Tech Tips: ನಿಮ್ಮಲ್ಲಿ ಉಪಯೋಗಿಸದ ಹಳೆಯ ಸ್ಮಾರ್ಟ್ಫೋನಿದ್ದರೆ ಅದನ್ನು ಸಿಸಿಟಿವಿ ಮಾಡಿ: ಹೇಗೆ ಗೊತ್ತೇ?
Smartphone CCTV Camera: ನಿಮ್ಮ ಬಳಿ ಉಪಯೋಗಿಸದ ಹಳೆಯ ಸ್ಮಾರ್ಟ್ಫೋನ್ಗಳಿದ್ದರೆ ಅದನ್ನು ಅನೇಕ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಪ್ರಮುಖವಾಗಿ ಈ ಮೊಬೈಲ್ ಅನ್ನು ನಿಮ್ಮ ಮನೆಯ ಸಿಸಿಟಿವಿ ಕ್ಯಾಮೆರಾ ಆಗಿ ಪರಿವರ್ತಿಸಬಹುದು.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿಂದು ತಿಂಗಳಿಗೆ ಕಡಿಮೆ ಎಂದರೂ 7-10 ಮೊಬೈಲ್ಗಳು ಬಿಡುಗಡೆ ಆಗುತ್ತವೆ. ಇದರಲ್ಲಿ ಹೆಚ್ಚಿನ ಫೋನುಗಳು ಬಜೆಟ್ ಬೆಲೆಯಿಂದಲೇ ಕೂಡಿರುತ್ತದೆ. ಯಾಕೆಂದರೆ ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವುದು ಕಡಿಮೆ ಬೆಲೆಯ ಆಕರ್ಷಕ ಸ್ಮಾರ್ಟ್ಫೋನ್ಗಳು. ಇದನ್ನೆ ಗಮನದಲ್ಲಿಟ್ಟುಕೊಂಡು ಪ್ರಸಿದ್ಧ ಬ್ರ್ಯಾಂಡ್ಗಳಾದ ರೆಡ್ಮಿ (Redmi), ಒಪ್ಪೋ, ವಿವೋ, ರಿಯಲ್ ಮಿ, ಪೋಕೋ, ಸ್ಯಾಮ್ಸಂಗ್ ಬಜೆಟ್ ಫೋನನ್ನು ಒಂದರ ಹಿಂದೆ ಒಂದರಂತೆ ಅನಾವರಣ ಮಾಡುತ್ತದೆ. ಬಹುತೇಕ ಗ್ರಾಹಕರು ತಾವು ಬಳಸುತ್ತಿದ್ದ ಫೋನ್‌ಗಳು ಹಾಳಾಗದಿದ್ದರೂ ವರ್ಷಕ್ಕೆ ಒಂದರಂತೆ ಹೊಸ ಮೊಬೈಲ್ಗಳನ್ನು (Mobile) ಖರೀದಿಸುತ್ತಾರೆ. ಹೀಗಾದಾಗ ಹಳೆಯ ಸ್ಮಾರ್ಟ್ಫೋನ್ಗಳನ್ನು ಕೆಲವರು ಮೂಲೆಗೆ ಬಿಸಾಕುತ್ತಾರೆ. ಆದರೆ, ಹೀಗೆ ಮೂಲೆಗೆ ಹಾಕುವ ಬದಲು ಇದರಿಂದ ಅನೇಕ ಪ್ರಯೋಜವನ್ನು ಪಡೆಯಬಹುದು.
