Viral Video : ಮೂರೂವರೆ ವರ್ಷದ ಈ ಹೆಣ್ಣುಮಗುವಿನ ಹೆಸರು ಸೈಲಾ. ಈಕೆಯ ಅಪ್ಪ ಅಮ್ಮ ಮೈಕ್ ಸ್ಮೈಲಿ ಮತ್ತು ಜಾನೆಲ್ಲೆ ಸ್ಮೈಲಿ. ಈ ದಂಪತಿ ವೃತ್ತಿಪರ ಪರ್ವತಾರೋಹಿಗಳು. ಇದೀಗ ಅಪ್ಪಅಮ್ಮನ ಹಾದಿಯಲ್ಲಿಯೇ ಮಗಳು ಸೈಲಾ ಸಾಗುತ್ತಿದ್ದಾಳೆ. ಇಷ್ಟು ಎತ್ತರದ ಪರ್ವತದಿಂದ ರೋಪ್ ಸ್ವಿಂಗ್ ಮಾಡುತ್ತಿರುವ ಈ ಪುಟಾಣಿಯ ವಿಡಿಯೋ ನೋಡಿ ನೆಟ್ಟಿಗರಂತೂ ಬಾಯಿಬಿಟ್ಟು ನೋಡುತ್ತಿದ್ದಾರೆ.
ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಿಸುತ್ತಾರೆ. ಜೋರಾಗಿ ಓಡದಂತೆ, ಕುಣಿಯದಂತೆ, ನೆಗೆಯದಂತೆ, ಹಾರದಂತೆ ಹೀಗೆ. ಆದರೆ ಈ ಮಗುವಿನ ವಿಷಯದಲ್ಲಿ ಎಲ್ಲವೂ ಉಲ್ಟಾ. ಏಕೆಂದರೆ ಇದು ಹುಟ್ಟಿರುವುದೇ ಸಾಹಸಪ್ರಿಯ ಅಪ್ಪ ಅಮ್ಮನ ಹೊಟ್ಟೆಯಲ್ಲಿ. ತಮ್ಮ ಮಗುವಿನ ಈ ವಿಡಿಯೋ ಹಾಕಿದ ಪೋಷಕರು, ‘ನಮ್ಮ ಮಗಳು ಸೈಲಾ ಈಗಾಗಲೇ ಸಣ್ಣಪುಟ್ಟ ರೋಪ್ಸ್ವಿಂಗ್ ಮಾಡಿದ್ದಾಳೆ. ಈ ಚಟುವಟಿಕೆ ಈಕೆಗೆ ಬಹಳ ಇಷ್ಟ. ಇದೀಗ ಇವಳ ಈ ಹೊಸ ವಿಡಿಯೋ ನೋಡಿ. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ’ ಎಂದು ಒಕ್ಕಣೆ ಬರೆದಿದ್ಧಾರೆ ಈ ವಿಡಿಯೋಗೆ.
ಈಗಾಗಲೇ 38 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 9 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ‘ಭಯ ಎನ್ನುವುದು ನಮ್ಮ ಪೋಷಕರಿಂದಲೇ ಬಂದಿರುವಂಥದ್ದು, ಆನುವಂಶಿಕವಾಗಿ. ಆದ್ದರಿಂದ ಹೀಗೆ ಮಕ್ಕಳನ್ನು ಇಂಥ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಆ ಭಯವನ್ನು ಸವಾಲಾಗಿ ಸ್ವೀಕರಿಸುವುದನ್ನು ಕಲಿಸಬೇಕು.’ ಎಂದಿದ್ಧಾರೆ ಒಬ್ಬರು. ‘ಇವಳು ಭಯವನ್ನು ಮೀರಿ ಸಂತೋಷದಿಂದ ತೂಗಾಡುತ್ತಿದ್ದಾಳೆ, ಮತ್ತಷ್ಟು ವಿಡಿಯೋಗಳನ್ನು ನೋಡಲು ಬಯಸುತ್ತೇನೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ಅತ್ಯಂತ ಅದ್ಭುತ, ನಿಮ್ಮ ಮಗಳು ನಿಮ್ಮಂಥ ಪೋಷಕರನ್ನು ಪಡೆದಿದ್ದು ಅದೃಷ್ಟಶಾಲಿ’ ಎಂದಿದ್ದಾರೆ ಮಗದೊಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:05 pm, Wed, 9 November 22