ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಈ ಹಬ್ಬಗಳು ಬಂತೆಂದರೆ ಸಾಕು ಉಚಿತ ಉಡುಗೊರೆ, ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಹೀಗೆ ಅನೇಕ ಹಣ ಕದಿಯುವ ಫೇಕ್ ಮೆಸೇಜ್‌ಗಳನ್ನು (Fake Message) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದೀಗ ಇದಕ್ಕೆ ಉದಾಹರಣೆ ಎಂಬಂತೆ ಆನ್‌ಲೈನ್ ವಂಚನೆ ದೇಶದ ಕೆಲವು ಕಡೆಗಳಲ್ಲಿ ವರದಿಯಾಗಿದೆ. ಸದ್ಯ ದೀಪಾವಳಿ (Deepavali) ಹಬ್ಬದ ಗುಂಗಲ್ಲಿ ಜನರಿದ್ದಾರೆ. ಇದನ್ನೆ ಗುರಿಯಾಗಿಸಿಕೊಂಡಿರುವ ಸೈಬರ್ ದಾಳಿಕೋರರು ಉಚಿತ ದೀಪಾವಳಿ ಉಡುಗೊರೆ ವಂಚನೆಗಳೊಂದಿಗೆ ಬಳಕೆದಾರರನ್ನು ವಂಚಿಸುತ್ತಿದ್ದಾರೆ. ಈ ಬಗ್ಗೆ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಬಳಕೆದಾರರು ಈ ಕುರಿತು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ಕೆಲವು ಚೀನೀ ವೆಬ್‌ಸೈಟ್‌ಗಳು ಉಚಿತ ದೀಪಾವಳಿ ಉಡುಗೊರೆ ಬೇಕಿದ್ದರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂದು ಬಳಕೆದಾರರಿಗೆ ಫಿಶಿಂಗ್ ಲಿಂಕ್‌ಗಳನ್ನು ಕಳುಹಿಸುತ್ತಿರುವುದು ವರದಿಯಾಗಿದೆ. ಆ ಲಿಂಕ್ ಅನ್ನು ತೆರೆದರೆ ಅವರ ಬ್ಯಾಂಕ್ ಖಾತೆ ವಿವರಗಳು, ಫೋನ್ ಸಂಖ್ಯೆಗಳು ಮತ್ತು ಬಳಕೆದಾರರ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ಸೈಬರ್ ದಾಳಿಕೋರರು ಕದಿಯುತ್ತಾರೆ ಎಂದು ಹೇಳಿದೆ. ಈ ರೀತಿಯ ಫೇಕ್ ಮೆಸೇಜ್‌ಗಳು ವಾಟ್ಸ್ಆ್ಯಪ್, ಟೆಲಿಗ್ರಾಮ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದೆ ಎಂಬ ಮಾಹಿತಿಯನ್ನು CERT-In ತಿಳಿಸಿದೆ.
ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚುತ್ತಿರುವ ಸೈಬರ್ ವಂಚನೆ ಘಟನೆಗಳನ್ನು ಗಮನಿಸಿದರೆ, ಅಂತಹ ವಂಚನೆಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ ಅಂತಹ ವಂಚನೆಗಳನ್ನು ನೀವು ಗುರುತಿಸಬಹುದಾದ ಕೆಲವು ತಂತ್ರಗಳಿವೆ. ಅಪರಿಚಿತ ವ್ಯಕ್ತಿ ಅಥವಾ ಸಂಖ್ಯೆಯಿಂದ ಸ್ವೀಕರಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬಾರದು. ಕೆಲವು ಮೆಸೇಜ್‌ಗಳು ಉಚಿತ ರೀಚಾರ್ಜ್, ಅನ್‌ಲಿಮಿಟೆಡ್, ಹಣ ಬಹುಮಾನ ಬಂದಿರುವ ಬಗ್ಗೆ ಭರವಸೆ ನೀಡಿ, ಮೆಸೇಜ್ ಅನ್ನು 10 ಜನರಿಗೆ ಫಾರ್ವರ್ಡ್ ಮಾಡಿ ಎಂದು ಹೇಳುತ್ತವೆ. ಆದ್ದರಿಂದ ಮೆಸೇಜ್‌ಗಳನ್ನು ಓದುವ ಬದಲು ಡಿಲೀಟ್ ಮಾಡುವುದು ಉತ್ತಮ.
ಸಾಮಾನ್ಯವಾಗಿ ಈ ರೀತಿಯ ಹೆಚ್ಚಿನ ಫೇಕ್ ಮೆಸೇಜ್‌ಗಳಲ್ಲಿ ಸ್ಪೆಲ್ಲಿಂಗ್ ದೋಷಗಳಿರುತ್ತವೆ. ನಿಜವಾದ ಸುದ್ದುಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫಾರ್ವರ್ಡ್ ಮಾಡಲಾದ ಫೇಕ್ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರ ವಹಿಸಿ ಓದಿ.
ಅಧಿಕೃತವಾಗಿ ಪ್ರಕಟಿಸಲಾದ ಮೆಸೇಜ್ ಸಾಮಾನ್ಯವಾಗಿ ಲಿಂಕ್ ಹೊಂದಿರುವುದಿಲ್ಲ. ಆದರೆ ಫೇಕ್ ಮೆಸೇಜ್‌ಗಳು ಲಿಂಕ್ ಅನ್ನು ಹೊಂದಿರುತ್ತವೆ. ಉದಾಹರಣೆ ಬಿಎಸ್‌ಎನ್‌ಎಲ್ ಕುರಿತ ಅನ್‌ಲಿಮಿಟೆಡ್ ಡೇಟಾ ಮತ್ತು ವಾಯ್ಸ್ ಕರೆ ಕುರಿತ ಫೇಕ್ ಮೆಸೇಜ್ http://www.bsni.in/ ಲಿಂಕ್ ಅನ್ನು ಹೊಂದಿದೆ. ಯುಆರ್‌ಎಲ್ ಗಮನಿಸಿ. ಇಂತಹ ತಪ್ಪು ಯುಆರ್‌ಎಲ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ ಹಾಗೂ ಫಾರ್ವರ್ಡ್ ಸಹ ಮಾಡದಿರಿ.