How To: ಪಾಡ್​ಕಾಸ್ಟ್ ಚಾನೆಲ್ ಆರಂಭಿಸುವುದು ಹೇಗೆ? ಅದರಿಂದ ಹಣ ಗಳಿಸಲು ಇರುವ ಅವಕಾಶಗಳೇನು?

|

Updated on: Jul 12, 2021 | 10:19 PM

ದಿನದಿಂದ ದಿನಕ್ಕೆ ಪಾಡ್​ಕಾಸ್ಟ್​ ಬಗ್ಗೆ ಹೆಚ್ಚು ಜನರು ಒಲವು ತೋರಿಸುತ್ತಿದ್ದಾರೆ. ಡಿಜಿಟಲ್​ ಸಂತೆಯಲ್ಲಿ ಧ್ಯಾನಕ್ಕೆ ಕುಳಿತವರಂತೆ ಒಂದಿಷ್ಟು ಜನರು ಶ್ರದ್ಧೆಯಿಂದ ಪಾಡ್​ಕಾಸ್ಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

How To: ಪಾಡ್​ಕಾಸ್ಟ್ ಚಾನೆಲ್ ಆರಂಭಿಸುವುದು ಹೇಗೆ? ಅದರಿಂದ ಹಣ ಗಳಿಸಲು ಇರುವ ಅವಕಾಶಗಳೇನು?
ಪಾಡ್​ಕಾಸ್ಟ್​
Follow us on

ಹೇಳಿಕೇಳಿ ಇದು ಡಿಜಿಟಲ್ ಜಮಾನ. ಡಿಜಿಟಲ್ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಡಿಜಿಟಲ್ ಜಗತ್ತು ಹಲವು ಹಂತಗಳಲ್ಲಿ ವಿಕಾಸವಾಗಿರುವುದು ಗಮನಕ್ಕೆ ಬರುತ್ತದೆ. ಒಂದು ಕಾಲದಲ್ಲಿ ಬ್ಲಾಗ್​ ಜನಪ್ರಿಯವಾಗಿತ್ತು. ಈಗ ಸೋಷಿಯಲ್ ಮೀಡಿಯಾಗಳು ಎಲ್ಲಕ್ಕೂ ಪರ್ಯಾಯ ಎನಿಸಿಕೊಂಡಿದೆ. ಇದರ ನಡುನಡುವೆ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ಷೇತ್ರ ಪಾಡ್​ಕಾಸ್ಟಿಂಗ್.​ ದಿನದಿಂದ ದಿನಕ್ಕೆ ಪಾಡ್​ಕಾಸ್ಟ್​ ಬಗ್ಗೆ ಹೆಚ್ಚು ಜನರು ಒಲವು ತೋರಿಸುತ್ತಿದ್ದಾರೆ. ಡಿಜಿಟಲ್​ ಸಂತೆಯಲ್ಲಿ ಧ್ಯಾನಕ್ಕೆ ಕುಳಿತವರಂತೆ ಒಂದಿಷ್ಟು ಜನರು ಶ್ರದ್ಧೆಯಿಂದ ಪಾಡ್​ಕಾಸ್ಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ದೊಡ್ಡಮಟ್ಟದಲ್ಲಿ ಬೆಳೆಯಲಿದೆ ಎಂಬ ವಿಶ್ಲೇಷಣೆಗಳು ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಚಾಲ್ತಿಯಲ್ಲಿವೆ.

ನಿಮ್ಮ ಆಲೋಚನೆಗಳನ್ನು ಜಗತ್ತಿನ ಎದುರು ತೆರೆದಿಡಲು ಮಾತು ನಿಮ್ಮ ಸಾಧನವಾಗಿದ್ದರೆ ಖಂಡಿತ ನೀವೂ ಪಾಡ್​ಕಾಸ್ಟ್​ ಶುರು ಮಾಡಬಹುದು. ಇದು ಸುಲಭ, ಅಷ್ಟೇ ಅಲ್ಲ, ಒಂದು ಹಂತದವರೆಗೆ ಉಚಿತವೂ ಹೌದು.

