
ಶ್ರೀಹರಿಕೋಟ: ‘ಓಷನ್ಸ್ಯಾಟ್ 3’(Oceansat-3) ಸೇರಿದಂತೆ 9 ಉಪಗ್ರಹಗಳನ್ನು ಒಳಗೊಂಡ ‘ಪಿಎಸ್ಎಲ್ವಿ-ಸಿ 54 (PSLV C 54)’ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಿದೆ. ಉಪಗ್ರಹಗಳ ಉಡಾವಣೆಗೆ ಶುಕ್ರವಾರವೇ ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ 11.56ಕ್ಕೆ ಯಶಸ್ವಿಯಾಗಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಪಿಎಸ್ಎಲ್ವಿ ಎಕ್ಸ್ಎಲ್ ವರ್ಷನ್ನ ರಾಕೆಟ್ ಉಡಾವಣೆಯಾದ 2 ಗಂಟೆ 20 ನಿಮಿಗಳಲ್ಲಿ ಉಪಗ್ರಹಗಳನ್ನು ಸನ್-ಸಿಂಕ್ರೋನಸ್ ಧ್ರುವೀಯ ಕಕ್ಷೆಯಲ್ಲಿ ನೆಲೆಗೊಳಿಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಓಷನ್ಸ್ಯಾಟ್ 3 ಹಾಗೂ ಆನಂದ್ ಉಪಗ್ರಹಗಳು ಸೇರಿದಂತೆ ಇತರ 8 ನ್ಯಾನೊ ಉಪಗ್ರಹಗಳು ಕಕ್ಷೆ ಸೇರಲಿವೆ. ಈ ಪೈಕಿ ಪಿಕ್ಸ್ಕ್ಷೆಲ್ನ ಭೂತಾನ್ಸ್ಯಾಟ್, ಅಮೆರಿಕದ ಸ್ಪೇಸ್ಫ್ಲೈಟ್ನ ನಾಲ್ಕು ಆ್ಯಸ್ಟ್ರೋಕಾಸ್ಟ್ ಉಪಗ್ರಹಗಳು ಕೂಡ ಸೇರಿವೆ. ಸಾಗರ ವೀಕ್ಷಣೆ, ಭೂ ವೀಕ್ಷಣೆ, ಇಂಡೊ-ಫ್ರೆಂಚ್ ಸಹಭಾಗಿತ್ವ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಉಪಗ್ರಹಗಳೂ ಇದರಲ್ಲಿ ಸೇರಿವೆ ಎಂದು ಇಸ್ರೋದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನಂದ್ ನ್ಯಾನೊ ಉಪಗ್ರಹ ಭೂಮಿಯ ಕೆಳ ಕಕ್ಷೆಯಲ್ಲಿ ಮೈಕ್ರೋಸ್ಯಾಟಲೈಟ್ ಬಳಸಿಕೊಂಡು ಭೂಮಿಯ ವೀಕ್ಷಣೆ ನಡೆಸಲಿದೆ. ಥೈಬೋಲ್ಟ್ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Sat, 26 November 22