AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ ಗೇಮ್​ ಆಡಿ 1.33 ಲಕ್ಷ ರೂಪಾಯಿ ಖಾಲಿ ಮಾಡಿದ ಮಗ, ನಷ್ಟ ಭರಿಸಲು ಕಾರ್​ ಮಾರಿದ ಅಪ್ಪ; ಎಚ್ಚರ ಪೋಷಕರೇ ಎಚ್ಚರ!

7 ವರ್ಷದ ಅಶಾಜ್​ ಎಂಬ ಬಾಲಕ ಡ್ರ್ಯಾಗನ್ಸ್​: ರೈಸ್​ ಆಫ್ ಬರ್ಕ್​ ಎಂಬ ಗೇಮ್​ ಆಡಿದ್ದು, ಸುಮಾರು 1 ಗಂಟೆ ಅವಧಿಯಲ್ಲಿ ಅದರ ಬೇರೆ ಬೇರೆ ಹಂತಗಳನ್ನು ಆಡುತ್ತಾ ಹಣ ಪಾವತಿಸುತ್ತಲೇ ಹೋಗಿದ್ದಾನೆ. ಒಂದು ಗಂಟೆಯಲ್ಲಿ ಸುಮಾರು ₹1.33 ಲಕ್ಷ ಪಾವತಿಯಾಗಿದೆ.

ಮೊಬೈಲ್​ ಗೇಮ್​ ಆಡಿ 1.33 ಲಕ್ಷ ರೂಪಾಯಿ ಖಾಲಿ ಮಾಡಿದ ಮಗ, ನಷ್ಟ ಭರಿಸಲು ಕಾರ್​ ಮಾರಿದ ಅಪ್ಪ; ಎಚ್ಚರ ಪೋಷಕರೇ ಎಚ್ಚರ!
ಮಗನ ಮೊಬೈಲ್​ ಗೇಮ್​ನಿಂದ ಹಣ ಕಳೆದುಕೊಂಡ ತಂದೆ
TV9 Web
| Edited By: |

Updated on: Jul 02, 2021 | 10:59 AM

Share

ಈಗಿನ ಕಾಲದ ಮಕ್ಕಳು ಮೊಬೈಲಿನಲ್ಲೇ ಮುಳುಗಿರುತ್ತಾರೆ. ಹೊರ ಪ್ರಪಂಚದ ಜ್ಞಾನವೇ ಇರುವುದಿಲ್ಲ. ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನದ ದಾಸರಾಗಿಬಿಡುತ್ತಾರೆ ಎಂದು ಬೈಯುವವರ ಸಂಖ್ಯೆ ಭಾರೀ ದೊಡ್ಡದಿದೆ. ಆದರೆ, ಮಕ್ಕಳ ಕೈಗೆ ಮೊಬೈಲ್​ ಕೊಡಲು ಹಿಂಜರಿಯುತ್ತಿದ್ದ ಪೋಷಕರೇ ಮಕ್ಕಳಿಗಾಗಿ ಪ್ರತ್ಯೇಕ ಮೊಬೈಲ್​ ತಂದುಕೊಡುವಂತಹ ಪರಿಸ್ಥಿತಿಯನ್ನು ಕೊರೊನಾ ನಿರ್ಮಿಸಿದೆ. ಆನ್​ಲೈನ್​ ಶಿಕ್ಷಣದ ಕಾರಣಕ್ಕಾಗಿ ಎಲ್ಲಾ ಮಕ್ಕಳ ಕೈಗೆ ಮೊಬೈಲ್​ ಬಂದು ಕೂತಿದ್ದು, ಅವರು ಅದರಲ್ಲಿ ಎಷ್ಟು ಪಾಠ ಕಲಿಯುತ್ತಾರೋ? ಬಿಡುತ್ತಾರೋ? ಒಟ್ಟಿನಲ್ಲಿ ಅದನ್ನು ನಿರಾತಂಕವಾಗಿ ಬಳಸುವುದಂತೂ ಸಾಧ್ಯವಾಗಿದೆ. ಇದು ಮಕ್ಕಳ ಮನಸ್ಸಿನ ಮೇಲೆ ಬೀರಬಹುದಾದ ದುಷ್ಪರಿಣಾಮಗಳು, ಅದರ ದುರ್ಬಳಕೆ ಕುರಿತು ತಜ್ಞರಾದಿಯಾಗಿ ಜನ ಸಾಮಾನ್ಯರ ತನಕ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವೆಡೆ ಪೋಷಕರು ತಮ್ಮ ಸ್ಮಾರ್ಟ್​ಫೋನ್​ಗಳನ್ನೇ ಶಿಕ್ಷಣಕ್ಕೆಂದು ಮಕ್ಕಳ ಕೈಗೆ ಕೊಟ್ಟು ಜೇಬು ಸುಟ್ಟುಕೊಂಡ ಘಟನೆಗಳೂ ನಡೆದಿವೆ. ಇದು ಕೂಡಾ ಅಂಥದ್ದೇ ಪ್ರಕರಣವಾಗಿದ್ದು, 7 ವರ್ಷದ ಮಗ ಮಾಡಿದ ತಪ್ಪಿಗೆ ಅಪ್ಪ ತನ್ನ ಕಾರನ್ನೇ ಮಾರುವಂತಾಗಿದೆ.

