ಒನ್ಪ್ಲಸ್, ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗೆ ಹೆಸರುವಾಸಿ. ಒನ್ಪ್ಲಸ್(OnePlus) ಬ್ರ್ಯಾಂಡ್ ಮೂಲಕ ವಿವಿಧ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಅದರಲ್ಲೂ, ಉತ್ತಮ ಕ್ಯಾಮೆರಾ ಫೀಚರ್ಸ್, ಗರಿಷ್ಠ ಬ್ಯಾಟರಿ ಹಾಗೂ ಗ್ರೇಟ್ ಅನ್ನಿಸುವ ಪರ್ಫಾಮೆನ್ಸ್ಗೆ ಒನ್ಪ್ಲಸ್ ಫೋನ್ ಹೆಸರುವಾಸಿಯಾಗಿದೆ. ಒನ್ಪ್ಲಸ್ ನಾರ್ಡ್ ಸರಣಿಯಲ್ಲಿ ಆರಂಭಿಕ ಹಂತದ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಅದೇ ಸರಣಿಯಲ್ಲಿ ಮುಂದುವರಿದು, ಮತ್ತೊಂದು ಹೊಸ ನಾರ್ಡ್ ಫೋನ್ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಒನ್ಪ್ಲಸ್ ನಾರ್ಡ್ ಸಿಇ 3 ಲೈಟ್ 5G(OnePlus Nord CE 3 Lite 5G) ಫೋನ್ ವಿವರ ಇಲ್ಲಿದೆ.
ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಒನ್ಪ್ಲಸ್ ಸ್ಮಾರ್ಟ್ಫೋನ್ ಸ್ನ್ಯಾಪ್ಡ್ರ್ಯಾಗನ್ 695 ಪ್ರೊಸೆಸರ್ ಸಹಿತ ಬರುತ್ತಿದೆ. ಅಲ್ಲದೆ, ಒನ್ಪ್ಲಸ್ Nord CE 3 Lite 5G ಫೋನ್ನಲ್ಲಿ 6.72 ಇಂಚಿನ ಎಲ್ಸಿಡಿ ಡಿಸ್ಪ್ಲೇ ಇದೆ. ಒನ್ಪ್ಲಸ್ Nord CE 3 Lite 5G ಫೋನ್ 5,000mAh ಬ್ಯಾಟರಿ ಬೆಂಬಲ ಹೊಂದಿದ್ದು 67W SuperVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯ ವಿಶೇಷತೆಯಾಗಿದೆ. ಕಡಿಮೆ ಅವಧಿಯಲ್ಲಿಯೇ ಗರಿಷ್ಠ ಚಾರ್ಜಿಂಗ್ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.
ಒನ್ಪ್ಲಸ್ ಹೊಸ Nord CE 3 Lite 5G ಫೋನ್ Android 13 ಆಧಾರಿತ OxygenOS 13.1 ಓಎಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜತೆಗೆ ಹಿಂಭಾಗದಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 2 ಮೆಗಾಪಿಕ್ಸೆಲ್ ಹಾಗೂ 2 MP ಮ್ಯಾಕ್ರೋ ಕ್ಯಾಮೆರಾ ಸೆನ್ಸಾರ್ ಇದೆ. ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುವುದು Nord CE 3 Lite 5G ವಿಶೇಷತೆಯಾಗಿದೆ. ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಉತ್ತಮ ಫೋಟೊ ಬೇಕು ಎನ್ನುವವರಿಗೆ ಒನ್ಪ್ಲಸ್ ಹೊಸ ನಾರ್ಡ್ ಫೋನ್ ಬೆಸ್ಟ್ ಎನ್ನುವಂತಿದೆ.
ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಒನ್ಪ್ಲಸ್ ಫೋನ್ ಎರಡು ಆವೃತ್ತಿಗಳಲ್ಲಿ ದೊರೆಯಲಿದೆ. 8 GB RAM + 128 GB ಸ್ಟೋರೇಜ್ ಆವೃತ್ತಿಗೆ ₹19,999 ದರವಿದ್ದು, 8 GB RAM + 256 GB ಸ್ಟೋರೇಜ್ ಇರುವ ಮಾದರಿಗೆ ₹21,999 ದರವಿದೆ. ಗ್ರಾಹಕರು ಐಸಿಐಸಿಐ ಕಾರ್ಡ್ ಬಳಸಿ ಖರೀದಿಸಿದರೆ ₹1,000 ಡಿಸ್ಕೌಂಟ್ ಲಭ್ಯವಾಗುತ್ತದೆ.
Published On - 6:35 pm, Wed, 5 April 23