ಪಾಡ್​ಕಾಸ್ಟ್​ ಎಂದರೇನು?
ಮೊಬೈಲ್, ಟ್ಯಾಬ್, ಕಂಪ್ಯೂಟರ್ ಸೇರಿದಂತೆ ಡಿಜಿಟಲ್​ ಸಾಧನಗಳಲ್ಲಿ ಕೇಳುವಂತೆ, ಡೌನ್​ಲೋಡ್ ಮಾಡಿಕೊಳ್ಳುವಂತೆ ಲಭ್ಯವಿರುವ ಆಡಿಯೊ ಫೈಲ್​ಗೆ ಪಾಡ್​ಕಾಸ್ಟ್​ ಎನ್ನುತ್ತಾರೆ. ಇಂಥ ಆಡಿಯೊ ಫೈಲ್​ಗಳನ್ನು ಚಂದಾದಾರಿಗೆ ತಲುಪಿಸುವ ವೇದಿಕೆಗಳನ್ನು ಪಾಡ್​ಕಾಸ್ಟ್​ ಚಾನೆಲ್​ಗಳು ಮತ್ತು ಇಂಥ ಆಡಿಯೊ ಫೈಲ್​ಗಳನ್ನು ಇರಿಸಿಕೊಳ್ಳುವ ಸರ್ವರ್​ ಸೌಲಭ್ಯ ಒದಗಿಸುವ ವೇದಿಕೆಗಳನ್ನು ಪಾಡ್​ಕಾಸ್ಟ್​ ಹೋಸ್ಟಿಂಗ್​ ಸೇವೆ ಎನ್ನುತ್ತಾರೆ.

ಪಾಡ್​ಕಾಸ್ಟ್​ ಮಾಡಲು ಏನೆಲ್ಲಾ ಬೇಕು?
ಇದು ಸಂಪೂರ್ಣ ಧ್ವನಿ ಆಧರಿತ ಸೇವೆ. ಒಂದು ರೀತಿ ರೇಡಿಯೊ ಇದ್ದಂತೆ. ಒಂದೊಳ್ಳೆ ವಿಷಯ ಆರಿಸಿಕೊಂಡು, ನೀವು ಮಾತನಾಡಿ ಆಡಿಯೊ ರೆಕಾರ್ಡ್​ ಮಾಡಬೇಕು. ಆಮೇಲೆ ಅದನ್ನು ತಕ್ಕಮಟ್ಟಿಗೆ ಎಡಿಟ್ ಮಾಡಿ, ಪಾಡ್​ಕಾಸ್ಟ್​ ಹೋಸ್ಟಿಂಗ್​ ಸೇವೆ ಒದಗಿಸುವ ಸರ್ವರ್​ಗಳಿಗೆ ಅಪ್​ಲೋಡ್ ಮಾಡಬೇಕು. ಅಲ್ಲಿಂದ ವಿವಿಧ ಪಾಡ್​ಕಾಸ್ಟ್​ ವೇದಿಕೆಗಳಲ್ಲಿ ಕಾಣಿಸುವಂತೆ ಮಾಡುವ ಮೂಲಕ ಕೇಳುಗರಿಗೆ ತಲುಪಿಸಬೇಕು.

