ಮೆಸೇಜಿಂಗ್ ಅಪ್ಲಿಕೇಶನ್ಗಳ ಪೈಕಿ ವಿಶ್ವದಲ್ಲೇ ಮುಂಚೂಣಿ ಸ್ಥಾನದಲ್ಲಿರುವ ವಾಟ್ಸ್‌ಆ್ಯಪ್ (Whatsapp) ತನ್ನ ಬಳಕೆದಾರರಿಗಾಗಿ ವಿನೂತನ ಸೌಲಭ್ಯಗಳನ್ನು (Features) ಪರಿಚಯಿಸುತ್ತಲೇ ಇರುತ್ತದೆ. ಕಾಲ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಜಾಗತಿಕ ಸಮುದಾಯವನ್ನು ತನ್ನ ತೆಕ್ಕೆಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡಿರುವ ವಾಟ್ಸ್‌ಆ್ಯಪ್ ಆಧುನಿಕ ಸೌಲಭ್ಯಗಳನ್ನು ಪರಿಚಯಿಸುವ ಜತೆಗೆ ತನ್ನ ಬಳಕೆದಾರರ ಗೌಪತ್ಯೆ ಕಾಪಾಡಿಕೊಳ್ಳುವುದಕ್ಕೂ ಹೆಚ್ಚಿನ ಮಹತ್ವ ನೀಡುವುದಾಗಿ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ. ಪ್ರಸ್ತುತ ಫೇಸ್ಬುಕ್ ಒಡೆತನದಲ್ಲಿರುವ ಈ ಸಂಸ್ಥೆ ಕೆಲವೇ ದಿನಗಳಲ್ಲಿ ಲಾಗೌಟ್ ಸೌಲಭ್ಯ ಪರಿಚಯಿಸುವುದಾಗಿ ತಿಳಿಸಿದೆ. ವಾಟ್ಸ್‌ಆ್ಯಪ್ ಮುಂಚಿನಿಂದಲೂ ನೀಡುತ್ತಾ ಬಂದ ಪ್ರಮುಖ ಸೌಲಭ್ಯಗಳಲ್ಲಿ ಒಂದು ಬ್ಲಾಕ್ (Block) ಮಾಡುವ ಅವಕಾಶ. ಯಾರಾದರೂ ಅನಗತ್ಯ ಮೆಸೇಜುಗಳನ್ನು ಕಳುಹಿಸುತ್ತಿದ್ದರೆ, ಕಿರಿಕಿರಿ ಮಾಡುತ್ತಿದ್ದರೆ ಅವರ ಮೆಸೇಜು ನಮಗೆ ತಲುಪದಂತೆ ಬ್ಲಾಕ್ ಮಾಡಬಹುದು ಅಥವಾ ಅವರ ನಂಬರ್ ರಿಪೋರ್ಟ್ (Report) ಮಾಡಬಹುದು. ಆದರೆ, ಇದರಲ್ಲೂ ಗೌಪ್ಯತೆಗೆ (Privacy) ಒತ್ತು ನೀಡುವ ವಾಟ್ಸ್‌ಆ್ಯಪ್ ಬ್ಲಾಕ್ ಮಾಡಿದ ಸೂಚನೆಯನ್ನು ನೀಡುವುದಿಲ್ಲ. ಹೀಗಾಗಿ ಯಾರಾದರೂ ಬ್ಲಾಕ್ ಮಾಡಿದ್ದಾರಾ ಎಂದು ತಿಳಿಯುವುದು ಅಷ್ಟು ಸುಲಭವಿಲ್ಲ. ಹೀಗಿದ್ದರೂ ಕೆಲವು ಸುಳಿವುಗಳ ಮೂಲಕ ನಿಮ್ಮ ನಂಬರ್ ಅನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೋ, ಇಲ್ಲವೋ ಎಂದು ತಿಳಿಯುವುದು ಸಾಧ್ಯವಿದೆ.
ಸಾಧಾರಣವಾಗಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದರೆ ನಿಮಗೆ ಅವರ ಫೋಟೋ, ಸ್ಟೇಟಸ್ ಏನೂ ಕಾಣುವುದಿಲ್ಲ. ಹಾಗಂತ ಫೋಟೋ ಕಂಡಿಲ್ಲವೆಂದ ಮಾತ್ರಕ್ಕೆ, ಸ್ಟೇಟಸ್ ತೋರಿಲ್ಲವೆಂದ ಮಾತ್ರಕ್ಕೆ ಬ್ಲಾಕ್ ಆಗಿದ್ದೀರೆಂದು ಭಾವಿಸಲಾಗುವುದಿಲ್ಲ, ಏಕೆಂದರೆ, ಎಷ್ಟೋ ಜನ ವಾಟ್ಸ್ಆ್ಯಪ್ನಲ್ಲಿ ತಮ್ಮ ಫೋಟೋ ಡಿಲೀಟ್ ಮಾಡಿರುತ್ತಾರೆ, ಸ್ಟೇಟಸ್ ಹಾಕುವ ಆಯ್ಕೆಯನ್ನು ಬಳಸುವುದೇ ಇಲ್ಲ.