ಹೌದು, ನಿಮ್ಮ ಬಳಿ ಉಪಯೋಗಿಸದ ಹಳೆಯ ಸ್ಮಾರ್ಟ್ಫೋನ್ಗಳಿದ್ದರೆ ಅದನ್ನು ಅನೇಕ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಪ್ರಮುಖವಾಗಿ ಈ ಮೊಬೈಲ್ ಅನ್ನು ನಿಮ್ಮ ಮನೆಯ ಸಿಸಿಟಿವಿ ಕ್ಯಾಮೆರಾ ಆಗಿ ಪರಿವರ್ತಿಸಬಹುದು. ಮನೆ, ಆಫೀಸ್‌ಗಳಿಗೆ ಹೊಸ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಹೆಚ್ಚು ಹಣ ಖರ್ಚಾಗುತ್ತದೆ. ಅಂಗಡಿಯಿಂದ ಹೊಸ ಸಿಸಿಟಿವಿ ಖರೀದಿಸುವ ಬದಲು ಹಳೆ ಸ್ಮಾರ್ಟ್‌ಫೋನ್ ಅನ್ನೇ ಸಿಸಿಟಿವಿ ಕ್ಯಾಮೆರಾ ಆಗಿ ಬಳಸಬಹುದು. ಇದಕ್ಕೆ ಒಂದು ಸಾಫ್ಟ್‌ವೇರ್, ಚಾರ್ಜರ್, ರೆಕಾರ್ಡ್ ಆಗುವ ವಿಡಿಯೋ ಕ್ಲಿಪ್‌ಗಳನ್ನು ನೋಡಲು ನೀವು ಬಳಸುವ ಫೋನ್ ಅನ್ನು ಬಳಕೆ ಮಾಡಿಕೊಳ್ಳಬಹುದು ಅಥವಾ ಕಂಪ್ಯೂಟರ್ ಇದ್ದರೆ ಸಾಕು.
ನೀವು ಸಿಸಿಟಿವಿ ಆಗಿ ಬಳಸುವ ಹಳೆಯ ಸ್ಮಾರ್ಟ್‌ಫೋನ್‌ಗೆ ಹಾಗೂ ಈಗಿರುವ ಹೊಸ ಮೊಬೈಲ್ಗೆ ಮೊದಲು “AtHome Video Streamer -Monitor” ಎಂಬ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಈ ಸ್ಮಾರ್ಟ್‌ಫೋನ್ ಸೆಕ್ಯೂರಿಟಿ ಸಿಸಿಟಿವಿ ಕ್ಯಾಮೆರಾ ಆಗಿ ವಿಡಿಯೋ ರೆಕಾರ್ಡ್ ಮಾಡುತ್ತದೆ. ಅಂದಹಾಗೆ ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಎರಡಕ್ಕೂ ಬಳಸಬಹುದಾಗಿದೆ. ಎರಡು ಫೋನ್‌ಗಳು ವೈಫೈ ಕನೆಕ್ಷನ್‌ನಿಂದ ಆನ್‌ಲೈನ್‌ನಲ್ಲಿರಬೇಕು. AtHome Video Streamer ಆ್ಯಪ್ Username ಮತ್ತು password ನೊಂದಿಗೆ ಕನೆಕ್ಷನ್ ಐಡಿ (ಸಿಐಡಿ) ಜೆನೆರೇಟ್ ಮಾಡಿಕೊಡುತ್ತದೆ. ಈ ಐಡಿಯನ್ನು ನೀವು ಸಿಸಿಟಿವಿ ಕ್ಯಾಮೆರಾಗಿ ಬಳಸುವ ಫೋನ್‌ನಲ್ಲಿ ನೀಡಿ.
ಇಲ್ಲವಾದಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಕೂಡ ಸಂಪೂರ್ಣ ಮಾಹಿತಿಯನ್ನು ಖಾತೆಯಲ್ಲಿ ನೀಡಬಹುದು. ವಿಡಿಯೋ ರೆಕಾರ್ಡ್ ಮಾಡುವ ಸ್ಮಾರ್ಟ್‌ಫೋನ್‌ನಲ್ಲಿ, ವಿಡಿಯೋ ರಿಸೀವ್ ಮಾಡುವ ಸ್ಮಾರ್ಟ್‌ಫೋನ್ ಅನ್ನು QR ಕೋಡ್ ಸ್ಕ್ಯಾನ್ ಮಾಡಿದರೆ ಅಂದಿನಿಂದ ನೀವು ಸಿಸಿಟಿವಿ ಕ್ಯಾಮೆರಾ ಬಳಕೆ ಪ್ರಾರಂಭ ಮಾಡಿ ವಿಡಿಯೋ ಕ್ಲಿಪ್‌ಗಳನ್ನು ಸಹ ನೋಡಬಹುದು. ಅಂತೆಯೆ ಐಪಿ ವೆಬ್ಕ್ಯಾಮ್ ಮೊದಲಾದ ಆ್ಯಪ್ಗಳ ಮೂಲಕವೂ ನಿಮ್ಮ ಹಳೆಯ ಸ್ಮಾರ್ಟ್ಫೋನನ್ನು ವೈಯರ್ ಲೆಸ್ ಸೆಕ್ಯೂರಿಟಿ ಕ್ಯಾಮೆರಾವಾಗಿ ಪರಿವರ್ತಿಸಬಹುದು. ಚಾರ್ಜಿಂಗ್ಗೆ ಹಾಕಿ, ವೈಫೈ ನೆಟ್ವರ್ಕ್ ಹಾಗೂ ಫೋನಿನ ಕ್ಯಾಮೆರಾವನ್ನು ಆನ್ ಮಾಡಿಟ್ಟುಬಿಟ್ಟರೆ, ಯಾವ ಸ್ಥಳದಿಂದ ಬೇಕಾದರೂ ವೀಕ್ಷಿಸಬಹುದು.
