ಪ್ಯಾನ್ ಅಪ್ಡೇಟ್ ಮಾಡಲು ಎಸ್‌ಬಿಐ ಹೆಸರಲ್ಲಿ ನಕಲಿ ಮೆಸೇಜ್ ಕಳುಹಿಸುವ ಮೂಲಕ ಸೈಬರ್ ವಂಚಕರು ಬ್ಯಾಂಕ್ ಗ್ರಾಹಕರನ್ನು ವಂಚನೆಗೆ ಒಳಗಾಗಿಸಿದ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಅದೇ ರೀತಿ, ಎಸ್‌ಬಿಐ ರಿವಾರ್ಡ್ ಆ್ಯಪ್ ಇನ್‌ಸ್ಟಾಲ್ ಮಾಡಿ ಎಂದು ಸಂದೇಶ ಕಳುಹಿಸಿ ವಂಚನೆ ಮಾಡುತ್ತಿರುವ ಜಾಲದ ಕೃತ್ಯದ ಬಗ್ಗೆಯೂ ಬೆಳಕಿಗೆ ಬಂದಿತ್ತು. ಇದೀಗ ಅದಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಆ್ಯಕ್ಸಿಸ್ ಬ್ಯಾಂಕ್ ರಿವಾರ್ಡ್ ಆ್ಯಪ್ ಹೆಸರಿನಲ್ಲಿ ವಾಟ್ಸ್ಆ್ಯಪ್ ಖಾತೆಗೇ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.
ಬ್ಯಾಂಕ್ ಗ್ರಾಹಕರೊಬ್ಬರ ವಾಟ್ಸ್ಆ್ಯಪ್ಗೆ ಆ್ಯಕ್ಸಿಸ್ ಬ್ಯಾಂಕ್ನ ಹೆಸರಿನಲ್ಲಿ ರಿವಾರ್ಡ್ ಪಾಯಿಂಟ್ ಸಂಬಂಧಿತ ಸಂದೇಶವೊಂದು ಬಂದಿದೆ. ಜತೆಗೆ, ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿದರೆ ತಕ್ಷಣವೇ ರಿವಾರ್ಡ್ ಪಾಯಿಂಟ್ ಪಡೆಯಬಹುದು ಎಂದು ಸೂಚಿಸಿ ಎಪಿಕೆ (APK) ಫೈಲ್ ಲಿಂಕ್ ಕೂಡ ಬಂದಿದೆ. ಇದನ್ನವರು ಕ್ಲಿಕ್ ಮಾಡಿದ್ದಾರೆ. ಅದಾದ ಒಂದು ದಿನದ ಬಳಿಕ ವಾಟ್ಸ್ಆ್ಯಪ್ ಖಾತೆ ಹ್ಯಾಕ್ ಆಗಿದೆ. ಅಷ್ಟೇ ಅಲ್ಲ, ಅವರು ಇರುವ ಎಲ್ಲ ವಾಟ್ಸ್ಆ್ಯಪ್ ಗ್ರೂಪ್ಗಳ ಐಕಾನ್ ಹಾಗೂ ಹೆಸರು AXIS BANK ಎಂದಾಗಿದೆ. ಜತೆಗೆ ಅವರ ಡಿಪಿ ಕೂಡ AXIS BANK ಇಮೇಜ್ ಆಗಿ ಪರಿವರ್ತನೆ ಆಗಿದೆ!