ಆಡಿಯೊ ರೆಕಾರ್ಡಿಂಗ್​ ಮಾಡುವುದು ಹೇಗೆ?
ಪಾಡ್​ಕಾಸ್ಟಿಂಗ್ ಆರಂಭಿಸಲು ಆಡಿಯೊ ರೆಕಾರ್ಡ್​ ಮಾಡುವುದು ಮೊದಲ ಹಂತ. ಇದಕ್ಕೆ ಹೆಚ್ಚೇನು ಖರ್ಚು ಬರುವುದಿಲ್ಲ. ನಿಮ್ಮ ಮೊಬೈಲ್ ಬಳಸಿಯೂ ಆಡಿಯೊ ರೆಕಾರ್ಡ್ ಮಾಡಬಹುದು. ಉತ್ತಮ ಗುಣಮಟ್ಟದ ರೆಕಾರ್ಡಿಂಗ್​ಗಾಗಿ ಯೂನಿಡೈರೆಕ್ಷನಲ್ ಮೈಕ್ ಬಳಸುವುದು ಒಳ್ಳೆಯ ಕ್ರಮ. ಇಂಥ ಮೈಕ್​ಗಳನ್ನು ಕಂಪ್ಯೂಟರ್​ ಅಥವಾ ಲ್ಯಾಪ್​ಟಾಪ್​ಗೆ ಕನೆಕ್ಟ್ ಮಾಡಿ ಅಡಾಸಿಟಿಯಂಥ ಸಾಫ್ಟ್​ವೇರ್​ಗಳ ಮೂಲಕ ನೇರವಾಗಿ ರೆಕಾರ್ಡ್​ ಮಾಡಬಹುದು. ಅಡಾಸಿಟಿ ಉಚಿತ ಸಾಫ್ಟ್​ವೇರ್ ಆಗಿದ್ದು, ಸಾಕಷ್ಟು ಎಡಿಟ್​ ಆಯ್ಕೆಗಳನ್ನೂ ನೀಡುತ್ತದೆ. ಮೊಬೈಲ್​ಗಳಲ್ಲಿ ರೆಕಾರ್ಡ್​ ಮಾಡುವವರು ಓಪನ್ ಕ್ಯಾಮೆರಾ ಆ್ಯಪ್ ಬಳಸುವುದು ಒಳಿತು.

ಇದನ್ನೂ ಓದಿ: YouTube: ಯುಟ್ಯೂಬ್​ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?

ಪಾಡ್​ಕಾಸ್ಟ್​​

ಕವರ್​ ಆರ್ಟ್​ ಎಂದರೇನು?
ಪಾಡ್​ಕಾಸ್ಟ್​ ರೆಕಾರ್ಡ್ ಆಗಿ, ಎಡಿಟ್ ಆದ ಮೇಲೆ ಅದನ್ನು ಪಾಡ್​ಕಾಸ್ಟ್​ ವೇದಿಕೆಗಳಿಗೆ ಅಪ್​ಲೋಡ್ ಮಾಡುವಾಗ ಆಡಿಯೊದ ಆಶಯ ಬಿಂಬಿಸುವ ಕವರ್​ ಆರ್ಟ್​ ಬೇಕಾಗುತ್ತದೆ. ಉತ್ತಮ ಕವರ್​ ಆರ್ಟ್​ಗಳು ಶ್ರೋತೃಗಳ ಗಮನ ಸೆಳೆಯಲು ನೆರವಾಗುತ್ತವೆ. www.canva.com ಮೂಲಕ ನೀವು ಕವರ್​ ಆರ್ಟ್​ಗಳನ್ನು ಸುಲಭವಾಗಿ ವಿನ್ಯಾಸ ಮಾಡಬಹುದು.

ಒಂದು ಪಾಡ್​ಕಾಸ್ಟ್​ನಲ್ಲಿ ಏನೆಲ್ಲಾ ಇರುತ್ತದೆ?
ಸಾಮಾನ್ಯವಾಗಿ ಒಂದು ಪಾಡ್​ಕಾಸ್ಟ್​ನಲ್ಲಿ ಅದರ ಶೀರ್ಷಿಕೆ (ಟೀಸರ್), ಇಂಟ್ರೊ ಮ್ಯೂಸಿಕ್, ಸ್ವಾಗತ ಸಂಕೇತ, ಜಾಹೀರಾತು, ಸುದೀರ್ಘ ಮಾತು ಅಥವಾ ಸಂಭಾಷಣೆ, ಪ್ರತಿಕ್ರಿಯೆಗೆ ಆಹ್ವಾನ, ಔಟ್ರೊ ಸಂಗೀತ ಇರುತ್ತದೆ. ಸಾಮಾನ್ಯವಾಗಿ ಇದೇ ಅನುಕ್ರಮದಲ್ಲಿ ಪಾಡ್​ಕಾಸ್ಟ್​ಗಳನ್ನು ರೂಪಿಸಲಾಗುತ್ತದೆ.