ಇದು ಮಾತ್ರವಲ್ಲದೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆಲ್ಫ್ರೆಡ್ ಕ್ಯಾಮೆರಾ ಆ್ಯಪ್ ಸಹಾಯದಿಂದ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಸಿಸಿಟಿವಿ ಕ್ಯಾಮೆರಾವನ್ನಾಗಿ ಪರಿವರ್ತಿಸಬಹುದು. ಆಲ್ಫ್ರೆಡ್ ಕ್ಯಾಮೆರಾ ಆ್ಯಪ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಸ್ಮಾರ್ಟ್ಫೋನಿಗೆ ಅಳವಡಿಸಿದ ನಂತರ ಗೂಗಲ್ ಸಹಾಯದಿಂದ ಹೊಸ ಖಾತೆಯೊಂದನ್ನು ತೆರೆದು ಸೈನ್ ಇನ್ ಮಾಡಿ ಉಪಯೋಗಿಸಬಹುದು.
ಇನ್ನು ನಿಮ್ಮ ಹಳೆಯ ಸ್ಮಾರ್ಟ್ಫೋನನ್ನು ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಿ ಕೂಡ ಬಳಸಬಹುದು. ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವ ಕೆಲ ಗೇಮ್ಗಳನ್ನು ಇನ್‌ಸ್ಟಾಲ್ ಮಾಡಬಹುದು. Zoodles, Kid’s Shell ನಂತಹ ಮಕ್ಕಳ ಕೇಂದ್ರಿತ ಆ್ಯಪ್ಗಳನ್ನು ಹಾಕಬಹುದು. ಯೂಟ್ಯೂಬ್ ಕಿಟ್ಸ್ನಂತರ ವಿಡಿಯೋ ಆ್ಯಪ್ಗಳೂ ಸಾಕಷ್ಟು ಲಭ್ಯವಿವೆ. ಅಲ್ಲದೆ ಹಳೆಯ ಸ್ಮಾರ್ಟ್‌ಫೋನ್ ಅನ್ನು ಟಿವಿಗೆ ವಿಡಿಯೋ ಪ್ಲೇಯರ್ ಆಗಿ ಬಳಸಬಹುದು. ಇದಕ್ಕಾಗಿ ಗೂಗಲ್ ಕ್ರೋಮ್ಕ್ಯಾಸ್ಟ್ನಂತರ ವೈರ್ಲೆಸ್ ಸ್ಟ್ರೀಮಿಂಗ್ ಡೋಂಗಲ್ಗಳನ್ನು ಅಳವಡಿಸಬೇಕಾಗುತ್ತದೆ. ಫೋನ್ನಲ್ಲಿರುವ ವಿಡಿಯೋ, ಯೂಟ್ಯೂಬ್ ವಿಡಿಯೋ ಅಥವಾ ಫೋಟೋಗಳನ್ನು ಟಿವಿಯಲ್ಲಿ ವೀಕ್ಷಿಸಲು ಈ ಡೋಂಗಲ್ ಸಾಧ್ಯವಾಗಿಸುತ್ತದೆ.