WhatsApp: ವಾಟ್ಸ್ಆ್ಯಪ್ನಿಂದ ಬಂದಿದೆ ತುರ್ತು ಸಂದೇಶ: ಕೂಡಲೇ ಅಪ್ಡೇಟ್ ಮೂಡುವಂತೆ ಸೂಚನೆ
WhatsApp Update: ತಕ್ಷಣವೇ ಆಂಡ್ರಾಯ್ಡ್ (Android) ಬಳಕೆದಾರರು ಪ್ಲೇ ಸ್ಟೋರ್ ಮೂಲಕ ಹಾಗೂ ಐಒಎಸ್ ಬಳಕೆದಾರರು ಆ್ಯಪ್ ಸ್ಟೋರ್ ಮೂಲಕ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡುವಂತೆ ಹೇಳಿದೆ.
ವಾಟ್ಸ್ಆ್ಯಪ್ (WhatsApp) ಅನ್ನು ಇಂದು ಕೋಟ್ಯಾಂತರ ಮಂದಿ ಬಳಕೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸಾಕಷ್ಟು ಅಭಿವೃದ್ದಿಹೊಂದಿ ಬಳಕೆದಾರರಿಂದ ಮನ್ನಣೆಗೆ ಪಾತ್ರವಾಗಿರುವ ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ನಿಂದ ಇದೀಗ ತುರ್ತು ಸಂದೇಶವೊಂದು ಬಂದಿದೆ. ವಾಟ್ಸ್ಆ್ಯಪ್ ಬಳಕೆದಾರರು ತಕ್ಷಣವೆ ತಮ್ಮ ಆ್ಯಪ್ ಅನ್ನು ಅಪ್ಡೇಟ್ ಮಾಡುವಂತೆ ಸೂಚನೆ ನೀಡಿದೆ. ಮೆಟಾ (Meta) ಮಾಲೀಕತ್ವದ ವಾಟ್ಸ್ಆ್ಯಪ್ನಲ್ಲಿ “ಕ್ರಿಟಿಕಲ್” ದುರ್ಬಲತೆ ಕಂಡುಬಂದಿದೆ. ಇದನ್ನು ಗಮನಿಸಿರುವ ವಾಟ್ಸ್ಆ್ಯಪ್ ಇದೀಗ ಹೊಸ ಆವೃತ್ತಿಯಲ್ಲಿ ಪ್ಯಾಚ್ ಮಾಡಲಾಗಿದ್ದು, ಅಪ್ಡೇಟ್ ಅನ್ನು ಕೂಡ ಪರಿಚಯಿಸಿದೆ. ತಕ್ಷಣವೇ ಆಂಡ್ರಾಯ್ಡ್ (Android) ಬಳಕೆದಾರರು ಪ್ಲೇ ಸ್ಟೋರ್ ಮೂಲಕ ಹಾಗೂ ಐಒಎಸ್ ಬಳಕೆದಾರರು ಆ್ಯಪ್ ಸ್ಟೋರ್ ಮೂಲಕ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡುವಂತೆ ಹೇಳಿದೆ.
ನೀವೆಲ್ಲಾದರು ನೂತನ ಆವೃತ್ತಿಗೆ ಅಪ್ಡೇಟ್ ಮಾಡದೆ ಹಳೆಯ ಆವೃತ್ತಿಯಲ್ಲೇ ಇದ್ದರೆ ಹ್ಯಾಕರ್‌ಗಳು ನಿಮ್ಮ ಅಕೌಂಟ್ ಹ್ಯಾಕ್ ಮಾಡುವ ಸಾದ್ಯತೆಯಿದೆ ಎಂದು ವಾಟ್ಸ್ಆ್ಯಪ್ ಎಚ್ಚರಿಕೆ ಕೂಡ ನೀಡಿದೆ. ಸದ್ಯ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬಂದಿದ್ದ ದುರ್ಬಲತೆಗಳನ್ನು ಹೊಸ ಆವೃತ್ತಿಯಲ್ಲಿ ಪ್ಯಾಚ್ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ವಾಟ್ಸ್ಆ್ಯಪ್ ಆಂಡ್ರಾಯ್ಡ್‌ನಲ್ಲಿ V2.22.16.12 ಗೆ ಮೊದಲು, ಆಂಡ್ರಾಯ್ಡ್ ಬ್ಯುಸಿನೆಸ್ ಆವೃತ್ತಿ v2.22.16.12 ಗೆ ಮೊದಲು, ಐಒಎಸ್‌ನಲ್ಲಿ v2.22.16.12 ಗೆ ಮೊದಲು, ಹಾಗೆಯೇ ಐಒಎಸ್ ಬ್ಯುಸಿನೆಸ್ ಆವೃತ್ತಿ v2.22.16.12 ಗೆ ಮೊದಲಿನ ಆವೃತ್ತಿ ಬಳಸುವವರು ಅಪ್ಡೇಟ್ ಆಗುವುದು ಅತಿ ಅವಶ್ಯಕವಾಗಿದೆ ಎನ್ನಲಾಗಿದೆ.
ಹಿಂದಿನ ಆವೃತ್ತಿಯ ವಾಟ್ಸ್ಆ್ಯಪ್ನಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಶನ್‌ನಲ್ಲಿ, ಹ್ಯಾಕರ್‌ಗಳು ಯಾರೊಬ್ಬರ ಕಂಪ್ಯೂಟಿಂಗ್ ಡಿವೈಸ್‌ಗಳಿಗೆ ಪ್ರವೇಶಿಸುವುದಕ್ಕೆ ಅವಕಾಶವಿದೆ. ಇದರಿಂದ ಬಳಕೆದಾರರ ಎಲ್ಲಾ ವೈಯಕ್ತಿಕ ಡೇಟಾವನ್ನು ಪ್ರವೇಶಿಸಬಹುದಾಗಿದೆ ಎನ್ನಲಾಗಿದೆ. CVE-2022-27492 ಎಂದು ಟ್ರ್ಯಾಕ್ ಮಾಡಲಾದ ಎರಡನೇ ನ್ಯೂನತೆಯು ಒಂದು ಪೂರ್ಣಾಂಕ ಅಂಡರ್ಫ್ಲೋ ಆಗಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಿದ ವಿಡಿಯೊ ಫೈಲ್ ಅನ್ನು ಕಳುಹಿಸುವ ಮೂಲಕ ಬಳಕೆದಾರನ ಫೋನ್ನಲ್ಲಿ ರಿಮೋಟ್ ಕೋಡ್ ಅನ್ನು ನೆಡಲು ಹ್ಯಾಕರ್ಗಳು ಬಳಸಬಹುದಾಗಿದೆ. WhatsApp ಅನುಕ್ರಮವಾಗಿ 2.22.16.2 ಮತ್ತು 2.22.15.9 ಅಪ್ಲಿಕೇಶನ್ ಆವೃತ್ತಿಗಳನ್ನು ಬಿಡುಗಡೆ ಮಾಡುವ ಮೂಲಕ ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಈ ದೋಷಗಳನ್ನು ಸರಿಪಡಿಸಿದೆ.
ಇನ್ನು ವಾಟ್ಸ್ಆ್ಯಪ್ ಈ ವರ್ಷ ಅತಿ ಹೆಚ್ಚು ಅಪ್ಡೇಟ್ಗಳನ್ನು ಪರಿಚಯಿಸಿ ಬಳಕೆದಾರರ ನೆಚ್ಚಿನ ಆ್ಯಪ್ ಆಗಿಬಿಟ್ಟಿದೆ. ಮೆಸೇಜ್ಗೆ ಎಮೋಜಿ ರಿಯಾಕ್ಷನ್ನಿಂದ ಹಿಡಿದು ಮೆಸೇಜ್ ಡಿಲೀಟ್ ಮಾಡುವ ಸಮಯವನ್ನು ಹೆಚ್ಚಿಸಿ ಇನ್ನು ಕೆಲವೇ ದಿನಗಳಲ್ಲಿ ಲಾಗೌಟ್ ಆಯ್ಕೆ, ಗ್ರೂಪ್ ಅಡ್ಮಿನ್ಗೆ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ ಹೀಗೆ ಅನೇಕ ಫೀಚರ್ಗಳನ್ನು ಪರಿಚಯಿಸಲು ಮುಂದಾಗಿದೆ. ಇದರ ನಡುವೆ ಮತ್ತೊಂದು ಅಚ್ಚರಿಯ ಅಪ್ಡೇಟ್ ತರಲು ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಅದುವೆ ಎಡಿಟ್ ಆಯ್ಕೆ. ಅಂದರೆ ನೀವು ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡಬಹುದಾಗಿದೆ.
ಈ ಬಗ್ಗೆ ವಾಬೇಟಾಇನ್ಫೊ ವರದಿ ಮಾಡಿದ್ದು, ವಾಟ್ಸ್ಆ್ಯಪ್ ಸದ್ಯದಲ್ಲೇ ಎಡಿಟ್ ಮೆಸೇಜ್ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದೆ. ಬಳಕೆದಾರರು ಇತರರಿಗೆ ಮೆಸೇಜ್ ಮಾಡುವ ಸಂದರ್ಭ ಅಕ್ಷರ ತಪ್ಪಿ ಸೆಂಡ್ ಮಾಡಿದ್ದರೆ ಪುನಃ ಅದನ್ನು ಸರಿಗೊಳಿಸಲು ಇದು ಸಹಕಾರಿ ಮಾಡಲಿದೆ. ಸದ್ಯಕ್ಕೆ ಈ ಆಯ್ಕೆ ಆಂಡ್ರಾಯ್ಡ್ ಬೇಟಾ ವರ್ಷನ್ನಲ್ಲಿ ಲಭ್ಯವಿದೆ. ಈಗಾಗಲೇ ಇರುವ ಡಿಲೀಟ್ ಫಾರ್ ಎವರಿವನ್ ಆಯ್ಕೆ ಸಂಪೂರ್ಣ ಮೆಸೇಜ್ ಅನ್ನು ಡಿಲೀಟ್ ಮಾಡುತ್ತದೆ. ಆದರೆ, ಈ ಎಡಿಟ್ ಆಯ್ಕೆಯಲ್ಲಿ ಮೆಸೇಜ್ ಅನ್ನು ಡಿಲೀಟ್ ಮಾಡುವ ಬದಲು ಅಕ್ಷರವನ್ನು ಸರಿಪಡಿಸುವುದಾಗಿದೆ.