ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಆ್ಯಪ್ ಎಂದರೆ ಅದು ವಾಟ್ಸ್ಆ್ಯಪ್ (WhatsApp). ತಿಂಗಳಲ್ಲಿ 2 ಬಿಲಿಯನ್ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದರಲ್ಲಿ 500 ಮಿಲಿಯನ್ ಅಕೌಂಟ್ ಭಾರತೀಯರದ್ದೇ ಆಗಿದೆ. ವಾಟ್ಸ್ಆ್ಯಪ್ ಬಳಕೆದಾರರಿಗೆ ಇಷ್ಟೊಂದು ಹತ್ತಿರವಾಗಲು ಪ್ರಮುಖ ಕಾರಣ ಇದರಲ್ಲಿರುವ ಫೀಚರ್ಸ್. ಜನರ ಅನುಕೂತಕ್ಕೆ ತಕ್ಕಂತೆ ಒಂದರ ಹಿಂದೆ ಒಂದು ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್ಆ್ಯಪ್ ಇದೀಗ ಶಾಕಿಂಗ್ ಸುದ್ದಿಯೊಂದು ನೀಡಿದೆ. ದೀಪಾವಳಿ (Diwali) ಹಬ್ಬ ಶುರುವಾಗಿದ್ದು, ನೀವು ಫೋಟೋ, ವಿಡಿಯೋ, ಶುಭಾಶಯಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತೀರಿ. ಆದರೆ, ಕೆಲ ಐಫೋನ್ (iPhone) ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ದೀಪಾವಳಿ ಹಬ್ಬದಂದೇ ವಾಟ್ಸ್ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ.
ಇದೇ ಅಕ್ಟೋಬರ್ 24 ರಿಂದ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಹಾಗೂ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಶಾಶ್ವತವಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಸ್ಥಗಿತವಾಗಲಿದೆ. ಆ್ಯಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ, ಇದೇ ಅಕ್ಟೋಬರ್ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಿದೆ. ಐಒಎಸ್ 10 ಅಥವಾ ಐಒಎಸ್ 11 ಆವೃತ್ತಿಗಳಲ್ಲಿ ಆ್ಯಪ್ ಚಾಲನೆ ಮಾಡುವ ಐಫೋನ್ ಬಳಕೆದಾರರಿಗೆ ವಾಟ್ಸ್ಆ್ಯಪ್ ಈಗಾಗಲೇ ಎಚ್ಚರಿಕೆ ಸಂದೇಶ ಕೂಡ ರವಾನಿಸಿದೆ. ಇದರ ಜೊತೆಗೆ ಆಂಡ್ರಾಯ್ಡ್ 4.1 ಮತ್ತು ಅದಕ್ಕಿಂತ ಹಳೆಯ ಆವೃತ್ತಿಗಳಲ್ಲಿ ವಾಟ್ಸ್ಆ್ಯಪ್ ಇನ್ನುಂದೆ ಕಾರ್ಯನಿರ್ವಹಿಸಲ್ಲ.
ವಾಟ್ಸ್ಆ್ಯಪ್ ಮೆಸೆಜ್ ಆ್ಯಪ್ ಈ ಬಗ್ಗೆ ಬಳಕೆದಾರರಿಗೆ ಸೂಚನೆಯನ್ನು ಕಳುಹಿಸಿದ್ದು, ವಾಟ್ಸ್ಆ್ಯಪ್ ಶೀಘ್ರದಲ್ಲೇ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸುತ್ತದೆ. ಹೀಗಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಐಫೋನ್‌ಗಳನ್ನು ಅಥವಾ ಆಂಡ್ರಾಯ್ಡ್ ಫೋನ್ಗಳನ್ನು ನವೀಕರಿಸಬೇಕಾಗುತ್ತದೆ ಎಂದು ಸಂದೇಶ ಕಳುಹಿಸಿದೆ.
ಐಫೋನ್ 5 ಮತ್ತು ಐಫೋನ್ 5C ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತವಾಗಲಿದೆ. ಆ್ಯಪಲ್ ಐಓಎಸ್ 12 ಅಥವಾ ಅದಕ್ಕಿಂತ ಮುಂದಿನ ಐಓಎಸ್ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸಲಿದೆ. ಹಾಗೆಯೇ ಐಒಎಸ್ 10 ಮತ್ತು ಐಒಎಸ್ 11 ಐಓಎಸ್ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಸ್ವೀಕರಿಸಿರಬಹುದು. ಅದಕ್ಕಾಗಿ ನೀವು ಐಫೋನ್ನಲ್ಲಿ ಸೆಟ್ಟಿಂಗ್ಗೆ ತೆರಳು ಜನರೇಲ್ ಆಯ್ಕೆ ಮಾಡಬೇಕು. ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಈ ಸಂದರ್ಭ ಯಾವುದೇ ಇತರೆ ಆಯ್ಕೆಯನ್ನು ಒತ್ತದಿರಿ. ಇದು ಅಪ್ಡೇಟ್ ಆಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.
ವಾಟ್ಸ್ಆ್ಯಪ್ ಹೊಸ ಫೀಚರ್ಸ್:
ವಾಟ್ಸ್ಆ್ಯಪ್ನಲ್ಲಿ ಹೊಸ ಹೊಸ ಅಪ್ಡೇಟ್ ಬರಲು ಸಜ್ಜಾಗಿದೆ. ತನ್ನ ಮುಂದಿನ ಅಪ್ಡೇಟ್ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ. ಅಂತೆಯೆ ವಾಟ್ಸ್ಆ್ಯಪ್ ಗ್ರೂಪ್ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇನ್ನು ವಾಟ್ಸ್ಆ್ಯಪ್ ತನ್ನ ನೂತನ ಅಪ್ಡೇಟ್ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇದರ ಜೊತೆಗೆ ವಾಟ್ಸ್ಆ್ಯಪ್ನಲ್ಲಿ ಪಾವತಿ ಮಾಡಿ ಬಳಸಬೇಕಾದ ಪ್ರೀಮಿಯಂ ಸೌಲಭ್ಯ ಸದ್ಯದಲ್ಲೇ ಬರಲಿದೆ. ಈ ಆಯ್ಕೆ ವಾಟ್ಸ್ಆ್ಯಪ್ ಬ್ಯುಸಿನೆಸ್ ಬಳಕೆದಾರರಿಗೆ ಲಭ್ಯವಾಗಲಿದ್ದು, ಗ್ರಾಹಕರೊಂದಿಗೆ ಸಂವಹನ ನಡೆಸಲು ಹೊಸದಾದ ಹಲವು ಪಾವತಿಸಬೇಕಾದ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.
Published On - 11:19 am, Fri, 21 October 22