ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್ (WhatsApp) ಅನ್ನು ಇಂದು ವಿಶ್ವದಲ್ಲಿ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಮೆಟಾ ಒಡೆತನದ ಈ ಮೆಸೇಜಿಂಗ್ ಆ್ಯಪ್ ಯಶಸ್ಸು ಸಾಧಿಸಿದೆ. ಆದರೀಗ ವಾಟ್ಸ್‌ಆ್ಯಪ್ ಬಳಕೆದಾರರು ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಡಾರ್ಕ್ ವೆಬ್‌ನಲ್ಲಿ (Dark Web) ಸುಮಾರು 500 ಮಿಲಿಯನ್ ವಾಟ್ಸ್‌ಆ್ಯಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಮಾರಾಟವಾಗಿವೆಯಂತೆ. ಸೈಬರ್‌ನ್ಯೂಸ್ (Cyber News) ಈ ಬಗ್ಗೆ ವರದಿ ಮಾಡಿದ್ದು, ಪ್ರಸಿದ್ಧ ಹ್ಯಾಕಿಂಗ್ ಗುಂಪು ಕಮ್ಯುನಿಟಿ ವೇದಿಕೆಯಲ್ಲಿ ಜಾಹೀರಾತೊಂದನ್ನು ಪೋಸ್ಟ್ ಮಾಡಿದ್ದು ಇದರಲ್ಲಿ 47.8 ಕೋಟಿ ವಾಟ್ಸ್‌ಆ್ಯಪ್ ಬಳಕೆದಾರರ ಸಂಖ್ಯೆಗಳ ಡೇಟಾಬೇಸ್ ಅನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಲಾಗಿದೆ.
ಸೋರಿಕೆಯಾದ ಡೇಟಾಸೆಟ್ 84 ದೇಶಗಳ ವಾಟ್ಸ್‌ಆ್ಯಪ್ ಬಳಕೆದಾರರ ಮಾಹಿತಿಯನ್ನು ಹೊಂದಿದೆಯಂತೆ. ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ವಾಟ್ಸ್‌ಆ್ಯಪ್ ಬಳಕೆದಾರರ ವೈಯಕ್ತಿಕ ಮಾಹಿತಿ, ದತ್ತಾಂಶ ಕದ್ದು ಮಾರಾಟ ಮಾಡಲಾಗಿದೆ. ಈ ಮೂಲಕ ಬಳಕೆದಾರರ ವಾಟ್ಸ್‌ಆ್ಯಪ್ ಸಂಖ್ಯೆ, ವೈಯಕ್ತಿಕ ಮಾಹಿತಿ ಬೇರೆಯವರ ಪಾಲಾಗುತ್ತಿದೆ ಎಂಬುದು ಬಹಿರಂಗವಾಗಿದೆ. ಮಾರಾಟಕ್ಕಿರುವ ಡೇಟಾಬೇಸ್‌ನಲ್ಲಿ ಭಾರತ, ಇಟಲಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಸೇರಿದಂತೆ 84 ವಿವಿಧ ದೇಶಗಳ ವಾಟ್ಸ್‌ಆ್ಯಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳಿವೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ 3.2 ಕೋಟಿ, ಬ್ರಿಟನ್ 1.1 ಕೋಟಿ, ರಷ್ಯಾ 1 ಕೋಟಿ, ಇಟಲಿ 3.5 ಕೋಟಿ, ಸೌದಿ ಅರೇಬಿಯಾ 2.9 ಕೋಟಿ, ಭಾರತದ 60 ಲಕ್ಷ ಜನರ ಮೊಬೈಲ್ ನಂಬರ್ ಸೈಬರ್ ಖದೀಮರ ಕೈಸೇರಿದ್ದು, ಖಾಸಗಿ ಮಾಹಿತಿ ಸೋರಿಕೆಯಾಗಿದೆಯಂತೆ. ನವೆಂಬರ್ 16 ರಂದು ಹ್ಯಾಕಿಂಗ್ ಕಮ್ಯೂನಿಟಿ ವೇದಿಕೆಯಲ್ಲಿ ಜಾಹೀರಾತು ಒಂದು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ವಾಟ್ಸ್ಆ್ಯಪ್ನ ಅಂದಾಜು ಎರಡು ಶತಕೋಟಿ ಸಕ್ರಿಯ ಮಾಸಿಕ ಬಳಕೆದಾರರಲ್ಲಿ ನಾಲ್ಕನೇ ಒಂದು ಭಾಗವು ಅಪಾಯದಲ್ಲಿದೆ ಎಂದು ವರದಿಯಾಗಿದೆ.
ಇಂಥಹ ಅಪಾಯದಿಂದ ಪಾರಾಗಲು ನೀವು ವಾಟ್ಸ್ಆ್ಯಪ್ನಲ್ಲಿ ಗೊತ್ತಿರದ ಅನಾಮಿಕ ಸಂಖ್ಯೆಯಿಂದ ಬರುವ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಮುಖ್ಯವಾಗಿ ಅನಾಮಿಕ ಸಂಖ್ಯೆಗಳಿಂದ ಕೇಳುವ ನಿಮ್ಮ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಪದೇ ಪದೆ ಸಂದೇಶ ಬರುವ ಸ್ಪ್ಯಾಮ್ ಸಂಖ್ಯೆಗಳನ್ನು ಬ್ಲಾಕ್ ಮಾಡಿ ಅಥವಾ ಡಿಲೀಟ್ ಮಾಡಿಬಿಡಿ. ಸಾಧ್ಯವಾದಷ್ಟು ಮಾಹಿತಿಯನ್ನು, ನಿಮ್ಮ ಪ್ರೊಫೈಲ್ ಫೋಟೋವನ್ನು ಗೌಪ್ಯವಾಗಿ ಇಡುವುದು ಉತ್ತಮ.