ಈ ಮಾವಿನ ಮರವನ್ನು ನೋಡಲೆಂದೇ ಜನರು ಹೋಗುತ್ತಿದ್ದಾರೆ..! ಅದೆಂಥಾ ವಿಶೇಷವಿದೆ ಇದರಲ್ಲಿ ನೋಡಿ
ಸಹರಾನ್ಪುರ ಜಿಲ್ಲೆಯ ಕಂಪನಿ ಬಾಘ್ ಎಂಬ ಪ್ರದೇಶದಲ್ಲಿ ಬೆಳೆದುನಿಂತಿರುವ ಈ ದೊಡ್ಡ ಮರ ಇದ್ದು, ಕಳೆದ 5ವರ್ಷಗಳಿಂದಲೂ ಈ ಮರದ ಮೇಲೆ ಪ್ರಯೋಗ ನಡೆಯುತ್ತಿದೆ.
ಈಗಂತೂ ಮಾವಿನ ಹಣ್ಣಿನ ಸೀಸನ್..ದೇಶಾದ್ಯಂತ ವಿವಿಧ ತಳಿಯ, ರುಚಿರುಚಿಯ ಮಾವಿ ಹಣ್ಣುಗಳು ಸಿಗುತ್ತಿವೆ. ಮಾವಿನಮರಗಳು ಕಾಯಿ-ಹಣ್ಣು ತುಂಬಿ ನಿಂತಿವೆ. ಅದರಲ್ಲೀಗ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿರುವ 15ವರ್ಷಗಳಷ್ಟು ಹಳೇ ಮಾವಿನಮರವೊಂದು ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರನ್ನು ಆಕರ್ಷಿಸುತ್ತಿದೆಯೆಂದರೆ ಖಂಡಿತ ಅದರಲ್ಲೇನೋ ವೈಶಿಷ್ಟ್ಯ ಇರಲೇಬೇಕು. ಅದೇನು ವಿಶೇಷ ಎಂದು ತಿಳಿಯಲು ಮುಂದೆ ಓದಿ..
ಸಹರಾನ್ಪುರ ಜಿಲ್ಲೆಯ ಕಂಪನಿ ಬಾಘ್ ಎಂಬ ಪ್ರದೇಶದಲ್ಲಿ ಬೆಳೆದುನಿಂತಿರುವ ಈ ದೊಡ್ಡ ಮರದಲ್ಲಿ ಬರೋಬ್ಬರಿ 121 ಪ್ರಭೇದದ ಮಾವಿನಹಣ್ಣುಗಳಿವೆ. ಒಂದೇ ಮರದಲ್ಲಿ 121 ಬಗೆಯ ಮಾವಿನ ತಳಿ ಇರುವುದು ನಿಜಕ್ಕೂ ಅಪರೂಪ. ಹೊಸಹೊಸ ಬಗೆಯ ಮಾವಿನ ಹಣ್ಣುಗಳನ್ನು ಅಭಿವೃದ್ಧಿಪಡಿಸಿ, ಅದರ ರುಚಿಯನ್ನು ಪರಿಶೀಲಿಸಲು ಕಳೆದ 5 ವರ್ಷಗಳಿಂದ ತೋಟಗಾರಿಕಾ ತಜ್ಞರು ಈ ಪ್ರಯೋಗ ಮಾಡಲು ಶುರು ಮಾಡಿದ್ದರು. ಅದರ ಫಲವಾಗಿ ಈಗ ಈ ಮರ ವೈವಿಧ್ಯಮಯ ಮಾವುಗಳನ್ನೊಳಗೊಂಡು ನಿಂತಿದೆ. ಮಾವು ಬೆಳೆ ಉತ್ಪಾದನೆಯಲ್ಲಿ ಉತ್ತರಪ್ರದೇಶದಲ್ಲೇ ಸಹರಾನ್ಪುರ ಮೊದಲ ಸ್ಥಾನದಲ್ಲಿದೆ. ಅದರಲ್ಲೂ ಹೊಸಹೊಸ ಬಗೆಯ ಮಾವುಗಳನ್ನು ಬೆಳೆಯುವ ಸಲುವಾಗಿ ಹೀಗೊಂದು ಪ್ರಯೋಗ ಮಾಡಲಾಗಿದೆ ಎಂದು ಜಿಲ್ಲಾ ತೋಟಗಾರಿಕಾ ತಜ್ಞ ಭಾನುಪ್ರಕಾಶ್ ರಾಮ್ ಹೇಳಿದ್ದಾರೆ.
ಜಿಲ್ಲೆಯ ತೋಟಗಾರಿಕಾ ಪ್ರಯೋಗ ಮತ್ತು ತರಬೇತಿ ಕೇಂದ್ರದ ಹಿಂದಿನ ಜಂಟಿ ನಿರ್ದೇಶಕರಾಗಿದ್ದ ರಾಜೇಶ್ ಪ್ರಸಾದ್ ಅವರು ಈ ಮರದ ಮೇಲೆ 121 ವಿವಿಧ ತಳಿಗಳ ಮಾವಿನ ಮರದ ಕೊಂಬೆಗಳನ್ನು ಕಸಿ ಮಾಡಿಸಿದ್ದರು. ಇದು ದೊಡ್ಡಪ್ರಮಾಣದಲ್ಲಿ ನಡೆದಿತ್ತು. ಹೀಗೆ ಕಸಿ ಮಾಡಲಾದ ಮರದ ಕಾಳಜಿ ವಹಿಸಲು ಜನರನ್ನು ನೇಮಕ ಮಾಡಲಾಗಿತ್ತು. ಅದೀಗ ಫಲ ಸಿಕ್ಕಿದೆ. ವೈವಿಧ್ಯಮರ ಮಾವಿನಹಣ್ಣುಗಳು ಒಂದೇ ಮರದಲ್ಲಿ ದೊರೆಯುತ್ತಿವೆ ಎಂದೂ ಹೇಳಿದ್ದಾರೆ. ಈ ಪ್ರಯೋಗ ಇಷ್ಟಕ್ಕೇ ಮುಗಿದಿಲ್ಲ. ಇನ್ನಷ್ಟು ಪ್ರಭೇದಗಳನ್ನು ಸೇರಿಸಲು ಕೆಲಸ ನಡೆಯುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ. ಅದೇನೇ ಇರಲಿ ಈ ಮಾವಿನ ಮರವಂತೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಸುದ್ದಿ ತಿಳಿದ ಜನರು ಒಮ್ಮೆ ಬಂದು ಇದನ್ನು ನೋಡಿ ಹೋಗುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಅನಾಥಳಾದ ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿದ ಶಾಸಕ ಎಂಪಿ ರೇಣುಕಾಚಾರ್ಯ
Single Mango Tree Has 121 Varieties of The Fruits In Uttar Pradesh