Technology : ಶೆಲ್ಫಿಗೇರುವ ಮುನ್ನ: ‘ಡಾರ್ಕ್​ ವೆಬ್​’ ಕೃತಿಯ ಹಿಂದಿನ ಕಥೆ ಬಿಚ್ಚಿಟ್ಟ ಮಧು ವೈಎನ್​

|

Updated on: Jun 02, 2022 | 5:02 PM

Madhu Y.N. : ‘ಲೋ ಅದು ಹೆಂಗೋ ಮೇಲ್ಬಂತುʼ ಎಂದೆ. ‘ಅದೆಂಗ್‌ ಬಂತೂ ಅಂದ್ರೆ.. ಬಾವಿ ಗೋಡೆಯನ್ನ ಗಿಬರಿ ಗಿಬರಿಕೊಂಡು ಮ್ಯಾಲ ಬಂತುʼ ಎಂದ. ಎಷ್ಟು ಚಂದ ಮತ್ತು ಶಕ್ತಿಯುತವಾಗಿ ವಿಜ್ಞಾನವನ್ನು ಕನ್ನಡದಲ್ಲಿ ಮಾತಾಡಬಹುದು ಅಲ್ವ?

Technology : ಶೆಲ್ಫಿಗೇರುವ ಮುನ್ನ: ‘ಡಾರ್ಕ್​ ವೆಬ್​’ ಕೃತಿಯ ಹಿಂದಿನ ಕಥೆ ಬಿಚ್ಚಿಟ್ಟ ಮಧು ವೈಎನ್​
ಲೇಖಕ ಮಧು ವೈ. ಎನ್.
Follow us on

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

ಕೃತಿ : ಡಾರ್ಕ್ ವೆಬ್

ಲೇಖಕ : ಮಧು ವೈ. ಎನ್.

ಇದನ್ನೂ ಓದಿ
ಹಾದಿಯೇ ತೋರಿದ ಹಾದಿ: ಸೃಷ್ಟಿಯಲ್ಲಿ ಗಂಡಿಗೆಷ್ಟು ಅವಕಾಶವಿದೆಯೋ ಹೆಣ್ಣಿಗೂ ಅಷ್ಟೇ ಇದೆ
New Book : ಶೆಲ್ಫಿಗೇರುವ ಮುನ್ನ ; ಉದ್ಯಮಿ ಹೇಮಾ ಹಟ್ಟಂಗಡಿ ‘ಗೂಡಿನಿಂದ ಬಾನಿಗೆ’ ಹಾರಿದ್ದನ್ನು ಕನ್ನಡದಲ್ಲಿ ಹಿಡಿದಿಟ್ಟಿದ್ದಾರೆ ಸಂಯುಕ್ತಾ ಪುಲಿಗಲ್
Bhagat Singh Birth Anniversary : ಶೆಲ್ಫಿಗೇರುವ ಮುನ್ನ ; ಇಂದಷ್ಟೇ ಬಿಡುಗಡೆಗೊಂಡ ಎಚ್. ಎಸ್. ಅನುಪಮಾ ಅವರ ‘ಜನ ಸಂಗಾತಿ ಭಗತ್‘
New Book; ಶೆಲ್ಫಿಗೇರುವ ಮುನ್ನ : ಎಷ್ಟೇ ನಷ್ಟ ಬಂದರೂ ಭರಿಸೋಣ ಯಾರೇ ವಿರೋಧಿಸಿದರೂ ಸರಿ ಪ್ರಜಾಧನ ಪೋಲಾಗಬಾರದು

ಪುಟ : 202

ಬೆಲೆ : ರೂ. 250

ಮುಖಪುಟ ವಿನ್ಯಾಸ : ಪ್ರದೀಪ ಬತ್ತೇರಿ

ಪ್ರಕಾಶನ : ಸಾವನ್ನ ಪ್ರಕಾಶನ

ಕಳೆದ ವರುಷ 2021ರ ಅಂತ್ಯದಲ್ಲಿ ನನ್ನ ಎರಡನೆಯ ಪುಸ್ತಕ ‘ಫೀಫೋʼ ಕೊವಿಡ್ ನಡುವೆ ಅಂತೂ ಬಿಡುಗಡೆಯಾಯಿತು. ಬರಹಗಾರನ ಫ್ಯಾಂಟಸಿಗಳಿಗನುಗುಣವಾಗಿ ಅದು ಬಂದಕೂಡಲೇ ‘ವಾವ್‌ʼ ಅನಿಸಿಕೊಳ್ಳಬೇಕಿತ್ತು. ಪತ್ರಿಕೆಗಳು ನುಗ್ಗಿ ಬರೆಯಬೇಕಿತ್ತು!; ಪುಸ್ತಕ ಬಿಡುಗಡೆಯಾಗಿ ಹಲವರು ಓದಿ ಇದು ‘ಹೊಸ ತರಹದ ಕತೆಗಳುʼ ಎಂದರು, ಮೊದಲು ಮೂರು ಕತೆಗಳು ಬೇರೆ ಲೆವೆಲ್ಲಿನಲ್ಲಿವೆ ಎಂದರು, ಕೆಲವರು ‘ಎಷ್ಟೊಂದು ಅರ್ಥವಾಗಲಿಲ್ಲʼ ಎಂದರು. ಇನ್ನು ಕೆಲವರು ಆರ್ಟ್‌ ಸಿನಿಮಾಗಳನ್ನು ಕೊಂಡಾಡಿದಂತೆ ‘ಸಿಗಿದರೆ ಏನೊ ಇದೆʼ ಎಂದರು.

