Viral Video: ಸಿಂಹಗಳ ದಾಳಿಯಿಂದ ತನ್ನ ಯುಕ್ತಿಯ ಮೂಲಕ ಪ್ರಾಣ ಉಳಿಸಿಕೊಂಡ ಎಮ್ಮೆ

ಸಿಂಹಗಳ ಗುಂಪೊಂದು ಒಬ್ಬಂಟಿ ಎಮ್ಮೆಯ ಮೇಲೆ ದಾಳಿ ಮಾಡಲು ಮುಂದಾಗಿದ್ದು, ಜೀವನ ಮತ್ತು ಸಾವಿನ ಕಾಳಗದಲ್ಲಿ ಎಮ್ಮೆಯು ಯುಕ್ತಿಯಿಂದ ಸಿಂಹಗಳ ಗುರಿಯನ್ನು ವಿಚಲಿತಗೊಳಿಸಿ, ಅವುಗಳ ದಾಳಿಯಿಂದ ತಪ್ಪಿಸಿಕೊಂಡು ತನ್ನ ಪ್ರಾಣರಕ್ಷಣೆ ಮಾಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Viral Video: ಸಿಂಹಗಳ ದಾಳಿಯಿಂದ ತನ್ನ ಯುಕ್ತಿಯ ಮೂಲಕ ಪ್ರಾಣ ಉಳಿಸಿಕೊಂಡ ಎಮ್ಮೆ
ವೈರಲ್​​ ವೀಡಿಯೊ
Edited By:

Updated on: Jun 02, 2023 | 11:44 AM

ಕಾಡಿನಲ್ಲಿ ಪ್ರಾಣಿಗಳ ಗುಂಪಿನ ನಡುವೆ ಕಾಳಗಳು ನಡೆಯುತ್ತಲೇ ಇರುತ್ತವೆ. ಒಂದು ಪ್ರಾಣಿ ಆಹಾರಕ್ಕಾಗಿ ಹೋರಾಡಿದರೆ, ಇನ್ನೊಂದು ಪ್ರಾಣಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹೋರಾಡುತ್ತದೆ. ಹೀಗೆ ಆಹಾರಕ್ಕಾಗಿ ಒಂದು ಪ್ರಾಣಿಯು ಇನ್ನೊಂದು ಪ್ರಾಣಿಯನ್ನು ಸಾಯಿಸಲು ಹೊಂಚುಹಾಕುತ್ತಿರುತ್ತವೆ. ಅದರಲ್ಲೂ ಸಿಂಹ ಮತ್ತು ಹುಲಿಗಳ ಕಣ್ಣಿಗೆ ಬೇರೆ ಅಮಾಯಕ ಪ್ರಾಣಿಗಳು ಬಿದ್ದರೆ ಅವುಗಳ ಕಥೆ ಮುಗಿಯಿತಂತಲೇ ಅರ್ಥ. ಅಂತಹ ಸಂದರ್ಭದಲ್ಲಿ ಅಮಾಯಕ ಪ್ರಾಣಿಗಳು ಅವುಗಳ ಧೈರ್ಯ ಮತ್ತು ಯುಕ್ತಿಯನ್ನು ಬಳಸಿಕೊಂಡು ಸಾವಿನ ದವಡೆಯಿಂದ ಪಾರಗಬಹುದು. ಶಕ್ತಿಗಿಂತ ಯುಕ್ತಿ ಮೇಲು ಎಂಬ ಗಾದೆಯಿದೆ. ಇದಕ್ಕೆ ಉದಾಹರಣೆಯೆಂಬಂತೆ, ಒಬ್ಬಂಟಿ ಎಮ್ಮೆಯೊಂದು ಸಿಂಹಗಳ ಗುಂಪಿನ ಜೊತೆ ಬುದ್ಧಿವಂತಿಕೆಯಿಂದ ಹೋರಾಡಿ ಕಾಡಿನ ರಾಜರನ್ನೇ ನಡುಗಿಸುವಂತೆ ಮಾಡಿದೆ. ಈ ಎಮ್ಮೆ ಮತ್ತು ಸಿಂಹಗಳ ಗುಂಪಿನ ನಡುವಿನ ಕಾಳಗದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಮ್ಮೆಯ ಬುದ್ಧಿವಂತಿಕೆ ನೋಡುಗರನ್ನು ಬೆರಗುಗೊಳಿಸಿದೆ.