ಹಿನ್ನೆಲೆ ಸಂಗೀತಕ್ಕೆ ಏನು ಮಾಡಲಿ?
ಯುಟ್ಯೂಬ್ ಮ್ಯೂಸಿಕ್ ಅಥವಾ ಬೆನ್​ಸೌಂಡ್​ ವೆಬ್​ಸೈಟ್​ನಲ್ಲಿ ಲಭ್ಯವಿರುವ ಉಚಿತ ಮ್ಯೂಸಿಕ್ ನಿಮಗೆ ಪಾಡ್​ಕಾಸ್ಟ್​ ಆರಂಭಿಸಲು ಧಾರಾಳ ಸಾಕಾಗುತ್ತದೆ.

ಪಾಡ್​ಕಾಸ್ಟ್​ ಫೈಲ್ ಸಿದ್ಧವಾಯಿತು, ಮುಂದೇನು?
ನಿಮ್ಮ ಪಾಡ್​ಕಾಸ್ಟ್​ ಫೈಲ್ ಸಿದ್ಧವಾಗಿದ್ದರೆ ಅದನ್ನು ಸೌಂಡ್​ಕ್ಲೌಡ್ ಅಥವಾ ಆ್ಯಂಕರ್ ಎಫ್​ಎಂ ಥರದ ಯಾವುದೇ ಹೋಸ್ಟಿಂಗ್​ ಸರ್ವೀಸ್​ಗೆ ಅಪ್​ಲೋಡ್​ ಮಾಡಿ. ಅಲ್ಲಿಂದ ಸುಲಭವಾಗಿ ಸ್ಪಾಟಿಫೈ, ಆ್ಯಪಲ್ ಪಾಡ್​ಕಾಸ್ಟ್ ಅಥವಾ ಗೂಗಲ್​ ಪಾಡ್​ಕಾಸ್ಟ್​ನಂಥ ಚಾನೆಲ್​ಗಳ ಮೂಲಕ ಕೇಳುಗರಿಗೆ ತಲುಪಿಸಿ.

ಪಾಡ್​ಕಾಸ್ಟ್​ ಮೂಲಕ ಹಣ ಸಂಪಾದಿಸಲು ಸಾಧ್ಯವೇ?
ನೀವು ಅತ್ಯುತ್ತಮ ಕಂಟೆಂಟ್​ ಕೊಟ್ಟು ಸಾವಿರಾರು ಕೇಳುಗರನ್ನು ಸಂಪಾದಿಸಿಕೊಂಡಿರೆ ಪಾಡ್​ಕಾಸ್ಟ್​ ಹಣ ಸಂಪಾದನೆಗೂ ದಾರಿ ಮಾಡಿಕೊಡುತ್ತದೆ. ಜಾಹೀರಾತು, ಪ್ರಾಯೋಜಕತ್ವ, ದೇಣಿಗೆ, ಸಹಯೋಗದ ಮಾರ್ಕೆಟಿಂಗ್, ಆಡಿಯೊ ಪುಸ್ತಕಗಳ ಮಾರಾಟ, ಕ್ರೌಡ್​ ಫಂಡಿಂಗ್ ಮತ್ತು ಸಮಾವೇಶಗಳು ಪಾಡ್​ಕಾಸ್ಟ್​ ಮಾಡುವವರಿಗೆ ಹಣಗಳಿಸುವ ಮೂಲಗಳಾಗಬಲ್ಲವು.

(How To Create and Earn from Podcast)

ಇದನ್ನೂ ಓದಿ: How To: ಗೂಗಲ್ ಫೋಟೋಸ್ ಸ್ಟೋರೇಜ್ ಸಮಸ್ಯೆಯೇ? ಸ್ಪೇಸ್ ಪಡೆಯಲು ಹೀಗೆ ಮಾಡಿ

ಇದನ್ನೂ ಓದಿ: How To: ಆನ್​ಲೈನ್​ ಕ್ಲಾಸ್, ವರ್ಕ್​ ಫ್ರಂ ಜಮಾನದಲ್ಲಿ ಮೊಬೈಲ್ ಡೇಟಾ ಉಳಿತಾಯಕ್ಕೆ 10 ಸೂತ್ರಗಳು

Published On - 10:18 pm, Mon, 12 July 21