ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಆಳುತ್ತಿರುವ ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ಯಂತಹ ಪ್ರಸಿದ್ಧ ಬ್ರ್ಯಾಂಡ್ಗಳಿಗೆ ಈಗ ಮತ್ತೊಮ್ಮೆ ನಡುಕ ಶುರುವಾಗಿದೆ. ಇದಕ್ಕೆ ಕಾರಣ ನಥಿಂಗ್. ಒನ್ ಪ್ಲಸ್ (OnePlus) ಕಂಪನಿಯ ಸಹಸ್ಥಾಪಕ ಕಾರ್ಲ್ ಪೇ ಒಡೆತನದ ನಥಿಂಗ್ ಕಂಪನಿ ಕಳೆದ ವರ್ಷ ತನ್ನ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 1 ಅನ್ನು ಹೊರತಂದು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಇದೀಗ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಲು ನಥಿಂಗ್ ಪುನಃ ಬಂದಿದೆ. ತನ್ನ ವಿಭಿನ್ನ ಶೈಲಿಯ ಡಿಸೈನ್ಗಳಿಗೆ ಹೆಸರಾಗಿರುವ ನಥಿಂಗ್ ಇದೀಗ ಹೊಸ ನಥಿಂಗ್ ಫೋನ್ (2) (Nothing Phone (2)) ಬಿಡುಗಡೆ ಮಾಡಲು ಎಲ್ಲ ತಯಾರಿ ನಡೆಸಿದೆ.
ಕಳೆದ ವರ್ಷ ರಿಲೀಸ್ ಆದ ನಥಿಂಗ್ ಫೋನ್ 1 ಗೆ ಎಲ್ಲರೂ ಫಿದಾ ಆಗಿದ್ದರು. ಅದರಂತೆ ಇದರ ಮುಂದುವರಿದ ಸರಣಿಯಾಗಿ ನಥಿಂಗ್ ಫೋನ್ (2) ಅನ್ನು ಲಾಂಚ್ ಮಡಲಾಗುತ್ತಿದ್ದು, ಈಗಾಗಲೇ ಇದು ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಂದ ಪ್ರಮಾಣೀಕರಣವನ್ನು ಪಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಲಾಂಚ್ ಆಗಲಿದೆ.
ಕಂಪನಿ ಈ ಫೋನಿನ ಫೀಚರ್ಸ್ ಅಥವಾ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ನಥಿಂಗ್ ಫೋನ್ (2) ಬೆಲೆ 40,000 ರೂ. ಆಸುಪಾಸಿನಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ನಥಿಂಗ್ ಫೋನ್ (1) ಫೋನ್‌ಗೆ 30,499 ರೂ. ಗಳನ್ನು ನಿಗದಿ ಮಾಡಲಾಗಿತ್ತು.
ಲೀಕ್ ಆಗಿರುವ ಮಾಹಿತಿಯ ಪ್ರಕಾರ ನಥಿಂಗ್ ಫೋನ್ (2) ಸ್ಮಾರ್ಟ್‌ಫೋನ್ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದ್ದು, ಇದು 120Hz ರಿಫ್ರೆಶ್ ರೇಟ್ ನೀಡಲಿದೆ ಎಂದು ತಿಳಿದುಬಂದಿದೆ. ಆದರೆ, ಬ್ರೈಟ್‌ನೆಸ್ ವಿವರ ಹಾಗೂ ಫಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಸೇರಿದಂತೆ ಇನ್ನಿತರೆ ವಿವರ ತಿಳಿದುಬಂದಿಲ್ಲ. ಬಲಿಷ್ಠವಾದ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಈ ಫೋನಿನ ಹಿಂಭಾಗದಲ್ಲರುವ ಎಲ್ಲ ಮೂರು ಕ್ಯಾಮೆರಾಗಳು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆಯಂತೆ. ಅದರಂತೆ ಮುಂಭಾಗ ಸೆಲ್ಪಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದುಕೊಳ್ಳಲಿದೆ ಎನ್ನುವ ವದಂತಿಗಳಿವೆ.
ನಥಿಂಗ್ ಫೋನ್ (2) 4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರಲಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಆದರೆ, ಇದು ಎಷ್ಟು ವೋಲ್ಟ್ನದ್ದು ಎಂಬುದು ಬಹಿರಂಗವಾಗಿಲ್ಲ. ಈ ಫೋನ್ ಒನ್ಪ್ಲಸ್ 11R ಮತ್ತು ಪಿಕ್ಸೆಲ್ 7a ಗೆ ಕಠಿಣ ಪೈಪೋಟಿ ನೀಡಲಿದೆ.
Published On - 11:31 am, Tue, 13 June 23