Facebook Reels: ಇನ್ನು ಫೇಸ್ಬುಕ್ನಲ್ಲೂ ರೀಲ್ಸ್ ಮಾಡಬಹುದು; ವಿಶೇಷ ಮಾಹಿತಿ ಹಂಚಿಕೊಂಡ ಮಾರ್ಕ್ ಝಕರ್‌ಬರ್ಗ್
Facebook Reels: ನಿರಾಶಾದಾಯಕ ಗಳಿಕೆಯ ವರದಿಯ ನಂತರ ಇತ್ತೀಚೆಗೆ ತನ್ನ ಮಾರುಕಟ್ಟೆ ಮೌಲ್ಯದ ಮೂರನೇ ಒಂದು ಭಾಗವನ್ನು ಕಳೆದುಕೊಂಡಿರುವ ಸಾಮಾಜಿಕ ಮಾಧ್ಯಮ ದೈತ್ಯ, ಇದೀಗ ರೀಲ್ಸ್ ಅನ್ನು ಪ್ರಮುಖ ಆದ್ಯತೆಯಾಗಿ ಹೈಲೈಟ್ ಮಾಡಿದೆ.
ಫೇಸ್‌ಬುಕ್ ತನ್ನ ಕಿರು ವೀಡಿಯೊ ಆಯ್ಕೆ ‘ಫೇಸ್‌ಬುಕ್ ರೀಲ್ಸ್’ ಅನ್ನು 150ಕ್ಕೂ ಹೆಚ್ಚು ದೇಶಗಳಲ್ಲಿ ಆರಂಭಿಸುತ್ತಿದೆ. ಫೇಸ್‌ಬುಕ್ ರೀಲ್ಸ್ ಶುರು ಮಾಡಿರುವ ಬಗ್ಗೆ ಮೆಟಾ ಸಂಸ್ಥೆ ಮಂಗಳವಾರ ತಿಳಿಸಿದೆ. ವೇಗವಾಗಿ ಬೆಳೆಯುತ್ತಿರುವ ರೀಲ್ಸ್ ಸ್ವರೂಪವನ್ನು ವಿಸ್ತರಿಸುವ ಆಶಯದಲ್ಲಿ ಈ ಹೆಚ್ಚುವರಿ ಆಯ್ಕೆ ನೀಡಲಾಗಿದೆ. ನಿರಾಶಾದಾಯಕ ಗಳಿಕೆಯ ವರದಿಯ ನಂತರ ಇತ್ತೀಚೆಗೆ ತನ್ನ ಮಾರುಕಟ್ಟೆ ಮೌಲ್ಯದ ಮೂರನೇ ಒಂದು ಭಾಗವನ್ನು ಕಳೆದುಕೊಂಡಿರುವ ಸಾಮಾಜಿಕ ಮಾಧ್ಯಮ ದೈತ್ಯ, ಇದೀಗ ರೀಲ್ಸ್ ಅನ್ನು ಪ್ರಮುಖ ಆದ್ಯತೆಯಾಗಿ ಹೈಲೈಟ್ ಮಾಡಿದೆ.
ಚೀನೀ ಟೆಕ್ ದೈತ್ಯ ಬೈಟ್‌ಡ್ಯಾನ್ಸ್ ಒಡೆತನದ ಜನಪ್ರಿಯ ಕಿರು-ವೀಡಿಯೊ ಅಪ್ಲಿಕೇಶನ್ ಟಿಕ್‌ಟಾಕ್‌ಗೆ ಉತ್ತರವಾಗಿ ಮೆಟಾ 2020 ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತು 2021 ರಲ್ಲಿ ಫೇಸ್‌ಬುಕ್‌ನಲ್ಲಿ ರೀಲ್ಸ್ ಅನ್ನು ಪ್ರಾರಂಭಿಸಿತು. ‘ರೀಲ್ಸ್ ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ಕಂಟೆಂಟ್ ಫಾರ್ಮ್ಯಾಟ್ ಆಗಿದೆ. ಮತ್ತು ಇಂದು ನಾವು ಇದನ್ನು ಜಾಗತಿಕವಾಗಿ ಫೇಸ್‌ಬುಕ್‌ನಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಿದ್ದೇವೆ’ ಎಂದು ಮೆಟಾ ಸಿಇಒ ಮಾರ್ಕ್ ಝಕರ್‌ಬರ್ಗ್ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ ರೀಲ್ಸ್ ಮೂಲಕ ರಚನೆಕಾರರಿಗೆ ಹಣ ಗಳಿಸುವ ಹೊಸ ಮಾರ್ಗಗಳನ್ನು ಸಹ ಕಂಪೆನಿ ಘೋಷಿಸಿದೆ.
ರೀಲ್ಸ್ ಮಾಡುವವರು ಹೆಚ್ಚಿನರೀಚ್ ಪಡೆಯಲು ಇನ್ಸ್ಟಾಗ್ರಾಂ ರೀಲ್ಸ್ನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಬಗ್ಗೆ ಕೂಡ ಆಯ್ಕೆ ನೀಡಲಾಗಿದೆ. ಜಾಹೀರಾತು ಹಾಗೂ ಸ್ಟಿಕರ್ಗಳನ್ನು ಒದಗಿಸುವ ಬಗ್ಗೆ ಹಾಗೂ ಶೀಘ್ರವೇ ರೀಲ್ಸ್ನಲ್ಲಿ ಫುಲ್ ಸ್ಕ್ರೀನ್ ಜಾಹೀರಾತು ನೀಡುವ ಬಗ್ಗೆಯೂ ಝಕರ್‌ಬರ್ಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: WhatsApp: ಫೇಸ್ಬುಕ್ನಲ್ಲಿರುವ ಅಚ್ಚರಿಯ ಫೀಚರ್ ಈಗ ವಾಟ್ಸ್ಆ್ಯಪ್ನಲ್ಲಿ: ದಂಗಾದ ಬಳಕೆದಾರರು