‘‘ಆತ್ಮೀಯ ಗ್ರಾಹಕರೇ, ನಿಮ್ಮ AXIS ಬ್ಯಾಂಕ್ ರಿವಾರ್ಡ್ ಪಾಯಿಂಟ್‌ಗಳನ್ನು (7250.00 ರೂ.) ಯಶಸ್ವಿಯಾಗಿ ಆ್ಯಕ್ಟಿವೇಟ್ ಮಾಡಲಾಗಿದೆ ಮತ್ತು ಇಂದೇ ಎಕ್ಸ್ಪೈರ್ ಆಗಲಿದೆ! ಈಗ AXIS ಬ್ಯಾಂಕ್ ಆ್ಯಪ್ ಇನ್‌ಸ್ಟಾಲ್ ಮಾಡುವ ಮೂಲಕ ರಿಡೀಮ್ ಮಾಡಿ’’ ಎಂಬ ಸಂದೇಶ ಗ್ರಾಹಕರ ಮೊಬೈಲ್ಗೆ ಬರುತ್ತದೆ. ಸಂದೇಶದ ಜತೆಗೆ APK ಆ್ಯಪ್ ಲಿಂಕ್ ಸಹ ಕಳುಹಿಸಲಾಗಿತ್ತದೆ.
ಒಂದು ವೇಳೆ, ಗ್ರಾಹಕರು APK ಆ್ಯಪ್ ಲಿಂಕ್ ಕ್ಲಿಕ್ ಮಾಡಿದರೆ ಅವರ ವಾಟ್ಸ್ಆ್ಯಪ್ ಅನ್ನು ಸೈಬರ್ ವಂಚಕರು ಹ್ಯಾಕ್ ಮಾಡುತ್ತಾರೆ.
ಈ ರೀತಿಯ ಸಂದೇಶ ಸೈಬರ್ ವಂಚಕರ ಕೃತ್ಯ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ. ಜತೆಗೆ, ಈ ರೀತಿಯ ಸಂದೇಶವನ್ನು ಗ್ರಾಹಕರಿಗೆ ಕಳುಹಿಸಿಲ್ಲ, ಕಳುಹಿಸುತ್ತಿಲ್ಲ ಎಂದು ಆ್ಯಕ್ಸಿಸ್ ಬ್ಯಾಂಕ್ ಕೂಡ ಸ್ಪಷ್ಟಪಡಿಸಿದೆ. ಆದ್ದರಿಂದ, ರಿವಾರ್ಡ್ ಪಾಯಿಂಟ್ಸ್ ಹೆಸರಿಲ್ಲಿ ಯಾವುದೇ ನಕಲಿ ಸಂದೇಶ, ಎಪಿಕೆ ಫೈಲ್ ಲಿಂಕ್ ಬಂದಲ್ಲಿ ಕ್ಲಿಕ್ ಮಾಡದೇ ಇರುವುದು ಒಳಿತು.
ಇದನ್ನೂ ಓದಿ: ಎಸ್‌ಬಿಐ ರಿವಾರ್ಡ್ ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಬರುತ್ತೆ..?
ಎಪಿಕೆ ಫೈಲ್ಗಳು ಇತ್ತೀಚೆಗೆ ಸೈಬರ್ ವಂಚಕರ ಪ್ರಬಲ ಅಸ್ತ್ರಗಳಾಗಿ ಪರಿಣಮಿಸಿವೆ. ಇವುಗಳನ್ನು ಡೌನ್ಲೋಡ್ ಮಾಡಿಕೊಂಡಲ್ಲಿ, ಅಥವಾ ನಮಗೆ ಅರಿವಿಲ್ಲದೆಯೇ ಯಾವುದೋ ಲಿಂಕ್ ಕ್ಲಿಕ್ ಮಾಡಿ ಇವುಗಳು ಡೌನ್ಲೋಡ್ ಆದಲ್ಲಿ ನಮ್ಮ ಮೊಬೈಲ್ನ ಸಂಪೂರ್ಣ ನಿಯಂತ್ರಣವನ್ನು ಅದು ಸೈಬರ್ ವಂಚಕರಿಗೆ ಕೊಡುತ್ತವೆ. ಇದರಿಂದ ಬ್ಯಾಂಕ್ ಖಾತೆಯಿಂದ ದುಡ್ಡು ಕಳೆದುಕೊಳ್ಳುವುದು, ವೈಯಕ್ತಿಕ ಮಾಹಿತಿ ಸೋರಿಕೆಯಂಥ ಅನೇಕ ಅಪಾಯಗಳು ಎದುರಾಗಬಹುದು.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Fri, 29 November 24