ಅದೇ ಸಮಯದಲ್ಲಿ ಅರ್ಥಾತ್‌ 2021 ಡಿಸೆಂಬರಿನಲ್ಲಿ ಆಫೀಸಿನಲ್ಲಿ ವಿಪರೀತ ಕೆಲಸ. ಒಂದು ನಿರ್ದಿಷ್ಟ ಕಾರಣಕ್ಕೆ. ಒಂದು ಕಡೆ ಆಫೀಸಿನಲ್ಲಿ ಮಾನಸಿಕ ಶ್ರಮ ಇನ್ನೊಂದು ಕಡೆ ಹೊಸತೇನು ಬರೆಯದಿರುವ ಸೃಜನಶೀಲ ವಿರಾಮ.
ಆ ಸಮಯದಲ್ಲಿ ಒಂದು ಪುಸ್ತಕ ಕೊಡುಕೊಳ್ಳುವಿಕೆಯ ವಿಷಯದಲ್ಲಿ ಯುಪಿಐ ಐಡಿ ಬಳಸಲು ಸಾಹಿತ್ಯಾಸಕ್ತರಲ್ಲಿ ಇರುವ ಹಿಂಜರಿಕೆ ಗಮನಕ್ಕೆ ಬಂದು ಒಂದು ಸಣ್ಣ ಪೋಸ್ಟ್‌ ಹಾಕಿದ್ದೆ. ಒಬ್ಬರು ಹಿರಿಯ ಲೇಖಕರು ತಮ್ಮ ಪುಸ್ತಕ ಕಳಿಸಿದ್ದರು, ನಾ ಹಣ ಹಾಕಲು ಅವರ ಯುಪಿಐ ಐಡಿ ಕೇಳಿದ್ದಕ್ಕೆ ನಾನೆಲ್ಲೊ ಅವರ ಅಕೌಂಟ್ ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿರುವೆ ಎಂದು ಹೆದರಿ ಒಲ್ಲೆ ಎಂದಿದ್ದರು.

ನಾ ಮೇಲೆ ಹೇಳಿದ ಆಫೀಸಿನ ‘ವಿಪರೀತ ಕೆಲಸʼ log4j ಎಂಬ ಜಾಗತಿಕ ಮಟ್ಟದ ಸಾಫ್ಟವೇರ್‌ ದೋಷದ ಬಗ್ಗೆಯಿತ್ತು. ಬೇರೇನು ಬರೆಯಲು ವಿಷಯವಿರದೆ ಒಂದಿನ ಇನ್ನೊಂದು ಪೋಸ್ಟ್‌ ಹಾಕಿದೆ. ಅದರಲ್ಲಿ ‘ಐಟಿಯವರ ನಿದ್ದೆಗೆಡಿಸಿರುವ log4jʼ ಎಂದು ಬರೆದಿದ್ದೆ. ಅದು ನಿಜವಾಗಿತ್ತು. ದೊಡ್ಡಮಟ್ಟದ ದೋಷ, ಗ್ರಾಹಕರ ಬೇಗುದಿ ಮುಗಿಲು ಮುಟ್ಟಿತ್ತು. ಪ್ರೆಶರ್‌ ಅಷ್ಟಿತ್ತು. ನಾವು ಹಗಲು ರಾತ್ರಿ ಕೆಲಸ ಮಾಡಿ ಆದಷ್ಟು ಬೇಗ ಗ್ರಾಹಕರಿಗೆ ಫಿಕ್ಸ್‌ ತಲುಪಿಸಲು ಪ್ರಯತ್ನಿಸುತ್ತಿದ್ದೆವು. ಪೋಸ್ಟ್‌ ಹಾಕಿದ ಕೂಡಲೆ ತುಂಬ ಜನ ಅದನ್ನು ಮೆಚ್ಚಿ ಹಂಚಿ ವಿಷಯ ಹಬ್ಬಲಾರಂಭಿಸಿತು. ಕಾರಣ ಅದೆಲ್ಲ ಅವರಿಗೆ ಹೊಸ ಸಂಗತಿಯಾಗಿತ್ತು, ನಮಗೆ ಪೂರ್ತಿ ಗೊತ್ತಿಲ್ಲ, ಬಟ್‌ ಇಲ್ಲೇನೊ ಇದೆ ಎಂಬರ್ಥದಲ್ಲಿ.

ಅದನ್ನು ಯಾರೊ ಒಬ್ಬರು ಹಂಚಿದ್ದ ಪೋಸ್ಟಿಗೆ ಇಬ್ಬರು ಟ್ರೋಲಿಂಗ್‌ ಅನ್ನೆ ಕಸುಬು ಮಾಡಿಕೊಂಡಿದ್ದ ಟ್ರಾಲ್‌ ಗಳು (ಐಟಿಯವರು) ಆಹಾ ಓಹೋ ಅದರಲ್ಲೇನಿದೆ ನಿದ್ದೆಗೆಡುವಂಥದು ಎಂದು ಅಪಹಾಸ್ಯಕರ ಟ್ರೋಲ್ ಮಾಡಿದ್ದರು. ಅವರ ಅಸಹನೆ ಹಿನ್ನೆಲೆ ಗೊತ್ತಿದ್ದರಿಂದ ನಾ ಅಲ್ಲಿಗೆ ಬಿಟ್ಟು ಸುಮ್ಮನಾದೆ. (ಅವರು ತಾವು ನಂಬುವ ಮತ್ತು ಬೆಂಬಲಿಸುವ ಎಂದು ಭಾವಿಸಿರುವ ಐಡಿಯಾಲಜಿಗೆ ಮಾರಕವಾಗಿರುವರೆಂದು ವಿಶ್ವಾಸದಿಂದ ಹೇಳಬಲ್ಲೆ. ತಮ್ಮ ಟ್ರಾಲಿಂಗ್‌ ಗುಣದಿಂದ ಅದೇ ಅದೇ ಹತ್ತು ಜನರನ್ನು ಆಕರ್ಷಿಸುತ್ತ ರಂಜಿಸುತ್ತ ಹೊಸತಾಗಿ ಸಮಾಜಕ್ಕೆ ತೆರೆದುಕೊಳ್ಳುವ ಸಾವಿರ ಯುವಕರನ್ನು ವಿಕರ್ಷಿಸುತ್ತ ಐಡಿಯಾಲಜಿಗೆ ಲಾಸ್‌ ಉಂಟುಮಾಡುತ್ತಿರುವ ಲಯೇಬಿಲಿಟಿ ವ್ಯಕ್ತಿಗಳು. ಇತ್ತೀಚೆಗೆ ಒಬ್ಬ ಜವಾಬ್ದಾರಿಯುತ ತಮ್ಮ ಚಿಂತನೆಗಳ ಮೂಲಕ ಜನರ ಮೇಲೆ ಪ್ರಭಾವ ಬೀರಬಲ್ಲ ಲೇಖಕಿಯನ್ನು ಸಹ ಟ್ರಾಲ್‌ ಮಾಡಿ ಮೆರೆದ ಜೋಡಿಯದು).

