AI: ಸತ್ತು ತಿಂಗಳಾದ ನಂತರ ಮೊಮ್ಮಕ್ಕಳ ಎದುರು ಮಾತನಾಡಿದ ಅಜ್ಜಿ; ಸರಿಯೋ ತಪ್ಪೋ ಚರ್ಚೆಯಲ್ಲಿ ಮುಳುಗಿದ ಜಗತ್ತು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 31, 2022 | 3:16 PM

ಸತ್ತವರನ್ನು ಫೋಟೊದಲ್ಲಿ ನೋಡುವುದು ವಾಡಿಕೆ. ಆದರೆ ಅವರು ಟಿವಿ ಸ್ಕ್ರೀನ್ ಮೇಲೆ ಲೈವ್ ಬಂದು ಮಾತನಾಡಲು ಶುರು ಮಾಡಿದರೆ, ಮೊಮ್ಮಕ್ಕಳ ತುಂಟ ಪ್ರಶ್ನೆಗಳಿಗೆ ನಗುನಗುತ್ತಾ ಉತ್ತರಿಸಿದರೆ ಅಂತ್ಯಸಂಸ್ಕಾರಕ್ಕೆ ಬಂದವರ ಪರಿಸ್ಥಿತಿ ಹೇಗಾಗಿರಬೇಡ?

AI: ಸತ್ತು ತಿಂಗಳಾದ ನಂತರ ಮೊಮ್ಮಕ್ಕಳ ಎದುರು ಮಾತನಾಡಿದ ಅಜ್ಜಿ; ಸರಿಯೋ ತಪ್ಪೋ ಚರ್ಚೆಯಲ್ಲಿ ಮುಳುಗಿದ ಜಗತ್ತು
ಅಂತಿಮ ವಿದಾಯ ಹೇಳಲು ಬಂದವರೊಂದಿಗೆ ಮಾತನಾಡುತ್ತಿರುವ ಮೃತ ಮರಿನಾ
Follow us on

‘ದೃಢ ನಂಬಿಕೆ ಇಟ್ಟು ಅದರಲ್ಲಿಯೇ ನಡೆದರೆ ನಿನ್ನ ಬದುಕಿನಲ್ಲಿ ಯಶಸ್ವು, ಪ್ರೀತಿ ತುಂಬಿರುತ್ತದೆ’ ಸತ್ತು ಹೋದ ಅಜ್ಜಿ ತನ್ನದೇ ತಿಥಿಯ ದಿನ ಮೊಮ್ಮಕ್ಕಳೊಂದಿಗೆ ಆಡುವ ಮಾತು ಇದು. ಸತ್ತವರನ್ನು ಫೋಟೊದಲ್ಲಿ ನೋಡುವುದು ವಾಡಿಕೆ. ಆದರೆ ಅವರು ಟಿವಿ ಸ್ಕ್ರೀನ್ ಮೇಲೆ ಲೈವ್ ಬಂದು ಮಾತನಾಡಲು ಶುರು ಮಾಡಿದರೆ, ಮೊಮ್ಮಕ್ಕಳ ತುಂಟ ಪ್ರಶ್ನೆಗಳಿಗೆ ನಗುನಗುತ್ತಾ ಉತ್ತರಿಸಿದರೆ ಅಂತ್ಯಸಂಸ್ಕಾರಕ್ಕೆ ಬಂದವರ ಪರಿಸ್ಥಿತಿ ಹೇಗಾಗಿರಬೇಡ? ‘ನನ್ನ ಗಂಡ ಚೆನ್ನಾಗಿದ್ದ, ನನ್ನನ್ನು ತುಂಬಾ ಪ್ರೀತಿಸ್ತಿದ್ದ. ಇಲ್ಲಿಗೆ ನಾನು ಬಂದಿದ್ದ ಕೆಲಸ ಮುಗಿಯಿತು. ಅದಕ್ಕೆ ಹೋಗ್ತಿದ್ದೀನಿ. ನೀವೆಲ್ಲರೂ ಧರ್ಮದ ಮಾರ್ಗದಲ್ಲಿ ನಡೆಯಿತು’ ಎಂದು ಅಜ್ಜಿ ತನ್ನ ಮೊಮ್ಮಕ್ಕಳಿಗೆ ವಿದಾಯ ಹೇಳಿದ್ದಾರೆ.

