ಇನ್ನಷ್ಟು ಸ್ಮಾರ್ಟ್ ಆಗಿಸುತ್ತದೆ ಎಂದು ಕಂಪನಿ ಹೇಳಿದೆ.
ಸ್ಮಾರ್ಟ್ ಡಿಸ್ಪ್ಲೆ ಬೋರ್ಡ್; ಆಮೆಜಾನ್ ಎಕೊ ಶೋ 15:
ಅಮೆಜಾನ್‌ನ ಮತ್ತೊಂದು ಹೊಸ ಉತ್ಪನ್ನ ‘ಎಕೋ ಶೋ ಸ್ಮಾರ್ಟ್ ಡಿಸ್‌ಪ್ಲೇ 15’. 15.6 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಇದಾಗಿದ್ದು, ಗೋಡೆಯ ಮೇಲೆ ಜೋಡಿಸಬಹುದು ಅಥವಾ ಕೌಂಟರ್‌ಗಳಲ್ಲಿ ಇರಿಸಬಹುದು. ಎಕೋ ಶೋ ಅಮೆಜಾನ್ AZ2 ನ್ಯೂರಲ್ ಎಡ್ಜ್ ಪ್ರೊಸೆಸರ್ ಹೊಂದಿದ್ದು, ಮ್ಯಾನ್ಯುಯಲ್ ಆಯ್ಕೆಗಳೊಂದಿಗೆ ಹೊಸ ಹೋಮ್ ಸ್ಕ್ರೀನ್‌ನೊಂದಿಗೆ ಬರುತ್ತದೆ. ಎಕೋ ಶೋ 15 ಬೆಲೆ $ 249.99 (ಸರಿಸುಮಾರು ರೂ 18,500) ಆಗಿದ್ದು,ಇದರ ಬಿಡುಗಡೆಯ ದಿನಾಂಕವನ್ನು ಇನ್ನೂ ಆಮೆಜಾನ್ ಖಚಿತಪಡಿಸಿಲ್ಲ.
ನೂತನ ವಿಡಿಯೋ ಕಾಲಿಂಗ್ ಡಿವೀಸ್; ಆಮೆಜಾನ್ ಗ್ಲೋ:
ಅಮೆಜಾನ್ ಗ್ಲೋ ಸಂಪೂರ್ಣ ಹೊಸ ವಿಡಿಯೋ ಕರೆ ಮಾಡುವ ಸಾಧನವಾಗಿದ್ದು, ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆ. ಅಮೆಜಾನ್ ಗ್ಲೋ ಒಂದು 14 ಇಂಚು ಎತ್ತರದ ಫ್ರೀಸ್ಟ್ಯಾಂಡಿಂಗ್ ಇಂಟರಾಕ್ಟಿವ್ ಸಾಧನವಾಗಿದ್ದು 8 ಇಂಚಿನ ಡಿಸ್ಪ್ಲೇ ಹೊಂದಿದೆ. ಅಮೆಜಾನ್ ಗ್ಲೋ ಮಕ್ಕಳು ತಮ್ಮ ಪ್ರೀತಿಪಾತ್ರರಿಗೆ ವಿಡಿಯೋ ಕರೆಗಳನ್ನು ಮಾಡಲು ಉಪಯೋಗವಾಗುವಂತಹ ಸಾಧನವಾಗಿದೆ. ಇದಲ್ಲದೇ ಒಗಟುಗಳು, ಕಥೆಗಳು ಅಥವಾ 22 ಇಂಚಿನ ಡಿಸ್ಪ್ಲೆಯಲ್ಲಿ ಡ್ರಾಯಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ. ಇದೆಲ್ಲವೂ, ಅವರು ವಿಡಿಯೊ ಕರೆಯಲ್ಲಿ ಸಂಪರ್ಕ ಹೊಂದಿದ ವ್ಯಕ್ತಿಯೊಂದಿಗೂ ಮಾಡಬಹುದು. ಅಮೆಜಾನ್ ಗ್ಲೋ ಬೆಲೆ $ 249.99 (ಸರಿಸುಮಾರು ರೂ 18,500).
ಅಮೆಜಾನ್ ಹ್ಯಾಲೊ:
ಅಮೆಜಾನ್ ತನ್ನ ಹೊಸ ಫಿಟ್ನೆಸ್ ಟ್ರ್ಯಾಕರ್, ಹ್ಯಾಲೋ ವ್ಯೂ ಅನ್ನು ಘೋಷಿಸಿದೆ. ಹ್ಯಾಲೋ ವ್ಯೂ ಫಿಟ್ನೆಸ್ ಟ್ರ್ಯಾಕರ್ AMOLED ಡಿಸ್ಪ್ಲೇಯೊಂದಿಗೆ ಬರುತ್ತಿದ್ದು, ಪೂರ್ಣ ಒಂದು ವರ್ಷದ ಹ್ಯಾಲೊ ಸದಸ್ಯತ್ವವನ್ನೂ ನೀಡಲಾಗುತ್ತದೆ. ಇದರ ಬೆಲೆ ಸುಮಾರು $ 79.99 (ಸರಿಸುಮಾರು ರೂ. 5,900).