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಡಾ. ವಿನತೆ ಶರ್ಮ ಸಂಪಾದಿತ ‘ಭಾರತೀಯ ಮಹಿಳೆ ಮತ್ತು ವಿರಾಮ‘ ಕೃತಿ ಸದ್ಯದಲ್ಲೇ ಓದಿಗೆ

ಮತ್ತದೇ ಸೃಜನಶೀಲ ಬಿಡುವು. ಮುಂದಿನ ವಾರ ‘ಐಟಿನೋರು ಎಗ್ಸಾಕ್ಟ್ಲಿ ಏನು ಕೆಲಸ ಮಾಡ್ತಾರೆʼ ಎಂಬಂತಹ ಪೋಸ್ಟ್‌ ಬರೆದೆ. ಅದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿತು. ಎಲ್ಲರಿಗೂ ಐಟಿಯೋರು ಏನು ಮಾಡ್ತಾರೆ ಎಂಬ ಕುತೂಹಲವಿತ್ತು. ಅತ್ಯಂತ ಸರಳವಾಗಿ ವಿವರಿಸಿದ್ದೆ. ಅದರಿಂದ ಪ್ರೇರಣೆ ಸಿಕ್ಕು ಸೀರಿಯಲ್ಲಾಗಿ ಟೆಕ್ನಾಲಜಿ ಪೋಸ್ಟುಗಳನ್ನು ಬರೆಯುತ್ತ ಹೋದೆ. ಕೀಲಾಗರ್‌ ಎಂಬ ಟ್ರಿಕ್ಕಿಂದ ಹೇಗೆ ಪಾಸ್ವರ್ಡ್‌ ಕದಿಯುತ್ತಾರೆ ಹೇಗೆ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎಂದು ಬರೆದೆ. ಅದೂ ಸಹ ತುಂಬ ಶೇರ್‌ ಆಯಿತು. ಏಳೆಂಟು ಪೋಸ್ಟು ಬರೆಯುವಷ್ಟೊತ್ತಿಗೆ ಕಮೆಂಟಿಸಿದವರೆಲ್ಲ ಪುಸ್ತಕ ಮಾಡಿಕೊಡಿ ಎನ್ನಲಾರಂಭಿಸಿದರು. ಮೂರ್ನಾಲ್ಕು ಪ್ರಕಾಶಕರಿಂದ ಆಲ್ಮೋಸ್ಟ್‌ ಒಂದೆರಡು ದಿವಸಗಳ ಅಂತರದಲ್ಲಿ ಕರೆಗಳು ಬಂದವು. ಮೊದಲು ಕರೆ ಮಾಡಿದವರಿಗೆ ನ್ಯಾಯ ಒದಗಿಸುವುದು ಎಂದು ನಿರ್ಧರಿಸಿ ಪುಸ್ತಕಕ್ಕೆ ಓಕೆ ಎಂದೆ.

ಆಗ ನನಗೆ ನೆನಪಾಗಿದ್ದು ಎರಡು ವರುಷಗಳ ಹಿಂದೆ ‘ಕಾರೇಹಣ್ಣುʼ ಬಂದನಂತರವೂ ಇದೇ ಸೃಜನಶೀಲ ವಿರಾಮದಿಂದ ಸೀರೀಸಾಗಿ ಫಿಲಾಸಫಿ ಸಾಹಿತ್ಯ ಟೆಕ್ನಾಲಜಿ ಮುಂತಾಗಿ ಲೇಖನಗಳನ್ನು ‘ಕೆಂಡಸಂಪಿಗೆ’ ವೆಬ್ ಪತ್ರಿಕೆಗೆ ಬರೆದಿದ್ದೆ. ಹಳೆಯ ಟೆಕ್ನಾಲಜಿ ಲೇಖನಗಳನ್ನು ಎತ್ತಿಕೊಂಡು ಅತ್ತಿತ್ತ ಸವರಿ ಅಣಿಗೊಳಿಸಿದೆ. ಪ್ರಕಾಶಕರು ಕನಿಷ್ಟ ಮೂವತ್ತು ಲೇಖನ ಬೇಕು ಎಂದಿದ್ದರು. ಪಟ್ಟಾಗಿ ಕುಳಿತು ಅನುಭವ ಮೂಸೆಯಿಂದ ಮಿಕ್ಕ ಲೇಖನಗಳನ್ನು ಬರೆದೆ.
ಇದು ‘ಡಾರ್ಕ್​ ವೆಬ್‌ʼ ಹೇಗೆ ಬಂತು ಎಂಬ ಲಾಜಿಸ್ಟಿಕ್‌ ಕತೆ. ಕಲ್ಪನೆಯಲ್ಲೇ ಇಲ್ಲದ್ದು ಮೂರು ತಿಂಗಳಲ್ಲಿ ಉದ್ಭವಿಸಿತು. ಆದರೆ ಅವರು ಹಂಗಂದರು ಇವರು ಹಿಂಗಂದರು ಎಂದು ಜಿದ್ದಿಗೆ ಕೂತರೂ ಸತ್ವ ಇರಬೇಕಲ್ವ? ಅದೆಲ್ಲಿಂದ ಬಂತು? ಜನರಿಗೆ ಹಾಗಲಕಾಯಿಯಾಗಿರುವ ಟೆಕ್ನಾಲಜಿ ಸಂಗತಿಗಳನ್ನು ತಣ್ಣನೆಯ ಪಾಯಸದಂತೆ ಬಡಿಸುವುದು ಹೇಗೆ?

