ವಿಶ್ವದಲ್ಲಿ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಈಗಾಗಲೇ ಬಳಕೆದಾರರಿಗೆ ಅನುಕೂಲವಾಗುವಂತೆ ಸಾಕಷ್ಟು ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ ಲಾಗೌಟ್ ಆಯ್ಕೆ ಪರೀಕ್ಷಿಸುತ್ತಿರುವುದಾಗಿ ತಿಳಿಸಿತ್ತು. ಇದರ ನಡುವೆ ಸದ್ಯ ಮತ್ತೊಂದು ಹೊಸ ಫೀಚರ್ ಅನ್ನು ಬಳಕೆದಾರರಿಗೆ ನೀಡಲು ವಿಶ್ವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಮುಂದಾಗಿದೆ.
ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಗ್ರಾಹಕರು ಅತ್ಯುತ್ತಮ ಗುಣಮಟ್ಟದಲ್ಲಿ ಫೋಟೋವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವ ಆಯ್ಕೆ ನೀಡುತ್ತಿದೆ. ಈ ಹೊಸ ಆಯ್ಕೆಯ ಹೆಸರು ಇಮೆಜ್ ಕ್ವಾಲಿಟಿ ಎಂದಾಗಿದ್ದು, ಮೂರು ಆಯ್ಕೆಯಲ್ಲಿ ಸಿಗಲಿದೆ. ಸಾಮಾನ್ಯವಾಗಿ ಬಳಕೆದಾರರು ಈಗ ವಾಟ್ಸ್ಆ್ಯಪ್ನಲ್ಲಿ ಉತ್ತಮ ಕ್ವಾಲಿಟಿ ಇರುವ ಫೋಟೋವನ್ನು ಯಾರೊಂದಿಗಾದರೂ ಹಂಚಿಕೊಂಡರೆ ಅವರು ಡೌನ್ಲೋಡ್ ಮಾಡುವಾಗ ಆ ಫೋಟೋದ ನೈಜ ಗುಣಮಟ್ಟ ಕಡಿಮೆ ಆಗುತ್ತದೆ. ಈ ತೊಂದರೆಯನ್ನು ಹೋಗಲಾಡಿಸಲು ವಾಟ್ಸ್ಆ್ಯಪ್ ಹೊಸ ಆಯ್ಕೆಯನ್ನು ಪರಿಚಯಿಸುತ್ತಿದೆ.
ಇಮೆಜ್ ಕ್ವಾಲಿಟಿ ಅಪ್ಡೇಟ್ನಲ್ಲಿ ಆಟೋ, ಬೆಸ್ಟ್ ಕ್ವಾಲಿಟಿ ಮತ್ತು ಡೇಟಾ ಸೇವರ್ ಎಂಬ ಮೂರು ಆಯ್ಕೆ ನೀಡಲಾಗಿದೆ. ಆಟೋ ಆಯ್ಕೆಯಲ್ಲಿ ನೀವು ಫೋಟೋ ಹಂಚಿಕೊಂಡರೆ ಸಾಧಾರಣ ಗುಣಮಟ್ಟದ ಫೋಟೋ ಸೆಂಡ್ ಆಗುತ್ತದೆ. ನಿಮ್ಮಲ್ಲಿರುವ ಅತ್ಯುತ್ತಮ ಗುಣಮಟ್ಟದ ಫೋಟೋವನ್ನು ಬೆಸ್ಟ್ ಕ್ವಾಲಿಟಿ ಆಯ್ಕೆಯಲ್ಲಿ ಕಳುಹಿಸಿದರೆ ಅದೇ ಹೈ ಕ್ವಾಲಿಟಿಯಲ್ಲಿ ಅವರೂ ಡೌನ್ಲೋಡ್ ಮಾಡಬಹುದಾಗಿದೆ. ವಾಟ್ಸ್ಆ್ಯಪ್ ನಿಮ್ಮ ಫೋಟೋದ ಕ್ವಾಲಿಟಿಯನ್ನು ಕಡಿಮೆ ಮಾಡುವುದಿಲ್ಲ. ಇನ್ನು ಡೇಟಾ ಸೇವರ್ ಆಯ್ಕೆಯಲ್ಲಿ ನೀವು ಇಮೇಜ್ ಹಂಚಿಕೊಂಡರೆ ಹೆಚ್ಚಿನ ಡೇಟಾ ಖರ್ಚಾಗದಂತೆ ನೋಡಿಕೊಳ್ಳುತ್ತದೆ.
ಸದ್ಯಕ್ಕೆ ಈ ಹೊಸ ಅಪ್ಡೇಟ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಮಾತ್ರ ನೀಡಲಾಗುತ್ತಿದೆ. ಐಒಎಸ್ ಬಳಕೆದಾರರಿಗೆ ಯಾವಾಗ ಇದು ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಇನ್ನು ಇದೇ ಇಮೆಜ್ ಕ್ವಾಲಿಟಿ ಅಪ್ಡೇಟ್ ರೀತಿಯಲ್ಲಿ ವಿಡಿಯೋಗೂ ಮೂರು ಆಯ್ಕೆ ನೀಡುವ ಬಗ್ಗೆ ವಾಟ್ಸ್ಆ್ಯಪ್ ಚಿಂತಿಸುತ್ತಿದೆಯಂತೆ.
ಇದನ್ನೂ ಓದಿ: GB WhatsApp: ಜಿಬಿ ವಾಟ್ಸಾಪ್ ಎಂದರೇನು? ಇದನ್ನು ಬಳಸುವುದು ಅಪಾಯಕಾರಿ ಏಕೆ? ಇಲ್ಲಿದೆ ವಿವರ
(Here is the Facebook owned messaging app WhatsApp latest update of features about image quality)