ತಾಯ್ನೆಲಕ್ಕಾಗಿ ಹೋರಾಡುತ್ತೇನೆ ಎನ್ನುತ್ತ ಉಕ್ರೇನ್ ಸೇನೆ ಸೇರಲು ಹೋದ 98ರ ಮಹಿಳೆ; ಸ್ಫೂರ್ತಿಯ ಚಿಲುಮೆಯೆಂದ ವಿದೇಶಾಂಗ ಇಲಾಖೆ

ಮಹಿಳೆ ಹೆಸರು ಓಲ್ಹಾ ಟ್ವೆರ್ಡೋಖ್ಲಿಬೋವಾ. ಇವರಿಗೆ ಎರಡನೇ ವಿಶ್ವಯುದ್ಧದ ಅನುಭವ ಇದೆ. ಆ ಯುದ್ಧವನ್ನು ಕಣ್ಣಾರೆ ಕಂಡು, ಅದರಲ್ಲಿ ಕೂಡ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಇದೀಗ ಎರಡನೇ ಬಾರಿಗೆ ಯುದ್ಧವನ್ನು ನೋಡುತ್ತಿದ್ದಾರೆ.

ತಾಯ್ನೆಲಕ್ಕಾಗಿ ಹೋರಾಡುತ್ತೇನೆ ಎನ್ನುತ್ತ ಉಕ್ರೇನ್ ಸೇನೆ ಸೇರಲು ಹೋದ 98ರ ಮಹಿಳೆ; ಸ್ಫೂರ್ತಿಯ ಚಿಲುಮೆಯೆಂದ ವಿದೇಶಾಂಗ ಇಲಾಖೆ
ಉಕ್ರೇನ್​ ಮಹಿಳೆ
Updated By: Lakshmi Hegde

Updated on: Mar 19, 2022 | 5:09 PM

ರಷ್ಯಾ-ಉಕ್ರೇನ್​ ಯುದ್ಧ (Russia -Ukraine War) ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಉಕ್ರೇನ್​​ನ ಹಲವು ನಗರಗಳನ್ನು ರಷ್ಯಾ ಸೇನೆ ಧ್ವಂಸಗೊಳಿಸಿದೆ. ರಷ್ಯಾ ಪಡೆಯ ದಾಳಿಯಿಂದ ಉಂಟಾದ ಹಾನಿಯ ಭಯಾನಕ ದೃಶ್ಯಗಳ ವಿಡಿಯೋ, ಫೋಟೋಗಳನ್ನು ಮಾಧ್ಯಮಗಳಲ್ಲಿ, ಸೋಷಿಯಲ್​ ಮೀಡಿಯಾಗಳಲ್ಲಿ ನೋಡುತ್ತಲೇ ಇದ್ದೇವೆ. ಆದರೆ ಉಕ್ರೇನಿಯನ್ನರು (Ukraine) ಮಾತ್ರ ಹಠ ಬಿಡುತ್ತಿಲ್ಲ. ಅಲ್ಲಿ ಪ್ರತಿಯೊಬ್ಬ ನಾಗರಿಕ ತನ್ನ ವಯಸ್ಸು, ವೃತ್ತಿ, ಪರಿಸ್ಥಿತಿ ಎಲ್ಲವನ್ನೂ ಬದಿಗಿಟ್ಟು, ದೇಶಕ್ಕಾಗಿ ಹೋರಾಡಲು ಮುಂದೆ ಬರುತ್ತಿದ್ದಾರೆ. ಹಾಗೇ ನಾನೂ ನನ್ನ ದೇಶಕ್ಕಾಗಿ ಹೋರಾಡುತ್ತೇನೆ ಎಂದು ಮುಂದೆ ಬಂದ 98 ವರ್ಷದ ಮಹಿಳೆಯ ಸ್ಟೋರಿಯನ್ನು ಉಕ್ರೇನಿಯನ್​ ವಿದೇಶಾಂಗ ಸಚಿವಾಲಯ ಶೇರ್ ಮಾಡಿಕೊಂಡಿದೆ.

