ಎಲ್ಲರೂ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಏನೂ ಕೆಲಸ ಮಾಡದೇ ದುಡ್ಡು ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು… ಎಂದು ಯೋಚಿಸಿಯೇ ಇರುತ್ತಾರೆ. ಅಲ್ಲದೇ ಆಗಾಗ ಪ್ರೊಮೋಷನ್ ಗಳು, ಸಂಬಳ ಏರಿಕೆ ಮೊದಲಾದವೆಲ್ಲಾ ಆಗುತ್ತಿದ್ದರಂತೂ, ಸ್ವರ್ಗಕ್ಕೆ ಮೂರೇ ಗೇಣು. ಆದರೆ ಇದು ನಿಜಜೀವನದಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಅದನ್ನು ಸಾಧ್ಯವಾಗಿಸಿದ್ದಾನೆ. ಅದೂ ಬರೋಬ್ಬರಿ ಐದು ವರ್ಷಗಳ ಕಾಲ. ಅರೇ, ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ರೆಡ್ಡಿಟ್ ಬಳಕೆದಾರನೊಬ್ಬ ತನ್ನ ಕತೆಯನ್ನು ಹಂಚಿಕೊಂಡಿದ್ದು, ಅದು ಇಲ್ಲಿದೆ.
ಆ ಉದ್ಯೋಗಿ 2015ರಲ್ಲಿ ರಾತ್ರಿ ಪಾಳಿಯ ಡೇಟಾ ಎಂಟ್ರಿ ಕೆಲಸಕ್ಕೆ ಸೇರಿದ್ದ. ಆತನ ಕೆಲಸ ಬಂದ ಅರ್ಡರ್ ಗಳನ್ನು ಕಂಪನಿಯ ಸಿಸ್ಟಮ್ ಗೆ ಎಂಟ್ರಿ ಮಾಡಿಡುವುದು. ಕೆಲಸದ ಟ್ರೈನಿಂಗ್ ಮುಗಿಯುವಷ್ಟರಲ್ಲೇ ಅವನಿಗೆ ತನ್ನ ಕೆಲಸವನ್ನು ಆಟೋಮ್ಯಾಟಿಕ್ ಕೋಡ್ ಮುಖಾಂತರ ನಿರ್ವಹಿಸಬಹುದು ಎಂದು ತಿಳಿದುಹೋಗಿತ್ತು. ‘ಆಟೋಹಾಟ್ಕಿ’ ಎಂಬ ಓಪನ್ ಸೋರ್ಸ್ ಕೋಡ್ ಮೂಲಕ ಆತನ ಕೆಲಸವನ್ನು ಆಟೋಮ್ಯಾಟಿಕ್ ಆಗಿ ನಿರ್ವಹಿಸಲು ಸಾಧ್ಯವಿತ್ತು. ಇದಕ್ಕಾಗಿ ಫ್ರೀಲ್ಯಾನ್ಸರ್ ಕೋಡರ್ ಒಬ್ಬರನ್ನು ಸಂಪರ್ಕಿಸಿದ ಆತ, ಹಣ ಕೊಟ್ಟು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿಕೊಂಡ. ಇದಕ್ಕೆ ಆತ ಖರ್ಚು ಮಾಡಿದ್ದು ಬರೀ ಎರಡು ತಿಂಗಳ ಸಂಬಳ ಮಾತ್ರ!
ಆತ ಅಭಿವೃದ್ಧಿಪಡಿಸಿಕೊಂಡ ಸಾಫ್ಟ್‌ವೇರ್ ನಲ್ಲಿ ಗಂಟೆಗೆ ಎಷ್ಟು ಆರ್ಡರ್ ತೆಗೆದುಕೊಳ್ಳಬೇಕು ಎಂದಷ್ಟೇ ನಮೂದಿಸಬೇಕಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಆತನಿಗೆ ವರ್ಕ್ ಫ್ರಮ್ ಹೋಮ್ ಸಿಕ್ಕಿತು. ಉದ್ಯೋಗಿಗೆ ಪ್ರಯಾಣದ ಖರ್ಚನ್ನು ನೀಡಲು ಸಾಧ್ಯವಿಲ್ಲ ಎಂದು ವರ್ಕ್ ಫ್ರಮ್ ಹೋನ್ ಅನ್ನು ಕಂಪನಿ ನೀಡಿತ್ತು. ಅಸಲಿಗೆ ಈ ನಿರ್ಧಾರ ಆ ಉದ್ಯೋಗಿಗೆ ಭಯಂಕರ ವರದಾನವಾಯಿತು.
ಕೆಲಸದ ಆರಂಭದ ಎರಡು ವರ್ಷ ಉದ್ಯೋಗಿ ಸಿಸ್ಟಮ್ ಮುಂದೆ ಹೆಚ್ಚೆಂದರೆ ಐದು ನಿಮಿಷ ಕೂರಬೇಕಾಗಿತ್ತು. ಆ ಸಮಯದಲ್ಲಿ ಸಾಫ್ಟ್‌ವೇರ್ ಯಾವೆಲ್ಲಾ ಕೋಡ್ ಗಳಿಗೆ ವರ್ಕ್ ಆಗುತ್ತದೆ, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಆತ ಚೆಕ್ ಮಾಡಿಕೊಳ್ಳುತ್ತಿದ್ದ. ಆದರೆ ಉಳಿದ ದಿನದಲ್ಲಿ ಸಿನಿಮಾ, ಸುತ್ತಾಟ, ನಿದ್ದೆ.. ಮಾಡುತ್ತಿದ್ದ.