ಪ್ರಜ್ಞಾಪೂರ್ವಕವಾಗಿಯಂತೂ ಮಾಡಿದ್ದಲ್ಲ. ಆರ್ಗ್ಯಾನಿಕ್ ಆಗಿ ಬಂತು. ಹೇಗೆ ಎಂದು ಪರಾಮರ್ಶಿಸಿದಾಗ ಎರಡು ಮೂರು ಘಟನೆಗಳು ನೆನಪಾಗುತ್ತವೆ.

ಒಂದು : ಶಾಲಾದಿನಗಳಲ್ಲಿ ಸಿಬಿಯಸ್ಸಿನಲ್ಲೂ ಸಹ ನೂರಕ್ಕೆ ತೊಂಭತ್ತು ತೊಂಭತ್ತೈದು ತೆಗೆಯುವುದು ಕಷ್ಟವೇನಿರಲಿಲ್ಲ. ಅರ್ಥಾತ್‌ ಪ್ರಶ್ನೆಗಳು ರಿಪೀಟ್‌ ಇರುತ್ತಿದ್ದವು. ಸ್ವಲ್ಪ ಆಚೀಚೆ ಮಾತ್ರ. ಕೇವಲ ಒಂದು ಐದು ಅಂಕದ ಪ್ರಶ್ನೆ ‘ಹಟ್‌ ಕೆʼ ಇರುತ್ತಿತ್ತು. ನಮ್ಮೆಲ್ಲ ಪ್ರಯತ್ನ ಅದನ್ನು ಕ್ರಾಕ್‌ ಮಾಡುವುದರಲ್ಲಿತ್ತು. ಈ ಹಿನ್ನೆಲೆಯಲ್ಲಿ ನಾವು ಸಿಲೆಬಸ್‌ ಹೊರಗಿನ ಕಠಿಣ ಸಮಸ್ಯೆಗಳನ್ನು ಸಾಲ್ವ್‌ ಮಾಡುವುದರಲ್ಲಿ ತೊಡಗಿಸಿಕೊಂಡಿರುತ್ತಿದ್ದೆವು. ಉದಾಹರಣೆಗೆ ಟ್ರಿಗ್ನಾಮೆಟ್ರಿ ಒಂಭತ್ತನೆ ಕ್ಲಾಸಿನಲ್ಲಿ ಶುರುವಾಗಿ ಹತ್ತು ಹನ್ನೊಂದು ಹನ್ನೆರಡನೆ ಕ್ಲಾಸಿನಲ್ಲೂ ಇರುತ್ತಿತ್ತು. ನಾವು ಹತ್ತನೇ ತರಗತಿಯಲ್ಲಿ ಐದು ಮಾರ್ಕಿನ ಆಸೆಗೆ ತಲೆಕೆಳಗು ನಿಂತು ಸಾಲ್ವ್‌ ಮಾಡಿದ ಪ್ರಶ್ನೆಗೆ ಹನ್ನೊಂದನೆ ತರಗತಿಯಲ್ಲಿ ಕೇವಲ ಒಂದು ರೆಡಿಮೇಡ್ ಫಾರ್ಮುಲ ಹಚ್ಚಿದರೆ ಉತ್ತರ ಸಿಕ್ಕಿರುತ್ತಿತ್ತು. ಅಂತೆಯೇ ಫಿಸಿಕ್ಸ್‌ ನಲ್ಲಿ ಈ ಕ್ಲಾಸಿನಲ್ಲಿ ಹೊಳೆದ ಐಡಿಯಾ ಮುಂದಿನ ತರಗತಿಯಲ್ಲಿ ಕಾಲ ಕಸದಂತೆ‌ ಅದಾಗಲೆ ಪ್ರೂವ್‌ ಆಗಿ ಬಿದ್ದಿರುತ್ತಿತ್ತು. ಬಹಳ ನಿರಾಸೆಯಾಗುತ್ತಿತ್ತು. ಬಟ್‌ ಈಗ ನೆನೆಸಿಕೊಂಡರೆ ಪ್ರಬುದ್ಧರು ಫಾರ್ಮುಲ ಹಚ್ಚಿ ಸಾಲ್ವ್‌ ಮಾಡುವ ಸಮಸ್ಯೆಯನ್ನು ಎಳೆಯರು ಬಿಡಿಸಿ ಬಿಡಿಸಿ ಅರ್ಥ ಮಾಡಿಕೊಂಡು ಪರಿಹಾರ ಹುಡುಕುವ ತರಬೇತಿ ಅಲ್ಲಿ ಸಿಕ್ಕಿರಬೇಕು ಅನಿಸುತ್ತದೆ. ತಳಪಾಯಕ್ಕೆ ಅಗತ್ಯ ಸಿಮೆಂಟು ಒದಗಿಸಿದೆ ಅನಿಸುತ್ತದೆ.