ರಿಂಗ್ನ ‘ಆಲ್ವೇಸ್ ಹೋಮ್ ಡ್ರೋನ್ ಕ್ಯಾಮೆರಾ’:
ಅಮೆಜಾನ್ ಮಾಲೀಕತ್ವದ ರಿಂಗ್‌ನಿಂದ ತಯಾರಾದ ಆಲ್ವೇಸ್ ಹೋಮ್ ಡ್ರೋನ್ ಕ್ಯಾಮೆರಾ ಕಳೆದ ವರ್ಷ ಅಮೆಜಾನ್‌ನ ಈವೆಂಟ್‌ನಲ್ಲಿ ಗಮನ ಸೆಳೆದಿತ್ತು. ಈ ವರ್ಷ ಕಂಪನಿಯು ಮತ್ತೆ ಆ ಗ್ಯಾಡ್ಜೆಟ್ನ್ನು ಘೋಷಿಸಿದ್ದು, ಇದು ಶೀಘ್ರದಲ್ಲೇ $ 250 ಕ್ಕೆ (ಸರಿಸುಮಾರು ರೂ 18,500) ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನುತಿಳಿಯಲು ಈ ಡ್ರೋನ್ ಕ್ಯಾಮೆರಾ ಮನೆಯ ಸುತ್ತಲೂ ಸುತ್ತುವ ತಂತ್ರಜ್ಞಾನ ಹೊಂದಿದೆ.
ಆಮೆಜಾನ್ನ ಮೊದಲ ಥರ್ಮೊಸ್ಟಾಟ್:
ಅಮೆಜಾನ್ ತನ್ನ ಮೊದಲ ಸ್ಮಾರ್ಟ್ ಥರ್ಮೋಸ್ಟಾಟ್ ಅನ್ನು ಬಿಡುಗಡೆ ಮಾಡಿತು. ಇದು ಸರಳ ವಿನ್ಯಾಸ ಹೊಂದಿದ್ದು, ಹನಿವೆಲ್ ಹೋಮ್ ಥರ್ಮೋಸ್ಟಾಟ್ ತಂತ್ರಜ್ಞಾನವನ್ನು ಬಳಸುತ್ತದೆ. ಸಾಧನವು $ 59 (ಸರಿಸುಮಾರು ರೂ. 4,400) ಬೆಲೆಯನ್ನು ಹೊಂದಿದೆ. ತಾಪಮಾನವನ್ನು ಯಾವಾಗ ಕಡಿಮೆ ಮಾಡಬೇಕು ಅಥವಾ ಹೆಚ್ಚಿಸಬೇಕು ಎಂಬುದರ ಕುರಿತು ಮನೆಯ ದಿನಚರಿಯನ್ನು ಹೊಂದಿಸುವಂತಹ ಕಾರ್ಯಗಳನ್ನು ಈ ಸಾಧನ ಮಾಡಲಿದ್ದು, ಅದಕ್ಕಾಗಿ HVAC ವ್ಯವಸ್ಥೆಗಳೊಂದಿಗೆ ಸಮನ್ವಯ ನಡೆಸಿ ಕಾರ್ಯ ನಿರ್ವಹಿಸಲು ಅನುಕೂಲ ಕಲ್ಪಿಸುತ್ತದೆ.
ಬ್ಲಿಂಕ್ ವಿಡಿಯೊ ಡೋರ್ ಬೆಲ್:
ರಿಂಗ್ ಹೊರತಾಗಿ, ಅಮೆಜಾನ್ ಸೆಕ್ಯುರಿಟಿ ಸೊಲ್ಯೂಷನ್ಸ್ ಬ್ರಾಂಡ್ ‘ಬ್ಲಿಂಕ್’ ಕಂಪನಿಯನ್ನೂ ಹೊಂದಿದೆ. ಈ ಕಂಪನಿಯು ಹೊಸ ಬ್ಲಿಂಕ್ ವಿಡಿಯೋ ಡೋರ್‌ಬೆಲ್ ಬಿಡುಗಡೆ ಮಾಡಿದೆ. ಇದರ ಬೆಲೆ $ 49.99 (ಅಂದಾಜು ರೂ. 3,700) ಮತ್ತು ಇದನ್ನು ಎರಡು ವರ್ಷ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ವೈರ್ ಅಥವಾ ವೈರ್ಲೆಸ್ ಆಗಿ ಇದನ್ನು ಅಳವಡಿಸಬಹುದು. 1080p HD ಹಗಲು ರಾತ್ರಿ ವೀಡಿಯೋ, ದ್ವಿಮುಖ ಆಡಿಯೋ, ಚೈಮ್ ಆಪ್ ಅಲರ್ಟ್‌ಗಳು ಸೇರಿದಂತೆ ಹಲವು ಫೀಚರ್ಗಳು ಇದರಲ್ಲಿವೆ.
ಇದನ್ನೂ ಓದಿ:
Flipkart Big Billion Days: ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಅಕ್ಟೋಬರ್ 3ರಿಂದಲೇ ಶುರು
(Amazon launches several new products including Astro Home Robot on September 28th)