‘ಒಳ್ಳೆಯವರಿಗೆ ಕೊಟ್ಟರೆ ಕೆಟ್ಟವರೂ ಬರುತ್ತಾರೆ’- ಕೇಜ್ರಿವಾಲ್ರ ಐಫೋನ್ ಲಾಕ್ ತೆರೆಯಲು ಆ್ಯಪಲ್ ನಿರಾಕರಿಸಲು ಇದು ಕಾರಣ
Arvind Kejriwal, iPhone Unlocking and Apple: ಇಡಿ ಅಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ತಮ್ಮ ಐಫೋನ್ ಅನ್ನು ಅನ್ಲಾಕ್ ಮಾಡಿಕೊಡಲು ನಿರಾಕರಿಸಿದ್ದಾರೆ. ಚುನಾವಣೆಯ ಆಪ್ ತಂತ್ರಗಾರಿಕೆಗಳ ಸೂಕ್ಷ್ಮ ಮಾಹಿತಿ ತಮ್ಮ ಫೋನ್ನಲ್ಲಿ ಇರುವುದರಿಂದ ಪಾಸ್ಕೋಡ್ ಕೊಡಲು ಕೇಜ್ರಿವಾಲ್ ನಿರಾಕರಿಸಿರುವುದು ತಿಳಿದುಬಂದಿದೆ. ಕುತೂಹಲವೆಂದರೆ ಸ್ವತಃ ಆ್ಯಪಲ್ ಕಂಪನಿಯೇ ಈ ಐಫೋನ್ ಅನ್ಲಾಕ್ ಮಾಡಲು ನಿರಾಕರಿಸಿದೆ.
ನವದೆಹಲಿ, ಏಪ್ರಿಲ್ 3: ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಸ್ವಿಚ್ ಆಫ್ ಆಗಿರುವ ತಮ್ಮ ಐಫೋನ್ನ ಲಾಕ್ ತೆರೆಯಲು ಅಥವಾ ಪಾಸ್ಕೋಡ್ ತಿಳಿಸಲು ನಿರಾಕರಿಸಿದ್ದಾರೆ. ಯಾವುದೇ ಪ್ರಕರಣದ ತನಿಖೆ ನಡೆಸುವ ಇಡಿ ಅಧಿಕಾರಿಗಳು ಆರೋಪಿಗಳ ಫೋನ್ ಮತ್ತಿತರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಸಹಜ. ಅಂತೆಯೇ ಲಿಕ್ಕರ್ ಹಗರಣದ (Delhi liquor case) ಅವ್ಯವಹಾರದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED- enforcement directorate), ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ರೇಡ್ ಮಾಡಿದಾಗ, ನಾಲ್ಕು ಮೊಬೈಲ್ ಫೋನ್ ಹಾಗೂ 70,000 ರೂ ನಗದು ಹಣ ಸಿಕ್ಕಿತ್ತು. ಆಗ ದೆಹಲಿ ಸಿಎಂ ತಮ್ಮ ಐಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದರು. ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಎಷ್ಟು ಕೇಳಿದರೂ ಕೇಜ್ರಿವಾಲ್ ತಮ್ಮ ಐಫೋನ್ ಅನ್ಲಾಕ್ ಮಾಡಲು ಒಪ್ಪುತ್ತಿಲ್ಲ. ಐಫೋನ್ ತಯಾರಕ ಸಂಸ್ಥೆ ಆ್ಯಪಲ್ ಕೂಡ ಇಡಿ ಮನವಿಗೆ ಸ್ಪಂದಿಸುತ್ತಿಲ್ಲ. ಬಹಳ ಮಂದಿಗೆ ಇದು ಅಚ್ಚರಿ ಎನಿಸಬಹುದಾದರೂ ಆ್ಯಪಲ್ ಕಂಪನಿಯ ನೀತಿಯನ್ನು ತಿಳಿದವರಿಗೆ ಇದು ಅಚ್ಚರಿ ಅನಿಸುವುದಿಲ್ಲ.
ಕೇಜ್ರಿವಾಲ್ ಐಫೋನ್ ಅನ್ಲಾಕ್ ಮಾಡದೇ ಇರಲು ಏನು ಕಾರಣ?