ಎರಡು ವರ್ಷದ ನಂತರ ಕೆಲಸ ಸಂಪೂರ್ಣ ಸುಲಲಿತವಾಯಿತು. ಅತ್ಯದ್ಭುತ ಕೆಲಸ ಮಾಡುತ್ತಿದ್ದ ಉದ್ಯೋಗಿ ಎಂದು ಕಚೇರಿಯಲ್ಲಿ ಆತ ಗುರುತಿಸಿಕೊಂಡ. ಈ ಹಿನ್ನೆಲೆಯಲ್ಲಿ ಆತನಿಗೆ ಪ್ರೊಮೋಷನ್ ಗಳೂ ಲಭಿಸಿದವು. ಹಗಲು ಸಮಯದಲ್ಲಿ ಕೆಲಸ ಮಾಡುವ ಹೊಸ ಹುದ್ದೆಗಳೂ ಲಭಿಸಿತು. ಆದರೆ ಇದನ್ನೆಲ್ಲಾ ರಿಜೆಕ್ಟ್ ಮಾಡಿದ ಆತ, ತಾನು ಇಂಟ್ರಾವರ್ಟ್ ಪರ್ಸನ್ ಎಂದು ಹೇಳಿಕೊಂಡು, ಮನೆಯಿಂದ ಕೆಲಸ ಮಾಡುವ ಆ ಹುದ್ದೆ ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದ. ಅವನ ಸಹದ್ಯೋಗಿಗಳು ಆತನ ಯಶಸ್ಸು ಕಂಡುಹಿಡಿಯಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ.
“ಆದರೆ ಒಂದಲ್ಲಾ ಒಂದು ದಿನ ಎಷ್ಟೇ ಒಳ್ಳೆಯದಾದರೂ ಕೊನೆಗೊಳ್ಳಲೇ ಬೇಕು, ನನ್ನ ಉದ್ಯೋಗವೂ ಹಾಗೆಯೇ ಆಯಿತು” ಎಂದು ಆ ಉದ್ಯೋಗಿ ಬರೆದುಕೊಂಡಿದ್ದಾನೆ. ಕೆಲ ಕಾಲದ ನಂತರ ಕಂಪನಿ ತನ್ನದೇ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿತಂತೆ. ಇದರಿಂದ ಉದ್ಯೋಗಿಗಳ ಮೇಲೆ ಅವಲಂಬಿತರಾಗುವುದು ತಪ್ಪಿ, ಸಂಪೂರ್ಣ ಕಂಪ್ಯೂಟರ್ ಆಧಾರಿತವಾಯಿತಂತೆ. ಕೊನೆಗೆ ಕಂಪನಿ ಆತ ಬಳಸುತ್ತಿದ್ದ ಲ್ಯಾಪ್ಟಾಪ್ ಅನ್ನು ಆತನಿಗೇ ಇಟ್ಟುಕೊಳ್ಳಲು ಹೇಳಿ ಕೆಲಸವನ್ನು ಮುಕ್ತಾಯಗೊಳಿಸಿತು ಎಂದು ಆತ ಹೇಳಿದ್ದಾನೆ.
ಅಚ್ಚರಿಯ ಸಂಗತಿಯೆಂದರೆ, 2017ರಲ್ಲಿ ಆ ಉದ್ಯೋಗಿ ತನ್ನ ಮ್ಯಾನೇಜರ್ ಬಳಿ ಸಾಫ್ಟ್‌ವೇರ್ ಕುರಿತು ಪ್ರಸ್ತಾಪಿಸಿದ್ದನಂತೆ. ಆದರೆ ಮ್ಯಾನೇಜರ್ ಅದನ್ನು ತಲೆಗೆ ಹಾಕಿಕೊಳ್ಳದೇ, ತಾನು ಬ್ಯುಸಿಯಿದ್ದೇನೆ ಎಂದು ಪ್ರತಿಕ್ರಿಯಿಸಿದ್ದನಂತೆ. ಕೊನೆಗೆ ತಾನು ಮೌನವಾಗಿ ಉಳಿದೆ ಎಂದು ಆ ಉದ್ಯೋಗಿ ಬರೆದುಕೊಂಡಿದ್ದಾನೆ.
ಕೊನೆಯಲ್ಲಿ ಉದ್ಯೋಗಿಮತ್ತೊಂದು ಅಚ್ಚರಿಯ ಸಂಗತಿ ಹೊರಹಾಕಿದ್ದಾನೆ. ಐದು ವರ್ಷಗಳ ಕಾಲ ಇಷ್ಟೆಲ್ಲಾ ಮಾಡಿದರೂ ಅವರ ಕುಟುಂಬಕ್ಕೆ ಇದರ ಸುಳಿವು ಕೂಡ ಇರಲಿಲ್ಲವಂತೆ.ಆತನ ಪತ್ನಿಗೂ ಉದ್ಯೋಗದ ಕುರಿತು ಮಾಹಿತಿ ಇರಲಿಲ್ಲವಂತೆ. ಆದರೆ ಇದೀಗ ಅದೆಲ್ಲಾ ಮುಗಿದಿದೆ. ಹಾಗಾಗಿ ಆ ವಿಚಾರಗಳನ್ನು ಎಲ್ಲರಲ್ಲೂ ಹೇಳಿಕೊಳ್ಳಬಹುದು ಎಂದು ಆತ ರೆಡ್ಡಿಟ್ನಲ್ಲಿ ಬರೆದಿದ್ದಾನೆ. ಇದನ್ನು ಓದಿದ ನೆಟ್ಟಿಗರು ಆತನ ಖತರ್ನಾಕ್ ಐಡಿಯಾಕ್ಕೆ ಹುಬ್ಬೇರಿಸಿದ್ದಾರೆ.
ಇದನ್ನೂ ಓದಿ: