ಪ್ರಪಂಚದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ (WhatsApp) ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಿನೂತನ ಆಯ್ಕೆಯನ್ನು ಪರಿಚಯಿಸುವ ವಾಟ್ಸ್ಆ್ಯಪ್ನಲ್ಲಿ ಇನ್ನೂ ಅನೇಕ ಆಯ್ಕೆಗಳು ಪರೀಕ್ಷಾ ಹಂತದಲ್ಲಿದೆ. ಇತ್ತ ವಾಟ್ಸ್ಆ್ಯಪ್ ತಿಂಗಳಿಗೆ ಒಂದೊಂದು ಹೊಸ ಆಯ್ಕೆಯನ್ನು ಬಿಡುಗಡೆ ಮಾಡುತ್ತಿದ್ದರೆ ಅತ್ತ ಬಳಕೆದಾರರಿಗೆ ಅಪ್ಡೇಟ್ (Update) ಬಂದಿದೆ ಎಂಬ ಸುದ್ದಿಯೆ ತಿಳಿದಿರುವುದಿಲ್ಲ. ಇದೀಗ ಇದನ್ನೆ ಗಮನದಲ್ಲಿಟ್ಟುಕೊಂಡು ವಾಟ್ಸ್ಆ್ಯಪ್ ಹೊಸ ಫೀಚರ್ (New Feature) ಒಂದು ನೀಡಲು ಮುಂದಾಗಿದೆ.
ಬಳಕೆದಾರರಿಗೆ ವಾಟ್ಸ್ಆ್ಯಪ್ನಲ್ಲಿ ನೂತನ ಅಪ್ಡೇಟ್ ಬಂದಿದೆ ಎಂದು ತಿಳಿಸಲು ಹೊಸ ಚಾಟ್‌ಬಾಟ್ ಎಂಬ ಆಯ್ಕೆಯನ್ನು ನೀಡುತ್ತಿದೆ. ಈ ಚಾಟ್‌ಬಾಟ್ ಮೂಲಕ ಯಾವುದೇ ಹೊಸ ಫೀಚರ್ಸ್ ಸೇರ್ಪಡೆ ಯಾದರೂ ಮೊದಲಿಗೆ ಮಾಹಿತಿ ನೀಡಲಿದೆ. ಬಿಡುಗಡೆ ಆಗಿರುವ ಹೊಸ ಫೀಚರ್ಸ್ ಹಾಗೂ ಅದರ ವಿಶೇಷತೆ ಏನು? ಅದರ ಕಾರ್ಯವೈಖರಿ ಹೇಗಿರಲಿದೆ? ಎಂಬೆಲ್ಲಾ ಮಾಹಿತಿಯನ್ನು ಈ ಚಾಟ್‌ಬಾಟ್ ನೀಡುತ್ತದೆ.
WABetaInfo ಪ್ರಕಾರ ವಾಟ್ಸ್ಆ್ಯಪ್ನ ಚಾಟ್‌ಬಾಟ್ ಆಯ್ಕೆ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ ಎನ್ನಲಾಗಿದೆ. ಈ ಚಾಟ್‌ಬಾಟ್‌ನ ಸಹಾಯದಿಂದ ಸಂಭಾಷಣೆಯ ಪಟ್ಟಿಯಲ್ಲಿ ಜನರು ಹೊಸ ಫೀಚರ್ಸ್ ಬಗ್ಗೆ ಮೊದಲು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ಸಲಹೆಗಳು ಮತ್ತು ತಂತ್ರಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಇದರಲ್ಲಿ ರಿಪ್ಲೆ ಮಾಡುವುದಕ್ಕೆ ಅವಕಾಶವಿಲ್ಲದೆ ರುವುದರಿಂದ ಇದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಎಲ್ಲಾದರು ಈ ಆಯ್ಕೆ ನಿಮಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದಾದರೆ ಚಾಟ್‌ಬಾಟ್ ಅಕೌಂಟ್ ಅನ್ನು ಬ್ಲಾಕ್ ಮಾಡಲು ಕೂಡ ಅವಕಾಶ ಇದೆಯಂತೆ.
ಇನ್ನು ವಾಟ್ಸ್ಆ್ಯಪ್ ಸದ್ಯದಲ್ಲೇ ನಿರ್ದಿಷ್ಟ ಜನರಿಂದ ಆನ್‌ಲೈನ್ ಸ್ಟೇಟಸ್ ಹೈಡ್ ಮಾಡುವ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಅಂದರೆ ನಿಮಗೆ ಬೇಡ ಎನಿಸುವ ಜನರನ್ನು ಆನ್‌ಲೈನ್ ಸ್ಟೇಟಸ್ ನೋಡದಂತೆ ಹೈಡ್ ಮಾಡುವ ಆಯ್ಕೆ ಇದಾಗಿದೆ. ಸಾಮಾನ್ಯವಾಗಿ ನಿಮ್ಮ ಕಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರಿಗೆ ನೀವು ಆನ್‌ಲೈನ್‌ನಲ್ಲಿದ್ದರೆ ತಿಳಿಯುತ್ತದೆ. ಆದರೆ ಈ ಹೊಸ ಆಯ್ಕೆಯು ಸೇರ್ಪಡೆಯಾದ ನಂತರ ನೀವು ಬಯಸದ ವ್ಯಕ್ತಿಗಳು ಆನ್‌ಲೈನ್ ಸ್ಟೇಟಸ್ ನೋಡದಂತೆ ಮಾಡುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಪ್ರಸ್ತುತ ಇದುಕೂಡ ಅಭಿವೃದ್ಧಿ ಹಂತದಲ್ಲಿದ್ದು 2.22.16.12. ಅಪ್ಡೇಟ್ನಲ್ಲಿ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ.
Published On - 2:53 pm, Sun, 31 July 22