ಆಮ್ ಆದ್ಮಿಯ ಚುನಾವಣಾ ತಂತ್ರಗಾರಿಕೆಗಳು ಮತ್ತು ಚುನಾವಣಾ ಪೂರ್ವ ಮೈತ್ರಿಗಳ ಮಾಹಿತಿ ತಮ್ಮ ಐಫೋನ್ನಲ್ಲಿ ಇದೆ. ತಾನು ಐಫೋನ್ ಅನ್ಲಾಕ್ ಮಾಡಿದರೆ ಆ ಮಹತ್ವದ ಮಾಹಿತಿಯು ಎದುರಾಳಿ ರಾಜಕೀಯ ಪಕ್ಷಗಳಿಗೆ ತಿಳಿದುಹೋಗಬಹುದು. ಇದು ಅರವಿಂದ್ ಕೇಜ್ರಿವಾಲ್ ಕೊಟ್ಟಿರುವ ಕಾರಣ.
ಇದನ್ನೂ ಓದಿ: ಸುಳ್ಳು ಹೇಳಿ ತಪ್ಪಿಸಿಕೊಳ್ಳಲಾಗದು, ಅತಿಶಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ
ಆ್ಯಪಲ್ ಕಂಪನಿ ಯಾಕೆ ಐಫೋನ್ ಅನ್ಲಾಕ್ ಮಾಡಲು ಒಪ್ಪುತ್ತಿಲ್ಲ?
ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್ಲಾಕ್ ಮಾಡಿಕೊಡಿ ಎಂದು ಇಡಿ ಅಧಿಕಾರಿಗಳು ಮಾಡಿಕೊಂಡ ಮನವಿಯನ್ನು ಅ್ಯಪಲ್ ಸಂಸ್ಥೆ ತಿರಸ್ಕರಿಸಿದೆ ಎನ್ನುವ ಸುದ್ದಿ ಇದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಆ್ಯಪಲ್ ಕಂಪನಿ ತನ್ನ ಐಫೋನ್ ಅನ್ಲಾಕ್ ಮಾಡಲು ಒಪ್ಪಿಲ್ಲ. ಭಯೋತ್ಪಾದನೆಯಂತಹ ಗಂಭೀರ ಅಪರಾಧ ಪ್ರಕರಣಗಳಲ್ಲೂ ಆ್ಯಪಲ್ ಐಫೋನ್ ಪಾಸ್ಕೋಡ್ ಕೊಡಲು ಒಪ್ಪಿಲ್ಲ.
ಐಫೋನ್ನ ವಿಶೇಷತೆ ಎಂದರೆ ಬಳಕೆದಾರರ ಖಾಸಗಿತ್ವದ ರಕ್ಷಣೆ ಇರುವುದು. ಅದನ್ನು ಬಳಸುವ ಗ್ರಾಹಕರಿಗೆ ಅದರ ಸಂಪೂರ್ಣ ನಿಯಂತ್ರಣ ಇರುತ್ತದೆ. ಒಂದು ವೇಳೆ ಒಂದು ಐಫೋನ್ ಅನ್ನು ಅನ್ಲಾಕ್ ಮಾಡಲು ಯತ್ನಿಸಿದರೆ, ಸತತ 10 ವಿಫಲಯತ್ನಗಳಾಗಿ ಹೋದರೆ ಫೋನ್ ಪೂರ್ಣ ಬಂದ್ ಆಗುತ್ತದೆ. ಅದರಲ್ಲಿರುವ ಡಾಟಾ ಎಲ್ಲವೂ ಹೊರಟುಹೋಗುತ್ತದೆ. ಹೀಗಾಗಿ, ಐಫೋನ್ ಅನ್ನು ಹ್ಯಾಕ್ ಮಾಡುವುದು ಕಷ್ಟ.
ಇದನ್ನೂ ಓದಿ: ವಿಮಾನದಲ್ಲಿ ಹೋಗೋವಾಗ ಏರ್‌ಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು: ಮಾಡದಿದ್ದರೆ ಏನಾಗುತ್ತೆ?
ಒಳ್ಳೆಯವರಿಗೆ ಕೊಟ್ಟರೆ ಕೆಟ್ಟವರೂ ಬರುತ್ತಾರೆ…
ಒಂದು ವೇಳೆ ಐಫೋನ್ನ ಮಾಹಿತಿ ಪಡೆಯಲು ಪೊಲೀಸ್, ಇಡಿಯಂತಹ ಒಳ್ಳೆಯ ಜನರಿಗೆ ಅವಕಾಶ ಕೊಡಲು ಹೋದರೆ, ಆಗ ಸೈಬರ್ ಕ್ರಿಮಿನಲ್ಸ್, ಹ್ಯಾಕರ್ಸ್ ಇತ್ಯಾದಿ ಕೆಟ್ಟ ಜನರಿಗೂ ಒಳನುಸುಳಲು ಅವಕಾಶ ಸಿಕ್ಕಂತಾಗುತ್ತದೆ ಎಂಬುದು ಆ್ಯಪಲ್ನ ವಾದ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