ಮಗನ ಬರ್ತ್ಡೇಗೆ ಕೇಕ್ ತರಲು ಹೋಗಿದ್ದ ಅವರನ್ನು ಚಿರತೆ ಬೆನ್ನಟ್ಟಿತು, ಜೀವ ಉಳಿಸಲು ಕೇಕ್ ನೆರವಾಯಿತು!
ಆ ವಲಯದ ಅರಣ್ಯಾಧಿಕಾರಗಳು ಹೇಳಿರುವ ಹಾಗೆ, ಆ ಸಹೋದರರಿಗೆ ಕೇಕ್ ಒಂದು ಆಯುಧದಂತೆ ಕೆಲಸ ಮಾಡಿದೆ. ಸಬೀರ್ ಬಿಸಾಡಿದ ಕೇಕ್ ಬಾಕ್ಸ್ ಚಿರತೆ ಮುಖಕ್ಕೆ ಅಪ್ಪಳಿಸಿದ ಕೂಡಲೇ ಅದು ತನ್ನ ಮೇಲೆ ದಾಳಿಯಾಗುತ್ತಿದೆ ಎಮದು ಭಾವಿಸಿ ಕಬ್ಬಿನ ಗದ್ದೆಯೊಳಗೆ ವಾಪಸ್ಸು ಓಡಿದೆಯಂತೆ.
ಬೋಪಾಲ: ಮನೆಯಲ್ಲಿ ತಮ್ಮನದೋ ಅಥವಾ ತಂಗಿಯದೋ ಬರ್ತ್ ಡೇಗೋಸ್ಕರ ಕೇಕ್ ತರಲು ಬೇರೆ ಊರಿಗೆ ಹೋಗಿ ವಾಪಸ್ಸು ಬರುವಾಗ ರಸ್ತೆ ಮಧ್ಯೆ ಚಿರತೆಯೊಂದು ಪ್ರತ್ಯಕ್ಷವಾಗಿ ಅದು ನಿಮ್ಮನ್ನು ಬೆನ್ನಟ್ಟಲಾರಂಭಿಸಿದರೆ ನಿಮ್ಮ ಸ್ಥಿತಿ ಏನಾಗಬೇಡ. ಇಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಬುರ್ಹನ್ಪುರ ಎಂಬ ಊರಲ್ಲಿ ನಡೆದಿದೆ. ಬೈಕ್ ಮೇಲೆ ಬರುತ್ತಿದ್ದ ಇಬ್ಬರನ್ನು ಒಂದು ಚಿರತೆಯು ಸುಮಾರು ಅರ್ಧ ಕಿಲೋಮೀಟರ್ವರೆಗೆ ಚೇಸ್ ಮಾಡಿದೆ. ಅದೃಷ್ಟವಶಾತ್ ಅವರು ಬಚಾವಾಗಿ ಮನೆ ಸೇರಿದ್ದಾರೆ. ಅಣ್ಣತಮ್ಮಂದಿರೂ ಆಗಿರುವ ಈ ಅದೃಷ್ಟವಂತರನ್ನು ಫೀರೋಜ್ ಮನ್ಸೂರಿ ಮತ್ತು ಸಬೀರ್ ಎಂದು ಗುರುತಿಸಲಾಗಿದೆ. ಅವರು ಫಿರೋಜ್ನ ಮಗನ ಹುಟ್ಟುಹಬ್ಬದ ಪ್ರಯುಕ್ತ ಬುರ್ಹನ್ಪುರ ಸಮೀಪವಿರುವ ನೇಪಾನಗರ ಎಂಬ ಸ್ಥಳದಿಂದ ಕೇಕ್ ತರಲು ಹೋಗಿದ್ದಾರೆ. ಬುರ್ಹನ್ಪುರ ಪಟ್ಟಣವು ಬೋಪಾಲ್ನಿಂದ ಸುಮಾರು 320 ಕಿಮೀ ದೂರದಲ್ಲಿದೆ. ಅವರು ಕೇಕ್ ಇಲ್ಲದೆ ಮನೆಗೆ ಹಿಂತಿರುಗಿದರಾದರೂ ಕುಟುಂಬದ ಸದಸ್ಯರಿಗೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹೇಳಲು ಒಂದು ರೋಚಕ ಕತೆಯನ್ನು ಹೊತ್ತು ತಂದರು.
