ಕಳೆದ ವರ್ಷ ಜಾಗತಿಕವಾಗಿ 187 ಬಾರಿ ಇಂಟರ್ನೆಟ್ ಸಂಪರ್ಕ (Internet Connection) ಸ್ಥಗಿತಗೊಳಿಸಲಾಗಿದೆ. ಅದರಲ್ಲೂ 84 ಬಾರಿ ಇಂಟರ್ನೆಟ್ ಶಟ್ಡೌನ್ ಆಗಿರುವುದು ಭಾರತದಲ್ಲಿ ಎನ್ನುವುದು ಗಮನಾರ್ಹ. ಜತೆಗೆ, ಈ ಪೈಕಿ, ಜಮ್ಮು ಕಾಶ್ಮೀರದಲ್ಲೇ ಅತ್ಯಧಿಕ ಬಾರಿ ಅಂದರೆ, 49 ಸಂದರ್ಭದಲ್ಲಿ ಇಂಟರ್ನೆಟ್ ಸಂಪರ್ಕ ನಿಲ್ಲಿಸಲಾಗಿದೆ ಎಂದು ಅಕ್ಸೆಸ್ ನೌ ವರದಿ ಹೇಳಿದೆ. ಜತೆಗೆ, ಸತತ ಐದನೇ ವರ್ಷ ಭಾರತ ಟಾಪ್ ಸ್ಥಾನದಲ್ಲಿದೆ ಎಂದು ಜಾಗತಿಕವಾಗಿ ಇಂಟರ್ನೆಟ್ ಸೇವೆಗಳ ಸ್ಥಗಿತ, ನಿರ್ಬಂಧ ಕುರಿತು ಪರಿಶೀಲಿಸುವ ಅಕ್ಸೆಸ್ ನೌ ತಿಳಿಸಿದೆ.
ನ್ಯೂಯಾರ್ಕ್ ಮೂಲದ ಅಕ್ಸೆಸ್ ನೌ (Access Now), ಜಾಗತಿಕವಾಗಿ ಇಂಟರ್ನೆಟ್ ಸಂಪರ್ಕ ಕಡಿತವಾದರೆ, ಸರ್ಕಾರ ಮತ್ತು ಇಲಾಖೆಗಳು ಅಧಿಕೃತವಾಗಿ ನಿರ್ಬಂಧ ವಿಧಿಸಿದರೆ ಅದನ್ನು ವರದಿ ಮಾಡುತ್ತದೆ. ಈ ಪೈಕಿ, ಭಾರತದಲ್ಲೇ ಅತ್ಯಧಿಕ ಇಂಟರ್ನೆಟ್ ಶಟ್ಡೌನ್ ವರದಿಯಾಗಿದೆ. ಅಂದರೆ, ಜಮ್ಮು ಕಾಶ್ಮೀರದಲ್ಲಿ ಉಂಟಾಗುವ ಗಲಭೆ ತಡೆಗಟ್ಟಲು ಸರ್ಕಾರ, ಹಲವು ಸಂದರ್ಭದಲ್ಲಿ ಇಂಟರ್ನೆಟ್ ನಿರ್ಬಂಧ ವಿಧಿಸುತ್ತದೆ. ಹೀಗಾಗಿ ಭಾರತ, ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
ಭದ್ರತಾ ಕಾರಣಗಳಿಗೋಸ್ಕರ ಇಂಟರ್ನೆಟ್ ನಿರ್ಬಂಧ ವಿಧಿಸಲಾಗಿದೆ ಎಂದು ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ. ಭಾರತ ಹೊರತುಪಡಿಸಿದರೆ, ಉಕ್ರೇನ್ ಎರಡನೇ ಸ್ಥಾನದಲ್ಲಿದೆ. ರಷ್ಯಾದ ಮಿಲಿಟರಿ ದಾಳಿಯಿಂದಾಗಿ ಅಲ್ಲಿ ಕಳೆದ ವರ್ಷ ಕನಿಷ್ಠ 22 ಬಾರಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಮೂರನೇ ಸ್ಥಾನದಲ್ಲಿ ಇರಾನ್ ಇದ್ದು, ಅಲ್ಲಿ 18 ಬಾರಿ ಇಂಟರ್ನೆಟ್ ಶಟ್ಡೌನ್ ಮಾಡಲಾಗಿದೆ.