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ

ಎರಡು : ಎಂಜಿನಿಯರಿಂಗ್‌ ನ ಮೊದಲ ಸೆಮಿಸ್ಟರ್. ಮೊಟ್ಟ ಮೊದಲ ಬಾರಿಗೆ ಬೆಂಗಳೂರಿಗೆ ಕಾಲಿಟ್ಟಿದ್ದೆ. ಇಲ್ಲಿನ ಜನ, ಅವರ ವೇಷಭೂಷಣ, ಅವರ ಇಂಗ್ಲೀಷು, ಅವರ ನಾಲೆಡ್ಜು ನನ್ನನ್ನು ಕಂಗೆಡಿಸಿತ್ತು. ಮೊದಲ ಸೆಮೆಸ್ಟರ್‌ ಎಂಬತ್ಮೂರು ಪರ್ಸೆಂಟೇನೊ ಬಂದಿತ್ತು. ನನಗೇ ಆಶ್ಚರ್ಯವಾಗುವಂತೆ ಎರಡನೇ ರ್ಯಾಂಕು ಎಂದಿದ್ದರು. ಎದೆಯುಬ್ಬಿಸಿಕೊಂಡು ಮಾರ್ಕ್ಸ್‌ ಕಾರ್ಡು ಹಿಡಿದು ನಮ್ಮ ಚಿಕ್ಕಪ್ಪನ ಬಳಿ ಹೋಗಿದ್ದೆ( ನನ್ನ ತಂದೆತಾಯಿ ಅನಕ್ಷರಸ್ಥರು. ಅವರಿಗೆ ತೋರಿಸಿದರೂ ಅರ್ಥವಾಗುತ್ತಿರಲಿಲ್ಲ, ನನ್ನ ಈಗಿನ ಬರವಣಿಗೆಯ ಶ್ರೇಯಸ್ಸೂ ಸಹ, ಅಮ್ಮ ಅದೇನಪ್ಪಿ ಯಾವಾಗಲು ಬುಕ್ಕು ಬುಕ್ಕು ಅಂತ ಕೂತಿರ್ತೀಯ ಅಂತಾರೆ!). ಚಿಕ್ಕಪ್ಪ ಭೇಷ್‌ ಅಂತಾರೆ ಅಂದುಕೊಂಡಿದ್ದೆ. ಅವರು ಶಾಕ್‌ ಕೊಟ್ಟರು. ತೊಂಭತ್ತು ಯಾಕಿಲ್ಲ? ತೊಂಭತ್ತೈದು ಯಾಕಿಲ್ಲ? ಎಂದರು. ಇದು ಸ್ಕೂಲಿನಂತಲ್ಲ, ಡಿಗ್ರಿ ಕಾಲೇಜು ಎಷ್ಟು ಬರೆದರೂ ಇಷ್ಟೇ ಮಾರ್ಕು ಕೊಡುವುದು ಎಂದು ಅರ್ಥೈಸಲು ಪ್ರಯತ್ನಿಸಿದೆ. ಅವರಿಗೆ ನಿಜಕ್ಕೂ ವಾಸ್ತವ ಗೊತ್ತಿರಲಿಲ್ಲ.

ಆದರೆ ಅವರದೇ ಆದ ವಿಶ್ವಾಸದಲ್ಲಿ ಒಂದು ಮಾತು ಹೇಳಿದರು- ನೋಡು ನಂಗೆ ಚೆನ್ನಾಗಿ ಬರುವುದು ಕನ್ನಡ. ಸ್ವಲ್ಪ ಸ್ವಲ್ಪ ಇಂಗ್ಲೀಷ್. ಅದಕ್ಕಿಂತ ಕೆಟ್ಟದಾಗಿ ಹಿಂದಿ. ಆದರೆ ನಾಳೆ ಅನಿವಾರ್ಯವಾಗಿ ನಾ ಫ್ರೆಂಚ್‌ ಕಲಿಯಬೇಕು ಎಂದರೆ ಮುಂದಿನ ಆರು ತಿಂಗಳಲ್ಲಿ ಅದನ್ನೇ ಫೋಕಸ್‌ ಮಾಡಿ ಫ್ರೆಂಚ್‌ ಕಲಿತುಬಿಡುತ್ತೇನೆ ಎಂದು. ಅದು ನನ್ನೊಳಗೆ ಟೈಟಾಗಿ ಕೂತ್ಕೊಂಡ್‌ ಬಿಡ್ತು. ಬಹುಶಃ ಈ ಹಿನ್ನೆಲೆಯಲ್ಲಿ ಐಟಿ ಇಂಡಸ್ಟ್ರಿ ಏಳು ಸಾಗರಗಳಿಗಿಂತ ಆಳ ಆಗಲವಿದ್ದರೂ ಸಹ ಯಾರಾದರೂ ಇದು ಹೇಗೆ ಕೆಲಸ ಮಾಡುತ್ತದೆ ಎಂದು ಕೇಳಿದರೆ ಒಂದೆರಡು ದಿವಸಗಳಲ್ಲಿ ಆ ವಿಷಯ ಕಲಿತು ವಿವರಿಸುವ ವಿಶ್ವಾಸ ಮೂಡಿದೆ.