ಸದರಿ ಘಟನೆಯು ಸೋಮವಾರ ಸಾಯಂಕಾಲ; ಫಿರೋಜ್ ಮತ್ತು ಸಬೀರ್ ಕೇಕ್ ಅಂಗಡಿಗೆ ಹೋಗಿ ಗೊರಾಡಿಯ ಎಂಬ ಊರಿನ ಮುಖಾಂತರ ವಾಪಸ್ಸಾಗುವಾಗ ಸಂಭವಿಸಿದೆ. ಸುಮಾರು 6 ಗಂಟೆಯ ಹೊತ್ತಿಗೆ ಅವರು ಅಕ್ಷರಶಃ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಗೊರಾಡಿಯ ದಾಟಿ ಮುಂದೆ ಬಂದಾಗ ಇದ್ದಕ್ಕಿದ್ದಂತೆ ಅವರ ಎದುರು ಒಂದು ಚಿರತೆ ಪ್ರತ್ಯಕ್ಷವಾಗಿದೆ. ಸಬೀರ್ ಹೇಳುವಂತೆ ಅದು ರಸ್ತೆ ಬದಿಯಲ್ಲಿದ್ದ ಕಬ್ಬಿನ ಗದ್ದೆಯಿಂದ ರಸ್ತೆಗೆ ಬಂದಿದೆ. ಬೈಕ್ ಮೇಲೆ ಹೋಗುತ್ತಿದ್ದ ಅವರನ್ನು ಕಂಡಕೂಡಲೇ ಬೆನ್ನಟ್ಟಲಾರಂಭಿಸಿದೆ. ಅವರು ತಮ್ಮ ಸಾವು ಬದುಕಿನ ಹೋರಾಟದ ಕತೆಯನ್ನು ಇಂಗ್ಲಿಷ್ ಪತ್ರಿಕೆಯೊಂದರ ಜೊತೆ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಚಿರತೆಗಳು ವಯಸ್ಕ ಮಾನವರ ಮೇಲೆ ದಾಳಿ ಮಾಡುವುದಿಲ್ಲವೆಂಬ ಪ್ರತೀತಿ ಇದೆ. ಆದರೆ ಈ ಪ್ರಕರಣದಲ್ಲಿ ಚಿರತೆಯ ಯಾವುದೇ ತೆರನಾದ ಕೆರಳಿಸುವಿಕೆ ಇಲ್ಲದೆ ಹೋದರು ಆವರಿಬ್ಬರನ್ನು ಬೆನ್ನಟ್ಟಿದೆ. ಫಿರೋಜ್ ಮತ್ತು ಸಬೀರ್ಗೆ ಹೃದಯ ಬಾಯಿಗೆ ಬಂದಂತಾಗಿ ಬೈಕ್ ವೇಗವನ್ನು ಹೆಚ್ಚಿಸಿದ್ದಾರೆ. ಆದರೆ ಅದು ಕಚ್ಚಾ ರಸ್ತೆಯಾಗಿದ್ದರಿಂದ ಚಿರತೆಗೆ ಬೆನ್ನಟ್ಟಲು ಸುಲಭವಾಗಿದೆ. ಒಂದು ಹಂತದಲ್ಲಿ ಅದು ಬೈಕ್ ಹಿಂಭಾಗದ ಮೇಲೆ ಜಿಗಿದಿದ್ದರಿಂದ ಅದರ ಪಂಜಿನ ಅಳಿಸಲಾಗದ ಗುರುತುಗಳು ವಾಹನದ ಮೇಲೆ ಬಿದ್ದಿವೆ. ಅದನ್ನು ಕುಟುಂಬದ ಸದಸ್ಯರು ಮತ್ತು ಊರಿನವರಿಗೆ ಅವರು ತೋರಿಸಿದ್ದಾರೆ.