ಇದಲ್ಲದೇ ಯಾರಿಗಾದರೂ ಮೆಸೇಜ್ ಕಳುಹಿಸಿದಾಗ ಅವರ ಫೋಟೋ ಕಾಣಿಸದೇ, ಆನ್ಲೈನ್ ಅಥವಾ ಲಾಸ್ಟ್ ಸೀನ್ ವಿವರ ತೋರಿಸದೇ ಸಿಂಗಲ್ ಟಿಕ್ ಬಂದರೆ ಆಗಲೂ ಬ್ಲಾಕ್ ಮಾಡಿದ್ದಾರೆಂದು ಭಾವಿಸಲಾಗುತ್ತದೆ. ವಾಟ್ಸ್ಆ್ಯಪ್ನಲ್ಲಿ ಡಬಲ್ ಟಿಕ್ ಬಂದರೆ ಮಾತ್ರ ಮೆಸೇಜ್ ತಲುಪಿದೆ ಎಂದು ಅರ್ಥವಾದ್ದರಿಂದ ಬ್ಲಾಕ್ ಮಾಡಿದ್ದಾಗ ಡಬಲ್ ಟಿಕ್ ಬರುವುದಿಲ್ಲ. ಆದರೆ, ಎಷ್ಟೋ ಸಂದರ್ಭಗಳಲ್ಲಿ ಕೆಲವರು ಅನೇಕ ದಿನ ಆನ್ಲೈನ್ಗೆ ಬಾರದೇ ಇರುವುದರಿಂದ ಬ್ಲಾಕ್ ಮಾಡಿದ್ದರೆ ಎಂದು ಅಂದುಕೊಳ್ಳುವುದು ಗೊಂದಲಕ್ಕೆ ಕಾರಣವಾಗಿಬಿಡುತ್ತದೆ.
ಆದರೆ, ಈ ಎಲ್ಲಾ ಸೂಚನೆಗಳ ಜತೆಗೆ ಇನ್ನೊಂದು ವಿಚಾರವನ್ನೂ ಗಮನಿಸಿದರೆ ನಿಮ್ಮ ನಂಬರ್ ಬ್ಲಾಕ್ ಆಗಿದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗುತ್ತದೆ. ಯಾರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂಬ ಅನುಮಾನವಿರುತ್ತದೋ ಅವರಿಗೆ ವಿಡಿಯೋ ಅಥವಾ ವಾಯ್ಸ್ ಕಾಲ್ ಮಾಡಲು ಪ್ರಯತ್ನಿಸಿದಾಗ ಅದು ಕನೆಕ್ಟ್ ಆಗಿಲ್ಲವೆಂದಾದರೆ ನಿಮ್ಮನ್ನು ಬ್ಲಾಕ್ ಮಾಡಲಾಗಿದೆ ಎಂದೇ ಅರ್ಥ. ಆದರೆ, ಅದ್ಯ ಈ ಸೌಲಭ್ಯ ಕೆಲವೆಡೆ ಮಾತ್ರ ಲಭ್ಯವಿದೆ. ಹೀಗಾಗಿ ಈ ಹಿಂದಿನ ವರ್ಷನ್ನಲ್ಲಿ ಇರುವವರು ಬ್ಲಾಕ್ ಆದ ನಂಬರ್ಗೆ ಕಾಲ್ ಮಾಡಿದರೂ ಅದು ಮೊದಲಿನಂತೆಯೇ ರಿಂಗ್ ಆಗುತ್ತದೆ. ಒಂದುವೇಳೆ, ಪ್ರೊಫೈಲ್ ಪಿಕ್ಚರ್ ಕಾಣಲಿಲ್ಲ, ಆನ್ಲೈನ್ ಅಥವಾ ಲಾಸ್ಟ್ ಸೀನ್ ಕಾಣುವುದಿಲ್ಲ, ಸಿಂಗಲ್ ಟಿಕ್ ಬರುತ್ತದೆ ಜತೆಗೆ, ಕಾಲ್ ಕೂಡಾ ಕನೆಕ್ಟ್ ಆಗುವುದಿಲ್ಲ ಎಂದಾದಲ್ಲಿ ನಿಮ್ಮ ನಂಬರ್ ಬ್ಲಾಕ್ ಆಗಿದೆ ಎಂದೇ ಅರ್ಥ. ಅಂದಹಾಗೆ, ಇದು ಬ್ಲಾಕ್ ಆಗಿರುವುದನ್ನು ಕಂಡುಕೊಳ್ಳಲು ಮಾರ್ಗವೇ ವಿನಃ ಯಾವ ಕಾರಣಕ್ಕೂ ವಾಟ್ಸ್‌ಆ್ಯಪ್ ಸಂಸ್ಥೆ ಬ್ಲಾಕ್ ಮಾಡಿದ ಬಗ್ಗೆ ಮಾಹಿತಿಯನ್ನಾಗಲೀ, ನೇರ ಸೂಚನೆಯನ್ನಾಗಲೀ ನೀಡುವುದಿಲ್ಲ.
Whatsapp ನಲ್ಲಿ ಡಿಲೀಟ್ ಆದ ಮೆಸೆಜ್ ನೋಡುವುದು ಮತ್ತಷ್ಟು ಸುಲಭ: ಈ ಟ್ರಿಕ್ ಬಳಸಿ
Published On - 1:49 pm, Mon, 12 July 21