ಈ ಮಹಿಳೆಯ ಹೆಸರು ಓಲ್ಹಾ ಟ್ವೆರ್ಡೋಖ್ಲಿಬೋವಾ. ಇವರು ಎರಡನೇ ವಿಶ್ವ ಯುದ್ಧವನ್ನೂ ಕಂಡವರು. ಯುದ್ಧದ ಅನುಭವ ಹೊಂದಿರುವವರು. ಆದರೆ 2ನೇ ವಿಶ್ವ ಯುದ್ಧದಲ್ಲಿ ಅವರ ವಯಸ್ಸು ಸಣ್ಣದಿತ್ತು. ಆದರೆ ಈಗ ಹಾಗಿಲ್ಲ, ಅವರಿಗೆ 98 ವರ್ಷ. ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆ ನಡೆಸುವಂತೆ ರಷ್ಯಾ ಅಧ್ಯಕ್ಷ ಆದೇಶ ನೀಡುತ್ತಿದ್ದಂತೆ ಒಹ್ಲಾ ಉಕ್ರೇನ್​ ಸೇನೆ ಸೇರಲು ಬಂದಿದ್ದಾರೆ. ನಾನು ನನ್ನ ತಾಯ್ನಾಡಿಗಾಗಿ ಹೋರಾಡುತ್ತೇನೆ ಎನ್ನುತ್ತ ಬಂದಿದ್ದರು. ಆದರೆ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಉಕ್ರೇನ್ ಆರ್ಮಿ ಅವಕಾಶ ಕೊಡಲಿಲ್ಲ ಎಂದೂ ಹೇಳಲಾಗಿದೆ.

ಒಹ್ಲಾ ಫೋಟೋವನ್ನು ಶೇರ್ ಮಾಡಿಕೊಂಡಿರುವ ಉಕ್ರೇನ್​ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇವರು 98 ವರ್ಷದ ಓಲ್ಹಾ ಟ್ವೆರ್ಡೋಖ್ಲಿಬೋವಾ. ಇವರಿಗೆ ಎರಡನೇ ವಿಶ್ವಯುದ್ಧದ ಅನುಭವ ಇದೆ. ಆ ಯುದ್ಧವನ್ನು ಕಣ್ಣಾರೆ ಕಂಡು, ಅದರಲ್ಲಿ ಕೂಡ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಇದೀಗ ಎರಡನೇ ಬಾರಿಗೆ ಯುದ್ಧವನ್ನು ನೋಡುತ್ತಿದ್ದಾರೆ. ಉಕ್ರೇನ್​ ಪರ ಹೋರಾಟಕ್ಕೆ ಸಿದ್ಧರಾಗಿರುವುದಾಗಿಯೂ ಹೇಳುತ್ತಿದ್ದಾರೆ. ಆದರೆ ಅವರ ಅನುಭವ ಮತ್ತು ಅರ್ಹತೆಗೂ ಮಿಗಿಲಾಗಿ, ಅವರ ವಯಸ್ಸನ್ನು ಪರಿಗಣಿಸಿ ನಿರಾಕರಿಸಲಾಗಿದೆ. ಆದರೆ ನಮಗೆ ಇಂಥವರನ್ನೆಲ್ಲ ನೋಡಿದರೆ ಹೋರಾಟಕ್ಕೆ ಇನ್ನಷ್ಟು ಸ್ಫೂರ್ತಿ ಸಿಗುತ್ತದೆ. ಸದ್ಯದಲ್ಲೇ ಉಕ್ರೇನ್​ ವಿಜಯಶಾಲಿಯಾಗಲಿದೆ ಎಂದು ಕ್ಯಾಪ್ಷನ್ ಬರೆದಿದೆ.

ಇದನ್ನೂ ಓದಿ: ಬೆಂಗಳೂರು: ಬಿ.ಸೇಫ್ ಕ್ಷೇತ್ರ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ವರದಿ ಬಿಡುಗಡೆ