ಇಂದು ಸ್ಮಾರ್ಟ್ಫೋನ್ (Smartphone) ಬಳಸುವ ಪ್ರತಿಯೊಬ್ಬರು ಕೂಡ ಬ್ಯಾಕ್ ಕವರ್ ಹಾಕಿಯೇ ಇರುತ್ತಾರೆ. ಕೆಲವರು ಫೋನ್‌ಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಇದನ್ನು ಹಾಕಿದರೆ, ಇನ್ನೂ ಕೆಲವರು ಕೈಯಲ್ಲಿ ಹಿಡಿದುಕೊಳ್ಳುವಾಗ ಒಳ್ಳೆಯ ಗ್ರಿಪ್ ಸಿಗಲಿ ಎಂಬ ಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಬ್ಯಾಕ್ ಕವರ್ನಲ್ಲಿ (Back Cover) ಇಂದು ನಾನಾರೀತಿಯ ವಿಧವಿಧವಾದ ಬಣ್ಣಗಳಲ್ಲಿದೆ. ಅಂತೆಯೆ ಕೆಲವರು ತಮ್ಮ ಫೋನಿನ ಹಿಂಭಾಗ ಕೂಡ ಕಾಣಬೇಕೆಂದು ಪಾರದರ್ಶಕ (Transparent) ಪೌಚ್‌ಗಳನ್ನು ಬಳಸುತ್ತಾರೆ. ಆದರೆ, ಕೆಲವು ದಿನಗಳ ನಂತರ ಆ ಬ್ಯಾಕ್ ಕವರ್ ಹಳದಿ ಬಣ್ಣಕ್ಕೆ ತಿರುಗಿರುವುದು ನೀವು ಗಮನಿಸರಬಹುದು. ನಿಮ್ಮಲ್ಲಿ ಅನೇಕರು ಈ ಸಮಸ್ಯೆಯನ್ನು ಎದುರಿಸಿರುತ್ತೀರಿ. ಹಾಗಾದರೆ ಈ ಟ್ರಾನ್ಪರೆಂಟ್ ಕವರ್ ಬಣ್ಣ ಏಕೆ ಬದಲಾಗುತ್ತದೆ? ಅವುಗಳನ್ನು ಸ್ವಚ್ಛಗೊಳಿಸುವುದು ಹೇಗೆ?.
ಸಾಮಾನ್ಯವಾಗಿ ಈ ಟ್ರಾನ್ಪರೆಂಟ್ ಕವರ್‌ಗಳನ್ನು TPU (ಥರ್ಮೋ ಪ್ಲಾಸ್ಟಿಕ್ ಪಾಲಿ ಯುರೆಥೇನ್) ವಸ್ತುಗಳಿಂದ ತಯಾರಿಸಲಾಗುತ್ತದೆ. ಸೂರ್ಯನ ಶಾಖದಿಂದ ಬರುವ ಯುವಿ ಕಿರಣಗಳು ಬ್ಯಾಕ್ ಕವರ್ನ ಬಣ್ಣ ಹಳದಿಗೆ ತಿರುಗಲು ಮುಖ್ಯ ಕಾರಣ. ಕವರ್‌ನಲ್ಲಿರುವ TPU ರಾಸಾಯನಿಕಗಳು ಸೂರ್ಯನ ಕಿರಣಗಳನ್ನು ತಡೆದು ನಿಲ್ಲುವ ಶಕ್ತಿ ಹೊಂದಿಲ್ಲ. ಹೀಗಾಗಿ ಇದು ಬಣ್ಣವನ್ನು ಬದಲಾಯಿಸುತ್ತದೆ.
ಇದಿಷ್ಟೇ ಅಲ್ಲದೆ ಫೋನ್ ಅನ್ನು ಚಾರ್ಜ್ ಮಾಡುವಾಗ ಅಥವಾ ಸತತವಾಗಿ ಮೊಬೈಲ್ ಬಳಸುತ್ತಿದ್ದರೆ ಅದು ಬಿಸಿ ಆಗಿ ಅದರಿಂದ ಉಂಟಾಗುವ ಶಾಖದಿಂದಲೂ ಬಣ್ಣವು ಬದಲಾಗುತ್ತದೆ. ಅಂತೆಯೆ ಫೋನ್ ಉಪಯೋಗಿಸುವಾಗ ನಿಮ್ಮ ಕೈಗಳಿಂದ ಬರುವ ಬೆವರಿನಿಂದ ಕೂಡ ಕವರ್ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಸ್ವಚ್ಛಗೊಳಿಸುವುದು ಹೇಗೆ?:
ಬಣ್ಣ ಕಳೆದುಕೊಂಡ ಬ್ಯಾಕ್ ಕವರ್ ಅನ್ನು ಹೊಸದರಂತೆ ಮಾಡಲು, ಬಿಸಿ ನೀರಿನಲ್ಲಿ ಎರಡರಿಂದ ಮೂರು ಹನಿಗಳ ಪಾತ್ರೆ ತೊಳೆಯುವ ಸೋಪ್ ಅನ್ನು ಮಿಶ್ರಣ ಮಾಡಿ. ನಂತರ, ಹಳೆಯ ಬ್ರಷ್ ತೆಗೆದುಕೊಂಡು ಅದನ್ನು ಫೋನ್ ಕವರ್ ಮೇಲೆ ಉಜ್ಜಿಕೊಳ್ಳಿ. ಈಗ ನೀರಿನಿಂದ ತೊಳೆದ ನಂತರ ಅದು ಮತ್ತೆ ಹಳೆಯ ಬಣ್ಣಕ್ಕೆ ತಿರುಗುತ್ತದೆ. ಅಥವಾ ಅಡಿಗೆ ಸೋಡಾದಿಂದ ಕೂಡ ಕವರ್ನ ಬಣ್ಣವನ್ನು ಬದಲಾಯಿಸಬಹುದು. ಸ್ವಲ್ಪ ಅಡಿಗೆ ಸೋಡಾಗೆ ಕೊಂಚ ನೀರು ಸೇರಿಸಿ ಬ್ರಶ್ ನಿಂದ ಕ್ಲೀನ್ ಮಾಡಿದರೆ ಕವರ್‌ನಲ್ಲಿರುವ ಹಳದಿ ಬಣ್ಣ ಮಾಯವಾಗುತ್ತದೆ.
ಫೋನ್ ಬಿಸಿ ಆಗದಂತೆ ತಡೆಯುವುದು ಹೇಗೆ?:
ನಿಮ್ಮ ಸ್ಮಾರ್ಟ್ಫೋನನ್ನು ಬಿಸಿಯಯಾಗದಂತೆ ತಡೆಯಲು ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿರಿ. ಮೊಬೈಲ್ ಅನ್ನು ಕಂಪ್ಯೂಟರ್ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಬಿಸಿ ಆಗುವ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಂಪನಿ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ. ಇನ್ನೂ ಕೆಲವರು ವೇಗವಾಗಿ ಮೊಬೈಲ್ ಚಾರ್ಜ್ ಆಗಬೇಕು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ದೊರೆಯಲಿರುವ ಫಾಸ್ಟ್ ಚಾರ್ಜರ್ಗಳನ್ನು ಬಳಸಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಾರೆ. ಇದರಿಂದ ಬ್ಯಾಟರಿ ಬೇಗ ಬಿಸಿಯಾಗಲಿದ್ದು, ಬ್ಯಾಟರಿ ಕ್ಷಮತೆ ಕೂಡ ಕಡಿಮೆಯಾಗಲಿದೆ.
ಮುಕ್ಯವಾಗಿ ಮೊಬೈಲ್ ಅನ್ನು ರಾತ್ರಿ ಇಡೀ ಚಾರ್ಜ್‌ಗೆ ಹಾಕಿ ಬಿಡುವುದು ಕೂಡ ಅಪಾಯಕಾರಿ. ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿದದರೆ ಉತ್ತಮ.
Published On - 2:38 pm, Fri, 25 November 22