ಮೂರು : ಕನ್ನಡ! ರೂಪಕಮಯ ಕನ್ನಡ! ನಾವು ಮನೆಯಲ್ಲಿ ಕಲಿಯುವ ಕನ್ನಡವೊಂದು. ಶಾಲೆಯಲ್ಲಿ ಕಲಿಯುವ ಕನ್ನಡವಿನ್ನೊಂದು. ಮೂರನೇದು ಬಲು ವಿಶಿಷ್ಟ. ಸಾಹಿತ್ಯದಿಂದ ಒಲಿಯುವ ಕನ್ನಡ! ನೀವು ಯಾವುದಕ್ಕಲ್ಲದಿದ್ದರೂ ಕನ್ನಡ ಕಲಿಯಲು ಕನ್ನಡ ಸಾಹಿತ್ಯ ಓದಬೇಕು. ಕಾರಣ ಹೇಳ್ತೇನೆ. ಆಯಾ ಸಾಮಾಜಿಕ ಹಿನ್ನೆಲೆಗನುಸಾರ ನಾವು ಮನೆಯಲ್ಲಿ ಒಂದೇ ಒಂದು ಕನ್ನಡ ಕಲಿತಿರುತ್ತೇವೆ. ಆದ್ದರಿಂದ ಮೊತ್ತಬ್ಬರ ಕನ್ನಡ ನಮಗೆ ಹಾಸ್ಯಾಸ್ಪದವಾಗಿ ಕೇಳಿಸುತ್ತದೆ. ಅಂತೆಯೇ ಶಾಲೆಯಲ್ಲಿ ಯಾತಕ್ಕೂ ಬಾರದ ಅಟ್​ಮೋಸ್ಟ್ ಪತ್ರಿಕೆಯಲ್ಲಿ ಪ್ರಕಟಗೊಳ್ಳಲು ಸಹಾಯ ಮಾಡಬಲ್ಲ ಗ್ರಾಂಥಿಕ ಕನ್ನಡ ಕಲಿಯುತ್ತೇವೆ. ನಿಜವಾದ ಕನ್ನಡ ಈ ಎಲ್ಲಕ್ಕಿಂದ ದೊಡ್ಡದಿದೆ, ವಿಸ್ತಾರವಿದೆ! ಅದು ವೈವಿಧ್ಯಮಯ ಸಾಹಿತ್ಯದ ಓದಿನಿಂದ ದಕ್ಕುತ್ತದೆ. ಸಾಹಿತ್ಯದಲ್ಲಿ ಕನ್ನಡ ಎಷ್ಟು ಎಂಜಿನಿಯರಿಂಗ್​ಗೆ ಒಳಪಟ್ಟಿದೆಯೆಂದರೆ ಹೇಳತೀರದು!

ಇದನ್ನೂ ಓದಿ : National Wine Day: ಮೈಲ್ಸ್‌ ವೈನ್‌ ಮಾಯಾ ವೈನ್‌ ಮತ್ತು ಕಾರೇಹಣ್ಣಿನ ಮಧು ವೈಎನ್ 

ನಾ ಇದನ್ನು ಭಾಷಾತಜ್ಞತೆಯಿಂದ ಹೇಳ್ತಿಲ್ಲ, ಅಕಡೆಮಿಕ್ಕಾಗಿ ನಾ ತಪ್ಪಿರಬಹುದು. ಮೊಟ್ಟಮೊದಲ ಬಾರಿಗೆ ಕಡಲತೀರಕ್ಕೆ ತಂದು ಆಡಲು ಬಿಟ್ಟ ಹುಡುಗನೊಬ್ಬ ಕಪ್ಪೆಚಿಪ್ಪು, ಮರಳಿನ ಹರಳು, ಶಂಖ ಇತ್ಯಾದಿಗಳನ್ನು ಆಯ್ದು ಮುಷ್ಟಿಯಲ್ಲಿ ಹಿಡಿದು ಕಿವಿಯ ಬಳಿ ತಂದು ಉಜ್ಜಿದಾಗ ಹೊಮ್ಮುವ ಗರಗರ ಸದ್ದಿನ ಸುಖ ಅನುಭವಿಸಿದ ಖುಷಿಯಲ್ಲಿ ಹೇಳ್ತಿದೀನಿ; ಕನ್ನಡ ಮೂಲತಃಧ್ವನಿ ಪ್ರಧಾನ ಭಾಷೆ. ಎಲ್ಲಾ ದ್ರಾವಿಡ ಭಾಷೆಗಳೂ ಧ್ವನಿ ಪ್ರಧಾನ ಎಂದು ನನ್ನ ಅನಿಸಿಕೆ. ನೇಟಿವ್‌ ಕಲ್ಚರ್. ಟ್ರೈಬಲ್ ನೇಚರ್. ಅದೇ ಆರ್ಯನ್‌ ಭಾಷೆಗಳು‌ ಹೆಚ್ಚೂ ಕಮ್ಮಿ ಭಾವ ಪ್ರಧಾನ. ನೀವು ಯಾರನ್ನೇ ತಗೊಳ್ಳಿ- ಬೇಂದ್ರೆ, ಕುವೆಂಪು, ಲಂಕೇಶ್‌, ತೇಜಸ್ವಿ ದೇವನೂರು. ಇವರೆಲ್ಲರ ಸಾಹಿತ್ಯದಲ್ಲಿ ಧ್ವನಿ ಪ್ರಧಾನ ಕನ್ನಡವಿದೆ. ಕುವೆಂಪು ಬೇಂದ್ರೆಯರಂತೂ ಕನ್ನಡವನ್ನು ಉಜ್ಜಿ ಉಜ್ಜಿ ಮಧುರ ಧ್ವನಿ ಹೊರಡಿಸಿರುವರು. ಆನಂತರದವರು ಅದನ್ನು ಗದ್ಯದಲ್ಲಿ ವಿಸ್ತರಿಸಿರುವರು. ಉದಾ ದೇವನೂರು Ready ಎಂಬುದನ್ನು ‘ರಡಿʼ ಎಂದುಬಿಟ್ಟರು. ಮುಗಿತಲ್ಲಿಗೆ ಕತೆ.