ಗಾಡಿಯನ್ನು ಓಡಿಸುತ್ತಿದ್ದ ಫಿರೋಜ್ ತನ್ನ ಗಮನವೆಲ್ಲ ವೇಗವನ್ನು ಹೆಚ್ಚಿಸಿ ಚಿರತೆಯಿಂದ ಬಚಾವಾಗುವುದರೆಡೆ ಇತ್ತು ಎಂದು ಹೇಳಿದ್ದಾನೆ. ಹಿಂದೆ ಕೂತಿದ್ದ ಸಬೀರ್ಗೆ ಕೇಕ್ ಅನ್ನು ಬ್ಯಾಲೆನ್ಸ್ ಮಾಡುವ ಜೊತೆಗೆ ಪ್ರಾಣವನ್ನೂ ಉಳಿಸಿಕೊಳ್ಳ ಬೇಕಿತ್ತು. ಆಗಲೇ ಅವನ ತಲೆಗೆ ಒಂದು ವಿಚಾರ ಹೊಳೆದಿದೆ. ಕೂಡಲೇ ಅವನು ಕೇಕಿನ ಬಾಕ್ಸ್ ಅನ್ನು ಚಿರತೆಯ ಮುಂದೆ ಬಿಸಾಡಿದ್ದಾನೆ. ತಿನ್ನಲು ಏನೋ ಒಂದು ಸಿಕ್ಕಿತಲ್ಲ ಅಂದೊಕೊಂಡ ಚಿರತೆಯು ಬೈಕ್ ಬೆನ್ನಟ್ಟುವುದನ್ನು ಬಿಟ್ಟು ಕೇಕ್ ಮೂಸಿ ನೋಡಲಾರಂಭಿಸಿದೆ. ಅದು ಕೇಕನ್ನು ತಿನ್ನುತ್ತಿದೆಯೋ ಇಲ್ಲವೋ ಅಂತ ನೋಡುವ ವ್ಯವಧಾನ ಸಬೀರ್ಗಾಗಲೀ, ಫಿರೋಜ್ಗಾಗಲೀ ಇರಲಿಲ್ಲ. ಅವರ ಮುಂದಿದ್ದ ಗುರಿ ಒಂದೇ, ಹಿಂದೆ ತಿರುಗಿ ನೋಡುವುದು ಬೇಡ, ಮುಂದೆ ನೋಡುತ್ತಾ ಗಾಡಿ ಓಡಿಸುವುದು!
‘ಚಿರತೆ ಸುಮಾರು 500 ಮೀಟರ್ಗಳಷ್ಟು ದೂರ ನಮ್ಮನ್ನು ಬೆನ್ನಟ್ಟಿತು. ನಾವು ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾದೆವು,’ ಎಂದು ಸಬೀರ್ ಹೇಳಿದ್ದಾನೆ.
ಆ ವಲಯದ ಅರಣ್ಯಾಧಿಕಾರಗಳು ಹೇಳಿರುವ ಹಾಗೆ, ಆ ಸಹೋದರರಿಗೆ ಕೇಕ್ ಒಂದು ಆಯುಧದಂತೆ ಕೆಲಸ ಮಾಡಿದೆ. ಸಬೀರ್ ಬಿಸಾಡಿದ ಕೇಕ್ ಬಾಕ್ಸ್ ಚಿರತೆ ಮುಖಕ್ಕೆ ಅಪ್ಪಳಿಸಿದ ಕೂಡಲೇ ಅದು ತನ್ನ ಮೇಲೆ ದಾಳಿಯಾಗುತ್ತಿದೆ ಎಮದು ಭಾವಿಸಿ ಕಬ್ಬಿನ ಗದ್ದೆಯೊಳಗೆ ವಾಪಸ್ಸು ಓಡಿದೆಯಂತೆ.
ಅಸಲಿಗೆ ಚಿರತೆ ಬೈಕ್ ಬೆನ್ನಟ್ಟಿದ್ದನ್ನು ಅಧಿಕಾರಿಗಳು ಮೊದಲು ನಂಬಿರಲಿಲ್ಲವಂತೆ. ಯಾಕೆಂದರೆ ಅಂಥ ಘಟನೆ ಆ ಪ್ರದೇಶದಲ್ಲಿ ನಡೆಯುವುದು ಅಪರೂಪಕ್ಕೊಮ್ಮೆ ಎಂದು ಅವರು ಹೇಳುತ್ತಾರೆ. ಆದರೆ ಆ ಕಚ್ಚಾ ರಸ್ತೆಯಲ್ಲಿ ಚಿರತೆ ಪಂಜಿನ ಗುರುತುಗಳನ್ನು ಕಂಡ ನಂತರ ಅವರಿಗೆ ವಿಷಯ ಖಾತ್ರಿಯಾಗಿದೆ.
ಇದನ್ನೂ ಓದಿ: Leopard Attack: ತೋಟಕ್ಕೆ ಹೋದವರ ಮೇಲೆ ಚಿರತೆ ದಾಳಿ; ನಾಯಿಯೊಂದಿಗೆ ಲಾಕ್ ಆಗಿದ್ದ ಚಿರತೆಯೇ ಇರಬಹುದೆಂಬ ಅನುಮಾನ
Published On - 7:36 pm, Thu, 1 July 21