ಸ್ಮಾರ್ಟ್​ಫೋನ್​ಗಳಲ್ಲಿ ಆನ್ಲೈನ್​ ಬ್ಯಾಂಕಿಂಗ್, ಯುಪಿಐ ಸೌಲಭ್ಯ ತೀರಾ ಸಾಮಾನ್ಯವಾಗಿದೆ. ಆದರೆ, ಅದನ್ನು ಕಂಡ ಕಂಡಲ್ಲಿಗೆಲ್ಲಾ ಲಿಂಕ್​ ಮಾಡುತ್ತಾ ಹೋದರೆ ಪಂಗನಾಮವೂ ಗ್ಯಾರೆಂಟಿ. ಇಲ್ಲಿ ಆಗಿರುವುದೂ ಅಂಥದ್ದೇ ಕತೆ. ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ ತನ್ನ ದುಬಾರಿ ಬೆಲೆಯ ಐಫೋನನ್ನು ಮಗನಿಗೆ ಆಟವಾಡಲೆಂದು ನೀಡಿದ್ದಾರೆ. ಅದರಲ್ಲಿ ಗೇಮ್​ ಆಡಲು ಶುರು ಮಾಡಿದ ಮಗ ಅದಕ್ಕೆ ಹಣ ಕಟ್ಟುತ್ತಾ ಹೋಗಿ ಸುಮಾರು 1 ಲಕ್ಷದ 33 ಸಾವಿರ ರೂಪಾಯಿಯಷ್ಟು ಹಣ ಖಾಲಿ ಮಾಡಿದ್ದಾನೆ.

ಈ ಘಟನೆ ನಡೆದಿರುವುದು ಬ್ರಿಟನ್​ನ ನಾರ್ತ್​ ವೇಲ್ಸ್​ನಲ್ಲಿ ನಡೆದಿದ್ದು, 7 ವರ್ಷದ ಅಶಾಜ್​ ಎಂಬ ಬಾಲಕ ಡ್ರ್ಯಾಗನ್ಸ್​: ರೈಸ್​ ಆಫ್ ಬರ್ಕ್​ ಎಂಬ ಗೇಮ್​ ಆಡಿದ್ದು, ಸುಮಾರು 1 ಗಂಟೆ ಅವಧಿಯಲ್ಲಿ ಅದರ ಬೇರೆ ಬೇರೆ ಹಂತಗಳನ್ನು ಆಡುತ್ತಾ 1.99 ಯುರೋ ಮೊತ್ತದಿಂದ 99.99 ಯುರೋ ತನಕ ಹಣ ಪಾವತಿಸುತ್ತಲೇ ಹೋಗಿದ್ದಾನೆ. ಒಂದು ಗಂಟೆಯಲ್ಲಿ ಸುಮಾರು 1,289.70 ಯುರೋ ಪಾವತಿಯಾಗಿದ್ದು ಅದರ ಒಟ್ಟು ಮೊತ್ತ ಭಾರತೀಯ ರೂಪಾಯಿಯಲ್ಲಿ ₹1.33 ಲಕ್ಷ ಆಗಿದೆ.

