ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಆಕರ್ಷಕ ಆಯ್ಕೆಗಳನ್ನು ನೀಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದಂತೂ ಒಂದರ ಹಿಂದೆ ಒಂದರಂತೆ ವಿನೂತನ ಅಪ್ಡೇಟ್ ಅನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೆ ಡಿಲೀಟ್ ಫಾರ್ ಎವರಿವನ್ (Delete For Everyone) ಆಯ್ಕೆಯಲ್ಲಿ ಸಮಯದ ಮಿತಿಯನ್ನು ಹೆಚ್ಚಿಸಿತ್ತು. ಇದೀಗ ಇದರಲ್ಲಿ ಮತ್ತೊಂದು ಹೊಸ ಆಯ್ಕೆಯನ್ನು ನೀಡುವ ಬಗ್ಗೆ ವರದಿಯಾಗಿದೆ. ಇದರ ಪ್ರಕಾರ ವಾಟ್ಸ್ಆ್ಯಪ್ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ (Message) ಅನ್ನು ರಿಕವರಿ ಮಾಡಬಹುದಂತೆ.
ಈ ಬಗ್ಗೆ ವಾಟ್ಸ್ಆ್ಯಪ್ ಬೇಟಾಇನ್ಫೊ ವರದಿ ಮಾಡಿದ್ದು, ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಈಗ ನೀವು ಯಾರಿಗಾದರು ಮೆಸೇಜ್ ಕಳುಹಿಸಿದ್ದನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಆ ಮೆಸೇಜ್ ಅನ್ನು ಮರಳಿ ಪಡೆಯುವ ಆಯ್ಕೆ ಇದಾಗಿದೆ. ಆದರೆ, ಇದು ಎಷ್ಟು ಸಮಯದ ಒಳಗೆ ರಿಕವರಿ ಮಾಡಬಹುದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.
ಇನ್ನು ಪ್ರೊಫೈಲ್ ಫೋಟೋದಲ್ಲಿ ಅವತಾರ್ (Avatar) ಎಂಬ ಆಯ್ಕೆಯನ್ನು ವಾಟ್ಸ್ಆ್ಯಪ್ ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ವಾಟ್ಸ್ಆ್ಯಪ್ ಬೇಟಾಇನ್ಫೋ ವರದಿ ಮಾಡಿದೆ. ಈ ಅವತಾರ್ ಫೀಚರ್ ಅನ್ನು ಬಳಸಿ ನಿಮ್ಮ ಪ್ರೊಫೈಲ್ ಫೋಟೋವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು. ಅಂದರೆ, ಇಲ್ಲಿ ನಿಮಗೆ ಬ್ಯಾಕ್ಗ್ರೌಂಡ್ ಕಲರ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ಪರೀಕ್ಷಾ ಹಂತದಲ್ಲಿರುವ ಈ ಫೀಚರ್ ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್, ಐಒಎಸ್ ಹಾಗೂ ಡೆಸ್ಕ್ ಟಾಪ್ ಬಳಕೆದಾರರಿಗೆ ಸಿಗಲಿದೆಯಂತೆ.
ಇದರ ಜೊತೆಗೆ ಹೊಸ ಲಾಗಿನ್ ಫೀಚರ್ ತರಲು ಮುಂದಾಗಿದೆ. ಇದು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿರುವ ಲಾಗಿನ್ ಅನುಮೋದನೆ ಫೀಚರ್ ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ನೀವು ಹೊಸ ಡಿವೈಸ್‌ನಲ್ಲಿ ವಾಟ್ಸ್ಆ್ಯಪ್ ಖಾತೆಗೆ ಲಾಗಿನ್ ಮಾಡಿದರೆ ನಿಮಗೆ ವಾಟ್ಸ್ಆ್ಯಪ್ನಿಂದ ನೋಟಿಫಿಕೇಶನ್ ಬರಲಿದೆ. ಈ ನೋಟಿಫಿಕೇಶನ್‌ನಲ್ಲಿ ಲಾಗಿನ್ ಆಗುತ್ತಿರುವುದು ನೀವೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ನಿಮ್ಮನ್ನು ಕೇಳುತ್ತದೆ. ಅದನ್ನು ನೀವು ಓಕೆ ಮಾಡಿದರೆ ಮಾತ್ರ ವಾಟ್ಸ್ಆ್ಯಪ್ ಲಾಗಿನ್ ಆಗುತ್ತದೆ. ಅಲ್ಲದೆ ಒಂದು ವೇಳೆ ನೀವು 6-ಅಂಕಿಯ ವೆರಿಫಿಕೇಶನ್ ಕೋಡ್ ಅನ್ನು ತಪ್ಪಾಗಿ ಶೇರ್ ಮಾಡಿದರೂ ಕೂಡ ನಿಮ್ಮ ಲಾಗ್ ಇನ್ ಪ್ರಯತ್ನ ವಿಫಲವಾಗಲಿದೆ.
Published On - 2:58 pm, Thu, 18 August 22