ಸಾವೇ ಇಲ್ಲದ ಬಾಳುವೆ ಬೇಕು ಎನ್ನುವ ಚಿರಂಜೀವಿಯಾಗುವ ಮನುಷ್ಯನ ಬಹುಕಾಲದ ಆಸೆಗೆ ಇದೀಗ ಕೃತಕ ಬುದ್ಧಿಮತ್ತೆ (Artificial Inteligence) ನೀರೆರೆದಿದೆ. ಬ್ರಿಟನ್​ನ ನಾಟಿಂಗ್​ಹ್ಯಾಮ್ ಎಂಬಲ್ಲಿ ನಡೆದಿರುವ ಈ ಘಟನೆಯು ‘ಕೃತಕ ಬುದ್ಧಿಮತ್ತೆ’ಯ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸುವ ಜೊತೆಗೆ ಹಲವು ನೈತಿಕ ಮತ್ತು ಸಾಮಾಜಿಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಮೇಲಿನ ಉದಾಹರಣೆಯಲ್ಲಿ ಮಾತನಾಡಿರುವ ಅಜ್ಜಿಯ ಹೆಸರು ಮರಿನಾ ಸ್ಮಿತ್. 87ನೇ ವಯಸ್ಸಿನಲ್ಲಿ ವಯೋಸಹಜ ಸಮಸ್ಯೆಗಳಿಂದ ಅವರು ಮೃತಪಟ್ಟರು. ಅವರು ಸಾಯುವ ಕೆಲ ದಿನಗಳ ಮೊದಲು ಮಾರಿನಾ ಸ್ಮಿತ್​ರ ಮಗ ಡಾ ಸ್ಟೀಫನ್ ಸ್ಮಿತ್​ ಗಂಟೆಗಟ್ಟಲೆ ತಾಯಿಯನ್ನು ಮಾತನಾಡಿಸಿ, ಆಕೆಯ ವೈಯಕ್ತಿಕ ವಿವರಗಳನ್ನೆಲ್ಲಾ ವಿಡಿಯೊ ರೂಪದಲ್ಲಿ ದಾಖಲಿಸಿಕೊಂಡಿದ್ದ.

ತಾಯಿಯ ಹೇಳಿಕೆ ದಾಖಲಿಸಲು ಸ್ಮಿತ್​ ಸುಮಾರು 20 ಕ್ಯಾಮೆರಾಗಳನ್ನು ಬಳಸಿಕೊಂಡಿದ್ದ. ಹಾಲೊಗ್ರಾಮ್​ ಟೂಲ್ ಬಳಸಿ ಮೃತ ಸ್ಮಿತ್​ರ ಡಿಜಿಟಲ್ ಕ್ಲೋನ್ ರೂಪಿಸಿ ಅವರೇ ಸ್ವತಃ ಮಾತನಾಡುವಂತೆ ತಂತ್ರವೊಂದನ್ನು ಹೆಣೆದಿದ್ದ. ಅಂತಿಮ ವಿಚಾರ ಹಾಲೋಗ್ರಾಮ್ ತಂತ್ರದ ಮೂಲಕ ಈ ಮಾಹಿತಿಯನ್ನೇ ಒಂದೆಡೆ ಒಪ್ಪವಾಗಿ ಜೋಡಿಸಿ ಮಾತನಾಡುವಂತೆ ಮಾಡಲಾಗಿತ್ತು. ಅಂತಿಮ ವಿದಾಯ ಹೇಳಲು ಬರುವವರಿಗೆ ಗೊತ್ತಿಲ್ಲದ ಮಾಹಿತಿಯನ್ನೇ ಮೃತ ಸ್ಮಿತ್ ಹಂಚಿಕೊಳ್ಳುತ್ತಿದ್ದರಿಂದ ಹಲವರು ಆಸಕ್ತಿಯಿಂದ ಕೇಳಿಸಿಕೊಂಡರು, ನೋಡಿದರು, ಅಚ್ಚರಿಪಟ್ಟರು. ಮೊಮ್ಮಕ್ಕಳಂತೂ ಮತ್ತೊಮ್ಮೆ ತಮ್ಮ ಅಜ್ಜಿಯೇ ಬಂದಿದ್ದಾಳೆ ಎಂದು ಖುಷಿಪಟ್ಟರು.

