ಜಗತ್ತಿನಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆ ಆಗುವ ದೇಶ ಎಂದರೆ ಅದು ಭಾರತ ಎಂದು ಹೇಳಬಹುದು. ಯಾಕೆಂದರೆ ಇಂದು ಭಾರತದಲ್ಲಿ ಮೊಬೈಲ್ (Mobile) ಮಾರುಕಟ್ಟೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಫೋನ್ಗಳು ಬಿಡುಗಡೆ ಆಗುತ್ತದೆ. ಸದ್ಯ ದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಬ್ರ್ಯಾಂಡ್ ಎಂದರೆ ಅದು ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ, ಒಪ್ಪೋ, ವಿವೋ, ಒನ್ಪ್ಲಸ್. ಈ ಎಲ್ಲ ಬ್ರ್ಯಾಂಡ್ಗಳು ಭಾರತೀಯ ಜನರ ಅನುಕೂಲಕ್ಕೆ ತಕ್ಕಂತೆ ಬೆಲೆಯನ್ನು ನಿಗದಿ ಮಾಡಿ ಅನಾವರಣ ಮಾಡುತ್ತಿದೆ. ಇದರಲ್ಲಿ ಕೆಲವು ಯಶಸ್ಸು ಸಾಧಿಸಿದರೆ ಇನ್ನೂ ಕೆಲ ಮೊಬೈಲ್ಗಳು ಫ್ಲಾಫ್ ಆಗಿದ್ದೂ ಇದೆ. ಹೀಗಿರುವಾಗ ಅಧ್ಯಯನದಿಂದ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.
ಭಾರತೀಯರು ಹೊಸ ಸ್ಮಾರ್ಟ್ಫೋನನ್ನು ಎಷ್ಟು ಸಮಯಕ್ಕೊಮ್ಮೆ ಬದಲಾವಣೆ ಮಾಡುತ್ತಾರೆ ಎಂಬ ಕುರಿತು ಝೀ5 ಸಂಸ್ಥೆ ಇತ್ತೀಚೆಗಷ್ಟೆ ಸರ್ವೆ ನಡೆಸಿತ್ತು. ಇದರ ಪ್ರಕಾರ ಭಾರತದ ಮೆಟ್ರೊ ನಗರಗಳಲ್ಲಿ ವಾಸಿಸುವ ಶೇ. 50 ರಷ್ಟು ಜನರು ಆರು ತಿಂಗಳಿಗೊಮ್ಮೆ ಹೊಸ ಸ್ಮಾರ್ಟ್ಫೋನ್ ಖರೀದಿ ಮಾಡುತ್ತಾರಂತೆ. ತಮ್ಮ ಮೊಬೈಲ್ ಕಾರ್ಯನಿರ್ವಹಿಸುವುದು ನಿಧಾನವಾದ ಕೂಡಲೇ ಹೊಸ ಫೋನ್ ಕಡೆ ಇವರು ಮುಖ ಮಾಡುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಜನರು ಇಂದು ಮೊಬೈಲ್ ಅನ್ನು ಆರಿಸುವಲ್ಲಿ ಸಾಕಷ್ಟು ಜಾಗರೂಕರಾಗಿದ್ದಾರೆ. ಅಧ್ಯಯನದಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಜನರು ಇಂದು ಬ್ರ್ಯಾಂಡ್, ಕಾರ್ಯಕ್ಷಮತೆ, ಫೀಚರ್ಸ್ ಮತ್ತು ತಂತ್ರಜ್ಞಾನವನ್ನು ಗಮನಿಸಿ ಮೊಬೈಲ್ ಅನ್ನು ಆರಿಸಿಕೊಳ್ಳುತ್ತಾರಂತೆ. ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬ್ರ್ಯಾಂಡ್ ನೇಮ್ ಇರುವ ಫೋನನ್ನು ಆಯ್ಕೆ ಮಾಡುತ್ತಾರೆ ಎಂದು ಅಧ್ಯಯನ ಹೇಳಿದೆ.
ಐದರಲ್ಲಿ ಎರಡು ಜನರು 30,000 ರೂ. ಅಥವಾ ಅದಕ್ಕಿಂತ ಅಧಿಕ ದರ ಇರುವ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡುತ್ತಾರಂತೆ. ಮುಖ್ಯವಾಗಿ 34 ರಿಂದ 44 ವಯಸ್ಸಿನವರು 30,000 ರೂ. ಫೋನಿನ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಚ್ಚರಿ ಎಂದರೆ ಶೇ. 70 ರಷ್ಟು ನಾನ್ ಮೆಟ್ರೊ ಜನರು ಆನ್ಲೈನ್ ಮೂಲಕ ಮೊಬೈಲ್ ಅನ್ನು ಖರೀದಿ ಮಾಡಲು ಮುಂದಾಗುತ್ತಾರಂತೆ. ಇಲ್ಲೂ 30,000 ರೂ. ಗಳ ಆಸುಪಾಸಿನ ಮೊಬೈಲ್ಗೆ ಹೆಚ್ಚು ಬೇಡಿಕೆ ಇದೆ.
ಭಾರತದಲ್ಲಿ 30,000 ರೂ. ಆಸುಪಾಸಿಗೆ ಇಂದು ಅನೇಕ ಸ್ಮಾರ್ಟ್ಫೋನ್ಗಳು ದೊರೆಯುತ್ತಿದೆ. ರೆಡ್ಮಿ, ಪೋಕೋ, ಸ್ಯಾಮ್ಸಂಗ್, ಒಪ್ಪೋ ದಂತಹ ಕಂಪನಿಯ ಹೆಚ್ಚಿನ ಮೊಬೈಲ್ಗಳು 20,000 – 30,000 ರೂ. ಒಳಗಡೆಯೇ ಇದೆ. ಕಳೆದ ವರ್ಷ ಮಾರುಕಟ್ಟೆಗೆ ಕಾಲಿಟ್ಟ ನಥಿಂಗ್ ಕಂಪನಿ ತನ್ನ ಮೊಟ್ಟ ಮೊದಲ ಸ್ಮಾರ್ಟ್ಫೋನ್ ನಥಿಂಗ್ ಫೋನ್ 1 ಕೂಡ ಇದೇ ಪ್ರೈಸ್ ರೇಂಜ್ನಲ್ಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