ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಕಂಪನಿ ಈಗ ಹೇಳಹೆಸರಿಲ್ಲದಂತಾಗಿದೆ. ನೋಕಿಯಾ (Nokia) ಕಂಪನಿಯ ಸ್ಮಾರ್ಟ್ಫೋನ್ಗಳು ಇಂದು ಮಾರುಕಟ್ಟೆಯಲ್ಲಿ ದೊಡ್ಟ ಮಟ್ಟದ ಯಶಸ್ಸು ಕೂಡ ಸಾಧಿಸುತ್ತಿಲ್ಲ. ಶವೋಮಿ, ಸ್ಯಾಮ್ಸಂಗ್, ರಿಯಲ್ ಮಿ, ಒನ್ಪ್ಲಸ್ (OnePlus) ನಂತರ ಇತರೆ ಬ್ರ್ಯಾಂಡ್ಗಳ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಪಾತಾಳಕ್ಕೆ ಕುಸಿದಿದೆ. ಆಗಾಗ್ಗೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದ್ದರೂ ಇದಕ್ಕೆ ಬೇಡಿಕೆಯಿಲ್ಲ. ಹೀಗಿರುವಾಗ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ನೋಕಿಯಾ ನೂತನ ಬದಲಾವಣೆಗೆ ಮುಂದಾಗಿದೆ. ಕಳೆದ 60 ವರ್ಷದಲ್ಲಿ ಇದೇ ಮೊದಲ ಬಾರಿಗೆ ನೋಕಿಯಾ ತನ್ನ ಸಾಂಪ್ರದಾಯಿಕ ಲೋಗೋವನ್ನು (Nokia Logo) ಬದಲಾವಣೆ ಮಾಡಿದೆ.
ಆರು ದಶಕಗಳ ಕಾಲ ಒಂದೇ ಲೋಗೋವನ್ನು ಉಳಿಸಿಕೊಂಡು ಬಂದಿದ್ದ ನೋಕಿಯಾ ಇದೀಗ ಹೊಸ ಕಾರ್ಯತಂತ್ರದ ಸೂಚನೆ ನೀಡಿದೆ. ಹೊಸ ಲೋಗೋದಲ್ಲಿ ‘ನೋಕಿಯಾ’ ಪದದ ಐದು ಅಕ್ಷರಗಳು ಐದು ವಿಭಿನ್ನ ಶೈಲಿಯಲ್ಲಿದೆ. ಈ ಹಿಂದೆ ನೀಲಿ ಬಣ್ಣದಲ್ಲಿದ್ದ ನೋಕಿಯಾ ಅಕ್ಷರಗಳಿಗೆ ಇದೀಗ ಹೊಸ ರೂಪ ನೀಡಲಾಗಿದ್ದು ವಿನೂತನ ಡಿಸೈನ್‌ನ 5 ಫಾಂಟ್‌ನಲ್ಲಿ ಬಣ್ಣ ಬಣ್ಣದಲ್ಲಿ ನೋಕಿಯಾ ಪದದ ಅಕ್ಷರಗಳು ಲೋಗೋದಲ್ಲಿ ಕಂಗೊಳಿಸುತ್ತಿವೆ.
Tech Tips: ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ಗೆ ಹಾಕಿದಾಗ ಬಿಸಿಯಾಗುತ್ತಾ?: ನಿರ್ಲಕ್ಷಿಸದಿರಿ
ಈ ಬಗ್ಗೆ ಮಾತನಾಡಿರುವ ನೋಕಿಯಾದ ಸಿಇಒ ಪೆಕ್ಕಾ ಲುಂಡ್ಮಾರ್ಕ್, ”ಹಳೆಯ ಲೋಗೋದ ವಿಶಿಷ್ಟ ನೀಲಿ ಬಣ್ಣವನ್ನು ಬಳಕೆಯ ಅನುಗುಣವಾಗಿ ಬಣ್ಣಗಳ ಶ್ರೇಣಿಗೆ ಕೈಬಿಡಲಾಗಿದೆ. ಈ ಹಿಂದೆ ಸ್ಮಾರ್ಟ್ಫೋನ್ಗಳಿಗೆ ಸಂಬಂಧಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನದ ಸಂಸ್ಥೆಯಾಗಿದೆ. 2020ರ ಬಿಕ್ಕಟ್ಟಿನ ಬಳಿಕ ಮರುಹೊಂದಿಕೆ, ವೇಗವರ್ಧನೆ ಮತ್ತು ಪ್ರಮಾಣ ಎಂಬ ಮೂರು ಕಾರ್ಯತಂತ್ರವನ್ನು ನಾವು ಇರಿಸಿಕೊಂಡಿದ್ದೆವು. ಇದೀಗ ಮರುಹೊಂದಿಸುವ ಹಂತ ಮುಗಿದಿದೆ. ನೋಕಿಯಾ ತನ್ನ ಸೇವಾ ಪೂರೈಕೆದಾರ ವ್ಯವಹಾರವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಶೇ. 21 ರಷ್ಟು ಬೆಳವಣಿಗೆಯನ್ನು ಕಂಡಿದ್ದೇವೆ. ಇದು ಪ್ರಸ್ತುತ ನಮ್ಮ ಮಾರಾಟದ ಶೇಕಡಾ 8 ರಷ್ಟಿದೆ. ಭಾರತ ದೇಶ ನಮ್ಮ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ,” ಎಂದು ಹೇಳಿದ್ದಾರೆ.
ವಿಶೇಷ ಎಂದರೆ ಫೆಬ್ರವರಿ 27 ಇಂದಿನಿಂದ ಗುರವಾರದವರೆಗೆ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡ್ಬ್ಲ್ಯುಸಿ) ನಡೆಯಲಿದೆ. ಇದು ಆರಂಭಕ್ಕೂ ಮುನ್ನ ನೋಕಿಯಾ ತನ್ನ ಬ್ರ್ಯಾಂಡ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿರುವುದು ಕುತೂಹಲ ಕೆರಳಿಸಿದೆ. ”ಸೇವೆಗಳನ್ನು ಪೂರೈಸುವ ವಹಿವಾಟಿನತ್ತ ಕಂಪನಿ ಗಮನ ಮುಂದುವರಿಸಲಿದ್ದು, ದೂರಸಂಪರ್ಕ ಕಂಪನಿಗಳಿಗೆ ಅಗತ್ಯ ಸಾಧನಗಳನ್ನು ನೀಡುವುದು, ಅದರಲ್ಲಿಯೂ ಮುಖ್ಯವಾಗಿ ಬೇರೆ ಉದ್ದಿಮೆಗಳಿಗೆ ಟೆಲಿಕಾಂ ಗಿಯರ್ ಮಾರಾಟ ಮಾಡಲು ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇವೆ,” ಎಂದು ನೋಕಿಯಾದ ಸಿಇಒ ಪೆಕ್ಕಾ ಲುಂಡ್ಮಾರ್ಕ್ ಹೇಳಿದರು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 am, Mon, 27 February 23