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದ ಎಲಿಫೆಂಟ್ ವಾಕ್ ರಿಟ್ರೀಟ್​​​​ನಲ್ಲಿ ಮ್ಯಾನೇಜರ್ ಆಂಟೋನಿ ಬ್ರಿಟ್ಜ್ ಅವರು ಎಮ್ಮೆ ಮತ್ತು ಸಿಂಹಗಳ ಕಾಳಗದ ಅದ್ಭುತ ದೃಶ್ಯಾವಳಿಯನ್ನು ಸೆರೆಹಿಡಿದಿದ್ದಾರೆ. ಮತ್ತು ಈ ವಿಡಿಯೋವನ್ನು ಲೇಟೆಸ್ಟ್ ಸೈಟಿಂಗ್ಸ್-ಕ್ರುಗೆರ್ ಎಂಬ ಫೇಸ್ಬುಕ್ ಪೇಜ್​​​​ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:Viral Video: ಯಾರಿಗೆಲ್ಲ ಬೇಕು ಈ ಬೌಲ್​ ಕಟ್​, ಎಲ್ಲಾ ಸಾಲಾಗಿ ಬನ್ರಿ

ನೀರು ಕುಡಿಯಲೆಂದು ವಯಸ್ಸಾದ ಎಮ್ಮೆಯೊಂದು ನದಿಯ ಬಳಿ ಬರುತ್ತದೆ. ಎಮ್ಮೆಯ ಹಿಂಬಂದಿಯಲ್ಲಿ ಸುಮಾರು 8 ರಿಂದ 9 ಸಿಂಹಗಳು ಎಮ್ಮೆಯ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕೂತಿರುತ್ತವೆ. ಸಿಂಹಗಳನ್ನು ಕಂಡು ಎಮ್ಮೆಯು ಧೃತಿಗೆಡದೆ, ಧೈರ್ಯದಿಂದ ತನ್ನ ಮೇಲೆ ದಾಳಿ ಮಾಡಲು ಬಂದ ಸಿಂಹಗಳ ಗುಂಪನ್ನು ಅಟ್ಟಾಡಿಸುತ್ತದೆ. ಆದರೂ ಆ ಸಿಂಹಗಳು ಎಮ್ಮೆಯ ಹಿಂಬದಿಯಿಂದ ದಾಳಿ ಮಾಡಲು ಮುಂದಾಗುತ್ತವೆ. ಇವುಗಳಿಂದ ತನ್ನ ಪ್ರಾಣವನ್ನು ಹೇಗಾದರೂ ಕಾಪಾಡಬೇಕೆಂದು ಎಮ್ಮೆಯು ಸಿಂಹಗಳನ್ನು ಅಟಾಡಿಸುತ್ತಾ, ಅವುಗಳ ದಾಳಿಯ ಗುರಿಯನ್ನು ವಿಚಲಿತಗೊಳಿಸಿ ನದಿಯ ಈ ಬದಿಗೆ ಓಡೋಡಿ ಬರುತ್ತದೆ. ಮತ್ತು ತನ್ನ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳುತ್ತದೆ. ಸಿಂಹಗಳು ತಮ್ಮ ಸೋಲನ್ನು ಒಪ್ಪಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸಪ್ಪೆ ಮೋರೆ ಹಾಕಿಕೊಂಡು ವಾಪಾಸ್ ಹೊರಟು ಹೋಗುವುದನ್ನು ವೀಡಿಯೋ ದೃಶ್ಯಾವಳಿಯಲ್ಲಿ ಕಾಣಬಹುದು.

ಮೇ 29ರಂದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೆ 260 ಸಾವಿರಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಲೈಕ್ಸ್ ಮತ್ತು ಕಮೆಂಟ್ಸ್ ಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರರು, ಎಮ್ಮೆ ತನ್ನ ಪ್ರಾಣಕ್ಕಾಗಿ ಹೋರಾಡುತ್ತಿದೆ, ಸಿಂಹಗಳು ತಮ್ಮ ಊಟಕ್ಕಾಗಿ ಹೋರಾಡುತ್ತಿವೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಎಮ್ಮೆಯ ಬುದ್ಧಿವಂತಿಕೆಯ ನಡೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅದ್ಭುತ ವೀಡಿಯೋ, ಇದರಲ್ಲಿ ಯಾವುದೇ ರೀತಿಯ ಕ್ರೌರ್ಯಗಳಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 11:42 am, Fri, 2 June 23