Bluesky: ಟ್ವಿಟರ್ಗೆ ಬದಲಿಯಾಗಿ ಬಂತು ಜಾಕ್ ಡೋರ್ಸಿಯ ಬ್ಲೂಸ್ಕೈ- ಏನಿದರ ವಿಶೇಷ?
ಟ್ವಿಟರ್ ಸಹ ಸಂಸ್ಥಾಪಕ, ಮಾಜಿ ಸಿಇಒ ಜಾಕ್ ಡೋರ್ಸಿ ಅವರು, ಆ್ಯಪ್ ಅನ್ನು ಉದ್ಯಮಿ ಎಲಾನ್ ಮಸ್ಕ್ಗೆ ಮಾರಾಟ ಮಾಡಿದ್ದಾರೆ. ಅದಾದ ನಂತರ ಬೇರೆಯದೇ ಯೋಜನೆಯಲ್ಲಿದ್ದ ಜಾಕ್, ಇದೀಗ ಬ್ಲೂಸ್ಕೈ ಎಂಬ ಹೊಸ ಪ್ಲ್ಯಾನ್ ಜತೆಗೆ ಮರಳಿ ಬಂದಿದ್ದಾರೆ. ಏನದು ಬ್ಲೂಸ್ಕೈ?
ಮೈಕ್ರೋ ಬ್ಲಾಗಿಂಗ್ ತಾಣ, ಸಾಮಾಜಿಕ ಮಾಧ್ಯಮ ಲೋಕದಲ್ಲಿ ಕಳೆದ ಆರು ತಿಂಗಳಿನಿಂದ ಟ್ವಿಟರ್(Twitter) ಹಲವು ಬಾರಿ ಸದ್ದು ಮಾಡಿದೆ. ಟ್ವಿಟರ್ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿಯ ಒಡೆತನದಿಂದ ಟ್ವಿಟರ್, ಉದ್ಯಮಿ ಎಲಾನ್ ಮಸ್ಕ್ (Elon Musk) ಪಾಲಾದ ಬಳಿಕ ಅಲ್ಲಿ ಹಲವು ಬದಲಾವಣೆಗಳು ಉಂಟಾಗಿದೆ. ಉದ್ಯೋಗ ಕಡಿತ, ವೆಚ್ಚ ಕಡಿತ, ವಿವಿಧ ತಂಡಗಳ ಪುನರ್ರಚನೆ ಮತ್ತು ಕೆಲವು ಕಡೆ ಕಚೇರಿಯ ಮರುರಚನೆಯಂತಹ ಕೆಲಸ ಎಲಾನ್ ಮಸ್ಕ್ ತೆಕ್ಕೆಗೆ ಬಂದ ಬಳಿಕ ಟ್ವಿಟರ್ನಲ್ಲಿ ನಡೆದಿದೆ. ಜತೆಗೆ, ಬ್ಲೂಟಿಕ್ ಪಡೆದುಕೊಳ್ಳಲು ತಿಂಗಳ ಚಂದಾದರವನ್ನು ಟ್ವಿಟರ್ ಜಾರಿಮಾಡಿದೆ. ಉಳಿದಂತೆ, ಬ್ಲೂಟಿಕ್ ವೆರಿಫಿಕೇಶನ್ ಕ್ರಮದಲ್ಲಿ ಕೂಡ ಟ್ವಿಟರ್ ಹಲವು ಬದಲಾವಣೆ, ಉದ್ಯಮ ಸಂಸ್ಥೆಗಳು, ಬ್ರ್ಯಾಂಡ್ ಮತ್ತು ಸೆಲೆಬ್ರಿಟಿಗಳಿಗೆ ಗೋಲ್ಡನ್ ಟಿಕ್ ಮಾರ್ಕ್ ಕ್ರಮವನ್ನು ಜಾರಿಗೆ ತಂದಿದೆ.
ಜಾಕ್ ಡೋರ್ಸಿ ಮತ್ತು ಬ್ಲೂಸ್ಕೈ
ಆದರೆ ಈಗ ಟ್ವಿಟರ್ನ ಸಹ ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿ(Jack Dorsey), ಟ್ವಿಟರ್ಗೆ ಪರ್ಯಾಯವಾಗಿ ಬ್ಲೂಸ್ಕೈ ಎಂಬ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸಾಮಾಜಿಕ ಮಾಧ್ಯಮ ಲೋಕದಲ್ಲಿ ಮತ್ತೊಂದು ಸುತ್ತಿನ ಸ್ಪರ್ಧೆಗೆ ಮುನ್ನುಡಿ ಬರೆದಿದ್ದಾರೆ. ಟ್ವಿಟರ್ಗೆ ಪರ್ಯಾಯವಾಗಿ, ಅದರದ್ದೇ ಪ್ರತಿರೂಪದಂತಿರುವ ಮತ್ತು ಇನ್ನಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಬ್ಲೂಸ್ಕೈ ಆ್ಯಪ್, ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಐಫೋನ್ ಬಳಕೆದಾರರಿಗೆ ಲಭ್ಯವಾಗುತ್ತಿದೆ.
