ಟೆಸ್ಲಾ ಸಿಇಒ ಎಲಾನ್ ಮಸ್ಕ್ ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು (Twitter) ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಇದರಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಕೆಲವೊಂದು ಹೊಸ ಆಯ್ಕೆಗಳನ್ನು ಪರಿಚಯಿಸುವ ಕೆಲಸಗಳು ನಡೆಯುತ್ತಿದ್ದರೆ, ಇದರ ಜೊತೆಗೆ ಕಠಿಣ ನಿಯಮ ತರುವ ಬಗ್ಗೆ ಕೂಡ ಮಾತುಕತೆ ಶುರುವಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಟ್ವಿಟರ್‌ನಲ್ಲಿ ಇನ್ನುಮುಂದೆ ಬ್ಲೂ ಸಬ್ಸ್ಕ್ರಿಪ್ಷನ್ (Twitter Verification) ಪಡೆಯಬೇಕಾದರೆ ಹಣ ಪಾವತಿಸಬೇಕಾಗುತ್ತದೆ ಎಂಬ ನಿಯಮವನ್ನು ಮಸ್ಕ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ನಿಷೇಧವಾಗಿದೆ (Twitter ban).
ಈ ಬಗ್ಗೆ ಟ್ವಿಟರ್ ಕಂಪನಿ ಮಾಹಿತಿ ನೀಡಿದ್ದು, ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವೆ ಭಾರತದಲ್ಲಿ ಒಟ್ಟು 54 ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ಹೇಳಿದೆ. ಈ ಖಾತೆಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದೆ ನಗ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿತ್ತು ಎಂಬ ಕಾರಣ ನೀಡಿದೆ. ಐಟಿ ನಿಯಮ 2021ರ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.
ಐಟಿ ನಿಯಮಗಳು 2021 ರ ನಿಯಮ ಉಲ್ಲಂಘನೆ ಬಗ್ಗೆ ಮಾಸಿಕ ವರದಿಯಲ್ಲಿ ಭಾರತದಲ್ಲಿನ ಬಳಕೆದಾರರಿಂದ 157 ದೂರುಗಳನ್ನು ಟ್ವಿಟರ್ ಸ್ವೀಕರಿಸಿದೆ. 129 URL ಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ”ನಾವು ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ 43 ಕುಂದುಕೊರತೆಗಳನ್ನು ಪ್ರಕ್ರಿಯೆಗೊಳಿಸಿದ್ದೇವೆ. ಇವೆಲ್ಲವನ್ನೂ ಪರಿಹರಿಸಲಾಗಿದೆ ಮತ್ತು ಸೂಕ್ತ ಕ್ರಮಗಳಲ್ಲಿ ಕೈಗೊಳ್ಳಲಾಗಿದೆ” ಎಂದು ಟ್ವಿಟ್ಟರ್ ಅನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಹೇಳಿದೆ.
ಕಳೆದ ತಿಂಗಳು, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಮಕ್ಕಳ ಅಶ್ಲೀಲತೆಯ ದೂರುಗಳಲ್ಲಿ ಟ್ವಿಟರ್‌ನಿಂದ ಪಡೆದ ಉತ್ತರಗಳು ಅಪೂರ್ಣವಾಗಿವೆ ಮತ್ತು ಇದರಿಂದ ಆಯೋಗವು ತೃಪ್ತಿ ಹೊಂದಿಲ್ಲ ಎಂದು ಹೇಳಿದ್ದರು. ಟ್ವಿಟರ್‌ನಲ್ಲಿ ಮಕ್ಕಳ ಅಶ್ಲೀಲತೆ ಮತ್ತು ಮಹಿಳೆಯರ, ಮಕ್ಕಳ ಅತ್ಯಾಚಾರದ ವಿಡಿಯೋಗಳನ್ನು ಚಿತ್ರಿಸುವ ಟ್ವೀಟ್‌ಗಳ ಕುರಿತು ಮಲಿವಾಲ್ ಸೆಪ್ಟೆಂಬರ್ 20 ರಂದು ಟ್ವಿಟರ್ ಇಂಡಿಯಾ ನೀತಿ ಮುಖ್ಯಸ್ಥ ಮತ್ತು ದೆಹಲಿ ಪೊಲೀಸರಿಗೆ ಸಮನ್ಸ್ ನೀಡಿದ್ದರು. ಟ್ವಿಟರ್‌ನಲ್ಲಿ ಮಕ್ಕಳ ಅಶ್ಲೀಲತೆಯನ್ನು ಬಿಂಬಿಸುವಂತಹ ಟ್ವೀಟ್‌ಗಳ ಹೆಚ್ಚಾಗುತ್ತಿದೆ. ಈ ಬಗ್ಗೆ ಎಲಾನ್ ಮಸ್ಕ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ಟ್ವಿಟರ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ಟ್ವಿಟರ್ ನಿಮ್ಮ ಖಾತೆಯನ್ನು ಬ್ಯಾನ್ ಮಾಡಬಹುದು.
ಬ್ಲೂಟಿಕ್ ಬೇಕಾದಲ್ಲಿ ಹಣ ಪಾವತಿಸಬೇಕು:
ಟ್ವಿಟರ್ನ ಬ್ಲೂ ಸಬ್ಸ್ಕ್ರಿಪ್ಷನ್ ಪಡೆಯಬೇಕಾದರೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ. ಟ್ವಿಟರ್ ಪ್ರಸ್ತುತ ಹೊಸ ಚಂದಾದಾರಿಕೆಗಾಗಿ 19.99 ಡಾಲರ್ (ಸುಮಾರು 1600 ರೂಪಾಯಿ) ಶುಲ್ಕ ವಿಧಿಸಲು ಯೋಜಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪರಿಶೀಲನೆಗೆ ಒಳಪಟ್ಟ ಬಳಕೆದಾರರು ಚಂದಾದಾರರಾಗಲು ಅಥವಾ ತಮ್ಮ ನೀಲಿ ಟಿಕ್‌ಮಾರ್ಕ್ ಅನ್ನು ಕಳೆದುಕೊಳ್ಳಲು 90 ದಿನಗಳ ಕಾಲಾವಧಿ ಹೊಂದಿರುತ್ತಾರೆ. ಬ್ಲೂ ಸಬ್ಸ್ಕ್ರಿಪ್ಷನ್ ಇದು ಟ್ವೀಟ್‌ಗಳನ್ನು ಎಡಿಟ್ ಮಾಡುವುದು ಮತ್ತು ಅನ್ಡು ಮಾಡುವಂಥ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ. ನವೆಂಬರ್ 7ರ ಒಳಗೆ ಈ ಫೀಚರ್ ಅನ್ನು ಜಾರಿಗೊಳಿಸುವಂತೆ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತಿಳಿಸಲಾಗಿದೆ.