ಬೇಕಾದರೆ ಪರೀಕ್ಷಿಸಿ- ರೇಡಿಯೋಗೆ ಸಿಗ್ನಲ್‌ ಸಿಗದಾಗ ಹೆಂಗನ್ನುತ್ತದೆ? ಕನ್ನಡದಲ್ಲಿ ಕರಕರ ಅನ್ನುತ್ತದೆ. ಇಂಗ್ಲೀಷಲ್ಲಿ ಕ್ರೀಕ್? ಹಿಂದಿ ಸಂಸ್ಕೃತದಲ್ಲಿ? ಇನ್ನೊಂದು, ಹಸು ಹೇಗೆ ಕೂಗುತ್ತದೆ- ಕನ್ನಡದಲ್ಲಿ ಅಂಬಾ ಎನ್ನುತ್ತದೆ. ಇಂಗ್ಲೀಷ್‌ ಮತ್ತು ಹಿಂದಿಯಲ್ಲಿ ಮೂ ಅಂತಂದಂತೆ. ಎಲ್ಲಾದರೂ ಹಸು ಮೂ ಎಂದದ್ದು ಕೇಳಿರುವಿರಾ? ಮಂಗನ ತಂದು. ಹಾಗೆ ಕುದುರೆ, ಕನ್ನಡದಲ್ಲಿ ಕೆನೆಯುತ್ತದೆ. ಇಂಗ್ಲೀಷಲ್ಲಿ ನೆಯ್‌ ಅಂತದಂತೆ. ಕರ್ಮ. ನಾಯಿ ಮಾತ್ರ ಸ್ವಲ್ಪ ಸಂಭಾವಿತ. ಇಲ್ಲಿ ಬೊಗಳಿ ಇಂಗ್ಲೀಷಲ್ಲಿ ಬಾರ್ಕ್‌ ಮಾಡಿ ಹಿಂದಿಯಲ್ಲಿ ಭೌಂಕ್‌ ಅಂತದೆ.

ಆನಂತರ ಬಂದ ಮತ್ತು ಇತ್ತೀಚಿನ ಕನ್ನಡ ಸಾಹಿತಿಗಳು ಕನ್ನಡವನ್ನು ಭಾವಪ್ರಧಾನ ಮಾಡಿದರು. ಕಾಯ್ಕಿಣಿ ‘ಕೊಲ್ಲು ಹುಡುಗಿ ಒಮ್ಮೆ ನನ್ನʼ ಎಂದರು. ಸಿದ್ದಲಿಂಗಯ್ಯ ಹುಡುಗಿ ಪಾದಕ್ಕೆ ‘ಮುತ್ತುವವು ಮೊಲದ ಹಿಂಡುʼ ಎಂದರು. ಹಿಂದೆಂದೂ ಧ್ವನಿ ಮೂಲಕ ಪ್ರಕಟಿಸಲಾಗದ ಹೊಚ್ಚ ಹೊಸ ಭಾವನೆ ಕನ್ನಡದಲ್ಲಿ ಅಂಕುರಿಸಿತು! ಅಫ್​ಕೋರ್ಸ್ ಕಾಯ್ಕಿಣಿ ಉರ್ದು/ಹಿಂದಿಯಿಂದ ಆಮದು ಮಾಡಿಕೊಂಡಿದ್ದರು. ಬಟ್‌ ಹೆಂಗೋ ಒಂದು ರೀತಿ ಹೊಸ ಭಾವನೆ ಬಂತಲ್ಲ.

ಇದನ್ನೂ ಓದಿ : Book Release: ಶೆಲ್ಫಿಗೇರುವ ಮುನ್ನ; ‘ಚಿಮ್ಮಿದ ರಕ್ತ’ ಇಂದು ಉಮರ್ ಫಾರೂಕ್ ಪುಸ್ತಕ ಬಿಡುಗಡೆ

