Google Doodle: ಸ್ಲೈಡ್​ಶೋ ಡೂಡಲ್ ಮೂಲಕ ಮಹಿಳಾ ದಿನದ ಶುಭಾಶಯ ಕೋರಿದ ಗೂಗಲ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 08, 2022 | 7:04 AM

International Womens Day: ಗೃಹಿಣಿಯರಿಂದ ವಿಜ್ಞಾನಿಗಳವರೆಗೆ ಸಮಾಜದಲ್ಲಿ ಮಹಿಳೆಯರು ನಿರ್ವಹಿಸುವ ವಿವಿಧ ಪಾತ್ರಗಳನ್ನು ಈ ಆನಿಮೇಟೆಡ್ ವಿಡಿಯೊ ವಿವರಿಸುತ್ತದೆ.

Google Doodle: ಸ್ಲೈಡ್​ಶೋ ಡೂಡಲ್ ಮೂಲಕ ಮಹಿಳಾ ದಿನದ ಶುಭಾಶಯ ಕೋರಿದ ಗೂಗಲ್
ಗೂಗಲ್ ಹೊರತಂದಿರುವ ಮಹಿಳಾ ದಿನಾಚರಣೆ ಡೂಡಲ್
Follow us on

ಬೆಂಗಳೂರು: ಸರ್ಚ್​ ಎಂಜಿನ್ ದೈತ್ಯ ಸಂಸ್ಥೆ ಗೂಗಲ್ ಅಂತರರಾಷ್ಟ್ರೀಯ ಮಹಿಳಾ ದಿನದ (International Womens Day) ಪ್ರಯುಕ್ತ ವಿಶೇಷ ಡೂಡಲ್​ (Google Doodle) ಹೊರತಂದಿದೆ. ಗೃಹಿಣಿಯರಿಂದ ವಿಜ್ಞಾನಿಗಳವರೆಗೆ ಸಮಾಜದಲ್ಲಿ ಮಹಿಳೆಯರು ನಿರ್ವಹಿಸುವ ವಿವಿಧ ಪಾತ್ರಗಳನ್ನು ಈ ಆನಿಮೇಟೆಡ್ ವಿಡಿಯೊ ವಿವರಿಸುತ್ತದೆ. ಒಬ್ಬ ಯುವ ತಾಯಿ ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡುತ್ತಲೇ ಮಗುವನ್ನು ಗಮನಿಸುವ ದೃಶ್ಯದೊಂದಿಗೆ ವಿಡಿಯೊ ಆರಂಭವಾಗುತ್ತದೆ. ಒಬ್ಬ ಮಹಿಳೆ ಗಿಡಗಳಿಗೆ ನೀರು ಹಾಕುತ್ತಿದ್ದರೆ ಮತ್ತೋರ್ವ ಮಹಿಳೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಿರುತ್ತಾರೆ. ಹೀಗೇ ಇನ್ನೂ ಎಷ್ಟೋ ಮಹಿಳೆಯರು ಏನೇನೋ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಡೂಡಲ್ ಕಲಾ ನಿರ್ದೇಶಕ ತೊಕಾ ಮಯರ್​ ಅವರು ಇಂದಿನ ಡೂಡಲ್​ಗಾಗಿ ಚಿತ್ರಗಳನ್ನು ಬರೆದಿದ್ದಾರೆ.

ಪ್ರತಿ ವರ್ಷವು ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ನಡೆಯುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಮಹಿಳಾ ದಿನಾಚರಣೆಯ ಉದ್ದೇಶ. 2022ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ವಿಶ್ವಸಂಸ್ಥೆಯ ‘ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ’ (gender equality today for a sustainable tomorrow) ಎಂಬ ಆಶಯವನ್ನು ಇರಿಸಿಕೊಂಡಿದೆ.

‘ಮನೆಯಿಂದಲೇ ಕೆಲಸ ಮಾಡುತ್ತಿರುವ ತಾಯಿಯಿಂದ ಹಿಡಿದು ಮುಂದಿನ ತಲೆಮಾರಿಗೆ ರಿಪೇರಿ ಕೌಶಲ ಹೇಳಿಕೊಡುತ್ತಿರುವ ಮೋಟಾರ್ ಸೈಕಲ್ ಮೆಕ್ಯಾನಿಕ್​ವರೆಗೆ ಮಹಿಳೆಯರ ಬದುಕನ್ನು ಇಂದಿನ ಡೂಡಲ್ ಕಟ್ಟಿಕೊಡುತ್ತದೆ. ಮಹಿಳೆಯರು ಹೇಗೆ ತಮ್ಮನ್ನು, ತಮ್ಮ ಕುಟುಂಬಗಳನ್ನು ಮತ್ತು ತಮ್ಮ ಸಮುದಾಯಗಳನ್ನು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಡೂಡಲ್ ಬಿಂಬಿಸಲು ಯತ್ನಿಸಿದೆ. ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು’ ಎಂದು ಗೂಗಲ್ ತನ್ನ ಡೂಡಲ್ ಪೇಜ್​ನಲ್ಲಿ ಹೇಳಿದೆ.

ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆಯನ್ನು ಗುರುತಿಸಿ, ಸಂಭ್ರಮಿಸಲು ಮತ್ತು ಗಮನ ಸೆಳೆಯಲು 1911ರಿಂದ ವಿಶ್ವ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಲಿಂಗ ಅಸಮಾನತೆಯ ತೊಡೆದು ಹಾಕುವ ಪ್ರಯತ್ನಗಳ ಭಾಗವಾಗಿಯೂ ಮಹಿಳಾ ದಿನಾಚರಣೆಯನ್ನು ವಿಶ್ವದ ಹಲವು ದೇಶಗಳು ಗುರುತಿಸಿವೆ.

ಮಹಿಳಾ ದಿನಾಚರಣೆಯ ಇತಿಹಾಸ

1975ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ಮಾರ್ಚ್​ 8 ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆಗೆ ತಂದಿತು. ಅದರೆ. 1908ರ ಫೆಬ್ರವರಿಯಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗಿತ್ತು.

1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ದುಡಿಯುವ ಮಹಿಳೆಯರು ಅವರ ಹಕ್ಕಿನ ಪರವಾಗಿ ಧ್ವನಿಯೆತ್ತಿದ್ದರು ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಿ ವೇತನದ ಶ್ರೇಣಿಯನ್ನು ಹೆಚ್ಚಿಸಬೇಕು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಮಹಿಳೆಯರ ಧ್ವನಿ ಅಂದಿನ ಸರ್ಕಾರದ ಕಿವಿಗೆ ಬಿದ್ದಿತ್ತು. ನಂತರ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ 1909 ರಲ್ಲಿ ಫೆ.28ರಂದು ಮಹಿಳಾ ದಿನವನ್ನಾಗಿ ಘೋಷಿಸಿತು. 1917 ರಲ್ಲಿ ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಮಹಿಳೆಯರು ಆಹಾರಕ್ಕಾಗಿ ಮುಷ್ಕರ ನಡೆಸಿದ್ದರು. ಅದಾಗಿ ಕೆಲವು ದಿನಗಳ ನಂತರ ಚಕ್ರವರ್ತಿ ನಿಕೋಲಸ್ ರಾಜೀನಾಮೆ ನೀಡಿದರು. ಈ ವೇಳೆ ಮಹಿಳೆಯರು ಮತದಾನದ ಹಕ್ಕನ್ನು ಪಡೆದರು. ಇದರ ಹಿನ್ನಲೆಯಲ್ಲಿ ಯುರೋಪ್‌ನಲ್ಲಿ ಮಹಿಳೆಯರು ಕೆಲವು ದಿನಗಳ ನಂತರ ಮಾರ್ಚ್ 8 ರಂದು ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಲು ರಾಲಿಗಳನ್ನು ನಡೆಸಿದರು. ಇದೇ ಕಾರಣಕ್ಕಾಗಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಪ್ರಾರಂಭಿಸಲಾಯಿತು. ನಂತರ 1975 ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲು ಅಧಿಕೃತವಾಗಿ ಘೋಷಣೆ ಮಾಡಿತು. ಇದರಿಂದ ಯುರೋಪ್​ನಲ್ಲಿ ಮಹಿಳಾ ದಿನಾಚರಣೆ ಒಂದು ಮಹತ್ವದ ದಿನವಾಗಿದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆ ವಿಶೇಷ: ಕಾನ್ಫಿಡೆನ್ಸ್​ ಇದ್ರೆ ಮಾರ್ಗ ಸಿಗುತ್ತೆ; ನಿರ್ದೇಶಕಿ ರಿಷಿಕಾ ಶರ್ಮಾ ಮಾತು

ಇದನ್ನೂ ಓದಿ: International Womens Day: ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು? ಇಲ್ಲಿದೆ ಇತಿಹಾಸ