Viral : ಮೂರು ವರ್ಷದ ಹೆಣ್ಣುಮಗು ತನ್ನ ಅಂತ್ಯಕ್ರಿಯೆ ವೇಳೆ ಎಚ್ಚರಗೊಂಡ ಆತಂಕಕಾರೀ ಘಟನೆ ನಡೆದಿದೆ. ನಂತರ ಈ ಮಗುವನ್ನು ಆಸ್ಪತ್ರೆಗೇನೋ ಕರೆದೊಯ್ಯಲಾಯಿತು. ಆದರೆ ಸಂತೋಷಿಸುವ ಹಾಗಿಲ್ಲ, ಸದ್ಯ ಬದುಕುಳಿದಳು ಎಂದು. ಎರಡನೇ ಬಾರಿ ಕೂಡ, ಈಕೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯವರು ಘೋಷಿಸುವಂತಾಯಿತು. ಮಧ್ಯ ಮೆಕ್ಸಿಕೋದ ಸ್ಯಾನ್ ಲೂಯಿಸ್ ಪೊಟೋಸಿ ರಾಜ್ಯದ ಸಲಿನಾಸ್ ಡಿ ಹಿಲ್ಡಾಲ್ಗೊ ಕಮ್ಯೂನಿಟಿ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಮಗು ಹೊಟ್ಟೆನೋವು ಮತ್ತು ಜ್ವರದಿಂದ ಆಗಸ್ಟ್ 17ರಂದು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಕ್ಯಾಮಿಲಾ ರೊಕ್ಸಾನಾ ಮಾರ್ಟಿನೆಜ್ ಮೆಂಡೋಜಾ ಎಂಬುದು ಈ ಮಗುವಿನ ಹೆಸರು.
ಕ್ಯಾಮಿಲಾಳ ತಾಯಿ ಮೇರಿ ಜೇನ್ ಮೆಂಡೋಜಾ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಿ, ಮಗುವಿಗೆ ವಾಂತಿ, ಹೊಟ್ಟೆ ನೋವು ಮತ್ತು ಜ್ವರವಿದೆ ಎಂದು ಹೇಳಿದ್ದಾರೆ. ಮಕ್ಕಳ ತಜ್ಞರು ನಿರ್ಜಲೀಕರಣಕ್ಕೆ ಚಿಕಿತ್ಸೆ ಮಾಡಿದ್ದಾರೆ. ಆದರೆ ಸುಧಾರಿಸುವ ಬದಲು ಕ್ಯಾಮಿಲಾ ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ ಅಲ್ಲಿನ ವೈದ್ಯರು ಕಮ್ಯೂನಿಟಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅಲ್ಲಿ ಕೃತಕ ಆಮ್ಲಜನಕ ವ್ಯವಸ್ಥೆಗೆ ಒಳಪಡಿಸಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಕ್ಯಾಮಿಲಾ ಇದ್ದಳು. ನಂತರ ವೈದ್ಯರು ಕ್ಯಾಮಿಲಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ಧಾರೆ.
ಅಂತ್ಯಕ್ರಿಯೆಯಲ್ಲಿ ಕ್ಯಾಮಿಲಾಳ ತಾಯಿ ಮೇರಿ, ಶವಪೆಟ್ಟಿಗೆಯ ಮೇಲಿನ ಗಾಜಿನ ಫಲಕವು ಮಬ್ಬಾಗಿರುವುದನ್ನು ಗಮನಿಸಿದ್ದಾಳೆ. ಅಂದರೆ ಕ್ಯಾಮಿಲಾಳಿಗಿನ್ನೂ ಉಸಿರಿದೆ ಎನ್ನುವುದನ್ನು ಅದು ಸೂಚಿಸಿದೆ. ಅಲ್ಲಿ ಕೂಡಿರುವ ಜನರು ಭ್ರಮೆ ಎಂದು ಮೇರಿಯನ್ನು ಸುಮ್ಮನಿರಿಸಿದ್ದಾರೆ. ಹಾಗಾಗಿ ಶವಪೆಟ್ಟಿಗೆಯನ್ನು ಯಾರೂ ತೆಗೆಯಲು ಹೋಗಲೇ ಇಲ್ಲ. ನಂತರ ಕ್ಯಾಮಿಲಾಳ ಕಣ್ಣುಗಳು ಚಲಿಸುತ್ತಿರುವುದನ್ನು ಮೇರಿಯ ಅತ್ತೆ ಗಮನಿಸಿದ್ದಾರೆ. ಕುಟುಂಬ ಸದಸ್ಯರು ಕ್ಯಾಮಿಲಾಳ ನಾಡಿಮಿಡಿತವನ್ನು ಪರೀಕ್ಷಿಸಿದ ನಂತರ ಆಕೆ ಜೀವಂತವಿರುವುದು ಖಚಿತವಾಗಿದೆ. ತಡಮಾಡದೆ ಆಸ್ಪತ್ರೆಗೇನೋ ಸೇರಿಸಿದ್ದಾರೆ. ಆದರೆ ಆಕೆ ತೀರಿಹೋಗಿದ್ದಾಳೆ ಎಂದು ವೈದ್ಯರು ಮತ್ತೊಮ್ಮೆ ಘೋಷಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಜನರಲ್ ಸ್ಟೇಟ್ ಅಟಾರ್ನಿ ಜೋಸ್ ಲೂಯಿಸ್ ರೂಯಿಜ್ ಹೇಳಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:06 pm, Fri, 26 August 22