ಏನಿದು ಬ್ಲೂಸ್ಕೈ?
ಆರಂಭಿಕ ಹಂತದ ಪರೀಕ್ಷಾರ್ಥ ಬಳಕೆಯಲ್ಲಿರುವ ಬ್ಲೂಸ್ಕೈ, ಈಗ ಆಹ್ವಾನಿತರಿಗೆ ಮಾತ್ರ ದೊರೆಯುತ್ತಿದೆ. ಮುಂದಿನ ಹಂತದಲ್ಲಿ ಸಾಮಾನ್ಯ ಬಳಕೆದಾರರಿಗೆ ದೊರೆಯಲಿದೆ. ಫೆಬ್ರವರಿ 17ರಿಂದ ಬ್ಲೂಸ್ಕೈ ಆ್ಯಪ್ 2,000 ಫೋನ್ಗಳಲ್ಲಿ ಇನ್ಸ್ಟಾಲ್ ಆಗಿದ್ದು, ಪರೀಕ್ಷಾರ್ಥ ಬಳಕೆಯಲ್ಲಿದೆ.
ಬ್ಲೂಸ್ಕೈ ವೈಶಿಷ್ಟ್ಯಗಳೇನು?
256 ಅಕ್ಷರ ಮಿತಿ, ಫೋಟೋ ಸಹಿತ ಪೋಸ್ಟ್ ಮಾಡಲು ಅವಕಾಶ, ಸರಳ ವಿನ್ಯಾಸ ಟ್ವಿಟರ್ನಲ್ಲಿ ವಾಟ್ಸ್ ಹ್ಯಾಪನಿಂಗ್ ಎಂದರೆ, ಬ್ಲೂಸ್ಕೈನಲ್ಲಿ ವಾಟ್ಸ್ಆ್ಯಪ್ ಎಂದು ಕಾಣಿಸಿಕೊಳ್ಳುತ್ತದೆ. ಬ್ಲೂಸ್ಕೈನಲ್ಲಿ ಶೇರ್, ಮ್ಯೂಟ್ ಮತ್ತು ಬ್ಲಾಕ್ ಅಕೌಂಟ್ ಆಯ್ಕೆ ಇದೆ. ಅಪ್ಡೇಟ್ಸ್ ಫೀಡ್, ಹೂ ಟು ಫಾಲೋ ಸಲಹೆಗಳು ಬ್ಲೂಸ್ಕೈ ವೈಶಿಷ್ಟ್ಯ ಪ್ರೊಫೈಲ್ ಫೋಟೊ, ಹಿನ್ನೆಲೆ ವಿವರ, ಬಯೋ ಮತ್ತು ಮೆಟ್ರಿಕ್ಸ್ ಆಯ್ಕೆ ಲಭ್ಯ
ಯಾವಾಗ ರೂಪುಗೊಂಡಿದ್ದು ಬ್ಲೂಸ್ಕೈ?
2019ರಲ್ಲಿ ಜಾಕ್ ಡೋರ್ಸಿ ಬ್ಲೂಸ್ಕೈ ಪ್ರಾಜೆಕ್ಟ್ ಅನ್ನು ಆರಂಭಿಸಿದ್ದರು. 2022ರಲ್ಲಿ ಪ್ರತ್ಯೇಕ ಕಂಪನಿಯಾಗಿ ರೂಪುಗೊಂಡಿದ್ದು, ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಟ್ವಿಟರ್ಗೆ ಪರ್ಯಾಯವಾಗಿ ಸಜ್ಜುಗೊಳಿಸುತ್ತಿದ್ದಾರೆ. ಕಳೆದ ವರ್ಷ ಬ್ಲೂಸ್ಕೈಗೆ 13 ಮಿಲಿಯನ್ ಡಾಲರ್ ಮೊತ್ತದ ದೇಣಿಗೆ ದೊರೆತಿದೆ. ಟ್ವಿಟರ್ನಲ್ಲಿ ಕೆಲಸ ಮಾಡಿದ್ದ ಹಲವು ಮಂದಿ ಬ್ಲೂಸ್ಕೈ ಪ್ರಾಜೆಕ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.