ಡಾ ಸ್ಟೀಫನ್ ಸ್ಮಿತ್ ಸ್ಟೋರಿಫೈಲ್ ಕಂಪನಿಯನ್ನು 2017ರಿಂದಲೇ ಆರಂಭಿಸಿದ್ದು, ನೆನಪುಗಳನ್ನು ಅಜರಾಮರಗೊಳಿಸುವ, ಶಾಶ್ವತವಾಗಿ ಜೀವಿಸುವಂತೆ ಮಾಡುವ ಈ ಕಂಪನಿಯ ಸೇವೆಗಳು 2021ರಿಂದಲೇ ಲಭ್ಯವಿದೆ. ಆದರೆ ಹೆಚ್ಚು ಸುದ್ದಿಯಾಗಿದ್ದು ಮಾತ್ರ ಈಗ. ಜೀವಂತವಿದ್ದಾಗ ಅವರ ಬದುಕಿನ ಅತಿಸೂಕ್ಷ್ಮ ವಿವರಗಳನ್ನೂ ಬಿಡದಂತೆ ಕಲೆಹಾಕಿ, ನಂತರ ಅವರದೇ ಧ್ವನಿ, ರೂಪದಲ್ಲಿ ಅದನ್ನು ಕೇಳಲು ಮತ್ತು ನೋಡಲು ಅವಕಾಶ ಕಲ್ಪಿಸಿಕೊಡುತ್ತದೆ.

ಹತ್ತಾರು ಪ್ರಶ್ನೆಗಳು

ಅಂತ್ಯಸಂಸ್ಕಾರದ ವಿಧಿಗಳು ಸಾವನ್ನು ಎಲ್ಲರಿಗೂ ದೃಢಪಡಿಸುವ ಪ್ರಕ್ರಿಯೆಯಾಗಿರುತ್ತವೆ. ಅಂತ್ಯಸಂಸ್ಕಾರ ಮತ್ತು ನಂತರದ ತಿಥಿ ಇತ್ಯಾದಿಗಳ ಮೂಲಕ ಸತ್ತವರಿಗೆ ಬದುಕಿರುವವರು ಗೌರವಯುತವಾದ ಶಾಶ್ವತ ವಿದಾಯ ಹೇಳುತ್ತಾರೆ. ಅಷ್ಟೇ ಅಲ್ಲ, ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ತಮ್ಮ ಮನಸ್ಸಿಗೆ ದೃಢಪಡಿಸಿಕೊಳ್ಳುತ್ತಾರೆ. ಆದರೆ ಕೃತಕ ಬುದ್ಧಿಮತ್ತೆಯಿಂದ ಮೃತರು ಜೀವಂತ ಇದ್ದಾರೆ ಎಂದು ಮನಸ್ಸು ಮತ್ತೆಮತ್ತೆ ನಂಬುವಂತೆ ಆಗುತ್ತದೆ. ಹೀಗಾಗಿ ಶಾಶ್ವತವಾಗಿ ವಿದಾಯ ಹೇಳುವ ಕ್ರಿಯೆಗೆ ಸಮಸ್ಯೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಹಲವು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.