ಒಟ್ಟಾರೆ ನಾ ಹೇಳ್ತಿದ್ದು ಕನ್ನಡದ ಜೊತೆ ಆಟಾಡಬೇಕಂದರೆ ನಮ್ಮ ಹಿಂದಿನವರ ಸಾಹಿತ್ಯ ಓದಬೇಕು. ಸಮಗ್ರವಾಗಿ. ಮತ್ತು ನೀರು ಕುಡಿದಂತೆ ನೀರು ಹೊಟ್ಟೆಯ ಮೂಲೆ ಮೂಲೆ ತಲುಪಿ ತಂಪೆರೆದಂತೆ ಆದಷ್ಟೂ ಕರ್ನಾಟಕದ ಮೂಲೆಮೂಲೆಯ ಸಾಹಿತ್ಯವನ್ನು ಒಳಗಿಳಿಸಿಕೊಳ್ಳಬೇಕು! ಅದು ಒಲಿದರೆ ಮಿಕ್ಕಿದ್ದೆಲ್ಲ ಬಲು ಸುಲಭ.
ಕಡೆಯದಾಗಿ ಇನ್ನೊಂದು ಸ್ವಾರಸ್ಯಕರ ಘಟನೆ ಹೇಳಿಬಿಡ್ತೇನೆ. ನಾ ಸಣ್ಣವನಿದ್ದಾಗ ಒಂದಿನ ಒಂದು ತೋಟದಲ್ಲಿ ಬಾವಿ ತೋಡಿಸುತ್ತಿದ್ದರು. ಹಿಟಾಚಿ ತರಿಸಿದ್ದರು. ಜೇಡಹುಳದ ತರಹ ಇತ್ತು ಅದು. ಆ ಹುಳದಂತೆಯೇ ಹೊಟ್ಟೆ. ಆಚೀಚೆ ಉದ್ದನೆಯ ಕೈಕಾಲುಗಳು. ನಮಗೋ ಕುತೂಹಲವೆಂದರೆ ಕುತೂಹಲ. ಬೆಳಗಿಂದ ಸಂಜೆ ತನಕ ಬಾವಿ ತೋಡಿದ ಅದು, ಇನ್ನು ಸ್ವಲ್ಪ ಕೆಲಸ ಬಾಕಿ ಇದ್ದುದರಿಂದ ಅವತ್‌ ರಾತ್ರಿ ಅಲ್ಲೇ ಉಳಿದುಕೊಂಡ್ತು. ಅದು ಹೊಸತಾಗಿ ತೋಡಿದ ಬಾವಿಯಲ್ಲಿ ಅದೆಷ್ಟು ಬೆಚ್ಚಗೆ ಮಲಗಿತ್ತು ಗೊತ್ತ. ಮಂಡ್ರಗಪ್ಪೆ ತರಹ. ನಾವು ಅದು ಬಾವಿ ತೋಡಿದ ರೀತಿಯನ್ನು ಕೈಕಾಲು ಮುದುರಿ ಮಲಗಿದ ರೀತಿಯನ್ನು ಮೈ-ಮನಸು-ಬಾಯಿ ತುಂಬ ಚಪ್ಪರಿಸುತ್ತ ಸವಿದು ಸವಿದು ಮನೆಗೆ ಹೋಗಿ ಉಂಡು ಮಲಗಿದೆವು. ಬೆಳಗೆದ್ದು ತಿರಗ ಅಲ್ಲಿಗೆ ಓಡಿ ಹೋದೆವು. ನಮ್ಮ ದುರಾದೃಷ್ಟಕ್ಕೆ ಅಷ್ಟರಲ್ಲಿ ಇಟಾಚಿ ಬಾವಿಯಿಂದ ಹೊರನೆಗೆದು ಒಂದು ಮಗ್ಗುಲಲ್ಲಿ ಗುಪ್ಪನೆ ಕೂತಿತ್ತು. ನಮಗೆ ಭಾರೀ ನಿರಾಸೆ. ಅರೆ ಅದು ಹೇಗೆ ಆಳದ ಬಾವಿಯಿಂದ ಎದ್ದು ಬಂದಿತೆಂದು.

ನಮಗಿಂತ ಚುರುಕಾದ ನಸುನಸುಕಿನಲ್ಲೆ ಎದ್ದು ಹೋಗಿ ಆ ದೃಶ್ಯ ವೈಭವವನ್ನು ಅನುಭವಿಸಿದ್ದ ನನ್ನ ಸಹಪಾಠಿಯೊಬ್ಬ ಅಲ್ಲೇ ಇದ್ದ.

‘ಲೋ ಅದು ಹೆಂಗೋ ಮೇಲ್ಬಂತುʼ ಎಂದೆ.

‘ಅದೆಂಗ್‌ ಬಂತೂ ಅಂದ್ರೆ.. ಬಾವಿ ಗೋಡೆಯನ್ನ ಗಿಬರಿ ಗಿಬರಿಕೊಂಡು ಮ್ಯಾಲ ಬಂತುʼ ಎಂದ.

ಅವನಿನ್ನೇನು ಹೇಳಬೇಕಿರಲಿಲ್ಲ, ನಂಗೆ ಸಂಪೂರ್ಣ ದೃಶ್ಯ ಹಸಿಹಸಿಯಾಗಿ ಕಣ್ಣ ಮುಂದೆ ನಿಲ್ತು. ಈಗಿನ ಇಂಗ್ಲೀಷ್‌ ಸೈಫೈ ಸಿನಿಮಾಗಳಲ್ಲಿ ಸೂಪರ್‌ ಮ್ಯಾನುಗಳು ಗೋಡೆ ಹತ್ತುತಾರಲ್ಲ ಹಾಗೆ ಹಿಟಾಚಿ ಬಾವಿಯ ಗೋಡೆಗಳನ್ನು ಗಿಬರಿ ಗಿಬರಿ ಮೇಲೆ ಬಂದಿದೆ!

ಎಷ್ಟು ಚಂದ ಮತ್ತು ಶಕ್ತಿಯುತವಾಗಿ ವಿಜ್ಞಾನವನ್ನು ಕನ್ನಡದಲ್ಲಿ ಮಾತಾಡಬಹುದು ಅಲ್ವ? ನೀರಸ ಗ್ರಾಂಥಿಕ ಪದಪುಂಜಗಳು ನೋಡಿದ ತಕ್ಷಣ ಜನರಿಗೆ ತಲೆನೋವು ಬರುತ್ತದೆ. ಅರೆ ಇದರ ಬದಲು ಇಂಗ್ಲೀಷೇ ಬೆಟರು ಅನಿಸುತ್ತದೆ. ವಿಷಯವೇ ತಲೆನೋವಿದ್ದು ಭಾಷೆಯೂ ತಲೆನೋವಾದರೆ ಹೇಗೆ ಹೇಳಿ? ಭಾಷೆ ವಿಷಯವನ್ನು ಸರಳೀಕರಿಸಿ ತಲೆನೋವು ಇಳಿಸಬೇಕು. ಅದು ಮಜಾ!

ಪುಸ್ತಕದ ಖರೀದಿಗೆ ಸಂಪರ್ಕಿಸಿ : 9886099001