ವೈದ್ಯ ವೃತ್ತಿಯಲ್ಲಿರುವ ಈ ಬಾಲಕನ ತಂದೆ ಮುಹಮ್ಮದ್​ ಮುತಾಜಾ ಅವರಿಗೆ ಇದು ಮೊದಮೊದಲು ಗಮನಕ್ಕೆ ಬಂದಿರಲಿಲ್ಲ. ಆದರೆ, ತನ್ನ ಮೊಬೈಲ್​ಗೆ ಬಂದಿದ್ದ ಇಮೇಲ್​ಗಳನ್ನು ಪರಿಶೀಲಿಸುತ್ತಾ ಹೋದಂತೆ ಫ್ರೀ ಗೇಮ್​ ಒಂದು ಇಷ್ಟು ಹಣ ಪಾವತಿಗೆ ಅವಕಾಶ ನೀಡಿದೆ ಎಂದು ಗೊತ್ತಾಗಿದೆ. ನಂತರ ಈ ಬಗ್ಗೆ ಅಲ್ಲಿನ ಡೈಲಿ ಮೇಲ್​ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಗ ಆಡುತ್ತಿದ್ದ ಗೇಮ್​ 4 ವರ್ಷ ಮೇಲ್ಪಟ್ಟವರಿಗೆ ಎಂದಿದ್ದು, ಉಚಿತ ಎಂದು ತೋರಿಸಿತ್ತು. ಆದರೆ, ಅಷ್ಟು ಚಿಕ್ಕ ಮಕ್ಕಳು ಆಡುವಂತಹ ಗೇಮ್​ನಲ್ಲಿ ಇಷ್ಟೊಂದು ಹಣ ಪಾವತಿಗೆ ಅವಕಾಶ ಹೇಗೆ ಕೊಟ್ಟರು ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಮೊದಲು ಏನೋ ಮೋಸ ಆಗಿ ಹಣ ಹೋಗಿದೆ ಎಂದು ಭಾವಿಸಿದ್ದೆ. ಆದರೆ, ಇದು ಗೇಮ್​ನಿಂದ ಹೋಗಿದೆ ಎನ್ನುವುದು ಗೊತ್ತಾಗ ನಂಬಲಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ಬಗ್ಗೆ ಆ್ಯಪಲ್​ ಸಂಸ್ಥೆಗೆ ದೂರು ಸಲ್ಲಿಸಿದ ನಂತರ ಅದು ಸುಮಾರು 207 ಯುರೋ (ಅಂದಾಜು 21 ಸಾವಿರ ರೂಪಾಯಿ) ಹಣವನ್ನು ಹಿಂದಿರುಗಿಸಿದೆಯಾದರೂ ಬಾಕಿ ಮೊತ್ತ ವಾಪಾಸ್ಸು ಸಿಕ್ಕಿಲ್ಲ. ಅಲ್ಲದೇ, ಉಳಿದ ನಷ್ಟವನ್ನು ಭರಿಸಲಾಗದೇ ಅವರು ತಮ್ಮ ಬಳಿಯಿದ್ದ ಕಾರ್​ ಮಾರಬೇಕಾಗಿ ಬಂದಿದೆ. ಚಿಕ್ಕ ಮಕ್ಕಳ ಗೇಮ್​ ಒಂದು ಅಷ್ಟು ದೊಡ್ಡ ಮೊತ್ತವನ್ನು ಸ್ವೀಕರಿಸಿದ್ದು ಹೇಗೆ ಎಂಬ ಪ್ರಶ್ನೆ ಎತ್ತಿರುವ ಬಾಲಕನ ತಂದೆ ಇದೀಗ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.